ಸಂಪ್ಗೆಮರದಲ್ಲಿ ಮೋಹಿನಿ;ಭಾಗ ಎರಡು

Malnad-Karnataka Ghost stories By Sushruthaಸಂಪ್ಗೆ ಹೂವ ಮರದಿಂದ ಜಾರಿಜಾರಿ ಹೊರಬಂದ ಕಾಮಿನಿಯೋ ನಾಗಿನಿಯೋ ?? ಕಣ್ಣಾರೆ ಕಂಡ ಆದರೆ ತರ್ಕಕ್ಕೆ ನಿಲುಕದ ಮಲೆನಾಡಿನ ನಿಗೂಢ ಕಥೆಗಳು. [ಭಾನುವಾರದಿಂದ ಮುಂದುವರೆದುದು]

* ಸುಶ್ರುತ ದೊಡ್ಡೇರಿ , ಬೆಂಗಳೂರು.

ಈ ಸಂಪಿಗೆ ಮರದ ಬಳಿ ಒಬ್ಬ ಬೆತ್ತಲೆ ಹುಡುಗಿ ಓಡಾಡುತ್ತಿದ್ದಳು ಎಂಬ ಸುದ್ದಿ ಸ್ಪೋಟವಾದದ್ದು ಬಿರುಬೇಸಿಗೆಯ ಸಂಜೆಯೊಂದರಲ್ಲಿ. ನಾನು ಬೇಸಿಗೆ ರಜೆಗೆಂದು ಅಜ್ಜನ ಮನೆಗೆ ಹೋಗಿದ್ದೆ. ಅದಾಗ ತಾನೆ ಆರೂವರೆ ಬಸ್ಸಿಗೆ ಸಾಗರದಿಂದ ಬಂದ ನನ್ನ ಮಾವನಿಗೆ, ಮಾವನೊಂದಿಗೇ ಬಸ್ಸಿಳಿದ ರಾಘವೇಂದ್ರಣ್ಣ ಬೆಳಗ್ಗೆ ತಾನು ಕಂಡ ದೃಶ್ಯವನ್ನು ವಿವರಿಸಿದನಂತೆ: "ಚಾಲಿ ಸುಲ್ಸಿದ್ದು ನಾಕು ಚೀಲ ಆಗಿತ್ತಾ.. ಮಂಡಿಗೆ ಸಾಗ್ಸಲೆ ಆನಂದ್ ಗೌಡನ ರಿಕ್ಷಾಕ್ಕೆ ಬರಕ್ ಹೇಳಿದಿದ್ದಿ.. ಅಂವ ಒಂಭತ್ ಗಂಟಿಗೆ ಬಂದ.. ಚೀಲ ಹೇರ್ಕ್ಯಂಡು, ಆನೂ ಹೊಂಟಿ ರಿಕ್ಷಾದ್ ಮೇಲೇ ಹೇಳ್ಯಾತು.. ಸಂಪ್ಗೆ ಮರದ್ ಬುಡಕ್ ಬಪ್ಪ ಹೊತ್ತಿಗೆ ಅಲ್ಲೊಂದು ಹೆಂಗ್ಸು ಮಾರಾಯಾ.. ಎಂಥಾ? ದುಂಡಗೆ!! ಫುಲ್ ದುಂಡಗ್ ನಿಂತಿದ್ಲಪಾ..! ಕೈ ಮಾಡಿದ ಯಂಗ್ಳ ರಿಕ್ಷಾಕ್ಕೆ.. ಯಂಗಂತು ಹೆದ್ರಿಕೆ ಆಗೀ.. ಆನಂದ ಜೋರಾಗ್ ಹೊಡ್ದ ನೋಡು ರಿಕ್ಷಾನಾ.. ಕರ್ಕಿಕೊಪ್ಪದ್ ಇಳುಕ್ಲು ಇಳಿಯಹೊತ್ತಿಗೆ ಇಬ್ರಿಗೂ ಬೆವ್ರು ಇಳ್ದ್ ಹೋಗಿತ್ತು! ಎಂಥಾ- ದುಂಡಗೆ ಮಾರಾಯಾ..!"

