• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತಂಕ

By Staff
|
ರಿಸೆಷನ್ ಎಂಬ ಭೂತ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆರ್ಥಿಕವಾಗಿ ಎಂಥ ಬಲಾಡ್ಯವಾಗಿದ್ದರೂ ಬಿಕ್ಕಟ್ಟಿನ ಛಳಕು ನಡುಕ ಹುಟ್ಟಿಸಿಬಿಡುತ್ತದೆ. ತಳ್ಳುವ ಪ್ರತಿದಿನವೂ ಸೂಜಿ ಮೊನೆಯ ಮೇಲೆ ತಪಸ್ಸು ಆಚರಿಸಿತಂಥ ಅನುಭವ. ಆ ಸುಳಿಗೆ ಸಿಕ್ಕವನ ಯೋಜನಾ ಲಹರಿಯ ದಿಕ್ಕನ್ನು ಕೂಡ ತಪ್ಪಿಸಿಬಿಡುತ್ತದೆ. ಆತ ಕೂಡ ಅಂಥದೇ ಸುಳಿಗೆ ಸಿಲುಕಿದ್ದ...

* ರಾಧಿಕಾ ಎಮ್.ಜಿ., ಬೆಂಗಳೂರು

I am not convinced with this report. ಬಯಾಪ್ಸಿ ರಿಪೀಟ್ ಮಾಡೋಣ ನಾಳೆ ಮಧ್ಯಾಹ್ನ ಬನ್ನಿ ಅಂದ್ರು ಡಾ|| ಪ್ರದೀಪ್ ಹಳದೀಪುರ್. ಮೂರು ತಿಂಗಳಿಂದ ಅಪ್ಪನಿಗೆ ಒಂದೇ ಸಮನೇ ಕೆಮ್ಮು, ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಅನುಭವ, ಆಗಾಗ ಬರುವ ಜ್ವರ, ಸ್ವಲ್ಪ ತೂಕವನ್ನೂ ಕಳೆದುಕೊಂಡಿದ್ದಾನೆ. ಅನಂತ, ನಾವು ನಮ್ಮೂರಲ್ಲೇ ಇರ್ಬೇಕಿತ್ತು ಕಣೋ. ಯಾಕೋ ಈ ಬೆಂಗ್ಳೂರಿನ ಹವೆ ನಮಗೆ ಆಗಿ ಬರ್ತಾ ಇಲ್ಲ ಅಂದಿದ್ಲು ಅಮ್ಮ. ಪ್ಯಾರಸೆಟಮಾಲ್, ವಿಕ್ಸ್ ಆಕ್ಷನ್-500, ಹೈಯರ್ ಡೋಸ್ ಆಂಟಿ ಬಯಾಟಿಕ್ ಯಾವುದಕ್ಕೂ ಬಗ್ಗಿರ್ಲಿಲ್ಲ ಕೆಮ್ಮು. ಒಂದು ಎಕ್ಸ್‌ರೇಯನ್ನೂ ತೆಗೆಸಿದ್ದಾಯ್ತು ಡಾ||ಭೋಜರಾಜು ಹತ್ತಿರ. ಅವರೂ ಇನ್ನೊಂದು ಆಂಟಿ ಬಯಾಟಿಕ್ ಬರ್ಕೊಟ್ಟು ವಾರ ಬಿಟ್ಟು ಬನ್ನಿ ಅಂದ್ರು. ಕೆಫೆಟೇರಿಯದಲ್ಲಿ ಊಟ ಮಾಡುವಾಗ ಈ ಬಗ್ಗೆ ಹೇಳಿದಾಗ ಪಾರ್ವತಿ ಕೋಟ್ಟೈವೀಡು ಸಲಹೆ ಕೊಟ್ಳು. ಕೆಮ್ಮಿದ್ರೆ ಯಾಕೆ ಜನರಲ್ ಡಾಕ್ಟರ್ ಹತ್ರ ತೋರಿಸ್ತಾ ಇದ್ದೀಯ ಇ.ಎನ್.ಟಿ ಸ್ಪೆಷಲಿಸ್ಟ್ ಹತ್ರ ತೋರಿಸು ಅಂತ. ಅವಳೇ ವಿಳಾಸ ಕೊಟ್ಟಿದ್ದು ಹಳದೀಪುರ್ ಕ್ಲಿನಿಕ್‌ದು.

