ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೆಲ್ಲವ ಬಿಟ್ಟು..

By Staff
|
Google Oneindia Kannada News

(ಕಥೆ ಮುಂದುವರೆದಿದೆ...)

ಇದೇ ಕವಿತೆ ಅಲ್ವಾ ನನ್ನ ಅವನ ಕಡೆ ಮತ್ತಷ್ಟೂ ಸೆಳೆದಿದ್ದು?! ಈ ಕವಿತೆಯನ್ನ ನಾ ನನ್ನ ಬೆಡ್ರೂಂನಲ್ಲೂ ಹಾಕಿಟ್ಟಿದ್ದೆ. ಆದ್ರೆ ಈಗ...! ಹ್ಹ... ಅವನ್ನ ಪೂರ್ತಿ ಪಡೆದ ಮೇಲೆನೇ ನಾ ಅವ್ನ ನಿಜ್ವಾಗ್ಲೂ ಅರಿತಿದ್ದು. ಆದ್ರೆ ಅವನು ನನ್ನ ಮಾತ್ರ ಅರಿಯಲೇ ಇಲ್ಲ ಕಣೆ ಎಂಥ ವಿಪರ್ಯಾಸ ಅಲ್ವಾ?

ಸೋತೋದೆ ಕಣೆ...ಸಂಪೂರ್ಣ ಸೋತೋದೆ.. ಇನ್ನು ಸಾಧ್ಯವೇ ಇಲ್ಲಾ ಅನ್ಸಿಬಿಟ್ಟಿದೆ. ತಾಯಿ ಆಗ್ಲಾರೆ. ಗಂಡನ ಮೇಲೆ ಪ್ರೀತಿ, ವಿಶ್ವಾಸ, ಭರವಸೆ ಉಳಿದಿಲ್ಲ. ಒಂದೇ ಸಲ ಎಲ್ಲಾನೂ ಕಳ್ದು ಕೊಂಡು ನಿಂತಿದ್ದೀನಿ. ಪುಣ್ಯಕ್ಕೆ ಅಮ್ಮಾ, ಅಪ್ಪ ಮೊದ್ಲೇ ಹೋಗಿ ಬಿಟ್ರು. ಇಲ್ದೇ ಹೋಗಿದ್ರೆ ನನ್ನ ದುಃಖ ನೋಡಿ ಖಂಡಿತ ಸಹಿಸಿಕೊಳ್ಳುತ್ತಿರಲಿಲ್ಲ. ಇನ್ನು ಅಣ್ಣ, ಅತ್ಗೆ... ಅವ್ರಿಗೆ ಪಾಪ ಇದೆಲ್ಲಾ ಸೂಕ್ಷ್ಮತೆ ಅರ್ಥನೇ ಆಗೊಲ್ಲಾ.. ವಿವರಿಸಿ ಪ್ರಯೋಜನ ಇಲ್ಲ. ನಿನ್ನಿಷ್ಟ ಅಂದ್ಬಿಟ್ಟಿದ್ದಾರೆ. ಆದ್ರೆ ಅವ್ರಿಗೂ ತುಂಬಾ ದುಃಖ ಆಗಿರೋದು ಮಾತ್ರ ಸತ್ಯ. ಈಗ ನೀನೇ ಹೇಳು ನನ್ನ ನಾ ಹೇಗೆ ಉಳಿಸಿಕೊಳ್ಲಿ? ಯಾವ ದಾರಿ ಇದೆ ನಂಗೆ? ನಿನ್ನಷ್ಟು ಪ್ರಾಕ್ಟಿಕಲ್ ಅಲ್ಲ ನಾ. ಸಂದೀಪನ ವರ್ತನೆ, ಮಾತುಗಳ ಹಿಂಸೆ ಒಂದೆಡೆ, ನನ್ನೊಳಗಿನ ಕೊರತೆಯ ಕೊರಗು ಇನ್ನೊಂದೆಡೆ. ತಾಯಾಗಲಾರೆ ಎಂಬ ಕುಂದು ನನ್ನ ಗಂಡನನ್ನೂ ನನ್ನಿಂದ ಕಸಿಯಿತು ಧೃತಿ.. ಎನೂ ಇಲ್ಲಾ ಈಗ ನನ್ನಲ್ಲಿ.. ಎನೂ ಇಲ್ಲ.."ಎನ್ನುತ್ತಾ ತನ್ನ ಮಂಡಿಯೊಳಗೆ ಮುಖ ಹುದುಗಿಸಿ ಕುಳಿತು ಬಿಟ್ಟಳು.