ಮಾವ, ರಾಘವೇಂದ್ರಣ್ಣ ತನಗೆ ಹೇಳಿದ್ದನ್ನು ಹಾಗೇ ಹೇಳಿದ. ಕೇಳಿದ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಸಂಪಿಗೆ ಮರದ ಬಳಿ! ಬೆತ್ತಲೆ ಹುಡುಗಿ! "ಯಾರೂಂತ ಏನಾರು ಗೊತ್ತಾತನಾ?" ಎಂದು ಮಾವ ರಾಘವೇಂದ್ರಣ್ಣನ ಬಳಿ ಕೇಳಿದನಂತೆ. ರಾಘವೇಂದ್ರಣ್ಣ "ಎಂಥೇನ, ಸರಿಯಾಗ್ ನೋಡಕ್ ಆಗಲ್ಲೆ. ಆದರೆ ನಮ್ಮ ಕಡೆಯೋರಂತೂ ಯಾರೂ ಅಲ್ಲ ನೋಡು" ಎಂದನಂತೆ. ಅದರಲ್ಲಿ ಸರಿಯಾಗಿ ನೋಡಕ್ಕಾಗಲ್ಲೆ ಎಂಬ ಮಾತು ನನಗೆ ಮೋಟುಗೋಡೆಯಾಚೆಗಿನ ಆಲೋಚನೆಗಳಿಗೆ ಕೊಂಕಾಯಿತಾದರೂ, ದೇವರ ಮನೆಯಿಂದ ಬಂದ ಅಜ್ಜಿ "ಮಾಣೀ, ಮೂರ್ ಸಂಜೆ ದೀಪ ಹಚ್ಚೋ ಹೊತ್ತಿಗೆ ಎಂಥೆಂತೆಲ್ಲಾ ಹೇಳಡ.. ಮೊದ್ಲು ಕೈಕಾಲ್ ತೊಳ್ಕಂಡ್ ಬಂದು ಕಾಪಿ ಕುಡಿ" ಎಂದದ್ದರಿಂದ ನನ್ನ ಆಲೋಚನೆಗಳಿಗೆ ಕಡಿವಾಣ ಹಾಕಬೇಕಾಯಿತು. ಆದರೆ ಅಂತಹ ರೋಚಕ ಸುದ್ಧಿ ಪ್ರಕಟಗೊಂಡಾಗ ಅದರ ಬಗ್ಗೆ ನಾಲ್ಕು ಮಾತಾಡದೇ, ಚರ್ಚಿಸದೇ ಅಲ್ಲಿಗೇ ನಿಲ್ಲಿಸಲಿಕ್ಕೆ ಬರುತ್ತದೆಯೇ? ಮಾವ ಹಾಗೆ ಕಥೆ ಹೇಳುವಾಗ ಅಲ್ಲಿ ಏಳು ಗಂಟೆ ವಾರ್ತೆ ನೋಡಲಿಕ್ಕೆಂದು ಬಂದು ಕೂತಿದ್ದ ಅಕ್ಕಪಕ್ಕದ ಮನೆಯವರನೇಕರೂ ಇದ್ದರು. ಹೀಗಾಗಿ, ಅಜ್ಜಿಯ ಕಿವಿಮಾತು ಯಾರ ಕಿವಿಗೂ ಬೀಳಲಿಲ್ಲ. "ಅಲ್ದಾ, ಬದ್ಧನಡನಾ?" ಎಂದು ಅನಂತಣ್ಣ ಬಾಯಿ ಹಾಕಿದರೆ, "ಇಶೀ, ಅದು ಹೆಂಗ್ ಸಾಧ್ಯನಾ? ರಾಘವೇಂದ್ರಣ್ಣ ಏನ್ ನೋಡಿ ಏನ್ ತಿಳ್ಕಂಡ್ನಾ ಎಂಥೇನ!" ಎಂದು ಯಶೋಧಕ್ಕ ರಾಘವೇಂದ್ರಣ್ಣನ ಲೌಕಿಕ ಜ್ಞಾನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದಳು.

