ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗುಂಬೆಯ ಆಗಂತುಕ!(ಭಾಗ -2)

By Staff
|
Google Oneindia Kannada News

ಆ ಕ್ಷಣ ನನಗೆ ಏನನ್ನಿಸಿತು ಅನ್ನುವುದು ನೆನಪಿಲ್ಲ. ಈಗ ಯೋಚಿಸಿದರೆ ನನ್ನನ್ನು ನಮ್ಮೂರಿಗೆ ಬಂದು ಕರೆದೊಯ್ದ ಮಹೇಶ್ವರ ಯಾರು....ಪಟ್ವಾಡಿ ಸತ್ತಿದ್ದು ನಿಜವೋ ಸುಳ್ಳೋ. ನನ್ನಿಂದ ಅವರೇನು ಬಯಸಿದ್ದರು? ಅವರು ಜೀಪಿನಲ್ಲಿ ಬಂದಿದ್ದು ಕನಸೇ...?

ಸತ್ಯವ್ರತ ಹೊಸಬೆಟ್ಟು

The Agumbe Intruder(Part-2), a short story in Kannada by Satyavrata Hosabettuಪಟ್ವಾಡಿ ಹೇಳಿದ ಕತೆ.ಆವತ್ತು ರಾತ್ರಿಯೂ ನಾನು ಪಕ್ಕದಲ್ಲಿ ಒಂದು ಬೊಗಸೆ ರಕ್ತವನ್ನಿಟ್ಟುಕೊಂಡು ಪ್ರಯೋಗ ಮಾಡುತ್ತಿದ್ದೆ. ರಾತ್ರಿ 3ಗಂಟೆ ಇರಬಹುದು. ಇದ್ದಕ್ಕಿದ್ದಂತೆ ತುಂಬ ಸುಸ್ತಾದಂತೆ ಅನ್ನಿಸಿತು. ಅಡುಗೆಯ ಸೋಮರಾಜುವನ್ನು ಕೂಗಿ ಕರೆದೆ. ಆತ ಮಲಗಿದ್ದ ಅಂತ ಕಾಣುತ್ತದೆ. ನಾನೇ ಎದ್ದು ಒಂದಷ್ಟು ಟೀ ಮಾಡಿಕೊಳ್ಳೋಣ ಎಂದು ಅಡುಗೆ ಮನೆಗೆ ಹೋದೆ. ಅಲ್ಲಿ ಎಂದಿನಂತೆ ಮನೆ ಕೆಲಸದ ಸುಂದರ ಮತ್ತು ಅವನ ಹೆಂಡತಿ ಸುಶೀಲ ಮಲಗಿದ್ದರು. ಕತ್ತಲೆಯಲ್ಲಿ ನಾನು ಸುಶೀಲಳ ಕಾಲು ತುಳಿದೆ. ಸದ್ಯ ಆಕೆ ಎಚ್ಚರಗೊಳ್ಳಲಿಲ್ಲ. ಆ ಕ್ಷಣ ಟೀ ಬೇಡ ಎನ್ನಿಸಿತು. ವಾಪಸ್ಸು ಲೈಬ್ರರಿಗೆ ಬಂದೆ. ಸುಮ್ಮನೆ ಕುಳಿತುಕೊಂಡೆ. ಇದ್ದಕ್ಕಿದ್ದಂತೆ ಸುಸ್ತು ಮಾಯವಾಯಿತು. ನಿದ್ದೆಯೂ ಮಾಯವಾಯಿತು. ಎಲ್ಲಿಲ್ಲದ ಉತ್ಸಾಹ ಮೈತುಂಬಿಕೊಂಡಿತು. ಆಗ ಶಬ್ದ ಕೇಳಿಸಿತು. ಗೆಜ್ಜೆ ಶಬ್ದ. ಕಣ್ಣೆತ್ತಿ ನೋಡಿದರೆ ಸುಶೀಲ ಒಳಗೆ ಬರುತ್ತಿದ್ದಳು. ಒಳಗೆ ಬಂದವಳೇ ಕಿಟಾರನೆ ಚೀರಿಕೊಂಡಳು. ರಕ್ತ ರಕ್ತ ಎಂದು ಅರಚಿದಳು.