ಸೂರ್ಯ ಯಾವಾಗಲೋ ತನ್ನ ಪ್ರಖರತೆಯನ್ನು ಕಳೆದುಕೊಂಡು ಪಡುವಣದ ದಾರಿಯನ್ನು ಹಿಡಿಯುವಂತಿದ್ದ. ಇಬ್ಬರೊಳಗೂ ಹಸಿವಿನ ಅರಿವಿಲ್ಲ. ಹೊತ್ತಿನ ಪರಿವೆಯಿಲ್ಲ. ತುಸು ಹೊತ್ತಿನ ನಂತರ ಧೃತಿ ಪೂರ್ಣಳನ್ನೆಬ್ಬಿಸಿ ಕೊಂಡು ತೋಡಿನ ಬಳಿ ಬಂದಳು.

-4-

"ಪೂರ್ಣ..ಈ ಹಳ್ಳವನ್ನು ನೋಡಿದ್ಯಾ? ಎಷ್ಟು ನಿರಾಳವಾಗಿ ಶಾಂತವಾಗಿ ಹರೀತಿದೆ. ಹಾಂಗಂತ ಇದ್ರೊಳ್ಗೂ ಕಸ, ಕಡ್ಡಿ, ಮಣ್ಣು ಎಲ್ಲಾ ಇರುತ್ವೆ. ಆದ್ರೆ ಹೊಸ ನೀರು ಬಂದ ಹಾಗೇ ಅವು ನೀರೊಳ್ಗೆ ತೇಲಿ ಹೋಗಿ ಬಿಡುತ್ವೆ. .. ಇಲ್ಲಾ ಬದಿಗೆ ಅಂಟಿಕೊಡು ಗುಂಪಿನಲ್ಲಿ ಗೋವಿಂದ ಆಗಿಬಿಡುತ್ವೆ. ನಮ್ಮ ಮನಸ್ಸೂ ಹೀಗೇ ಇದ್ರೆ ನಮಗೇ ಒಳ್ಳೇದು ಪೂರ್ಣ. ಎನೇ ಕಷ್ಟ, ದುಃಖ, ನೋವು ಮನಸ್ಸೊಳ್ಗೆ ಹೊಕ್ಕಿದ್ರೂ ಹೊಸ ಹೊಸ ಯೋಚನೆಗಳನ್ನು ಆಗಾಗ ಹರಿಯ ಬಿಡುವುದರಿಂದ ಇವುಗಳನ್ನೆಲ್ಲಾ ತೊಳೆದುಬಿಡಬಹುದು. ಹಾಗೆ ಮರೆಯಲೇ ಸಾಧ್ಯವಾಗದಂತಹವುಗಳನ್ನು ಮನದ ಯಾವುದೋ ಮೂಲೆಯಲ್ಲಿರಿಸಿ ಮುಚ್ಚು ಬಿಟ್ಟು ಆ ಕಡೆ ತಿರುಗಿಯೂ ನೋಡದಂತಿರಬೇಕು. ತುಂಬಾ ಕಷ್ಟ ಇದು.. ಒಪ್ಪುವೆ. ಆದ್ರೆ ಅಸಾಧ್ಯವೇನಲ್ಲಾ. ನಂಗೊತ್ತು ನೀ ಅಂದ್ಕೋಬಹುದು..ಇವಳಿಗೇನು ಗೊತ್ತು ನನ್ನ ಕಷ್ಟ.. ಹೇಳೋದು ಸುಲಭ ಅಂತ... ಯಾಕಂದ್ರೆ ನಿನ್ನ ನೋವಿನ ತೀವ್ರತೆಯನ್ನು ನಾನು ಅನುಭವಿಸಿಲ್ಲ.. ಅನುಭವಿಸಲು ಸಾಧ್ಯವೂ ಇಲ್ಲ. ಸಮಸ್ಯೆಗಳನ್ನು ಸ್ವತಃ ಅನುಭವಿಸದೇ ಅದಕ್ಕೆ ಪರಿಹಾರ ಕೊಡೋದು ತುಂಬಾ ಕಷ್ಟ. ಆದ್ರೆ ನನ್ನ ಪ್ರಕಾರ ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲ ಅಂದುಕೊಳ್ಳೋದೇ ಒಂದು ದೊಡ್ಡ ಸಮಸ್ಯೆ.

