ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೆಲ್ಲವ ಬಿಟ್ಟು..

By Staff
|
Google Oneindia Kannada News

(ಕಥೆ ಮುಂದುವರೆದಿದೆ...)

-3-

ಪೂರ್ಣಳ ತುಂಬಾ ಒತ್ತಾಯದ ಮೇರೆಗೆ ಮೈಕ್ರೋ ಬಯಾಲಜಿಯ ಕೊನೆಯ ವರ್ಷದ ರಜೆಯಲ್ಲಿ ಇಲ್ಲಿಗೆ ಬಂದಿದ್ದಳು ಧೃತಿ. ಅಡಿಕೆ ತೋಟ, ಎಲೆ ಬಳ್ಳಿ, ಏಲಕ್ಕಿ ಗಿಡಗಳ ಪರಿಮಳ, ಕರಿಮೆಣಸಿನ ಬಳ್ಳಿ, ತೋಟದ ತುದಿಯಲ್ಲಿದ್ದ ತೋಡು, ಮಾಳ, ತೋಡಿನಾಚೆಯ ಭಟ್ಟರ ಮನೆಯ ತೊಡೆದೇವ... ಅವರ ಟ್ರಾನ್ಸಿಸ್ಟರ್ ಹುಚ್ಚಿನ ಪ್ರಸಂಗ ಎಲ್ಲವೂ ಒಂದು ಸಿಹಿ ಕನಸಿನಂತೆ, ಸದಾ ನೆನಪಿಡಲು ಬಯಸುವ ಒಂದು ಅಪೂರ್ವ ಘಳಿಗೆಯಂತೆ ಅವಳ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ್ದವು. ಎಂತಹ ಸುದಿನಗಳಾಗಿದ್ದವು! ಹಗಲು ಬೇಣ, ಗುಡ್ಡ ತೋಟಗಳನ್ನು ಸುತ್ತುವುದು.. ರಾತ್ರಿ ಅಟ್ಟದಮೇಲೆ ಮುಚ್ಚಿ ಮಲಗಿ ಪಿಸು, ಪಿಸು ಮಾತುಗಳನ್ನಾಡುತ್ತಾ ಯಾವುದೋ ಜಾವದಲ್ಲಿ ನಿದ್ರೆಗೆ ಜಾರುವುದು. ನಾಳಿನ ಹಂಗೇ ನಮಗಿಲ್ಲ ಎನ್ನುವಂತೆ ಕುಣಿದಾಡಿದ್ದರು. ತಿಂಗಳ ರಜೆ ದಿನದಲ್ಲೇ ಕರಗಿದಂತಹ ಅನುಭವವಾಗಿತ್ತು. ಹಿಂದಿನ ಮಧುರ ನೆನಪುಗಳನ್ನೆಲ್ಲಾ ನೆನೆದು ತುಸು ಗೆಲುವೆನಿಸಿ ಪೂರ್ಣಳ ಕಡೆ ತಿರುಗಿ ನೋಡಿದರೆ.. ಅವಳು ಮಾತ್ರ ಅವಳದೇ ಗುಂಗಿನಲ್ಲಿದ್ದಂತೆ ಕಂಡಳು. ನೋಟ ಕೆಳಗೆ ನೆಟ್ಟಿದ್ದರೂ ಮನಸ್ಸು ಏನೋ ಗಂಭೀರ ಯೋಚನೆಯಲ್ಲಿದ್ದಂತಿತ್ತು. ಹೊರಡುವಾಗ ಎದೆಗವಚಿಕೊಂಡಿದ್ದ ಗುಲಾಬಿ ಫೈಲ್ ಕಂಡು ತುಂಬಾ ಕುತೂಹಲವಾಗಿದ್ದರೂ ಏನನ್ನೂ ಕೇಳದೇ ಅವಳ ಜೊತೆ ಬಂದಿದ್ದಳು.

ದಣಪೆ ದಾಟಿ ತೋಟವನ್ನಿಳಿದು ಹತ್ತು ನಿಮಿಷ ನಡೆದರೆ ಆ ತುದಿಯಲ್ಲಿಯೇ ಕಾಣುವುದು ಹಳ್ಳ. ದಾರಿಯುದ್ದಕ್ಕೂ ಅವರಿಬ್ಬರನ್ನು ಮೌನ ಮಾತಾಡಿಸುತ್ತಾ ಬಂದಿತು. ಇವಳ ಜೊತೆ ಹಳೆಯ ಮಧುರ ನೆನಪುಗಳಿದ್ದರೆ, ಅವಳ ಜೊತೆ ಮುಂದಿನ ದಿನಗಳ ನೆನೆದರೇ ಉಂಟಾಗುವ ಅಧೀರತೆ. ಹಳ್ಳದ ಪಕ್ಕದಲ್ಲೇ ಇದ್ದ ಕಲ್ಲು ಹಾಸಿನ ಮೇಲೆ ಕುಳಿತರು. ಮೌನ ಮತ್ತೂ ಅಸಹನೀಯ ವೆನಿಸಿತು ಧೃತಿಗೆ. ಆಗ ತೋಡಿನಾಚೆಯ ಭಟ್ಟರ ಮೆನೆಯಿಂದ ತೇಲಿ ಬಂದ ಹಾಡಿನ ತುಣುಕನ್ನು ಕೇಳಿ ಬರಲು ಚುರುಕಾದಳು.