"ರಾಘವೇಂದ್ರಣ್ಣ ಒಬ್ನೇ ಏನು ಅಲ್ದಲಾ? ಆನಂದ್ ಗೌಡನೂ ನೋಡಿದ್ದ.. ರಿಕ್ಷಾದ ಹಿಂದಕೇ ಅದು ಸುಮಾರ್ ದೂರ ಓಡ್ಯೂ ಬಂತಡ.. ಕನ್ನಡೀಲಿ ಕಾಣ್ತಿತ್ತಡ ಆನಂದಂಗೆ.." ಎಂದ ಮಾವ. ನಾನಾಗ ಇನ್ನೂ ಮೊದಲ ವರ್ಷದ ಕಾಲೇಜು ಹುಡುಗನಾಗಿದ್ದರಿಂದ ಇಂತಹ ವಿಷಯದ ಬಗ್ಗೆ ಆಸಕ್ತಿ ಇರುವವನಂತೆ ನಡೆದುಕೊಳ್ಳುವುದು ಉಚಿತವಲ್ಲೆಂದರಿತು ಸುಮ್ಮನಿದ್ದೆ. ಏಕೆಂದರೆ, ನಾನೇನಾದರೂ ಬಾಯಿ ಬಿಟ್ಟಿದ್ದರೆ, ತಕ್ಷಣ ಎಲ್ಲರೂ ನನ್ನೆಡೆಗೆ ನೋಡುತ್ತಿದ್ದರು ಮತ್ತು ಅಜ್ಜಿ "ಅಪ್ಪೀ ನಿಂಗೆ ಇವೆಲ್ಲ ಎಂಥೂ ಗೊತ್ತಾಗ್ತಲ್ಲೆ; ನೀ ಸುಮ್ಮನ್ ಕೂತ್ಗ" ಎಂದು ಬಾಯಿ ಮುಚ್ಚಿಸುತ್ತಿದ್ದಳು. ನಮ್ಮ ಮನೆಗೆ ಫೋನ್ ಮಾಡಿದಾಗ ಅಮ್ಮನ ಬಳಿ ಸೂಕ್ಷ್ಮವಾಗಿ ಅಪ್ಪಿಯ ಬಗ್ಗೆ ಒಂದು ಕಣ್ಣಿಟ್ಟರಲು ಅಜ್ಜಿ ಸೂಚನೆ ಕೊಟ್ಟರೂ ಕೊಡುವ ಸಾಧ್ಯತೆ ಇತ್ತು. ಹೀಗಾಗಿ, ನಾನು ಏನೂ ಅರಿಯದವನಂತೆ ಸುಮ್ಮನಿದ್ದುಬಿಟ್ಟಿದ್ದೆ. ಒಟ್ಟಿನಲ್ಲಿ ಮರುದಿನ ಬೆಳಗಾಗುವುದರೊಳಗಾಗಿ ಈ ಪ್ರಕರಣ ಬೆಂಕಟವಳ್ಳಿ ಊರಲೆಲ್ಲ ಗುಸುಗುಸು ಸುದ್ಧಿಯಾಗಿತ್ತು. ರಾಘವೇಂದ್ರಣ್ಣನ ಹೆಂಡತಿ ಮಾತ್ರ ಯಾಕೋ ಸೆಟಗೊಂಡ ಮುಖದಲ್ಲಿ ಓಡಾಡುತ್ತಿರುವುದನ್ನೂ ನಾನು ಗಮನಿಸದಿರಲಿಲ್ಲ.