"ಅದು ನಾನೇ ಇಟ್ಟದ್ದು. ಗಲಾಟೆ ಮಾಡಬೇಡ, ತೊಲಗಾಚೆ" ಎಂದು ನಾನು ಸಿಟ್ಟಿನಿಂದ ಕಿರುಚಿದೆ. ನನ್ನ ಮಾತೇ ಕೇಳದವಳಂತೆ ಆಕೆ ತನ್ನ ಪಾಡಿಗೆ ತಾನು ಕಿರುಚುತ್ತಲೇ ಓಡಿ ಹೋದಳು. ಅವಳು ಹೋದ ಮರುಕ್ಷಣವೇ ಸೋಮರಾಜು, ಸುಂದರಂ ಬಂದರು. ಅವರೂ ನನ್ನ ಮುಂದೆ ಕುಳಿತು ಬೋರೆಂದು ಅಳತೊಡಗಿದರು. ಯಾತಕ್ಕೆ ಅಳುತ್ತಿದ್ದಾರೆ ಅನ್ನೋದೇ ಗೊತ್ತಾಗದೇ ಸುಂದರಂ ಹತ್ತಿರ ಹೋಗಿ ಗದರಿಸಿ ಕೇಳಿದೆ. ಆತ ನನ್ನ ಮಾತನ್ನೇ ಕೇಳದವನಂತೆ ಅಳುವುದನ್ನು ಮುಂದುವರಿಸಿದ. ಅವನ ಮುಖದಲ್ಲಿ ಒಂದು ರೀತಿಯ ಗಾಬರಿಯಿತ್ತು.

ಅಷ್ಟು ಹೊತ್ತಿಗೆ ಸೋಮರಾಜು ಎಲ್ಲಿಗೋ ಓಡಿಹೋಗುವುದು ಕಾಣಿಸಿತು. ಸುಶೀಲ ಹಾಗು ಸುಂದರಂ ಏನನ್ನೋ ಕಷ್ಟಪಟ್ಟು ಎತ್ತಿಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದರು. ಅವರ ನನ್ನನ್ನೇ ಹೊತ್ತೊಯ್ದರು ಅನ್ನೋದು ನನಗೆ ಕಾಣಿಸಿರಲಿಲ್ಲ. ನನಗೋ ಅವರಿಬ್ಬರು ಮೂಕಾಭಿನಯ ಮಾಡುತ್ತಿದ್ದಾರೆ ಅನ್ನಿಸಿತು. ಇದೇನು ನಾಟಕ ಎಂದು ಅವರನ್ನು ಗದರಿಕೊಂಡೆ. ಅವರು ನನ್ನ ಮಾತೇ ಕೇಳದವರಂತೆ ಓಡಾಡುತ್ತಿದ್ದರು.

ಅಷ್ಟು ಹೊತ್ತಿಗೆ ಡಾಕ್ಟರ್ ಬಂದರು. ಮಂಚದ ಪಕ್ಕ ಬಾಗಿ ಕುಳಿತರು. ಅವರನ್ನು ನೋಡಿ ನನಗೆ ಸಮಾಧಾನವಾಯ್ತು. ಆತ ನನ್ನ ಗೆಳೆಯ. ಆದರೆ ಆತ ನನ್ನನ್ನು ನೋಡಲೇ ಇಲ್ಲ . ಪಕ್ಕದಲ್ಲಿ ನಿಂತಿದ್ದರೂ ಗಮನಿಸದೇ ಮಂಚವನ್ನೇ ನೋಡುತ್ತಾ 'ಎಲ್ಲ ದೈವೇಚ್ಛೆ. ನಾನೇನೂ ಮಾಡಲಾರೆ" ಎಂದ. ಸುಂದರಂ ಸೋಮರಾಜು ಇಬ್ಬರೂ ಆಕಾಶ ಅರುಚುವಂತೆ ಅಳತೊಡಗಿದರು. ಎಷ್ಟು ಒಳ್ಳೆಯ ಧಣಿ, ಸತ್ತು ನಮ್ಮನ್ನು ಅನಾಥರನ್ನಾಗಿ ಮಾಡಿದರಲ್ಲಾ... ಎಂದು ಕಿರುಚಿದರು.