ಬಾನಿನಲ್ಲಿ ಒಂಟಿ ತಾರೆ
ಸೋನೆಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತೂ ಮುಳುಗಿ
ಬಿಕ್ಕುತಿಹಳು ಯಾರೋ ನೀರೆ..

"ಹೇ ಪೂರ್ಣ ಕೇಳಿದ್ಯಾ ಇದು ನಿನ್ನ ಫೇವರೇಟ್ ಎನ್.ಎಸ್. ಅವರ "ಎಲ್ಲಿ ಜಾರಿತೋ ಮನವು.." ಹಾಡಲ್ಲವೇನೇ? ಮರ್ತು ಬಿಟ್ಯಾ? ನಾವು ಮೊದ್ಲು ಕೆಲ್ಸ ಮಾಡ್ತಿದ್ದ ಫರ್ಮನ ಫಂಕ್ಷನ್‌ನಲ್ಲಿ ನೀ ಇದೇ ಹಾಡನ್ನಲ್ವಾ ಹಾಡಿದ್ದು? ಎಷ್ಟು ಚೆನ್ನಾಗಿ ಹಾಡಿದ್ದೆ. ಇದೇ ಹಾಡಿಗೆ ಅಲ್ವಾ ನಮ್ಮ ಸಂದೀಪ ನಿಂಗೆ ಕ್ಲೀನ್ ಬೌಲ್ಡ್ ಆಗಿದ್ದು... ಹಂ ನಿಜ್ವಾಗ್ಲೂ ತುಂಬಾ ಸುಂದರ ಹಾಡು.. ಈಗ್ಲೂ ಒಮ್ಮೆ ಹಾಡು ನೋಡೋಣ.. ಅವ್ನಿಲ್ದೇ ಇದ್ರೆ ಏನಂತೆ ನಾನಿದ್ದೀನಲ್ಲಾ..ಆವಾಗಿನಿಂದ ಮುಖ ಕೆಳಗೆ ಹಾಕಿಕೊಂಡು ಅದೇನು ನೋಡ್ತಿದ್ದೀಯೋ ಏನೋ.." ಎಂದು ಛೇಡಿಸುತ್ತಾ ಅವಳ ಮುಖವನ್ನೆತ್ತಿ ನೋಡಿದರೆ ಕಣ್ಣು ಕೋಡಿ ಹರಿಸಿತ್ತು. ಥಟ್ಟನೆ ಅವಳ ಮಡಿಲಲಿ ಹುದುಗಿ ಬಿಕ್ಕಿ ಬಿಕ್ಕಿ ಅಳಹತ್ತಿದಳು ಪೂರ್ಣ.

ಒಂದೇ ಸಮನೆ ಅಳುತ್ತಿದ್ದ ಅವಳನ್ನು ಹೇಗೆ ಸಂತೈಸಬೇಕೆಂದೇ ತಿಳಿಯದಾಯಿತು ಧೃತಿಗೆ. ವಿಷಯ ಬೇರೆ ಗೊತ್ತಿರಲಿಲ್ಲ. ಕೊನೆಗೆ ಅವಳು ಅತ್ತು ಸಮಾಧಾನಿಸಿಕೊಂಡು ಮಾತಾಡಲಿ ಎಂದು ಅವಳನ್ನು ಸುಮ್ಮನೆ ಅಳಲು ಬಿಟ್ಟುಬಿಟ್ಟಳು. ಕೈ ಪೂರ್ಣಳ ತಲೆ ನೇವರಿಸುತ್ತಿತ್ತು. ಬೆಳಗ್ಗಿನಿಂದ ಕಟ್ಟಿದ ಮೋಡ ಮಧ್ಯರಾತ್ರಿ ಸುರಿದು ಬರಿದಾಗುವಂತೆ ಮನದೊಳಗಿನ ಭಾರವನ್ನೆಲ್ಲಾ ಹೊರಹಾಕಿ ತುಸು ಸುಧಾರಿಸಿಕೊಂಡ ಪೂರ್ಣ ತೋಡಿನ ನೀರಿನಲ್ಲಿ ಮುಖ ತೊಳೆದುಕೊಂಡು ಕುಳಿತಳು. ಪಕ್ಕದಲ್ಲೇ ಇಟ್ಟಿದ್ದ ಫೈಲ್ ಅನ್ನು ಧೃತಿಗೆ ಕೊಡಲು, ಮರು ಪ್ರಶ್ನಿಸದೇ ಅದನ್ನೆತ್ತಿ ಕೊಂಡು ಓದತೊಡಗಿದಳು ಧೃತಿ. ಹೆಚ್ಚು ಸಮಯವೇನೂ ಬೇಕಾಗಲಿಲ್ಲ ಅವಳಿಗೆ ಪೂರ್ಣಳ ಸಮಸ್ಯೆ ಅರಿಯಲು. ಇಷ್ಟೊತ್ತೂ ಅವಳ ತೆಲೆಯೊಳಗಿದ್ದ ಕುತೂಹಲಕ್ಕೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರೂ ಅದರ ಜಾಗದಲ್ಲೀಗ ಹೊಸ ಸಂಶಯ, ಪ್ರಶ್ನೆಗಳು ಆಕ್ರಮಿಸಿಕೊಂಡವು.

