ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೆಲ್ಲವ ಬಿಟ್ಟು..

By Staff
|
Google Oneindia Kannada News

Tejaswini Bhat, Bengaluru"ನಮ್ಮ ಮನಸ್ಸೂ ಈ ಇರುವೆಗಳಂತಾಗಿದ್ದರೆ ಎಷ್ಟು ಚೆನ್ನಾಗಿತ್ತು! ಬಂದ ಕಷ್ಟಗಳನ್ನೆಲ್ಲಾ ಎಡರು-ತೊಡರುಗಳನ್ನೆಲ್ಲಾ ಹೀಗೇ ಇಷ್ಟೇ ಕ್ಷಿಪ್ರವಾಗಿ ದಾಟಿ, ನಿರಾಳವಾಗಿ ಮುಂದುವರಿಯುವಂತಾಗಿದ್ದರೆ... ಇಷ್ಟು ಸಣ್ಣ ಜೀವಿಯಲ್ಲಿರುವ ದೃಢತೆ ನಮ್ಮಲ್ಲೇಕೆ ಕಾಣದೋ..?"

ಕಥೆಗಾರ್ತಿ : ತೇಜಸ್ವಿನಿ ಹೆಗಡೆ, ಬೆಂಗಳೂರು.

ಒಂದರ ಬೆನ್ನಹಿಂದೆ ಇನ್ನೊಂದು.. ಶಿಸ್ತಿನ ಸಿಪಾಯಿಯಂತೆ ಅತ್ತಿತ್ತ ನೋಡದೆ, ಯಾವುದೇ ಸದ್ದಿಗೂ ವಿಚಲಿತವಾಗದೆ ಮರದ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದಾತುದಿಗೆ ಸಾಲುಗಟ್ಟಿ ಹೋಗುತ್ತಿದ್ದ ಇರುವೆಗಳನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಂತೆ ಪೂರ್ಣಳ ತಲೆಯೊಳಗೊಂದು ಯೋಚನೆ ಬಂತು. ತಕ್ಷಣ ಇರುವೆಯ ಒಂದು ಸಾಲಿನ ನಡುವೆ ತನ್ನ ತೋರುಬೆರಳನ್ನಿಟ್ಟು ಅವುಗಳ ಪಯಣಕ್ಕೆ ತಡೆಹಾಕಿ ಕುತೂಹಲದಿಂದ ನೋಡತೊಡಗಿದಳು. ತಮ್ಮ ಕೆಲಸಕಾರ್ಯದಲ್ಲಿ ಇದೆಂತಹ ಅಡ್ಡಿ ಬಂತಪ್ಪ ಎಂದು ತುಸು ತಡಬಡಸಿ ಚೆಲ್ಲಾಪಿಲ್ಲಿಯಾದ ಇರುವೆಗಳು ಕ್ಷಣದಲ್ಲೇ ಸಾವರಿಸಿಕೊಂಡು, ಹೆದರದೆ ಮತ್ತೆ ಅದೇ ರೀತಿ ಸಾಲುಗಟ್ಟಿ, ಒಗ್ಗಟ್ಟಿನಲ್ಲಿ ಶಿಸ್ತಿನಿಂದ ಆಕೆಯ ಬೆರಳನ್ನೇರಿ ದಾಟಿ ಹೋಗತೊಡಗಿದವು.

'ನಮ್ಮ ಮನಸ್ಸೂ ಈ ಇರುವೆಗಳಂತಾಗಿದ್ದರೆ ಎಷ್ಟು ಚೆನ್ನಾಗಿತ್ತು! ಬಂದ ಕಷ್ಟಗಳನ್ನೆಲ್ಲಾ ಎಡರು-ತೊಡರುಗಳನ್ನೆಲ್ಲಾ ಹೀಗೇ ಇಷ್ಟೇ ಕ್ಷಿಪ್ರವಾಗಿ ದಾಟಿ, ನಿರಾಳವಾಗಿ ಮುಂದುವರಿಯುವಂತಾಗಿದ್ದರೆ... ಇಷ್ಟು ಸಣ್ಣ ಜೀವಿಯಲ್ಲಿರುವ ದೃಢತೆ ನಮ್ಮಲ್ಲೇಕೆ ಕಾಣದೋ..?' "ಪೂರ್ಣತ್ತೆ.. ನಾ ಒಂದು ಒಗ್ಟು ಕೇಳ್ತಿ ನೀ ಹೇಳು ನೋಡನಾ.. ಹೇಳ್ದ್ರೆ ನೀ ಗೆದ್ದೆ.. ಇಲ್ದೆ ಹೋದ್ರೆ ನೀ ಸೋತೆ ಅಕಾ?" ಅಲ್ಲೇ ಪೇರಳೆ ಹಣ್ಣಿನ ಮರವನ್ನೇರಿ ಕಾಯಿ ಕೀಳುತ್ತಿದ್ದ ಸುಜಾತಳ ಮಾತುಗಳು ಇರುವೆಯ ಸಾಲನ್ನೇನೂ ತುಂಡರಿಸದಿದ್ದರೂ ಪೂರ್ಣಳ ವಿಚಾರ ಸರಣಿಗೆ ತಡೆ ಹಾಕಿದವು.