ಆಗಲೇ ನನಗೆ ಅವರ ನಾಟಕ ಅರ್ಥವಾದದ್ದು. ನಾನು ಸತ್ತಿಲ್ಲ ಕಣ್ರೋ ಎಂದು ನನ್ನಿಂದಾದಷ್ಟೂ ಕೂಗಿ ಹೇಳಿದೆ. ಅವರಿಗೆ ಆ ಪರಿವೆಯೇ ಇರಲಿಲ್ಲ. ಕೊನೆಗೆ ಗೆಳೆಯ ಡಾಕ್ಟರ್ ಕೂಡ ಮೋಸ ಮಾಡಿದ ಎನ್ನಿಸಿ ಅವನ ಮೂತಿಗೆ ಒಂದೇಟು ಹೊಡೆದೆ. ಆತ ಏನೂ ಆಗದವನಂತೆ ನಿಂತೇ ಇದ್ದ. 'ಅವನ ತಂಗಿಗೆ ಹೇಳಿಕಳಿಸಿ" ಎಂದು ಸೋಮರಾಜುವಿಗೆ ಸೂಚಿಸಿದ. ಇದೆಲ್ಲ ರಗಳೆಗಳಿಂದ ಹೇಸಿಗೆಯಾಗಿ ನಾನು ನನ್ನ ಲೈಬ್ರರಿಗೆ ಹೊರಟುಹೋದೆ.ಅಲ್ಲಿ ಅದೆಷ್ಟು ಹೊತ್ತು ಓದುತ್ತಾ ಕುಳಿತಿದ್ದೆನೋ ನನಗೆ ಗೊತ್ತಿಲ್ಲ. ಹಸಿವೆ ನನ್ನನ್ನು ಬಾಧಿಸಲೇ ಇಲ್ಲ, ನಿದ್ರೆಯಂತು ಹತ್ತಿರ ಸುಳಿಯಲಿಲ್ಲ. ಓದುವುದಕ್ಕೆ ಬೇಸರವೂ ಆಗಲಿಲ್ಲ. ಕೊನೆಗೆ ನಾನೇ ಎದ್ದು ಹೊರಗೇನು ನಡೆಯುತ್ತದೋ ನೋಡೋಣ ಎಂದು ಆಚೆಗೆ ಬಂದೆ. ನೋಡಿದರೆ ನನ್ನ ತಂಗಿ ಬಂದಿದ್ದಳು. ಅವಳೂ ಮಂಚದ ಮೇಲೆ ಕುಳಿತು ಬಿಕ್ಕಿಬಿಕ್ಕಿ ಅಳುತಿದ್ದಳು. ಬಗ್ಗಿ ಆಗಾಗ ಏನೋ ಹೇಳುತ್ತಿದ್ದಳು. ಅವಳೂ ನಾಟಕ ಮಾಡುತ್ತಿರುವುದು ನೋಡಿ ಅಸಹ್ಯ ಅನ್ನಿಸಿತು.

ಮತ್ತೆ ಲೈಬ್ರರಿಗೆ ಹೋಗಿ ಕುಳಿತುಕೊಂಡೆ. ಪಕ್ಕದಲ್ಲಿದ್ದ ರಕ್ತ ಒಣಗಿ ಹೆಪ್ಪುಗಟ್ಟಿತ್ತು.ಮುಂದೇನಾಯಿತೋ ನನಗೆ ಗೊತ್ತಿಲ್ಲ. ಮತ್ತೆ ನಾನು ಹೊರಗೆ ಬರುವಷ್ಟರಲ್ಲಿ ಕೆಲಸದವರೆಲ್ಲ ಹೊರಟುಹೋಗಿದ್ದರು. ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಿದ್ದರು. ನಾನು ಹಿಂಬಾಗಿಲು ತೆಗೆದುಕೊಂಡು ಹೊರಗೆ ಹೋಗಿ ನೋಡಿದರೆ ತೋಟ ಒಣಗಿ ನಿಂತಿತ್ತು. ನೀರು ಹಾಕುವ ಆಸಕ್ತಿ ನನಗಿರಲಿಲ್ಲ.ಇದಾದ ಒಂದು ವಾರದ ನಂತರ ಮನೆಗೆ ಮತ್ತಷ್ಟು ಮಂದಿ ಅಪರಿಚಿತರು ಬಂದರು ಮನೆಯನ್ನೆಲ್ಲ ಮೆಚ್ಚಿಕೊಂಡರು. ಲೈಬ್ರರಿಗೂ ಕಾಲಿಟ್ಟು ಅಲ್ಲಿಟ್ಟಿದ್ದ ರಕ್ತ ನೋಡಿ ಹೌಹಾರಿದರು. ಪುಸ್ತಕಗಳನ್ನೆಲ್ಲ ಎತ್ತಿ ನೋಡಿ ಅರ್ಥವಾಗದೇ ಹೊರಟುಹೋದರು. ಯಾರೂ ನನ್ನನ್ನು ಮಾತಾಡಿಸಲೇ ಇಲ್ಲ.

ಆ ನಂತರ ನನ್ನನ್ನು ಮಾತಾಡಿಸಿದವರೆಂದರೆ ನೀವಿಬ್ಬರು ಮಾತ್ರ.