"ಏನೇ ಪೂರ್ಣ ಇದು.. ಈ ವಿಷಯಕ್ಕೇನಾ ನೀ ಇಷ್ಟೊಂದು ಅಪ್‌ಸೆಟ್ ಆಗಿದ್ದು?! ನಂಗೆ ಅರ್ಥ ಆಗೊತ್ತೆ.. ನೀನೀಗ ಯಾವ ಸ್ಥಿತಿಯಲ್ಲಿದ್ದೀಯಾ ಅಂತ. ಅದ್ರೆ ಸಮಸ್ಯೆ ಹಾಗೂ ಪರಿಹಾರ ಎರಡೂ ನಿನ್ನ ಕೈಲೇ ಇದ್ಯಲ್ಲೇ? ಯೂ ಹ್ಯಾವ್ ಪ್ರಾಬ್ಲೆಮ್ಸ್ ವಿದ್ ಸೊಲ್ಯೂಷನ್ಸ್ ಡಿಯರ್.. ನೀನೇ ಹೇಳು ನಿನ್ನ ಮನಸಿನೊಳ್ಗೆ ಏನಿದೆ ಅಂತ... ಮುಕ್ತವಾಗಿ ಎಲ್ಲವನ್ನೂ ಹೊರ ಹಾಕು ಒಮ್ಮೆ.. ಆಗ ಎಷ್ಟೋ ಸಮಸ್ಯೆಗಳು ಗೊತ್ತಿಲ್ಲದೇ ಇಲ್ಲವಾಗುತ್ತ್ವೆ.." ಎನ್ನುತ್ತಾ ಮೆಲ್ಲನೆ ಪೂರ್ಣಳ ಕೈ ಅದುಮಿದಳು.

"ಧೃತಿ ಸಮಸ್ಯೆ ಈ ಫೈಲ್‌ನೊಳಗಿದ್ದಷ್ಟೇ ಆಗಿದಿದ್ದರೆ ನಾನೂ ಅಷ್ಟೊಂದು ಅಪ್‌ಸೆಟ್ ಆಗ್ತಿರ್ಲಿಲ್ವೇನೋ!! ನಾನು ತಾಯಾಗೋದು ಕಷ್ಟ ಅನ್ನೋ ಕಟು ವಾಸ್ತವದ ಜೊತೆ ಇನ್ನೊಂದು ಕಟು ಸತ್ಯನ ಎದುರಿಸಬೇಕಾಗಿದೆ.. ಈ ಸಮಸ್ಯೆಯ ಹೆಸರು "ಸಂದೀಪ". ಧೃತಿ ನಿಂಗೇ ಗೊತ್ತಲ್ಲ ಮೊದ್ಲಿಂದ್ಲೂ ನಂಗೆ, ಸಂದೀಪಂಗೆ ಮಕ್ಳು ಅಂದ್ರೆ ಪ್ರಾಣ. ನಮ್ಮದೇ ಅಂಶ ಪಡ್ದು ನಮ್ಮ ಪ್ರೀತಿಗೆ ಪ್ರತೀಕವಾಗಿರೋ ಮಗುವನ್ನು ಪಡೀಬೇಕು ಅಂತ ನಾವಿಬ್ರೂ ತುಂಬಾ ಕನಸು ಕಟ್ಟಿದ್ವಿ. ನನ್ನ ಮಗು ಹಾಗೂ ಸಂದೀಪನ ಜೊತೆ ಇರುವಾಗ ಎಷ್ಟೇ ಕಷ್ಟ ಬಂದ್ರೂ ಯಾವ ನೋವು ಬಂದ್ರೂ ಎದುರಿಸ್ತೀನಿ ಅನ್ನೋ ಆಶಾವಾದ, ಭರವಸೆಲಿ ನಾನಿದ್ದೆ. ಆದ್ರೆ ಈ ವಿಶ್ವಾಸಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಸುಮಾರು ಆರು ತಿಂಗಳ ಹಿಂದೆ.