ಪಾರ್ವತಿ ಕೋಟ್ಟೈವೀಡು. ತಮಿಳಿನವಳಾದರೂ ಕಟ್ಟಾ ಕನ್ನಡಾಭಿಮಾನಿ. ತುಂಬಾ ಇಂಟರೆಸ್ಟಿಂಗ್ ಮತ್ತು ಇರಿಟೇಟಿಂಗ್ ಪರ್ಸನಾಲಿಟಿ. ಅವಳನ್ನು ನೋಡಿದ್ರೆ ಉಷಾ ಉತ್ತುಪ್ ಜ್ಞಾಪಕ ಬರುತ್ತೆ. ಹಾಗೇ ಢಾಳಾಗಿ ಅಲಂಕಾರ ಮಾಡ್ಕೊಂಡು ಬರ್ತಾಳೆ. ನನ್ನ ಗಂಡ ಅಮೆರಿಕಾದಿಂದ ತಂದಿದ್ದು ಅಂತ ಫಾರ್ಮಲ್ ಸೂಟ್ ತೊಟ್ಟು ತನ್ನ ಉದ್ದ ಕೂದಲನ್ನು ಹರಡಿಕೊಂಡು ಒಮ್ಮೆ ಬಂದರೆ ಇನ್ನೊಮ್ಮೆ ಗೌರಮ್ಮನ ತರಹ ಮದುವೆಗೆ ಬರೋ ಹಾಗೆ ತನ್ನ ಇರೋ ಬರೋ ಒಡವೆಗಳನ್ನೆಲ್ಲ ತೊಟ್ಕೊಂಡು ಕಂಚೀ ರೇಷ್ಮೆ ಸೀರೆಯಲ್ಲಿ ಪ್ರತ್ಯಕ್ಷ. ಇದು ಐ.ಟಿ ಕಛೇರಿನಾ ಅಥವಾ ಮದುವೆ ಮನೇನಾ ಅನ್ನಿಸಿದ್ದಿದೆ ಅನಂತನಿಗೆ. ಎಲ್ಲರ ಮನೇ ವಿಷಯಾನೂ ಅವಳಿಗೆ ಬೇಕು. ಯಾರ ಗಂಡ, ಹೆಂಡತಿ ಎಲ್ಲಿ ಕೆಲ್ಸ ಮಾಡ್ತಾರೆ, ಅವರ ದಾಂಪತ್ಯ ಚೆನ್ನಾಗಿದೆಯಾ ಇಲ್ಲವಾ, ಅತ್ತೆ, ಮಾವ ಚೆನ್ನಾಗಿ ನೋಡ್ಕೋತಾರಾ, ಅತ್ತೆ, ಮಾವನ ಜವಾಬ್ದಾರಿ ಇವರ ಮೇಲೇ ಇದೆಯಾ, ಕತ್ರೀನ ಕೈಫ್ ಸಲ್ಮಾನ್ ಆಕಸ್ಮಾತ್ ಮದ್ವೆ ಆಗಿರೋದೇ ನಿಜವಾದರೆ ಅದು ಸರೀನಾ ತಪ್ಪಾ? ಮುಂಬೈನಲ್ಲಿ ಯಾರೋ ಸತ್ತರೆ ನಾವು ತಲೆ ಕೆಡ್ಸಿಕೊಂಡು ಮಾಡೋದಾದರೂ ಏನು ಅಂತ ತನ್ನ ಅಭಿಪ್ರಾಯವನ್ನು ಮುಂದಿಡ್ತಾಳೆ. ನಾನು ಸತ್ಯಂನಲ್ಲಿಲ್ಲ ಅಲ್ಲಿರೋವ್ರ ಬಗ್ಗೆ ಯೋಚನೆ ಮಾಡುವಷ್ಟು ನನಗೆ ಟೈಮ್ ಇಲ್ಲ ಅಂತಲೂ ನಿಸ್ಸಂಕೋಚವಾಗಿ ಹೇಳ್ತಾಳೆ. ಆಫೀಸಿನ ಎಲ್ಲ ಜೋಡಿಗಳ ಹಿನ್ನೆಲೆ, ಅಂಕಿ-ಅಂಶ ಪಾರ್ವತಿಯ ನಾಲಗೆಯ ತುದಿಯಲ್ಲೇ.