"ಪುಟ್ಟಿ ಮೊದ್ಲು ನೀ ಮರದಿಂದ ಕೆಳ್ಗೆ ಇಳಿ.. ಅಣ್ಣಯ್ಯ ಏನಾರೂ ನೋಡಿರೆ ನಂಗೆ ಬೈತ. ನೀ ಕೆಳ್ಗೆ ಬಂದು ಒಗ್ಟ ಹೇಳು.. ನೋಡನ ಯಾರು ಗೆಲ್ತ ಹೇಳಿ" ಅತ್ತೆಯ ಮಾತಿನಿಂದ ಉತ್ತೇಜಿತಳಾದ ಪೋರಿ ಛಂಗನೆ ಒಂದೇ ನೆಗೆತದಲ್ಲಿ ಹಾರಿ ಅವಳ ಬಳಿ ಬಂದಳು.

"ಅಯ್ಯೋ ಪೂರ್ಣತ್ತೆ ಅಪ್ಪಯ್ಯ ಪೇಟಿಗೆ ಹೋಜ್ನಲೆ..ಅದೇ ನಿನ್ನ ಗೆಳತಿ ಧೃತಿಯಕ್ಕನ ಕರ್ಕ ಬಪ್ಪಲೆ.. ಅದ್ಕೇಯಾ ನಾ ಹತ್ತಿದ್ದು ಗೊತ್ತಾತಾ? ಸರಿ ಬಿಡು ಈಗ ಒಗ್ಟ ಕೇಳು..