ಮದ್ವೆಯಾದ ಮೊದ್ಲೆರ್ಡು ವರ್ಷ ಕೆಲ್ಸ, ಪ್ರೊಜೆಕ್ಟ ಅಂತೆಲ್ಲಾ ಜವಾಬ್ದಾರೀಲಿ ಅನಿವಾರ್ಯವಾಗಿ ಮಗುವಿನ ಯೋಚನೆ ಕೈ ಬಿಡ್ಬೇಕಾಯ್ತು. ಆಮೇಲೆ ಒಂದ್ವರ್ಷ ಕಾದ್ರೂ ನಾನು ತಾಯಾಗುವ ಲಕ್ಷಣಾನೇ ಕಾಣ್ಲಿಲ್ಲ ಕಣೆ. ಪ್ರತಿ ತಿಂಗಳೂ ಹೊಸ ಆಸೆ, ಕುತೂಹಲ, ನಿರೀಕ್ಷೆ.. ಅದ್ರ ಬೆನ್ನಿಗೇ ನಿರಾಸೆ, ಆತಂಕ, ಭಯ. ಕೊನೆಗೆ ಪರಿಚಯದ ಗೈನೋಕಾಲಜಿಸ್ಟ್ ಹತ್ರ ಹೋದ್ವಿ. ಸುಮಾರು ಟೆಸ್ಟ್‌ಗಳಾದ್ವು. ಆಗ ತಿಳ್ದಿದ್ದು ಮಗು ಪಡೆಯೋ ಸಾಮರ್ಥ್ಯ ನನ್ನೊಳಗೇ ಇಲ್ಲ ಅಂತ. ಆ ಆಘಾತಾನ ಅರಗಿಸಿಕೊಳ್ಳೋಕೇ ನಂಗೆ ನಾಲ್ಕು ತಿಂಗ್ಳು ಬೇಕಾಯ್ತು... ಸಂದೀಪ ಅಂತೂ ಫುಲ್ ಡಲ್ ಆಗೋಗಿದ್ದ. ಆದ್ರೂ ಅವ್ನಲ್ಲಿ ಅದೇನೋ ಆಶಾವಾದ. ಸೈನ್ಸ್ ಇಷ್ಟೊಂದು ಡೆವಲಪ್ ಆಗಿದೆ. ನಾವು ವಿಚಾರಿಸೋಣ. ಧೈರ್ಯವಾಗಿರು ಅಂತೆಲ್ಲಾ ಹೇಳಿ ಸಮಾಧಾನಿಸೋನು. ಈಗ್ಗೆ ಆರು ತಿಂಗಳಿನ ಹಿಂದೆ ಮತ್ತೆ ನಾವು ಡಾಕ್ಟರ್ ಭೇಟಿ ಆದ್ವಿ. ಆಗ ಅವ್ರು ಹೇಳಿದ ಪರಿಹಾರ ನನ್ನ ಪೂರ್ತಿ ಮುಗ್ಸಿ ಬಿಟ್ಟಿತು. ನನ್ನ ತಾಯ್ತನದ ಕನಸನ್ನೊಂದೇ ಚೂರು ಮಾಡ್ಲಿಲ್ಲ..ಸಂದೀಪನ ಮೇಲೆ ನಾ ಇಟ್ಟಿದ್ದ ಪ್ರೀತಿ, ವಿಶ್ವಾಸ, ಭರವಸೆ ಎಲ್ಲವನ್ನೂ ಕೊಂದು ಬಿಟ್ಟಿತ್ತು ಧೃತಿ.. ನನ್ನ ಸಂದೀಪನ್ನೇ ನಾನು ಕಳ್ದು ಕೊಂಡು ಬಿಟ್ಟೆ. ಈಗ ನನ್ನ ಹತ್ರ ಏನೂ ಇಲ್ಲ. ಯಾರೂ ಇಲ್ಲ...ನಾನೇ ಕಳ್ದು ಹೋಗಿದ್ದೀನಿ.. " ಮತ್ತೆ ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು. ಹಾಗೇ ಅವಳನ್ನಪ್ಪಿ ಸಂತೈಸತೊಡಗಿದಳು ಧೃತಿ.

"ಏನೇ ಇದು ಪೂರ್ಣ.. ಪೂರ್ತಿ ವಿಷ್ಯನಾದ್ರೂ ಹೇಳು.. ಅಲ್ಲಾ ಎಲ್ಲಾ ವಿಷ್ಯಕ್ಕೂ ಈ ರೀತಿ ಅಳೋದೇ ಪರಿಹಾರನಾ.. ಇಷ್ಟೊಂದು ಸೆನ್ಸಿಟಿವಿಟಿ ಒಳ್ಳೆದಲ್ಲಾ.. ಸಮಾಧಾನ ಮಾಡ್ಕೋ.. ಡಾಕ್ಟ್ರು ಏನಂದ್ರು? ಏನಂತೆ ಪರಿಹಾರ? ಸಂದೀಪ ಏನಾದ್ರೂ ಬೇಜಾರು ಮಾಡಿದ್ನ ನಿನ್ನ?.. ನೀ ಹೀಗೇ ಒಗ್ಟಾಗಿ ಮಾತಾಡಿದ್ರೆ ನಂಗೇನು ಅರ್ಥಾ ಆಗ್ಬೇಕು ಹೇಳು? ಪ್ಲೀಸ್ ಬಿ ಬ್ರೇವ್." ಎಂದು ಸಮಾಧಾನಿಸಿದ ಧೃತಿಯ ಸಾಂತ್ವನದಲ್ಲಿ ತುಸು ಚೇತರಿಸಿಕೊಂಡಳು ಪೂರ್ಣ.