ಮದುವೆಯ ಕನಸನ್ನು ಕಾಣುತ್ತಿರುವ ಹುಡುಗಿಯರಿಗೆ “ಮೊದಲನೇ ರಾತ್ರಿ"ಯಲ್ಲಿ ಅಂಥದ್ದೇನೂ ನಡೆಯೋದೇ ಇಲ್ಲ. If you are lucky to get a caring husband, it"s less painful ಅಂಥ ಹೇಳಿ ಭಯ, ಮುಜುಗರ ಒಂದೇ ಬಾರಿಗೆ ಹುಟ್ಟಿಸ್ತಾಳೆ. ಯಾವುದೇ ವಿಷಯ ಹೆಚ್ಚು ಜನಕ್ಕೆ ತಲುಪಬೇಕಿದ್ರೆ ಪಾರ್ವತಿಯ ಕಿವಿ ಮುಟ್ಟಿಸಿದರೆ ಸಾಕು ಅನ್ನುವಷ್ಟು ಖ್ಯಾತಿ ಆಕೆಯದು ಆಫೀಸಿನಲ್ಲಿ! ಥೇಟ್ ನಮ್ಮ ಕ್ರೈಮ್ ಡೈರಿಗಳ ಥರಾ! ಸಾಂತ್ವನ ಸೂಚಿಸುತ್ತ ಎದುರಲ್ಲಿರುವವರ ಸಮಸ್ಯೆ, ಒಳಗುಟ್ಟುಗಳನ್ನು ಕೇಳಿ ತಿಳಿಯುವುದು ಆಮೇಲೆ ಜಗತ್ತಿನೆದುರು ಎಲ್ಲವನ್ನೂ ಡಂಗುರ ಸಾರಿ ಸಮಸ್ಯೆ ಹೇಳಿಕೊಂಡವರು ಹಪಹಪಿಸುವಂತೆ ಮಾಡುವ ಮಂದಿಯ ಪೈಕಿ ಈಕೆ. ದೊಡ್ಡಕ್ಕನ ತರಹ ಕೂತು ಯಾರ ಸಮಸ್ಯೆಗಳಿಗೂ ಕಿವಿಯಾಗುವ ಅವಳ probing nature ಒಮ್ಮೊಮ್ಮೆ ಕಿರಿಕಿರಿಯಾಗುವಷ್ಟು ಅತಿ ಅನ್ನಿಸುತ್ತೆ. ಮನುಷ್ಯ ಸ್ವಾರ್ಥಿಯಾಗಿರಬೇಕು ಇಲ್ಲದೇ ಇದ್ದರೆ ಉದ್ಧಾರ ಆಗಲ್ಲ ಅಂದು ಘೋಷಿಸುತ್ತಾಳೆ. ಅಲ್ರೀ ಅನಂತ್‌ಕುಮಾರ್ ನೀವು ನಿಮ್ಮಕ್ಕನಿಗೆ, ಅವಳ ಮಗಳಿಗೆ ಅಂತ ನೀವು ದುಡಿದಿದ್ದೆಲ್ಲ ಕೊಡ್ತಾ ಇದ್ರೆ ನೀವು ಯಾವಾಗ್ರೀ ಬುದ್ಧಿವಂತರಾಗೋದು? ಬೆಂಗ್ಳೂರಲ್ಲಿ ಒಂದು ಅಪಾರ್ಟ್ಮೆಂಟ್ ಇಲ್ದೇ ಇದ್ರೆ ಯಾವ ಹುಡ್ಗೀನೂ ನಿಮ್ಮನ್ನ ಮದುವೆ ಆಗೋಕ್ಕೆ ಮುಂದೆ ಬರಲ್ಲ ಗೊತ್ತಾ ಅಂತ ಒಂದು ಹುಳು ಅವನ ತಲೆಗೆ ಬಿಟ್ರೆ ಸಾಕು. ಅವತ್ತಿಡೀ ಅವನಿಗೆ ಅದೇ ಚಿಂತೆ. ಅಕ್ಕನಿಗೆ ನಾನು ದುಡ್ಡು ಕೊಡೋದು ತಪ್ಪಾ, ಸರೀನಾ ಅಂತ. ಕೊನೆಗೆ ಯಾವ ನಿರ್ಧಾರವನ್ನೂ ತೊಗೊಳ್ಳೊಕ್ಕಾಗದೆ ಅಕ್ಕನ ಫೋನ್ ಬಂದರೆ ಕಟ್ ಮಾಡಿದ್ದ. ಆಮೇಲೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನ್ನಿಸಿ ಸಾರಿ ಅಕ್ಕ, ಬಿಜಿ ಇದ್ದೆ ಹೇಳು ಅಂತ ಮರು ಕರೆಯನ್ನೂ ಮಾಡಿದ್ದ.

ಏನ್ರೀ ಇದು ಒಂದು ದೊಡ್ಡ ನಿಂಬೆ ಹಣ್ಣಿನ ಗಾತ್ರದ ಗಡ್ಡೆ ಇದೆ ಒಳಗೆ ಇಷ್ಟು ದಿವಸ ಏನು ಮಾಡ್ತಿದ್ರೀ ಅಂದ್ರು ಹಳದೀಪುರ್. ಕೆಮ್ಮಿಗೆ ಅಂತ ಅಮ್ಮ ಮನೇಲಿ ಮೆಣಸಿನ ಸಾರು, ಶುಂಠಿ ರಸ ಎಲ್ಲಾ ಕೊಡ್ತಿದ್ರು ಆದ್ರೂ ಯಾಕೋ ಹುಷಾರಾಗ್ಲಿಲ್ಲ ಸಾರ್ ಅಂದ ಅನಂತ. ಅಲ್ರೀ ನೀವು ಓದಿದೋರು ಹೀಗೆ ಮಾಡಿದರೆ ಹೇಗೆ ಅನ್ನುತ್ತಲೇ ಅನಂತನಿಗೂ ತೋರಿಸಿದರು ಅಪ್ಪನ ಗಂಟಲಲ್ಲಿ ಅಡ್ದವಾಗಿ ಕುಳಿತಿದ್ದ ಗಡ್ಡೆಯನ್ನು. ಇತ್ತೀಚೆಗೆ ಅಪ್ಪ ನುಂಗೋಕ್ಕೂ ಕಷ್ಟ ಅಂತ ಬರೀ ಗಂಜೀನೇ ಮಾಡಿಸಿಕೊಂಡು ಕುಡೀತಾ ಇದ್ದ. ಜ್ವರ ಕೂಡ ಇದ್ದಿದ್ದರಿಂದ ಹೊಟ್ಟೆಗೆ ತಂಪು ಅಂತ ಅನಂತಾನೂ ಸುಮ್ಮನೇ ಇದ್ದ. ಒಂದು ಬಯಾಪ್ಸಿ ಮಾಡ್ಸಿಬಿಡಿ ಮುಂದೆ ಏನು ಮಾಡ್ಬೇಕು ಅಂತ ಹೇಳ್ತೀನಿ ಅಂದ್ರು. ಅಪ್ಪನಿಗೇನೋ ದಿಗಿಲು. ಟೆಸ್ಟೂ ಅದೂ ಇದೂ ಅಂತ ಹೇಳಿ ಯಾವ ಕಾಯಿಲೆಯನ್ನು ಘೋಷಿಸ್ತಾರೋ ಅಂತ. ಮೊದಲನೇ ಬಯಾಪ್ಸಿಯಲ್ಲಿ ಎಲ್ಲಾ ನಾರ್ಮಲ್ ಅನ್ನೋ ರಿಪೋರ್ಟ್ ನೋಡಿ ಅಪ್ಪ, ಅಮ್ಮ ದೀರ್ಘವಾದ ಉಸಿರು ಬಿಟ್ಟರು. ಈಗ ನೋಡಿದ್ರೆ ಹಳದೀಪುರ್ ಮತ್ತೆ ಬಯಾಪ್ಸಿ ಮಾಡಿಸಿ ಅಂತಾ ಇದ್ದಾರೆ.