ಮೊದ್ಲು ನಿನ್ನ ನೀನು ಈ ರೀತಿ ಕುಗ್ಗಿಸ್ಕೊಳ್ಳೋದ್ನ ನಿಲ್ಲಿಸ್ಬಿಡು ಪೂರ್ಣ .. ಹೆಣ್ಣು ಪೂರ್ಣಳಾಗೋದು ತಾಯಾಗೊದ್ರಿಂದ ಅಲ್ಲ, ತಾಯ್ತನವ ಅನುಭವಿಸೋದ್ರಿಂದ. ನೀನ್ಯಾಕೆ ನಿನ್ನ ಸ್ವಂತ ಮಗು ಆದ್ರೆ ಮಾತ್ರ ನೀನು ಪೂರ್ಣಳು ಅಂದ್ಕೋತೀಯಾ?!! ನಿಂಗಿಷ್ಟ ಇದ್ದ್ರೆ.. ಮನಸ್ಸೊಪ್ಪಿದ್ರೆ ಈ ಟ್ರೀಟ್ ಮೆಂಟ್ ತಗೋಬಹುದು.. ಇಲ್ಲಾ ದತ್ತು ಪಡೆಯಬಹುದು. ದತ್ತು ಪಡೆಯಲು ಸಂದೀಪನ ಒಪ್ಗೆ ಇಲ್ಲಾ ಅಂದ್ರೂ ಅವ್ನಿಂದ ಬೇರೆಯಾಗಿ ನೀನೊಬ್ಬಳೇ ಸಾಕಲೂ ಬಹುದು.. ಇನ್ನು ಇದ್ಯಾವ್ದೂ ಬೇಡ ಅಂದ್ರೆ ಯಾವ್ದಾದ್ರೂ ಸಂಸ್ಥೆಗೆ ನಿನ್ನ ಸೇವೆಕೊಡೋದ್ರ ಮೂಲಕನೂ ನೆಮ್ಮದಿ ಪಡೀಬಹುದು. ತಾಯ್ತನ ಅಂದ್ರೆ ಕೇವಲ ಸ್ವಂತ ಮಗುವಿಗೆ ನಿನ್ನ ಮಮತೆ ಕೊಡೋದು ಮಾತ್ರ ಅಲ್ಲ ತಾನೆ? ಪೂರ್ಣ ನೀನು ಏನು ಕಳ್ಕೊಂಡೀ ಅಂತ ಎಣಿಸ್ಬೇಡ್ವೇ.. ಏನನ್ನ ಪಡ್ಕೊಂಡಿದ್ದೀ ಅಂತ ಯೋಚ್ಸು.. ಆಗಾ ನಿಂಗೇ ಎಲ್ಲಾ ಅರ್ಥ ಆಗೊತ್ತೆ. ಹಾಗೆ ನೋಡಿದ್ರೆ ಎಷ್ಟೋ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವೇ ಕಾಣ್ದೇ ಒದ್ದಾಡ್ತಾರೆ.. ಅದ್ರೆ ಇಲ್ಲಿ ನೀನು ಲಕ್ಕಿ.. ಸಮಸ್ಯೆಗಳ ಜೊತೆ ಪರಿಹಾರಗಳೂ ನಿನ್ನ ಮುಂದಿವೆ. ಯಾವ್ದ ಬೇಕಿದ್ರೂ ಆರಿಸ್ಕೋಬಹುದು ನೀನು.