"ಧೃತಿ ಡಾಕ್ಟ್ರು ನಿಮ್ಮ ಸಮಸ್ಯೆಗೆ ಪರಿಹಾರ ಇದೆ ಅಂದಾಗ ನಾನು ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅದೇ ಅವ್ರು ಹೇಳಿದ ಟ್ರೀಟಮೆಂಟ್ ಕೇಳಿದ ಮೇಲೆ ಮಾತ್ರ ನಂಗೆ ಎಲ್ಲಾ ಶೂನ್ಯ ಅನ್ನಿಸಿ ಬಿಡ್ತು. ನನ್ನ ಯುಟಿರಸ್ ಚೆನ್ನಾಗೇ ಇದೆ. ನಾನು ಮಗುವನ್ನು ಹೊರಲು, ಹೆರಲು ಏನೂ ಪ್ರಾಬ್ಲೆಮ್ ಇಲ್ಲಾ. ಆದ್ರೆ ಭ್ರೂಣ ಹುಟ್ಟಲು ಬೇಕಾದ ಎಗ್ ಪ್ರೊಡಕ್ಷನ್ ನನ್ನಲ್ಲಿ ಆಗುತ್ತಿಲ್ಲ...ಹಾಗೆ ಆಗುವ ಸಂಭವವೂ ಇಲ್ಲ..ಬಿಕೋಸ್ ಮೈ ಬೋತ್ ಓವರೀಸ್ ಆರ್ ನೋಟ್ ವೆಲ್ ಡೆವಲಪ್ಡ್... ಯಾವ್ದೇ ಮೆಡಿಸಿನ್‌ನಿಂದಾನೂ ಎಗ್ ಪ್ರೊಡಕ್ಷನ್ ಮಾಡ್ಸೋಕೆ ಆಗೊಲ್ಲಾ ಅಂದ್ಬಿಟ್ರು. ಆದ್ರೆ "ಎಗ್ ಡೊನೇಷನ್" ಅಥವಾ "ಓವಮ್ ಡೊನೇಷನ್" ಥೆರಪಿ ಮಾಡಿ "ಐ.ವಿ.ಎಫ್" ಮೂಲಕ ಎಂಬ್ರಿಯೋನ ನನ್ನ ಯುಟಿರಸ್ ಒಳ್ಗೆ ಇನ್ಸರ್ಟ್ ಮಾಡೋದ್ರಿಂದ ನಾನು ತಾಯಾಗ್ಬಹುದು... ಅಂದ್ರೆ ಇಲ್ಲಿ ಸೆಮನ್ ಸಂದೀಪಂದಾಗಿದ್ರೆ ಎಗ್ ಮಾತ್ರ ಬೇರೆ ಹೆಣ್ಣಿಂದಾಗಿರೊತ್ತೆ. "ಇನ್ವಿಟ್ರೋ ಫರ್ಟಿಲೈಸೇಷನ್" ಮೂಲಕ ಜೈಗೋಟ್ ನನ್ನೊಳ್ಗೆ ಹಾಕ್ತಾರೆ.. ಆಮೇಲೆ ಎಲ್ಲಾ ನೋರ್ಮಲ್ ಭ್ರೂಣದ ರೀತೇನೆ ಮಗು ಬೆಳೆದು ನಾರ್ಮಲ್ ಡೆಲಿವೆರಿ ಆಗೊತ್ತೆ ಅಂದ್ರು. ಇದ್ನ ಕೇಳಿ ನಾನು ಪೂರ್ತಿ ಶಾಕ್ ಆಗ್ಬಿಟ್ಟೆ.. ಆದ್ರೆ ಸಂದೀಪನ ಮುಖ ಮಾತ್ರ ಖುಶಿಯಿಂದ ಅರಳಿಬಿಟ್ಟಿತ್ತು.

"ಪೂರ್ಣ ಎಷ್ಟೇ ಖರ್ಚಾದ್ರೂ ಸರಿ.. ನೀ ಹೆದರ್ಬೇಡ. ನಾನಿದ್ದೀನಿ...ಈಗಾಗ್ಲೇ ಎಲ್ಲಾ ವಿಚಾರ್ಸಿದ್ದೀನಿ... ಈ ಎಗ್ ಡೊನೇಷನ್ ಟ್ರೀಟ್ಮೆಂಟ್ 70-80% ಸಕ್ಸೆಸ್ ಆಗೊತ್ತೆ ಅಂತ ಹೇಳಿದ್ದಾರೆ ಡಾಕ್ಟರ್... ಅದೂ ಅಲ್ದೆ ಎಗ್ ಡೊನೇಟ್ ಮಾಡೋರ ಹೆಸ್ರು, ವಿಳಾಸ ಎಲ್ಲಾ ಗುಪ್ತವಾಗಿ ಇಡ್ತಾರಂತೆ.. ಸೋ ಡೋಂಟ್ ವರಿ.. ಮುಂದಿನ ತಿಂಗ್ಳೇ ನಾವು ಈ ಟ್ರೀಟ್ಮೆಂಟ್ ತೊಗೋಳೋಣ... ನಾ ನಾಳೇನೇ ಡಾಕ್ಟರ್ ಹತ್ರ ಮಾತಾಡಿ ಫಿಕ್ಸ್‌ಮಾಡಿ ಬರ್ತೀನಿ..." ಹೀಗೇ ಒಂದೇ ಸಮ್ನೆ ಬಡ ಬಡಿಸ್ತಾ ಎಗ್ಸೈಟ್ ಆಗ್ತಾ ಇದ್ದ ಸಂದೀಪನಲ್ಲಿ ನಾ ನನ್ನ ಸಂದೀಪನ ಹುಡ್ಕಿ ಸೋತೋದೇ ಕಣೆ. ಆಗ ನಂಗೆ ನಾನು ತಾಯಾಗಲಾರೆ ಎಂಬ ಸತ್ಯಕ್ಕಿಂತಲೂ ದೊಡ್ಡ ಆಘಾತವಾಗಿತ್ತು.. 'ಪೂರ್ಣ ನಿಂಗೂ ಒಪ್ಗೇನಾ.. ನೀನೇನು ಹೇಳ್ತೀಯಾ?' ಎಂದು ಒಮ್ಮೆಯೂ ಕೇಳುವ ಸೌಜನ್ಯವೂ ಇಲ್ಲವೇ ಎಂದೆನಿಸಿ ತುಂಬಾ ಸಂಕ್ಟ ಆಯ್ತು.