ಲ್ಯಾಬ್ ರಿಪೋರ್ಟ್ನಲ್ಲಿ ಏನಿದೆ ಅಂತ ಫೋನ್ ಮಾಡಿದ್ರೆ ಬಂದು ರಿಪೋರ್ಟ್ ತೊಗೊಂಡು ಹೋಗಿ ಡಾಕ್ಟರ್‌ಗೆ ತೋರಿಸಿ ಹೇಳ್ತಾರೆ ಅಂತ ಫೋನ್ ಇಟ್ಬಿಟ್ಳು ಟೆಕ್ನಿಷಿಯನ್. “Presense of human papilloma virus seen. A case of sqamous cell carcinoma" ಎಂದು ಬರೆದ ರಿಪೋರ್ಟ್ ನೋಡಿದ ಡಾ||ಹಳದೀಪುರ್, ಗಂಟಲು ಕ್ಯಾನ್ಸರ್ ಆಗಿದೆ ನಿಮ್ಮ ತಂದೆಗೆ, ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕಬಹುದು. ಹೆಡ್ ಅಂಡ್ ನೆಕ್ ಸ್ಪೆಷಲಿಸ್ಟ್‌ಗೆ ತೋರಿಸಿ ಅಂದ್ರು. ಡಾ||ನಂಜುಂಡಪ್ಪನವರ ಹತ್ತಿರ ಭೇಟಿ ನಂತರ ಬೆಂಗಳೂರು ಕ್ಯಾನ್ಸರ್ ಆಸ್ಪತೆಯಲ್ಲಿ ಸಿ.ಟಿ ಸ್ಕ್ಯಾನ್, ಬ್ಲಡ್ ಟೆಸ್ಟ್ ಅದೂ ಇದೂ ಎಲ್ಲಾ ಆಗಿ ಡಾ||ಶೇಖರ್ ಪಾಟೀಲ್ ಅಂದ್ರು, ಕ್ಯಾನ್ಸರ್ ೪ನೇ ಸ್ಟೇಜ್‌ನಲ್ಲಿರುವುದರಿಂದ aggressive treatment ಕೊಡಬೇಕಾಗುತ್ತೆ. ಲಕ್ಷಾಂತರ ರುಪಾಯಿ ಖರ್ಚಾಗುತ್ತೆ. ಯೋಚನೆ ಮಾಡಿ ವಾಪಸ್ ಬನ್ನಿ ಅಂತ. ಆಫೀಸಿನ ಇನ್ಷೂರೆನ್ಸ್‌ನ ರಕ್ಷಣೆ ಇರುವುದರಿಂದ ಯೋಚನೆ ಮಾಡುವಂತದ್ದೇನೂ ಇಲ್ಲ ಚಿಕಿತ್ಸೆ ಶುರು ಮಾಡಬಹುದು ಅಂದ ಅನಂತ. ಚಿಕಿತ್ಸೆ ಶುರುವಾದಮೇಲೇ ಅರ್ಥವಾಗಿದ್ದು ಪರಿಸ್ಥಿತಿಯ ಭೀಕರತೆ.