ಒಂದ್ಸಲ ಯೋಚ್ಸು ನಿನ್ನ ಹತ್ರ ಏನಿಲ್ಲ?!.. ವೆಲ್ ಎಡ್ಜ್ಯುಕೇಟಿವ್, ಒಳ್ಳೆ ಜೋಬ್ ಇದೆ, ಪ್ರೀತಿಸೋ ಅಣ್ಣ ಅತ್ಗೆ, ಸ್ನೇಹಿತರು ಎಲ್ಲಾ ಇದ್ದಾರೆ. ಸ್ವಂತ, ಪರಕೀಯ ಅನ್ನೋದು ಹೊರಗೆಲ್ಲೋ ಇಲ್ವೆ.. ನಮ್ಮೊಳ್ಗೇ ಇರೋದು. ನಿಂಗೆ ಸಂದೀಪನ ಮೇಲೆ ಪ್ರೀತಿ ವಿಶ್ವಾಸ ಇನ್ನೂ ಉಳ್ದಿದ್ರೆ ಅವನ ಇನ್ನೊಮ್ಮೆ ಮಾತಾಡ್ಸು.. ಕನ್ವಿನ್ಸ್ ಮಾಡ್ಸು. ಅವನಿಗೆ ಪಶ್ಚಾತ್ತಾಪ ಆಗ್ಲೂ ಬಹುದು.. ಇಲ್ಲಾ ಅಂದ್ರೆ ಅವನ ಪಾಡಿಗೆ ಅವನ ಬಿಟ್ಟು ನಿನ್ನ ಜೀವನ ನೀನೇ ರೂಪಿಸ್ಕೋ. ಬದುಕು ನಮ್ಮಷ್ಟು ಸೆನ್ಸಿಟಿವ್ ಅಲ್ಲ ಪೂರ್ಣ. ಅದು ನಾವು ಹೇಳಿದಂತಿರೊಲ್ಲ.. ನಾವು ಬದುಕಿನ ಜೊತೆ ಹೊಂದಿಕೊಂಡು ಬಾಳ್ಬೇಕಷ್ಟೇ! ನಾನು ಹೇಳ್ತಿರೋದು ಈಗ ನಿಂಗೆ ಪಥ್ಯ ಆಗ್ದೇ ಇರ್ಬಹುದು.. ಆದ್ರೆ ಶಾಂತಳಾಗಿ ಯೋಚಿಸಿದ್ರೆ ನಿಂಗೇ ಅರ್ಥ ಆಗೊತ್ತೆ.