ಮರದೊಳಗೆ ಮರ ಹುಟ್ಟಿ
ಮರ ಚಕ್ರ ಕಾಯಾಗಿ
ತಿನ್ನಲಾಗದ ಹಣ್ಣು ಬಲು ರುಚಿ-

ಇದ್ರ ಬಿಡ್ಸು ನೋಡನಾ." ಎಂದು ಉತ್ತರಕ್ಕಾಗಿ ಪೂರ್ಣಳನ್ನೇ ನೋಡತೊಡಗಿದಳು ಸುಜಾತ. ಊಹೂಂ..ಎಷ್ಟೇ ತೆಲೆ ಓಡಿಸಿದರೂ ಪೂರ್ಣಳಿಗೆ ಹೊಳೆಯಲಿಲ್ಲ.. ಹೆಚ್ಚು ಯೋಚಿಸಲು ಮನಸ್ಸು ನಿರುಮ್ಮಳವೂ ಆಗಿರಲಿಲ್ಲ. ಹೆಚ್ಚು ಪ್ರಯತ್ನಿಸದೇ ಸೋಲೊಪ್ಪಿಕೊಂಡು ಅವಳಲ್ಲೇ ಉತ್ತರ ಕೇಳಿದಳು. ಆದರೆ ಬಡಪಟ್ಟಿಗೆ ಉತ್ತರ ಹೇಳಲೊಪ್ಪದ ಸುಜಾತ "ಅತ್ತೆ ಸೋತೆ ಕುಂಯ್ಯ ಹೇಳು.. ಹೇಳ್ತಿ" ಎನ್ನಲು ಮುಕ್ತವಾಗಿ ನಕ್ಕು ಬಿಟ್ಟಳು ಪೂರ್ಣ. "ಆತು ಮಹಾತಾಯಿ ನಾ ಸೋತೆ ಕುಂಯ್ಯಿ.. ಸಮಾಧಾನಾನ ಈಗ? ಸರಿ ಉತ್ತರ ಹೇಳು" ಎನ್ನಲು ಸುಜಾತ ತನ್ನ ಗೆಲುವಿನ ಪರಮಾನಂದದಲಿ ತಪ್ಪಾಳೆ ತಟ್ಟಿ ಕುಣಿಯುತ್ತಾ" ಅಯ್ಯೋ ಪದ್ದತ್ತೆ ಅಷ್ಟೂ ಗೊತ್ತಾಜಿಲ್ಯ ನಿಂಗೆ.. ಈ ಒಗ್ಟಿನರ್ಥ 'ಮಗು'...ಹ್ಹೇ ಹ್ಹೇ..ಕೀಹಲಾಲೋ.. ನೀ ಸೋತೆ.. ಹೇ ಪಾರು ಪೂರ್ಣತ್ತೆ ಸೋತೋತು. ಪೂರ್ಣತ್ತೆ ಸೋತೋತು" ಎಂದು ಕೂಗುತ್ತಾ ಪಕ್ಕದ ಭಟ್ಟರ ಮನೆಯ ಪಾರ್ವತಿಯ ಜೊತೆ ಆಡಲು ಓಡಿದಳು. ದಣಪೆ ಹಾರಿ ಜಿಗಿಯುತ್ತಾ ಓಡಿತ್ತಿದ್ದ ಅವಳನ್ನೇ ಸ್ತಬ್ಧಳಾಗಿ ನೋಡಿದಳು ಪೂರ್ಣ. ಎದೆಯೊಳಗೆಲ್ಲೋ ಚೂರಿಯಿಂದ ತಿವಿದಂತಹ ಅನುಭವ...ಕಿವಿಯೊಳಗೆಲ್ಲಾ "ಪೂರ್ಣತ್ತೆ ಸೋತೋತು.. ಪೂರ್ಣತ್ತೆ ಸೋತೋತು" ಎಂಬ ಕೂಗಿನದೇ ಅನುರಣನ.

-2-

ದಣಪೆಯ ಮುಂದೆ ಬಂದು ನಿಂತ ಕಾರಿನಿಂದಿಳಿದ ಆತ್ಮೀಯ ಗೆಳತಿ ಧೃತಿಯನ್ನು ಕಂಡು ಪೂರ್ಣಳ ಮುಖ ಪೂರ್ಣ ಚಂದಿರನಂತಾಯಿತು. ಅರೆಕ್ಷಣ ಇಬ್ಬರೂ ಒಬ್ಬರನ್ನೊಬ್ಬರನ್ನು ನೋಡುತ್ತಾ ನಿಂತು ಬಿಟ್ಟರು. ಸುಮಾರು 4 ವರ್ಷಗಳೇ ಕಳೆದುಹೋದವು ಒಬ್ಬರನ್ನೊಬ್ಬರು ನೋಡದೆ.. ಆಗಾಗ ಈ-ಮೈಲ್, ಫೋನ್ ಗಳ ಮೂಲಕ ಮಾತ್ರ ಕುಶಲೋಪರಿ ನಡೆಯುತ್ತಿತ್ತಷ್ಟೇ!