ಮೊದಲಿಂದಲೂ ಕಷ್ಟ ಜೀವಿಯಾಗಿದ್ದ ಅಪ್ಪ ಮೊದಲನೇ ಕೀಮೋ ತೆರಪಿಯ ನಂತರ ತರಕಾರಿಯಂತೆ ಮುದುಡಿ ಮಲಗಿದ್ದ. ಎರಡೂ ಮುಂಗೈಯ್ಗಳೂ ಸೂಜಿ ಚುಚ್ಚಿ ಊದಿದ್ದವು. ಬಾಯಲ್ಲಿ ಏನೂ ಸೇರ್ತಾ ಇರ್ಲಿಲ್ಲ ಬರೀ ಪೇರಂಟಲ್ ನ್ಯೂಟ್ರಿಷನ್, ಸಲೈನ್ ಈಗ. ಏಕಾಏಕಿ ತೂಕ ಕಡಿಮೆಯಾಗಿ ತಾನಾಗಿ ಎದ್ದು ಕೂರಲೂ ಆಗದ ಅಸಹಾಯಕ ಪರಿಸ್ಥಿಯಲ್ಲಿ ಅಪ್ಪನನ್ನು ನೋಡಿ ಅನಂತನ ಕಣ್ತುಂಬಿ ಬಂತು. ಅಮ್ಮನ ಜೊತೆ ಕೂತು ಬಿಕ್ಕಿ ಬಿಕ್ಕಿ ಅತ್ತಿದ್ದೂ ಇದೆ. ಚಿಕಿತ್ಸೆ ಕೊಡಿಸಿ ತಪ್ಪು ಮಾಡಿಬಿಟ್ಟೆನಾ ಅನ್ನುವ ಪಾಪ ಪ್ರಜ್ಞೆ ಕಾಡತೊಡಗಿತು. ಚಿತ್ರದುರ್ಗದ ತುಪ್ಪದ ಕೊಳವನ್ನು ಏರಲೇಬೇಕು ಅನ್ನುವ ನನ್ನ ಹಠಕ್ಕೆ ಬಾಗಿ ನನಗೆ ಬೆಂಗಾವಲಾಗಿ ನಿಂತು ಚಿತ್ರದುರ್ಗದ ಕೋಟೆಯನ್ನು ಹತ್ತಿಸಿದ ಅಪ್ಪ, ಇವತ್ತು ನಿಸ್ಸಹಾಯಕನಾಗಿ ಮಲಗಿರುವ ಇವನೇನಾ? ಅಮ್ಮ ಹೊರನಾಡಿನ ಅನ್ನಪೂರ್ಣೇಶ್ವರಿಗೆ ಹತ್ತು ಕ್ವಿಂಟಲ್ ಅಕ್ಕಿ ಸಲ್ಲಿಸುವ ಹರಕೆ ಹೊತ್ತಳು.

“ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ" ಅನ್ನುವ ನಿನಾದದೊಂದಿಗೆ ಮೊಬೈಲ್ ಕರೆಯಿತು. ಅಪ್ಪನ ಚಿಕಿತ್ಸೆ ಶುರುವಾದಾಗಲಿಂದಲೇ ಮೊಬೈಲ್ ನಿನಾದ ಬದಲಾಗಿತ್ತು “ಏನೋ ಒಂಥರಾ... “ ಅಂತ ಇದ್ದಿದ್ದು. ವೈಭವ್ ಆರೋರ ಫೋನ್ ಮಾಡಿದ್ದ. “ಹೌ ಈಸ್ ಯುವರ್ ಡ್ಯಾಡ್ ಮ್ಯಾನ್" ಅನ್ನುತ್ತಲೇ ಅನಂತನ ಉತ್ತರಕ್ಕೂ ಕಾಯದೇ, “ಟೀಮ್ ಮೀಟಿಂಗ್ ಇತ್ತು. ಪರಿಸ್ಥಿತಿಯ ಭೀಕರತೆ ನಮ್ಮನ್ನು ಮುಟ್ಟುವುದಿಲ್ಲ ಅನ್ನುವ ಕಾಲ ಮುಗಿಯಿತು. ಯಾರು, ಎಲ್ಲಿ ಬೇಕಾದರೂ ಆಗಬಹುದು ಅನ್ನುವ ಸೂಚನೆ ದೊರೆತಿದೆ ಆರ್ಗ್ ಡೈರೆಕ್ಟರ್‌ನಿಂದ" ಅಂತ ಹೇಳಿದ. ಹೃದಯ ಬಡಿತ ಪಕ್ಕದಲ್ಲಿರುವವರಿಗೂ ಕೇಳುವಷ್ಟು ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ನಾನು ಸತ್ಯಂನಲ್ಲಿಲ್ಲ, ಅಮೆರಿಕಾದಲ್ಲಿ H1-B ವೀಸಾದ ಮೇಲೆ ಮೈಕ್ರೋಸಾಫ್ಟ್‌ನಲ್ಲಿಲ್ಲ, ಸರ್ವೀಸಸ್‌ನಲ್ಲಿಲ್ಲ ಪ್ರಾಡಕ್ಟ್ ಕಂಪನಿಯಲ್ಲಿದ್ದೀನಿ ಅನ್ನುವ ಇಷ್ಟು ದಿನದ ನಿರಾಳ ಭಾವ ಕುಂದಿ ಹೋಯಿತು. ಕತ್ತಿಯ ಮೊನೆ ತನ್ನ ತಲೆಯ ಮೇಲೂ ತೂಗುತ್ತಿರುವ ಅನುಭವ ಈ ಕ್ಷಣದಲ್ಲಿ ಆಯಿತು.