ಅಷ್ಟು ಹೇಳಿ ಪಟ್ವಾಡಿ ಮುಖವನ್ನು ತನ್ನ ಬೊಗಸೆಯಲ್ಲಿ ಹುದುಗಿಸಿಕೊಂಡು ಭೋರೆಂದು ಅತ್ತರು. ನಾನು ಆ ಅಳುವಿನಿಂದ ಮುಜುಗರವಾಗಿ ಮನೆಯನ್ನೆಲ್ಲ ಒಂದು ಸುತ್ತುಹಾಕಿ ಬರುವುದಾಗಿ ಹೇಳಿ ಹೊರಟೆ. ಅಡುಗೆ ಮನೆಯಲ್ಲಿ ಒಲೆ ಉರಿಸದೇ ತಿಂಗಳುಗಳೇ ಕಳೆದಿದ್ದವು ಅಂತ ಕಾಣುತ್ತದೆ. ಅಲ್ಲೆಲ್ಲಾ ಇಲಿಗಳು ಓಡಾಡುತ್ತಿದ್ದವು. ನಡುಮನೆ ಮತ್ತು ಲೈಬ್ರರಿ ಬಿಟ್ಟರೆ ಮತ್ತೆಲ್ಲಾ ಕಡೆ ಕಸಕಡ್ಡಿಗಳೇ ತುಂಬಿದ್ದವು. ಹೊರಗೆ ತೋಟ ಕೂಡ ಪಾಳುಬಿದ್ದಿತ್ತು. ತೋಟದ ಹಾದಿಯಲ್ಲಿ ನನಗೊಂದು ರಕ್ತದಲ್ಲಿ ಅದ್ದಿದಂತಿದ್ದ ಕುಂಚವೂ ಅದರ ಪಕ್ಕದಲ್ಲೇ ಹಳೆಯ ಕಾಲದ ನಾಣ್ಯವೂ ಸಿಕ್ಕಿತು. ಅದನ್ನು ಎತ್ತಿಕೊಂಡು ಮನೆಗೆ ಬಂದೆ.

ಅಲ್ಲಿ ಪಟ್ವಾಡಿ ಇರಲಿಲ್ಲ. ಮಹೇಶ್ವರನೂ ಇರಲಿಲ್ಲ.ಹೊರಗೆ ಬಂದು ನೋಡಿದರೆ ನಾವು ಬಂದ ಜೀಪೂ ಕಾಣಿಸಲಿಲ್ಲ. ಬಹುಶಃ ಅಡುಗೆ ಸಾಮಾನು ತರಲಿಕ್ಕೆಂದು ಅಂಗಡಿಗೆ ಹೋಗಿರಬೇಕೆಂದುಕೊಂಡು ಮತ್ತಷ್ಟು ಹೊತ್ತು ಅಡ್ಡಾಡಿದೆ. ಸಂಜೆಯಿಳಿದು ಕತ್ತಲಾಗುತ್ತಿತ್ತು. ಒಂದು ವಿಲಕ್ಷಣ ಭಯ ನನ್ನ ನರನಾಡಿಗಳಲ್ಲಿ ಸಂಚರಿಸಿತು. ಮನಸ್ಸು ಏನೋ ತಪ್ಪಾಗಿದೆ ಎಂದು ಸಾರಿಸಾರಿ ಹೇಳುತ್ತಿತ್ತು. ಅಂಗಳಕ್ಕೆ ಬಂದು ನಿಂತು ಮನೆಯನ್ನೇ ದಿಟ್ಟಿಸಿದೆ. ಯಾವುದೇ ಹಳೆಯ ಪೇಟಿಂಗಿನಂತೆ ಕಾಣಿಸಿತು. ಸ್ವಲ್ಪ ಹೊತ್ತು ಅಲ್ಲೇ ಕಾದೆ. ಮರಳಿ ಹೋಗುವ ದಾರಿ ನನಗೂ ಸರಿಯಾಗಿ ಗೊತ್ತಿರಲಿಲ್ಲ. ಆಗಿನ್ನೂ ಈಗಿನಂತೆ ಕಾಡು ಪೂರ್ತಿ ಮಾಯವಾಗಿರಲಿಲ್ಲ.