ಧೃತಿ ಹಾಗೂ ಪೂರ್ಣ ಮೈಕ್ರೋ ಬಯಾಲಜಿ ಮಾಡಿದ್ದು ಒಟ್ಟಿಗೇಯೇ. ಮೊದಲ ವರ್ಷದಲ್ಲೇ ಅಂಕುರಿಸಿದ ಇವರ ಸ್ನೇಹ ಓದು ಮುಗಿಯುವುದರೊಳಗೆ ತುಂಬಾ ನಿಕಟವಾಗಿಸಿತ್ತು. ಸ್ವಭಾವತಃ ಮೃದು, ಭಾವಜೀವಿ, ಸೂಕ್ಷ್ಮ ಸ್ವಭಾವದವಳಾಗಿದ್ದ ಪೂರ್ಣ ಅವಳಿಗೆ ವಿರುದ್ಧ ಸ್ವಭಾವದ, ತೀರಾ ವಾಸ್ತವವಾದಿಯಾಗಿದ್ದ ಧೃತಿಯೆಡೆಗೆ ಆಕರ್ಷಿತಳಾಗಿದ್ದು ಆಶ್ಚರ್ಯವೇ. ಪೊಸಿಟಿವ್ ಆಂಡ್ ನೆಗೆಟಿವ್ ಅಟ್ರೇಕ್ಟ್ಸ್ ಅನ್ನುವುದು ಇದಕ್ಕೇನೋ. ಕೋರ್ಸ್ ಮುಗಿದ ನಂತರ ಒಂದು ವರ್ಷ ಇಬ್ಬರೂ ಒಂದೇ ಫರ್ಮ್‌ನಲ್ಲಿ ಕೆಲಸವನ್ನೂ ಮಾಡಿದ್ದರು. ತದನಂತರ ಇನ್ನೂ ಹೆಚ್ಚಿನ ಕಲಿಕೆಗೋಸ್ಕರ ಧೃತಿ ಮುಂಬಯಿಗೆ ಹೋದರೆ ಪೂರ್ಣ ತನ್ನ ಸಹೋದ್ಯೋಗಿ ಸಂದೀಪನನ್ನು ಮೆಚ್ಚಿ ಮದವೆಯಾಗಿ ಬೆಂಗಳೂರಿನಲ್ಲೇ ನೆಲೆಸಿದಳು. ಸುಮಾರು 4 ವರ್ಷಗಳ ಹಿಂದೆ ಪೂರ್ಣಳ ಮದುವೆಯಲ್ಲಿ ಆಕೆಯನ್ನು ನೋಡಿದ್ದ ಧೃತಿ ಈಗಲೇ ಮತ್ತೆ ಅವಳನ್ನು ಕಾಣುತ್ತಿರುವುದು. ಅದೂ ಪೂರ್ಣಳೇ ಆಕೆಯನ್ನು ಒತ್ತಾಯಮಾಡಿ ಕರೆಸಿಕೊಂಡಿದ್ದರಿಂದ!

"ಪ್ಲೀಸ್ ಧೃತಿ ನೀ ಬರ್ದೆ ಹೋದ್ರೆ ನಾ ನನ್ನನ್ನೇ ಕಳ್ಕೊಂಡು ಬಿಡ್ತೀನಿ ಕಣೆ. ಇನ್ಯಾವತ್ತೂ ನಿನ್ನಲ್ಲಿ ಏನನ್ನೂ ಕೇಳೊಲ್ಲ... ಇದೊಂದ್ಸಲ ನಂಗೋಸ್ಕರ ಬಾ ಪ್ಲೀಸ್. ನಿನ್ನ ಬರುವಿಕೆನೇ ಪ್ರತಿಕ್ಷಣ ಕಾಯ್ತಾ ಇರ್ತೀತಿ. ಈಗ್ಲೇ ನನ್ನ ಏನೂ ಕೇಳ್ಬೇಡ. ಫೋನ್‌ನಲ್ಲಿ ಎಲ್ಲಾ ಹೇಳೊಕಾಗೊಲ್ಲ.. ಹೇಳೋ ಸ್ಥಿತಿಲೂ ನಾನಿಲ್ಲ. ನೀ ಆದಷ್ಟು ಬೇಗ ಬಾ ಅಷ್ಟೇ. ಬೇಡ ಬೆಂಗಳೂರಿಗೆ ಬೇಡವೇ ಬೇಡ. ಶಿರಸಿಗೇ ಬಾ. ನಾ ನಾಳೆನೇ ಭೈರುಂಬೆಗೆ ಹೊರ್ಟಿದ್ದೀನಿ. ನೀನೂ ಸೀದಾ ಅಲ್ಲೇ ಬಾ..ಮತ್ತೆ ದಯಮಾಡಿ ಸಂದೀಪ್‌ಗೆ ಫೋನ್ ಮಾಡಿ ಏನನ್ನೂ ಕೇಳ್ಬೇಡ. ಬರ್ತೀಯಾ ತಾನೆ?" ಎಂದು ತುಂಬಾ ಗೋಗರೆದು ಫೋನ್ ಇಟ್ಟುಬಿಟ್ಟಿದ್ದಳು ಪೂರ್ಣ. ಅವಳ ಮಾತೊಳಗಿದ್ದ ಆತಂಕ, ನೋವು, ಅಸಹಾಯಕತೆಯ ಕಂಡು ತುಂಬಾ ಆಶ್ಚರ್ಯ, ಆತಂಕಗಳಾಗಿದ್ದು ಸುಳ್ಳಲ್ಲ. ಒಂದು ಕ್ಷಣ ಸಂದೀಪನನ್ನೇ ಕೇಳೋಣ ಎಂದೂ ಯೋಚಿಸಿದ್ದಳು. ಆದರೆ ಆಕೆಯ ಎಚ್ಚರಿಗೆ ಅವಳನ್ನು ತಡೆಯಿತು. ಹೆಚ್ಚು ಯೋಚಿಸದೇ ಶಿರಸಿಗೆ ಟಿಕೆಟ್ ಬುಕ್ ಮಾಡಿದ್ದಳು.