ಅಕಸ್ಮಾತ್ ಕೆಲಸ ಹೋದರೆ ಅಪ್ಪನ ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ದುಡ್ಡು ಹೊಂದಿಸುವುದು ಹೇಗೆ ಅನ್ನುವ ಪ್ರಶ್ನೆ ಧುತ್ತೆಂದು ಎದುರು ನಿಂತಿತು. ಇಪ್ಪತ್ತು ಮಂದಿಯ ನಮ್ಮ ಟೀಮ್‌ನಲ್ಲಿ ಕೆಲಸ ಕಳೆದುಕೊಳ್ಳಬಲ್ಲ ಬಲಿಪಶು ಯಾರಿರಬಹುದು ಅನ್ನುವ ಲೆಕ್ಕಾಚಾರದಲ್ಲಿ ತೊಡಗಿದ. ಸಣ್ಣ ಸಣ್ಣ ದ್ವೀಪಗಳಂತಿದ್ದ ಗುಂಪುಗಳಲ್ಲಿ ಅನಂತನಿದ್ದ ಮೂರು ಮಂದಿಯ ಟೀಂನಲ್ಲೇ ಹೆಚ್ಚುವರಿ ಡೆವಲಪರ್ ಇದ್ದಿದ್ದು ಅನ್ನೋ ಸತ್ಯ ಗೋಚರವಾಯಿತು. ತಾನು ಮತ್ತು ಪಾರ್ವತಿ ಕೋಟ್ಟೈವೀಡು ಇಬ್ಬರು ಡೆವಲಪರ್‌ಗಳಿಗೆ ಆಗುವಷ್ಟು ಕೆಲಸ ಸುಮಾರು ತಿಂಗಳುಗಳಿಂದ ಇರಲೇ ಇಲ್ಲ. ಪರಿಸ್ಠಿತಿ ಚೆನ್ನಾಗಿದ್ದಾಗ ಇಬ್ಬರೂ ರಾತ್ರಿಯೆಲ್ಲಾ ಮನೆಯಿಂದಲೂ ಲಾಗಿನ್ ಆಗಿ ಕೆಲಸ ಮಾಡಿದ ದಿನಗಳಿವೆ. ಆದರೆ ಪ್ರಪಂಚದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದಂತೆಯೇ ಇವರಿಬ್ಬರ ಕೆಲಸದ ಒತ್ತಡವೂ ಕ್ಷೀಣಿಸಿತ್ತು. ದೇವರೇ ಮ್ಯಾನೇಜರ್ ಜೋಯ್‌ಜೀತ್ ಮುಖರ್ಜಿಯ ಅಂಕುಶ ನನ್ನೆಡೆಗೆ ತಿರುಗದಂತೆ ನೋಡಿಕೊಳ್ಳಪ್ಪ, ಅಪ್ಪನ ಚಿಕಿತ್ಸೆಯ ಸಲುವಾಗಿಯಾದರೂ ನನ್ನ ಈ ಕೆಲಸ ಉಳಿಸಿಕೊಡಪ್ಪ ಎಂದು ಮೂಕವಾಗಿ ಮೊರೆಯಿಟ್ಟ. ತನ್ನ ಪ್ರಾರ್ಥನೆಯಲ್ಲಿ ನಿಜಕ್ಕೂ ಸ್ವಾರ್ಥ ಇದೆಯಾ ಅಥವಾ ಅಪ್ಪನ ಆರೋಗ್ಯದ ಚಿಂತನೆಯಿದೆಯಾ ಅನ್ನೋ ಪ್ರಶ್ನೆಗೆ ಅವನ ಹತ್ತಿರ ಉತ್ತರ ಇರಲಿಲ್ಲ.