ನೀನೇ ಹೇಳು ಧೃತಿ ಒಂದ್ವೇಳೆ ಪ್ರಾಬ್ಲಮ್ ನನ್ನಲ್ಲೇನೂ ಇಲ್ದೇ ಹೋಗಿ, ಅವನಲ್ಲೇ ಇದ್ದಿದ್ರೆ..?! ಅವ್ನಲ್ಲಿ ಸೆಮನ್ ಕೌಂಟ್ ಇಲ್ಲಾ ಅಂತ ಹೇಳಿದಿದ್ರೆ, ಅವ್ನು "ಆರ್ಟಿಫಿಶಿಯಲ್ ಇನ್ಸೆಮಿನೇಷನ್"ಗೆ ಥಟ್ಟಂತ ಒಪ್ತಿದ್ನ? ಬೇರೊಬ್ಬನ ಸೆಮನ್ ನನ್ನೊಳ್ಗೆ ಇಂಜೆಕ್ಟ್ ಮಾಡೊಕೇ ನಿರಾಳವಾಗಿ ಒಪ್ಪಿಗೆ ಕೊಡ್ತಿದ್ನ? ದೇವರಾಣೆ ಹೇಳ್ತಿನಿ ಕಣೆ ಒಂದ್ವೇಳೆ ಅಂವ ಒಪ್ಪಿದಿದ್ರೂ ನಾ ಖಂಡಿತ ಒಪ್ತಿರ್ಲಿಲ್ಲ. ನನ್ನ ಪ್ರಕಾರ ಮಗು ಅಂದ್ರೆ ಇಬ್ಬರ ಪ್ರೇಮದ ಸಂಕೇತ. ಅದು ಇಬ್ರ ಜೀನ್ಸ್ ಅನ್ನೂ ಹೊತ್ತೇ ಹುಟ್ಬೇಕು. ಇಲ್ಲಾ ನಾವು ದತ್ತು ತಗೋ ಬಹುದು. ಇಲ್ಲಿ ಅವ್ನ ಜೀನ್ಸ್ ಎನೋ ಇರುತ್ತೆ ಆದ್ರೆ ನನ್ನ ಅಂಶನೇ ಇರೊಲ್ಲ. ಬೇರೊಂದು ಹೆಂಗಸಿನ ಎಗ್ ಜೊತೆ ಅವ್ನ ಅಂಶ ಹೊತ್ತಿರೋ ಭ್ರೂಣಾನ ನಾನು ಹೇಗೆ ಸರಾಗವಾಗಿ ನನ್ನೊಳ್ಗೆ ಇಟ್ಕೊಳ್ಲಿ? ಇಟ್ಸ್ ಜಸ್ಟ್ ಲೈಕ್ ಸರೋಗೇಟ್ ಮದರ್ ಟೈಪ್. ಇಲ್ಲಿ ನಾನು ನನ್ದೇ ಮಗುವಿಗೆ ಸರೋಗೇಟ್ ತಾಯಿ. ಅವ್ನ ಅಂಶ ಮಾತ್ರ ಇರೋ ಮಗುವಿಗೆ ನನ್ನ ಗರ್ಭಕೋಶ ಒಂಥರ ಬಾಡಿಗೆ ಕೊಟ್ಟಾಂಗೆ ಅಲ್ವಾ? ನಾನು ಈ ರೀತಿ ಟ್ರೀಟ್ಮೆಂಟ್ ವಿರೋಧಿ ಅಲ್ಲ. ಅಥವಾ ಈ ಟ್ರೀಟ್ಮೆಂಟ್ ಪಡೆಯೋರು, ಪಡಿದಿರೋರು ಎಲ್ಲಾ ಮೂರ್ಖರು ಅನ್ತಾ ಇಲ್ಲಾ. ಅದು ಅವರವರ ಭಾವಕ್ಕೆ, ಪರಿಸ್ಥಿತಿಗೆ, ಸಂತೋಷಕ್ಕೆ ಬಿಟ್ಟ ವಿಷ್ಯ. ಇಲ್ಲಿ ನಾ ಹೇಳ್ತಿರೋದು ನನ್ನ ವೈಯಕ್ತಿಕ ನಿಲುವು ಮಾತ್ರ. ಇದ್ರಲ್ಲಿ ನನ್ನ ಒಪ್ಗೆ, ಸಂತೋಷ ಮುಖ್ಯ ಅನ್ಸೊಲ್ವಾ? ಧೃತಿ ಯಾಕೋ ಏನೋ ಇದಕ್ಕೆ ನನ್ನ ದೇಹ ಮನಸ್ಸು ಎರ್ಡೂ ಒಪ್ತಾನೇ ಇಲ್ಲ. ಹಾಗಿರೋವಾಗ ಹೇಗೆ ನಾ ಆ ಮಗುನ ನನ್ನೊಳ್ಗೆ ಒಂಭತ್ತು ತಿಂಗ್ಳು ಇಟ್ಕೊಳ್ಳಲಿ? ಹೇಗೆ ಪ್ರೀತಿಸಲಿ? ಏನ್ ಮಾಡ್ಲಿ ನೀನೇ ಹೇಳು.." ಒಂದು ನಿಡಿದಾದ ಉಸಿರಿನೊಂದಿಗೆ ಅಲ್ಲೇ ಇದ್ದ ಅಡಿಕೆ ಮರಕ್ಕೊರೆಗಿ ಕಣ್ಮುಚ್ಚಿದಳು. ಮಾತಿನ ಭಾರಕ್ಕೋ ಇಲ್ಲ ಮನದೊಳಗಿನ ಭಾರಕ್ಕೋ ಆಯಾಸ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಪೂರ್ಣಳ ಮಾತುಗಳನ್ನರಗಿಸಿಕೊಳ್ಳಲು ತುಸು ಹೊತ್ತೇ ಬೇಕಾಯಿತು ಧೃತಿಗೆ. ಕ್ರಮೇಣ ವಸ್ತುಸ್ಥಿತಿ, ಅವಳ ಮನಸ್ಥಿತಿಯ ಅರಿವಾಗತೊಡಗಿತು.
"ಪೂರ್ಣ ನೀನು ಈ ಎಲ್ಲಾ ನಿನ್ನ ಭಾವನೆಗಳನ್ನು ವಿವರವಾಗಿ, ಶಾಂತಳಾಗಿ ಬಿಡಿಸಿ ಸಂದೀಪನ ಜೊತೆ ಮಾತಾಡಿದ್ದೀಯಾ? ಅವನಿಗೂ ನಿನ್ನ ಈ ಅಭಿಪ್ರಾಯದ ಕುರಿತು ಯೋಚಿಸಲು, ಚಿಂತಿಸಲು ಸಮಯ ಕೊಟ್ಟಿದ್ದೀಯಾ? ನೀವಿಬ್ಬರೂ ಇದರ ಪರಿಣಾಮಗಳನ್ನು ಚರ್ಚಿಸಿದ್ದೀರಾ?" ಎಂದು ಮೆಲ್ಲನೆ ಕೇಳಲು, ಪಕ ಪಕನೆ ಹುಚ್ಚಿಯ ಹಾಗೆ ನಕ್ಕು ಬಿಟ್ಟಳು ಪೂರ್ಣ.