"ಎಂತ ಕೂಸೆ ಇದು?.. ಆವಾಗಿಂದ ಅದ್ರನ್ನ ಇಲ್ಲೇ ನಿಲ್ಸಕಂಡು ಸುಮ್ನೆ ನೋಡ್ತಾ ಇದ್ದೆ.. ಒಳ್ಗಾರೂ ಕರ್ಕ ಹೋಗು ಅಮೇಲೆ ನೋಡ್ಕ್ಯತ್ತಾನೇ ಇರ್ಲಕ್ಕಿ ಒಬ್ರನ್ನೊಬ್ರು" ಎಂದು ಛೇಡಿಸಿದ ದಿವಾಕರಣ್ಣನ ಮಾತಿಗೆ ನಾಚಿದ ಪೂರ್ಣ ಧೃತಿಯನ್ನಪ್ಪಿ ಅವಳಿಗಾತುಕೊಂಡೇ ಒಳನಡೆದಳು.

"ಏನೇ ಧೃತಿ, ಮುಂಬಯಿ ಗಾಳಿ ತುಂಬಾ ಚೆನ್ನಾಗಿ ತಾಗಿದ ಹಾಂಗಿದೆ. ಒಳ್ಳೆ ಮೈಕೈ ತುಂಬಿಕೊಂಡಿದೀಯ ನೋಡು.. ನಾವೆಲ್ಲಾ ಮರ್ತೇ ಹೋದೆವು ನಿಂಗೆ.." ಶಾರದತ್ತಿಗೆಯ ತಮಾಷೆಗೆ ನಕ್ಕು ಬಿಟ್ಟಳು ಧೃತಿ. "ಅತ್ಗೆ.. ಅದ್ಕೇ ನೋಡಿ ಇನ್ನೂ ಸ್ವಲ್ಪ ದಪ್ಪ ಅಗೋಣಾ ಅಂತ ನೆನಪು ಮಾಡಿಕೊಂಡು ಬಂದೆ.. ಎಲ್ಲಿ ನನ್ನ ಇಷ್ಟದ ತೆಳ್ಳೇವು ಕಾಯಿ ಚಟ್ನಿ?" ಎಂದು ಒಲೆಯ ಮುಂದೇಯೇ ಕೂರಲು ಪೂರ್ಣಳೂ ಜೊತೆ ಸೇರಿದಳು. ನಗು, ಹರಟೆ, ಕುಶಲೋಪರಿಯಲ್ಲಿ ತಿಂಡಿ ಮುಗಿಸಿದ್ದಾಯಿತು. ತಿನ್ನುತ್ತ, ಮಾತಾಡುತ್ತಲೇ ಧೃತಿ ಗೆಳತಿಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಎಲ್ಲೂ ಎನೂ ಎದ್ದು ಕಾಣುವ ಸಮಸ್ಯೆ ಕಾಣುತ್ತಿಲ್ಲ! ಆದರೆ ಎಂದಿನ ಕಳೆಯಾಗಲೀ, ನಿರಾಳತೆಯಾಗಲೀ ಪೂರ್ಣಳ ಮುಖದಲ್ಲಿ ಕಾಣಲು ಸಿಗಲಿಲ್ಲ. ಕಣ್ಣೊಳಗೇನೋ ನೋವು.