ಪೂರ್ಣ ನೀನು ಯಾವಾಗ್ಲೂ ನನ್ನ ತುಂಬಾ ಪ್ರಾಕ್ಟಿಕಲ್ ಅಂತೀಯ.. ನಿಜ.... ಅಪ್ಪ, ಅಮ್ಮ, ಸಂಬಂಧಿಕರು ಯಾರೂ ಇಲ್ಲ್ದೇ ಅನಾಥಾಶ್ರಮದಲ್ಲಿ ಬೆಳ್ದ ನಂಗೆ ಬದುಕು ಕಲಿಸಿದ ಪಾಠ ಇದು. ಅದ್ಕೇ ನಾನು ನಿಂಗೆ ಹೀಗೆ ಹೇಳಬಲ್ಲೆ..ಇನ್ನು ನಾ ಹೆಚ್ಚೇನು ಹೇಳೊಲ್ಲ. ಈಗ ನಾ ಹೆಚ್ಚು ಹೇಳಿದ್ರೂ ನಿಂಗರ್ಥ ಆಗೊಲ್ಲ. ಆದ್ರೆ ಪ್ಲೀಸ್...ನೀನು ನಿನ್ನ ಸಮಸ್ಯೆಯಿಂದಾಗ್ಲೀ ಸಂದೀಪನ ಫೋನ್ ಕಾಲ್ ನಿಂದಾಗ್ಲೀ ಎಸ್ಕೇಪ್ ಆಗ್ಬೇಡ. ಅದು ಮತ್ತಷ್ಟೂ ನಿನ್ನ ಹಿಂಸೆ ಮಾಡುತ್ತೆ. ಭಯ ಕೊಡುತ್ತೆ. ಜಸ್ಟ್ ಟಾಕ್ ಟು ಹಿಮ್. ಆದಷ್ಟು ನಾರ್ಮಲ್ ಆಗಿ ಮಾತಾಡು. ಬಟ್ ಸ್ಪಷ್ಟತೆ ಇರ್ಲಿ. ಆಗ ನೋಡು ನೀನು ಅದೆಷ್ಟೋ ನಿರಾಳವಾಗ್ತಿಯ. ಎಲ್ಲಕ್ಕಿಂತ ಮೊದ್ಲು ನೀನು ಈ ರೀತಿ ಒಂಟಿಯಾಗಿ ಕೂತ್ಕೊಂಡು ಚಿಂತಿಸೋದ್ನ ನಿಲ್ಸು. ನಾಳೆಯ ಬಗ್ಗೆ ಚಿಂತನೆ ಮಾತ್ರ ಇರ್ಲಿ ಓಕೆ?. ಹ್ಹಾಂ ನಾಡಿದ್ದೇ ಮುಂಬಯಿಗೆ ಟಿಕೆಟ್ ಬುಕ್ ಮಾಡ್ತೀನಿ. ನೀನೂ ನನ್ನ ಜೊತೆ ಬರ್ತಾ ಇದ್ದೀಯಾ.. ಹೊಸ ವಾತಾವರಣ, ಜನರ ಸಂಪರ್ಕ ನಿಂಗೇ ಒಂದು ಹೊಸತನ ತರಬಹುದು. ಅವನಿಗೂ ಹೇಳೇ ಹೋಗೋಣ. ಸರಿ ಸರಿ..ಇನ್ನು ಏಳು ಮೇಲೆ ತುಂಬಾ ಹೊತ್ತಾಯ್ತು.. ಗಂಟೆ ನಾಲ್ಕು ಗೊತ್ತಾ? ಅಣ್ಣ ಅತ್ಗೆ ಗಾಬ್ರಿ ಆಗಿರ್ಬಹುದು.." ಎಂದು ಧೃತಿ ಅವಸರಿಸಲು ಮೌನವಾಗಿ ಅವಳನ್ನು ಹಿಂಬಾಲಿಸಿದಳು.

ತನ್ನ ಭರವಸೆಯ ಮಾತಿಗೋ ಇಲ್ಲಾ ಭಾರವನ್ನು ಹಂಚಿಕೊಂಡು ತುಸು ಹಗುರಾದ ಭಾವಕ್ಕೋ ಪೂರ್ಣ ತುಂಬಾ ಸಮಾಧಾನಗೊಂಡಿರುವಂತೆ ಕಂಡಳು ಧೃತಿಗೆ. ಮೊಗದಲ್ಲಿ ಮಂಕುತನವಿನ್ನೂ ಕವಿದಿದ್ದರೂ ನೋವಿನ ತೀವ್ರತೆ ಮೊದಲಿನಷ್ಟು ಕಂಡುಬರಲಿಲ್ಲ.