ಅಕಸ್ಮಾತ್ ದೇವರು ಪ್ರತ್ಯಕ್ಷವಾಗಿ ಪಾರ್ವತಿಯ ಬದಲು ನಿನ್ನ ಕೆಲಸ ಯಾಕೆ ಕಿತ್ತುಕೊಳ್ಳಬಾರದು ಅಂದರೆ ತಾನು ಏನು ಉತ್ತರ ಕೊಡಬೇಕು ಅನ್ನೋ dry run ನಡೆಸಿದ. ಪಾರ್ವತಿಗೆ ಕೆಲಸದ ಅವಶ್ಯಕತೆ ಇಲ್ಲ. ಅವಳೇ ಎಷ್ಟೋ ಬಾರಿ ಹೇಳಿರುವಂತೆ ಈ ಕೆಲಸ just for time pass. ಸಾಲಸೋಲಗಳ ಜಂಜಾಟವಿಲ್ಲದ ಬ್ರಿಗೇಡ್ ಗ್ರೂಪಿನ ಅಪಾರ್ಟ್‌ಮೆಂಟ್ ಹೊಂದಿರುವ ಡಿಂಕ್ (Double Income No Kid) ಫ್ಯಾಮಿಲಿಯ ಒಡತಿಗೆ ಅವಳ ಗಂಡನ ದುಡಿಮೆಯಲ್ಲಿ ಅವಳ ಜೀವನ ಸಾಗುತ್ತದೆ. ಅವಳ ಸಂಬಳ ಬರೀ ಲ್ಯಾಕ್ಮೆ ಬ್ಯೂಟಿ ಪಾರ್ಲರ್‌ನಲ್ಲಿ ಫೇಶಿಯಲ್, ವ್ಯಾಕ್ಸಿಂಗ್, ಬ್ರ್ಯಾಂಡೆಡ್ ಬಟ್ಟೆ, ಮೈಸೂರ್ ಸಿಲ್ಕ್ ಸೀರೆ, ಗಂಜಾಂ ಒಡವೆ ಇದಕ್ಕೆ ವಿನಿಯೋಗವಾದರೆ, ನನಗೆ ಸಂಬಳ ನಿತ್ಯ ಜೀವನಕ್ಕೆ ಅತ್ಯವಶ್ಯಕ. ನನ್ನ ಕೆಲಸ ಕಳೆದುಕೊಂಡರೆ ನನ್ನ ಕುಟುಂಬದ ಜೀವನ ದುಸ್ತರ. ಅವರಿವರ ವೈಯಕ್ತಿಕ ಜೀವನದ ಬಗ್ಗೆ ಸದಾ ಕುತೂಹಲಿಯಾಗಿ ಆಫೀಸಿನಲ್ಲಿ ಕೆಲಸಕ್ಕಿಂತ ಮಾತೇ ಮುಂದಿರುವ ಪಾರ್ವತಿಗಿಂತ ತಾನು ಉತ್ತಮ ನೌಕರ. ತನ್ನನ್ನು ಉಳಿಸಿಕೊಳ್ಳುವದರಲ್ಲಿ ಕಂಪನಿಗೆ ಏಳಿಗೆಯಿದೆ ಎಂದು ಮೊದಲ ಬಾರಿಗೆ ಕಂಪನಿಯ ಏಳಿಗೆಯ ಬಗ್ಗೆಯೂ ತನ್ನ ವಿಚಾರ ಲಹರಿಯನ್ನು ಹರಿಸತೊಡಗಿದ ಅನಂತ. ಕ್ಯಾನ್ಸರ್ ಆಸ್ಪತ್ರೆಯ ದಿನಕ್ಕೆ ಹತ್ತು ಸಾವಿರ ಬಾಡಿಗೆಯ ವಿ.ಐ.ಪಿ ರೂಮ್ ಜೈಪುರ್‌ನ ಮೃದುಹಾಸಿಗೆಯ ದಿವಾನದ ಮೇಲೆ ಕುಳಿತು ಕಡಿವಾಣವಿಲ್ಲದಂತೆ ಸಾಗಿದ್ದ ಯೋಚನಾ ಲಹರಿಗೆ ಬ್ರೇಕ್ ಬಿದ್ದಿದ್ದು ಮೃದುವಾಗಿ ತಟ್ಟಿದ ಬಾಗಿಲ ದನಿ ಕೇಳಿ.

ನೆನೆದವರು ಮನದಲ್ಲಿ! ಸುಂದರವಾದ ಹೂಗುಚ್ಛದೊಡನೆ ಪ್ರತ್ಯಕ್ಷಳಾದಳು ಪಾರ್ವತಿ ಕೋಟ್ಟೈವೀಡು! ಹೇಗಿದ್ದಾರೆ ಅಪ್ಪ ಈಗ? ಆಫೀಸಿನ ಬಗ್ಗೆ ಯೋಚನೆ ಮಾಡಬೇಡ ನಾನು ಎಲ್ಲಾ ಮ್ಯಾನೇಜ್ ಮಾಡ್ತೀನಿ. ನೀನು ಇನ್ನೂ ಸ್ವಲ್ಪ ದಿವಸ ರಜೆ ತೊಗೋ ಬೇಕಾದ್ರೆ. ನೀನು ಮಾಡಿದ್ದ ಕಸ್ಟಮರ್ ಫಿಕ್ಸ್‌ಗೆ ನನಗೆ ಅಪ್ರಿಸಿಯೇಶನ್ ಮೆಯ್ಲ್ ಕಳಿಸಿದ್ದ ಜೋಯ್‌ಜೀತ್. ಇಲ್ಲಪ್ಪ ಇದೆಲ್ಲ ಅನಂತನ ಮಹಿಮೆ ಅಂತ ವಾಪಸ್ ರಿಪ್ಲೈ ಮಾಡಿದ್ದೀನಿ. ಈ ಸರ್ತಿ ನಿಂಗೆ ಅವಾರ್ಡ್ ಗ್ಯಾರಂಟಿ ಅಂದ್ಲು. ಅಂಕಲ್ ನಿಮ್ಮ ಮಗ ತುಂಬಾ ಒಳ್ಳೇ ಹುಡುಗ, ಕಷ್ಟ ಪಟ್ಟು ಕೆಲ್ಸ ಮಾಡ್ತಾನೆ ಅಂತ ಹೊಗಳಿ ಅಪ್ಪನಿಗೆ ಆ ನೋವಿನಲ್ಲೂ ಮೊಗದಲ್ಲಿ ಹೆಮ್ಮೆಯ ನಗೆ ಮೂಡುವ ಹಾಗೆ ಮಾಡಿದಳು.