ಜಗುಲಿಯಲ್ಲಿ ಫೋನ್ ಸದ್ದಾಗಲು ಧೃತಿಯನ್ನಾತು ಕುಳಿತಿದ್ದ ಪೂರ್ಣ ನೇರವಾದಳು. ಅವಳ ಮುಖದಲ್ಲುಂಟಾದ ಹಠಾತ್ ಬದಲಾವಣೆ ಕಂಡು ಧೃತಿಗೆ ಆಶ್ಚರ್ಯವಾಯಿತು. ಶಾರದತ್ತಿಗೆಯಲ್ಲೂ ಎನೋ ಕಳವಳ...ಕೆಲ ನಿಮಿಷಗಳಲ್ಲೇ ಒಳ ಬಂದ ದಿವಾಕರಣ್ಣನ ಮುಖವೂ ಇಳಿದಂತೆ ಕಂಡಿತು ಧೃತಿಗೆ. "ಪೂರ್ಣ ಸಂದೀಪ್ ಫೋನ್ ಮಾಡಿದ್ದ. ಲೈನ್‌ನಲ್ಲೇ ಇದ್ದ.. ಮಾತಾಡ್ತ್ಯ?" ಅಣ್ಣನ ಮಾತಿಗೆ ತಲೆ ತಗ್ಗಿಸಿದ ಪೂರ್ಣ "ನಾ ಕಡಿಗೆ ಮಾಡ್ತಿ ಹೇಳು" ಎಂದಷ್ಟೇ ಉತ್ತರಿಸಿ ಬಟ್ಟಲು, ಲೋಟ ತೊಳೆಯುವ ನೆಪಮಾಡಿ ಬಚ್ಚಲಿಗೆ ನಡೆದಳು. ಅಷ್ಟೊತ್ತೂ ನಗುವಿನಿಂದ ನಿರಾಳತೆಯಿಂದ ಕೂಡಿದ್ದ ವಾತಾವರಣದಲ್ಲೀಗ ಬರಿಯ ಮೌನ ತುಂಬಿತ್ತು.

ಪೂರ್ಣಳ ಕೆಂಪಡರಿದ್ದ ಕಣ್ಣುಗಳು, ಕಳಾಹೀನ ಮುಖ ನಿಜ ಕತೆ ಸಾರುತ್ತಿದ್ದರೂ "ಒಂದು ಪ್ಲೇಟು, ಲೋಟ ತೊಳೆಯಲು ನಿಂಗೆ ಅರ್ಧಗಂಟೆ ಬೇಕೇನೇ ಹುಡ್ಗಿ? ಅದ್ಯಾವಾಗಿಂದ ಇಷ್ಟು ಸ್ಲೋ ಆದೆ ನೀನು" ಎಂದು ತುಸು ನಗಿಸಲೆತ್ನಿಸಿದಳು ಧೃತಿ.

"ನೀ ಬೇಗ ಫ್ರೆಶ್ ಆಗಿ ರೆಡಿ ಆಗು ಧೃತಿ.. ನಾವು ತೋಟದ ತೋಡಿನ ಹತ್ರ ಸ್ವಲ್ಪ ಹೊತ್ತು ಹೋಗಿಬರೋಣ" ಎಂದು ಮೌನವಾಗಿ ಒಳಕೋಣೆಗೆ ಹೋದ ಪೂರ್ಣಳನ್ನು ಕಂಡು ಅವಳ ಕುತೂಹಲ ಮತ್ತೂ ಹೆಚ್ಚಿತು.
"ಅತ್ಗೆ ಊಟಕ್ಕೆ ಯಂಗಳ ಕಾಯಾಡಿ ಹೊತ್ತಾಗ್ಲಕ್ಕು. ಅಣ್ಣಂಗೂ ಹೇಳ್ಬುಡು..." ಎಂದು ಆಕೆಯ ಪ್ರತ್ಯುತ್ತರಕ್ಕೂ ಕಾಯದೇ ಒಂದು ರೀತಿ ಧೃತಿಯನ್ನು ದಬ್ಬಿಕೊಂಡೇ ಮೆಟ್ಟಿಲು ಇಳಿಯುತ್ತಿದ್ದ ನಾದಿನಿಯನ್ನೇ ದಿಟ್ಟಿಸಿದಳು ಶಾರದೆ. ಆಕೆಯ ಕೈಯೊಳಗಿದ್ದ ಗುಲಾಬಿ ಫೈಲ್ ನೋಡಿ ಎಲ್ಲವೂ ಅರ್ಥವಾಗಿ ನಿಟ್ಟುಸಿರು ಹೊರಬಂತು. ಹಿಂತಿರುಗಿದರೆ ಪತಿಯ ಕಣ್ಗಳೂ ಅವರನ್ನೇ ದಿಟ್ಟಿಸುತ್ತಿದ್ದವು. ಅದರೊಳಗೆ ತುಂಬಿದ ನೀರು ಕ್ರಮೇಣ ಶಾರದೆಯ ಕಣ್ಗಳನ್ನೂ ತುಂಬ ತೊಡಗಿದವು.

ಕಥೆಯ ಮುಂದಿನ ಭಾಗ... »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X