ಅದಾಗಿ ಮೂರ್ನಾಲ್ಕು ದಿನಗಳ ನಂತರ, ಕಲ್ಲುಕೊಪ್ಪದ ಬಳಿ ಹೀಗೇ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂದು ಸುದ್ಧಿಯಾಯಿತು. ಕಲ್ಲುಕೊಪ್ಪವೆಲ್ಲಿ ಬೆಂಕಟವಳ್ಳಿಯೆಲ್ಲಿ? ಕಲ್ಲುಕೊಪ್ಪ ಬೆಂಕಟವಳ್ಳಿಗೆ ಹದಿನೈದಿಪ್ಪತ್ತು ಮೈಲಿ ದೂರದಲ್ಲಿರುವ ಹಳ್ಳಿ. ಹಾಗಾದರೆ ಇದೂ ಅದೇ ಹುಡುಗಿಯೇ? ಅಥವಾ ಬೇರೆ ಹುಡುಗಿಯೇ? ಅರಳಿಕಟ್ಟೆ ಬಳಿ, ಅಡಿಕೆ ಸುಲಿಯುವಲ್ಲಿ, ರಸ್ತೆ-ತೋಟದಲ್ಲಿ ಯಾರಾದರೂ ಎದುರು ಸಿಕ್ಕಾಗ -ಹೀಗೆ ಎರಡು ಬಾಯಿ ಸೇರಿತೆಂದರೆ ಅಲ್ಲಿ ಬೆತ್ತಲೆ ಹುಡುಗಿ ಕಾಣಿಸಿಕೊಂಡ ಬಿಸಿಬಿಸಿ ಸುದ್ಧಿ ಚರ್ಚೆಯಾಯಿತು. ಜೋಗದಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆಯಂತೆ. ಅಲ್ಲಿಂದೊಬ್ಬ ನಟಿ ಕಾಣೆಯಾಗಿದ್ದಾಳಂತೆ. ಪೋಲೀಸರು ಹುಡುಕುತ್ತಿದ್ದಾರಂತೆ ಎಂದು ಸಹ ಯಾರೋ ಹೇಳಿಬಿಟ್ಟರು. ಈ ಎಲ್ಲ ಸುದ್ಧಿಗಳು ಹವೆಗೆ ಭಯವನ್ನು ಬೆರೆಸಿಬಿಟ್ಟವು. ಜನ ಸಂಪಿಗೆ ಮರದ ಬಳಿ ಒಬ್ಬರೇ ಹೋಗುವುದಕ್ಕೆ ಹೆದರತೊಡಗಿದರು. ಹೆಂಗಸರನ್ನು ಬಸ್ ಹತ್ತಿಸಲಿಕ್ಕೆ ಜೊತೆಗೆ ಯಾರಾದರೂ ಗಂಡಸರು ಬರಬೇಕಾದಂತಹ ಪರಿಸ್ಥಿತಿ ಬಂತು. ಬಸ್ಸು ಹತ್ತಿದ ಹೆಂಗಸರು ತಮ್ಮ ಗಂಡಂದಿರಿಗೆ ಬೇಗ ಮನೆ ಮುಟ್ಕ್ಯಳಿ ಎಂದು ಎಚ್ಚರಿಕೆ ನೀಡುವುದನ್ನೂ ಮರೆಯುತ್ತಿರಲಿಲ್ಲ.

ನಾನು ಈ ವಿದ್ಯಮಾನವನ್ನೆಲ್ಲಾ ಕಂಡೂ ಕೇಳಿಯೂ ಸುಮ್ಮನೆ ಓಡಾಡಿಕೊಂಡಿದ್ದೆ. ಯಾರಿಗೂ ತಿಳಿಯದಂತೆ ನಾನೊಬ್ಬನೇ ಸಂಪಿಗೆ ಮರದ ಬಳಿ ಹೋಗಿ ಸುಮಾರು ಒಂದು ತಾಸು ಅಡ್ಡಾಡಿಕೊಂಡು ಬಂದಿದ್ದೆ. ಇದರ ಹಿಂದಿರುವ ರಹಸ್ಯವನ್ನು ಒಂಟಿಯಾಗಿ ಭೇದಿಸಿ ಭೇಷ್ ಎನಿಸಿಕೊಳ್ಳಬೇಕೆಂಬ ಇರಾದೆಯೂ ನನಗಿತ್ತೋ ಏನೋ ಈಗ ನೆನಪಿಲ್ಲ. ಆದರೆ ನನ್ನ ದುರಾದೃಷ್ಟಕ್ಕೆ ಆಗ ಯಾವ ನಗ್ನ ಸುಂದರಿಯ ದರ್ಶನವೂ ನನಗಾಗಲಿಲ್ಲ.

ಈ ಬಿಸಿಬಿಸಿ ಸುದ್ಧಿಯ ಗುಸುಗುಸು ಪಿಸಪಿಸಗಳು ನಿಲ್ಲಬೇಕಾದರೆ ಮತ್ತೊಂದು ಗರಮಾಗರಂ ಸುದ್ಧಿ ಬರಬೇಕಾಯಿತು: ಸಂಪಿಗೆ ಮರದಿಂದ ಮೂವತ್ತು ಮೈಲಿಗೂ ಹೆಚ್ಚು ದೂರದಲ್ಲಿರುವ ಕಾನುಬೈಲು ಎಂಬ ಊರಿನ ಕೆರೆಯಲ್ಲಿ ಒಂದು ಹೆಣ್ಣಿನ ಶವ ಸಿಕ್ಕಿತಂತೆ, ಜನ ಸೇರಿ, ಪೋಲೀಸರು ಬಂದು, ಪೋಸ್ಟ್‌ಮಾರ್ಟೆಮ್ ಮಾಡಿ, ಶವವನ್ನು ಯಾರೂ ಗುರುತಿಸದಿದ್ದರಿಂದ, ಅವರೇ ಗುಂಡಿ ತೋಡಿ ಹುಗಿದುಬಿಟ್ಟರಂತೆ ಎಂಬುದೇ ಆ ಸುದ್ಧಿ.