ಅಂದ ಹಾಗೆ ನೀನು ಟಿ.ಟಿ.ಕೆ ಕಾರ್ಡ್ ಉಪಯೋಗಿಸುವ ಬದಲು ಕ್ರೆಡಿಟ್ ಕಾರ್ಡ್ ಅಥವಾ ಕ್ಯಾಷ್‌ನಲ್ಲಿ ಬಿಲ್ಲು ಕಟ್ಟು. ಇನ್ಷೂರೆನ್ಸ್ ಇದೆ ಅಂದ್ರೆ ಡಬ್ಬಲ್ ಚಾರ್ಜ್ ಮಾಡ್ತಾರೆ ಆಸ್ಪತ್ರೆಗಳಲ್ಲಿ ಅಂದ್ಲು. ಅನಂತನಿಗೂ ಇದರ ಅರಿವಾಗಿತ್ತು ಏಳು ದಿನಗಳ ಆಸ್ಪತ್ರೆಯ ವಾಸ್ತವ್ಯದಲ್ಲಿ. ಇನ್ಷೂರೆನ್ಸ್‌ನವರಿಗೆ ಲಕ್ಷ ಖರ್ಚಾದರೆ ಕ್ಯಾಷ್ ಕೊಟ್ಟವರಿಗೆ ಐವತ್ತು ಅರುವತ್ತು ಸಾವಿರದಲ್ಲಿ ಮುಗಿಯುತ್ತಿತ್ತು. ಹೇಗಾದರೂ ಮಾಡಿ ಕ್ಯಾಷ್ ಕಟ್ಟಿದರೆ ಇನ್ಷೂರೆನ್ಸ್ ಇದ್ದವರು ಹೆಚ್ಚಿನ ಕವರೇಜ್ ಪಡೆಯಬಹುದಿತ್ತು. ಅವರು ಚಾಪೆ ಕೆಳಗಡೆ ತೂರಿದರೆ ನಾವು ರಂಗೋಲಿಯ ಕೆಳಗೆ ನುಸುಳಬಹುದಲ್ಲವಾ ಅಂದಳು.

ಇವಳ ಬಗ್ಗೇನಾ ನಾನು ಇಷ್ಟು ಹೊತ್ತು ಅವಳ ಕೆಲಸ ಹೋಗಲಿ ಅಂತ ಯೋಚಿಸಿದ್ದು ಎಂದು ಅನಂತನಿಗೆ ಪಾರ್ವತಿಯ ಇದಿರು ತಾನು ವಾಮನನ ಮುಂದೆ ಬಲಿ ಕುಬ್ಜನಾದ ಅನುಭವವಾಗಿ ನಾಚಿಕೆಯಾಯಿತು. ಒಂದು inside information. ನಮ್ಮ ಟೀಮ್‌ನಲ್ಲಿ ಒಬ್ಬರನ್ನು ತೆಗೀಬೇಕು ಆದರೆ ಯಾರನ್ನು ಅನ್ನೋ ದ್ವಂದ್ವ ಇತ್ತಂತೆ ಜೋಯ್‌ಜೀತ್‌ಗೆ. ಸೂಜಿ ಮೇಲೆ ತಪಸ್ಸು ಮಾಡೋದು ಅಂದ್ರೆ ಏನು ಅಂತ ನಂಗೆ ಈಗ ಅನುಭವ ಆಯ್ತು ಅಂತ ಹೇಳ್ತಾ ಇದ್ದ ಆರ್ಗ್ ಡೈರೆಕ್ಟರ್ ಪಾಲ್ ಹತ್ತಿರ. ಐ ಜಸ್ಟ್ ಹ್ಯಾಪ್ಪನ್‌ಡ್ ಟು ಓವರ್ ಹಿಯರ್! ಆದರೆ ಸಮಸ್ಯೆ ಸುಲಭವಾಗಿ ಬಗೆ ಹರಿಯಿತು. ನನ್ನ ಗಂಡನಿಗೆ ಆಸ್ಟ್ರೇಲಿಯದಲ್ಲಿ ಲಾಂಗ್ ಟರ್ಮ್ ಅಸೈನ್ಮೆಂಟ್ ಸಿಕ್ಕಿದೆ. ಕೆಲಸ ಬಿಟ್ಟು ನಾನೂ ಅವನ ಜೊತೆ ಹೋಗ್ತಾ ಇದ್ದೀನಿ. ಈ ಗಂಡಸರನ್ನ ನಂಬಕ್ಕೆ ಆಗಲ್ಲ ನೋಡು ಅಂತ ಕಣ್ಣು ಮಿಟುಕಿಸಿ ತುಂಟನಗೆಯನ್ನು ಬೀರಿದಳು.

ಕುಂಭ ದ್ರೋಣ ಮಳೆ ಹುಯ್ಯಲೆಂದೇ ಕವಿದ ಮೋಡ ತಟ್ಟನೆ ತನ್ನ ದಿಕ್ಕನ್ನು ಬದಲಾಯಿಸಿ ಬೇರೆಡೆಗೆ ಸರಿದಂತಾಗಿ ನೆನ್ನೆ ಎಫ್.ಎಮ್ ರೈನ್‌ಬೋನಲ್ಲಿ ಕೇಳಿದ “ಬೊಂಬೆಯಾಟವಯ್ಯಾ ಈ ಬ್ರಹ್ಮಾಂಡವೇ ಆ ದೇವನಾಡುವ . . ." ಗೀತೆ ನೆನಪಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more