ನನ್ನ ಸಿಟ್ಟು ಏರಿತ್ತು. ಮಹೇಶ್ವರನನ್ನು ಶಪಿಸುತ್ತಾ ಕಾಡಿನಿಂದ ನಿಧಾನವಾಗಿ ಹೊರಬಿದ್ದೆ. ಅವರಿಬ್ಬರೂ ಎಲ್ಲಿಗೆ ಹೋಗಿರಹುದೆಂಬ ಪ್ರಶ್ನೆಗಿಂತ ನನ್ನನ್ನು ಆ ಕಾಡಿನಲ್ಲಿ ಒಂಟಿಯಾಗಿ ಯಾಕೆ ಬಿಟ್ಟುಹೋದ ಎಂಬುದೇ ನನ್ನನ್ನು ಕಾಡುತ್ತಿತ್ತು. ಹೇಗೋ ಮೈಕೈ ಪರಚಿಕೊಂಡು ನಖಶಿಖಾಂತ ನಡುಗುತ್ತಾ ಆಗುಂಬೆ ತಲುಪಿದೆ. ಅಲ್ಲಿದ್ದ ಬ್ರಿಟಿಷರ ಕಾಲದ ಪ್ರವಾಸಿ ಮಂದಿರದಲ್ಲಿ ರಾತ್ರಿ ಕಳೆದೆ. ಬೆಳಗ್ಗೆ ಅಷ್ಟು ಹೊತ್ತಿಗೇ ಎಂದು ಮುತ್ತವಳ್ಳಿಯಲ್ಲಿರುವ ಮಹೇಶ್ವರನ ಮನಗೆ ಹೋದೆ.

ಅಲ್ಲಿ ಮಹೇಶ್ವರನಿರಲಿಲ್ಲ. ನನ್ನನ್ನು ಸ್ವಾಗತಿಸಿದ್ದು ಮಹೇಶ್ವರನ ಹೆಂಡತಿ ಸರಸ್ವತಿ. ಅವಳ ಮುಖದಲ್ಲಿ ಏನೋ ವಿಲಕ್ಷಣತೆ ಕಾಣಿಸಿತು. ಅವಳನ್ನು ನೋಡಿದ ತಕ್ಷಣವೇ ನನ್ನ ಅರ್ಧ ಸಿಟ್ಟು ಇಳಿದುಹೋಯ್ತು.

ನನ್ನನ್ನು ನೋಡಿದ್ದೇ ಆಕೆಯ ಕಣ್ಣಾಲಿಗಳಲ್ಲಿ ನೀರಾಡಿದವು. 'ಹೇಗಿದ್ದೀರಿ ಚಂದ್ರಣ್ಣಾ" ಕೇಳಿದಳು. 'ಚೆನ್ನಾಗಿದ್ದೀನಿ... ಎಲ್ಲಿ ಮಹೇಶ್ವರ" ನಾನು ಕುತೂಹಲದಿಂದ ಕೇಳಿದೆ.'ಅವರೆಲ್ಲಿದ್ದಾರೆ... ನಮ್ಮನ್ನು ಬಿಟ್ಟುಹೋಗಿ ಎರಡು ತಿಂಗಳಾಯ್ತು" ಸರಸ್ವತಿ ಸಶಬ್ದವಾಗಿ ಅತ್ತಳು. ಅವಳ ಹಣೆಯಲ್ಲಿ ಕುಂಕುಮ ಇಲ್ಲದಿದ್ದುದೇ ನನಗೆ ಕಾಣಿಸಿದ ವಿಲಕ್ಷಣತೆ ಅನ್ನೋದು ಆಗ ಗೊತ್ತಾಯಿತು.

ಕೊನೆಗೆ....ಆ ಕ್ಷಣ ನನಗೆ ಏನನ್ನಿಸಿತು ಅನ್ನುವುದು ನೆನಪಿಲ್ಲ. ಈಗ ಯೋಚಿಸಿದರೆ ನನ್ನನ್ನು ನಮ್ಮೂರಿಗೆ ಬಂದು ಕರೆದೊಯ್ದ ಮಹೇಶ್ವರ ಯಾರು....ಪಟ್ವಾಡಿ ಸತ್ತಿದ್ದು ನಿಜವೋ ಸುಳ್ಳೋ. ನನ್ನಿಂದ ಅವರೇನು ಬಯಸಿದ್ದರು? ಅವರು ಜೀಪಿನಲ್ಲಿ ಬಂದಿದ್ದು ಕನಸೇ...?ಇವತ್ತಿಗೂ ಗೊತ್ತಿಲ್ಲ. ಆದರೆ ಮಹೇಶ್ವರ ಸತ್ತ ಸುದ್ದಿ ಕೇಳುತ್ತಲೇ ನಾನು ಬೆವರಿದ್ದಷ್ಟೇ ನೆನಪಿದೆ.

(ಮುಗಿಯಿತು)

ಆಗುಂಬೆಯ ಆಗಂತುಕ...!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X