"ಅಯ್ಯೋ ಹುಚ್ಚಿ.. ಇದನ್ನೆಲ್ಲಾ ನಿನ್ನ ಹತ್ರ ಹೇಳೊ ಮೊದ್ಲು ಅವನ್ಹತ್ರ ಹೇಳಿಕೊಂಡಿರೊಲ್ಲಾ ಅಂತಾನಾ? ನನ್ನ ನಾ ಹೇಗೋ ಸಾವರಿಸಿಕೊಡು ಎಲ್ಲವನ್ನೂ ಸಾವಕಾಶವಾಗಿ ಹೇಳಿದೆ..ದತ್ತು ಬೇಕಾದ್ರೆ ತಗೋಳೋನಾ ಅಂತನೂ ಹೇಳ್ದೆ. ಕೆಲದಿನ ಸುಮ್ಮನಾದ. ಪೂರ್ತಿ ಮೌನಿಯಾಗಿ ನನ್ನ ಕಾಡಿದ. ಆದ್ರೂ ಸಮಯ ಸರಿದಂತೆ ಎಲ್ಲಾ ಸರಿ ಆಗಬಹುದೆಂದು ನನ್ನ ನಾನೇ ಸಮಾಧಾನಿಸಿಕೊಂಡೆ ಕೂಡಾ. ಆದ್ರೆ ಒಂದು ತಿಂಗ್ಳ ಹಿಂದೆ ಒಂದಿನ ನನ್ನ ಬಳಿ ಬಂದು ಹೇಳಿಯೇ ಬಿಟ್ಟ.. "ಪೂರ್ಣ ಐ ವಾಂಟ್ ಮೈ ಬೇಬಿ. ನಂಗೆ ನನ್ನ ಮಗೂನೇ ಬೇಕು. ದತ್ತು ಬೇಡ್ವೇ ಬೇಡ. ಹಾಗಂತ ನಿನ್ನ ಬಿಟ್ಟು ಬೇರೆ ಮದ್ವೆ ಆಗ್ಲಾರೆ. ನಾಳೆ ಜನ ನಿಂಗೆ ಮಕ್ಳು ಆಗೋದಿಲ್ಲ ಅಂತ ನಾ ಬೇರೆ ಆದೆ ಅಂತೆಲ್ಲ ಹೇಳಿಕೊಂಡು ನನ್ನೇ ಆಡ್ಕೊಳ್ತಾರೆ. ನೀ ಸ್ವಲ್ಪ ಸಮಯ ತಗೋ.. ಯೋಚ್ಸು. ಸುಮ್ನೆ ಕೆಲಸಕ್ಕೆ ಬಾರದ ಯೋಚ್ನೆ ತಲೆಗೆ ಹಾಕ್ಕೊಬೇಡ..ನಿನ್ನ ದೃಷ್ಟಿ ಸ್ವಲ್ಪ ವಿಶಾಲ ಮಾಡ್ಕೋ ಎಲ್ಲಾ ಸರಿ ಆಗೊತ್ತೆ.." ಅಂದ್ಬಿಟ್ಟ. ಆ ದಿನ ಮಾತ್ರ ನಾ ನನ್ನ ಬಗ್ಗೇ ತುಂಬಾ ಅಸಹ್ಯ ಪಟ್ಟೆ ಕಣೆ. ಇವನನ್ನೇ ನಾ ಮೆಚ್ಚಿ ಮದ್ವೆ ಆಗಿದ್ದು..?!! ನನ್ನ ತನು-ಮನವನ್ನು ಅರ್ಪಿಸಿ ಕೃತಾರ್ಥಳಾಗಿದ್ದು? ಅಂತ ತುಂಬಾ ಹಿಂಸೆ ಪಟ್ಟೆ. ಮರು ದಿನವೇ ಅಲ್ಲಿಂದ ಹೊರ್ಟು ಇಲ್ಲಿಗೆ ಬಂದ್ಬಿಟ್ಟೆ ಕಣೆ. ಹಾಗೇ ಬರೋ ಮುಂಚೆನೇ ನಿಂಗೆ ಫೋನ್ ಮಾಡಿದ್ದು. ಇದನ್ನು ಆದಷ್ಟು ಬೇಗ ನಿನ್ಜೊತೆ ಹಂಚಿಕೊಂಡ್ರೆ ಮಾತ್ರ ನಾ ಬದ್ಕಿ ಉಳೀಬಹುದೇನೋ ಅಂತ..ಆದ್ರೆ ಇಲ್ಲಿ ಬಂದ ಮೇಲೂ ಸುಖ ಇಲ್ಲ.. ಆಗಾಗ ಫೋನ್ ಮಾಡಿ "ಎನು ಯೋಚ್ನೆ ಮಾಡ್ದೆ.." ಎಂತ ಕೇಳ್ತಾನೆ ಇದ್ದಾನೆ... ಅದ್ಕೇ ಈಗ ಪೋನ್ ರಿಸೀವ್ ಮಾಡ್ತಾನೇ ಇಲ್ಲ.. ಸುಮ್ನೆ ಹಿಂಸೆ ನೋಡು.. ಏನೋ ಭಯ ಕೂಡ.."ಎಂದು ಮಾತುಗಳ ಭಾರದಿಂಡ ಬಾಯೊಣಗಿದಂತಾಗಿ ಉಗುಳು ನುಂಗಿ ತುಸು ಹೊತ್ತು ಮೌನವಾದಳು.