ಆದರೆ ಬೆಂಕಟವಳ್ಳಿ ಸಂಪಿಗೆ ಮರದ ಬಳಿ ಕಾಣಿಸಿಕೊಂಡ ಬೆತ್ತಲೆ ಹುಡುಗಿಗೂ, ಕಲ್ಲುಕೊಪ್ಪದ ಬಳಿಯೂ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂಬ ಸುದ್ಧಿಗೂ, ಕಾನುಬೈಲಿನ ಕೆರೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶವಕ್ಕೂ ಅದು ಹೇಗೆ ತಳಕು ಕಲ್ಪಿಸಿಕೊಂಡರೋ ಗೊತ್ತಿಲ್ಲ; ಅಂತೂ ರಾಘವೇಂದ್ರಣ್ಣ ನೋಡಿದ ಬೆತ್ತಲೆ ಹೆಂಗಸು ಕೊಲೆಯಾಗಿ ಸತ್ತು ಹೋದಳಂತೆ ಎಂದು ಜನ ಮಾತಾಡಿಕೊಂಡರು. ಅವರಲ್ಲಡಗಿದ್ದ ಭಯವೂ ಹೋದಂತನಿಸಿತು. ನಾನು ಅಜ್ಜನ ಮನೆ ಪ್ರವಾಸ ಮುಗಿಸಿ ವಾಪಸು ಊರಿಗೆ ಹೊರಟಾಗ, ಯಾಕೋ ಈ ಸಂಪಿಗೆ ಮರವನ್ನು ಮೂರ್ನಾಲ್ಕು ಸುತ್ತು ಸುತ್ತಿ ಬಂದು, ಅದರ ಕಾಂಡವನ್ನು ತಡವಿ, ಅದರ ಎದ್ದು ಬಂದಿರುವ ಬೇರುಗಳ ಮೇಲೆಲ್ಲ ಓಡಾಡಿ, ಕೆಳಗೆ ಬಿದ್ದಿದ್ದ ಒಂದೆರಡು ತರಗೆಲೆಯನ್ನೆತ್ತಿ ಮೂಸಿ, ಬಿಸಾಕಿ ಬಂದಿದ್ದೆ. ಸಂಪಿಗೆ ಮರ ಮಾತ್ರ ನಿರುಮ್ಮಳವಾಗಿ ನೆರಳು ಸೂಸುತ್ತ ನಿಂತಿತ್ತು.

ಮೊನ್ನೆ ಊರಿಗೆ ಹೋದವನು ಅಪ್ಪನ ಬೈಕೆತ್ತಿಕೊಂಡು ಅಜ್ಜನ ಮನೆಗೆ ಹೋಗಿದ್ದೆ. ವಾಪಸು ಬರುವಾಗ ಸಂಪಿಗೆ ಮರ ಕಣ್ಣಿಗೆ ಬಿದ್ದದ್ದೇ ಹಳೆಯದೆಲ್ಲ ಕ್ಷಣದಲ್ಲಿ ನೆನಪಾಗಿ, ಹಳೇ ಪ್ರಿಯತಮೆಯನ್ನು ಕಂಡಂತಾಗಿ, ಬೈಕು ನಿಲ್ಲಿಸಿ, ಆಫ್ ಮಾಡಿದೆ. ಫಕ್ಕನೆ ಮೌನ ಕವಿಯಿತು. ಈ ಮರದ ಬಗ್ಗೆ ಏನಾದರೂ ಬರೆಯಬೇಕು ಎನಿಸಿತು ನನಗೆ... ಮೇಲೆ ಸೊಂಪಾಗಿ ಚಪ್ಪರದಂತೆ ಒತ್ತರಿಸಿಕೊಂಡಿರುವ ಇದರ ಹಸಿರೆಲೆರಾಶಿಯನ್ನು ನೋಡುತ್ತಿದ್ದೆ...

ಯಾರೋ ಕಿಟಾರನೆ ಕಿರುಚಿಕೊಂಡಂತಾಯಿತು. ಹೆಂಗಸಿನ ಧ್ವನಿ. ನನಗೆ ಒಮ್ಮೆಲೇ ಭಯವಾಗಿ, ಮೈನಡುಗಿ, ಒಂದೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಮಾಡಿ, ಎಂಭತ್ತರ ವೇಗದಲ್ಲಿ ಓಡಿಸತೊಡಗಿದೆ.

(ಮುಗಿಯಿತು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+