ಇತ್ತ ಅವರು ಹೊರಡುವುದಕ್ಕೂ.. ತೋಟದ ಕಡೆಯಿಂದ ಸುಜಾತ ಬರುವುದಕ್ಕೂ ಸಮನಾಯಿತು. "ಏನೇ ಪುಟ್ಟಿ ಈ ಕಡೆ ಬಂದೆ? ಊಟ ಆಯ್ತಾ ನಿಂದು?" ಎಂದು ಕೆನ್ನೆ ಹಿಂಡಿದ ದೃತಿಯ ಕಡೆ ತುಸು ವಿಚಿತ್ರ ನೋಟ ಬೀರಿದಳು ಸುಜಾತ. "ಅಯ್ಯೋ ಅಕ್ಕ.. ಗಂಟೆ ನಾಲ್ಕಾಯ್ತು ಗೊತ್ತಾ? ಎಷ್ಟು ಮಾತಾಡ್ತೀರಾ ನೀವು.. ನಿಮ್ಗೆ ಹಶ್ವಾಗೊಲ್ವಾ? ಅಪ್ಪ ನಿಮ್ಮ ನೋಡ್ಕೊಂಡು ಬಾ ಹೇಳಿದ್ರು.. ಅದ್ಕೇ ಬಂದೆ. ಪೂರ್ಣತ್ತೆ ನೀ ಎಂತಕ್ಕೆ ಬೇಜಾರಲ್ಲಿದ್ದೆ? ಧೃತಿಯಕ್ಕ ನಾಡಿದ್ದು ಹೋಪದಲ್ದ?" ಎಂದು ಆಕಯ ಕೈ ಹಿಡಿಯಲು ಪೂರ್ಣ ಮುಗುಳ್ನಕ್ಕಳು.
"ಹೇ ಪೂರ್ಣತ್ತೆ ನಾ ಮತ್ತೆ ಒಂದು ಒಗ್ಟು ಕೇಳ್ತಿ.. ಉತ್ರ ಹೇಳು ನೋಡಾನ. ಇವಾಗಷ್ಟೇ ಓದ್ಕ ಬಂದಿ..ಪ್ಲೀಸ್ ಪ್ಲೀಸ್ ನೀ ಈಗ ಬೇಡ ಹೇಳಡಾ ಮತ್ತೆ.. ಕೇಳ್ಲಾ?"ಎಂದು ಗೋಗರೆದಾಗ ಬೇಡವೆನ್ನಲಾಗಲಿಲ್ಲ ಪೂರ್ಣಳಿಗೆ.

"ಸರಿ ಮಾರಾಯ್ತಿ.. ಒಳ್ಳೆ ಒಗ್ಟಿನ ಮಳ್ಳಾಗೋಜೆ ಈಗ ನೀನು.. ಕೇಳು ಗೊತ್ತಿದ್ದ್ರೆ ಹೇಳ್ತಿ.." ಎಂದು ಹೇಳಿದ್ದೇ ತಡ ಅತ್ಯುತ್ಸಾಹದಲ್ಲಿ ಸುಜಾತ ತಯಾರದಳು.

"ಒಗಟಿನೊಳಗೊಂದು ಒಗಟು
ಮುಟ್ಟಹೋದಷ್ಟೂ ಜಿಗುಟು
ಬಿಚ್ಚಹೋದಷ್ಟೂ ಗಂಟು
ಬಿಡಿಸಬಲ್ಲನು ಅವನು
ಇದಕುತ್ತರವೇನು? " - ಗೆಲುವು ತನ್ನದೇ ಎಂಬ ವಿಶ್ವಾಸದಲ್ಲಿ "ಎಂತು ಹೇಳು ನೊಡಾನ" ಎಂದು ಅವಳನ್ನೇ ನೋಡಿದಳು ಸುಜಾತ.

"ಕೂಸೆ ಇದು ಅಣ್ಣಯ್ಯ ನಿನ್ನೆ ತಂದ ಪೇಪರಿನಲ್ಲಿತ್ತು ಅಲ್ದಾ? ನಾ ಮೊದ್ಲೇ ಓದಿದ್ದಿ.. ಉತ್ತರ "ಬದುಕು" ಅಲ್ದ? ಆದ್ರೆ ದಯಮಾಡಿ ಇನ್ನು ಈ ಉತ್ತ್ರ ಹೇಂಗಾಗ್ತು ಹೇಳಿ ಮಾತ್ರ ಕೇಳಡ.. ಆದ್ರೆ ಸರಿ ಉತ್ರ ಅಂತೂ ನಾ ಕೊಟ್ಟಿದ್ದಿ ಹಾಂಗಾಗಿ ಯಾನೇ ಗೆದ್ದಿ ನೋಡು." ಎಂದು ಅವಳ ಗಲ್ಲಕ್ಕೊಂದು ಮುತ್ತು ಕೊಡಲು.. ತಾನು ಸೋತ ಬಗ್ಗೆ ಇನಿತೂ ಬೇಸರಸಿದೆ.."ಹೋಹೋ.. ಪೂರ್ಣತ್ತೆ ಗೆತ್ತು.. ಪೂರ್ಣತ್ತೆ ಗೆತ್ತು.." ಎಂದು ಕೂಗುತ್ತಾ ಮುಂದೆ ಓಡಿದಳು ಸುಜಾತ.

« ಕಥೆಯ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X