"ಧೃತಿ ಅಂವ ಹೇಳಿದ್ದು ನಂಗೆ 'ನನ್ನ ಮಗು' ಬೇಕು ಅಂತ.. 'ನಮ್ಮ ಮಗು' ಅಂತಲ್ಲಾ. ಅಂದ್ರೆ ಈಗಾಗ್ಲೇ ಆತ ಹುಟ್ದೇ ಇರೋ ಮಗುವಿನಿಂದ ನನ್ನ ಬೇರ್ಪಡಿಸಿದ್ದ.. ಹಾಗಿರುವಾಗ ನಾಳೆ ನನ್ನ ಗತಿ ಎನಾಗಬಹುದು ಹೇಳು? ನನ್ನ ಬಿಟ್ಟು ಬೇರೆ ಮದ್ವೆ ಬೇಕಿದ್ರೆ ಆಗು ಅಂದ್ರೆ ಅವನಿಗೆ ಸಮಾಜದ ಭಯ....ಹ್ಹ.. ನನ್ನ ಮದ್ವೆ ಆಗ್ಬೇಕಾದ್ರೆ, ಹಿಂದೆ ಬಿದ್ದು ಪ್ರೀತಿಸ್ಬೇಕಾದ್ರೆ ಬೇಡ್ವಾಗಿದ್ದ ಸಮಾಜ ಈಗ ಬೇಕಾಗಿದೆ ನೋಡು. ಮೊದ್ಲೆಲ್ಲಾ"ಚಿನ್ನು.. ನಿನ್ನ ಹೆಸ್ರನ್ನ ನನ್ನ ಮೊದಲ ಹೆಸ್ರಿನ ನಂತ್ರ ಹಾಕ್ಕೊಂಡ್ರೆ ನಾನೂ ನನ್ನ ಬದಕು ಎರಡೂ ಸಂಪೂರ್ಣ..ಅಲ್ಲಾ.. "ಸಂಪೂರ್ಣದೀಪ" ಅಂತೆಲ್ಲಾ ಮುದ್ದಾಡೋನು. ಆದ್ರೆ ನಮ್ಮ ಮಗುವಿನ ವಿಷ್ಯ ಬಂದಾಗ ನನ್ನ ನೋವಿನ ಜೊತೆ ಬಿಟ್ಟು.. ಸಂಪೂರ್ಣ ಮರೆತೇ ಬಿಟ್ಟ. ಈ ಪೂರ್ಣಳನ್ನು ನೀ ಅಪೂರ್ಣ ಅಂತ ತೋರಿಸ್ಬಿಟ್ಟ.

ನಿಂಗೆ ನೆನ್ಪಿದ್ಯಾ..ಮದ್ವೆ ಮೊದ್ಲು ನಂಗೆ ಎನ್.ಎಸ್ ರ ಕವನಗಳೆಂದರೆ ತುಂಬಾ ಇಷ್ಟ ಅಂತ ಗೊತ್ತಾದಾಗ ಅವರ ಒಂದು ಕವಿತೆಯನ್ನ ನಂಗೆ ಮೈಲ್ ಮಾಡಿದ್ದ.. ನಿಂಗೂ ತೋರ್ಸಿದ್ನಲ್ಲ....

ನೀ ಸಿಗದೆ ನಾನೆಂತು ಅರಿವೆನೇ ನನ್ನ.
ನೀ ಸಿಗದೆ ನಾನೆಂತು ಅರಿವೆನೇ ನನ್ನ
ಸಾಣೆ ಗೆರೆ ಮಿಂಚದೆ ತಿಳಿವರೇ ಹೊನ್ನ ?

« ಕಥೆಯ ಮೊದಲ ಭಾಗ ಕಥೆಯ ಕೊನೆಯ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X