ಅಕ್ಷರ ಜಾತ್ರೆಯ 'ಮಾಂಸ'ವಿಲ್ಲದ ಮೆನು ನೋಡಿ
ಮಡಿಕೇರಿಯಲ್ಲಿ ಜ.7ರಿಂದ ನಡೆಯಲಿರುವ ಮೂರು ದಿನಗಳ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಹಾಗೂ ಇತರರಿಗೆ ಮಾಂಸಹಾರಿ ಆಹಾರ ನೀಡದಿರಲು ಸಮ್ಮೇಳನದ ಆಹಾರ ಸಮಿತಿ ನಿರ್ಧರಿಸಿದೆ.
ಸಸ್ಯಹಾರಿಗಳಿಗೆ ಮುಜುಗರವಾಗಬಾರದೆಂಬುದು ಇದರ ಉದ್ದೇಶವಾಗಿದೆ. ಮಡಿಕೇರಿ ಸಮ್ಮೇಳನದ ಕೊನೆ ದಿನ ಅತಿಥಿಗಳಿಗೆ ಕೊಡಗಿನ ಮಾಂಸಹಾರಿ ಖಾದ್ಯದ ಸವಿ ಉಣಿಸಬೇಕು ಎಂದು ಸಮ್ಮೇಳನ ಸಮಿತಿ ನಿರ್ಧರಿಸಿತ್ತು. ಆದರೆ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರ ಮಾತ್ರ ಬಳಸಿದ್ದರಿಂದ ಸಂಪ್ರದಾಯ ಮುರಿಯಬಾರದೆಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಲಾಗಿದೆ.
ಹೌದು ಮಾಂಸಹಾರಿಗಳ ನಾಡು ಎಂದೇ ಹೆಸರಾಗಿರುವ ಕೊಡಗಿನಲ್ಲಿ ಎಲ್ಲಾ ಸಮಾರಂಭ, ಸಮ್ಮೇಳನಗಳಲ್ಲಿ ಮಾಂಸದೂಟ ಇದ್ದೇ ಇರುತ್ತೆ. ಇದುವರೆಗೆ ನಡೆದ ಬೇರೆ ಬೇರೆ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಹಂದಿ, ಕೋಳಿ, ಕುರಿ, ಮೀನಿನ ಭಕ್ಷ್ಯ ಇತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ ಸಾಹಿತ್ಯಾಸಕ್ತರಿಗೆ ಅದರ ರುಚಿ ಸಿಗುವುದಿಲ್ಲವಂತೆ.
ಹಾಗಂತ ಸಮ್ಮೇಳನದ ಊಟೋಪಚಾರ ವ್ಯವಸ್ಥೆ ಸಪ್ಪಗಾಗಿದೆ ಎಂದರ್ಥವಲ್ಲ. ಬರೊಬ್ಬರಿ 35 ತರಹದ ಖಾದ್ಯಗಳಿರುತ್ತವೆಯಂತೆ. ಅದರಲ್ಲಿ ಕೊಡಗಿನ 8 ಕ್ಕೂ ಹೆಚ್ಚು ತರಹದ ಖಾದ್ಯಗಳಿವೆ. ಬಿಸಿ ಕಾಫಿ, ಅಕ್ಕಿರೊಟ್ಟಿ-ಚಟ್ನಿ, ಕಡಬು- ಕೂಟುಕರಿ, ಪಲಾವ್- ಪಚ್ಚಡಿ, ಕ್ಯಾರೇಟ್ ಹಲ್ವಾ... ಹೀಗೆ ಬಾಯಲ್ಲಿ ನೀರೂರಿಸುವಂತಹ ಕೊಡಗಿನ ಖಾದ್ಯಗಳನ್ನು ಸವಿಯುವ ಅವಕಾಶ ಈ ಬಾರಿ ಸಾಹಿತ್ಯಾಸಕ್ತರಿಗೆ ಸಿಗಲಿದೆ.[ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್?]
ಸಮ್ಮೇಳನದ ಮೂರು ದಿನದ ಮೆನು ಪಟ್ಟಿ ತಯಾರಿಸಲಾಗಿದ್ದು, ಕೊಡಗಿನ ಸಾಂಪ್ರದಾಯಿಕ ಸಸ್ಯಹಾರಿ ಆಹಾರ ಪದ್ಧತಿಯನ್ನು ಉಣಬಡಿಸಲಾಗುತ್ತಿದೆ. ಜೊತೆಗೆ ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಒಟ್ಟು 35 ತರಹದ ಖಾದ್ಯಗಳ ಪಟ್ಟಿ ಮಾಡಲಾಗಿದ್ದು, ಜನವರಿ 6ರಾತ್ರಿಯಿಂದ 9ರ ರಾತ್ರಿವರೆಗೆ ಊಟೋಪಚಾರ ಇರುತ್ತದೆ.

ಹುಬ್ಬಳ್ಳಿ ಶ್ರೀ ಬೈರ ಕೆಟರರ್ಸ್ ತಂಡ ಊಟೋಪಚಾರ ವ್ಯವಸ್ಥೆ ವಹಿಸಿಕೊಂಡಿದೆ. ಈಗಾಗಲೇ ಗಂಗಾವತಿ ಮತ್ತು ಬಿಜಾಪುರ ಕನ್ನಡ ಸಮ್ಮೇಳನದಲ್ಲಿ ಯಶಸ್ವಿಯಾಗಿ ಆಹಾರ ಸಿದ್ಧಪಡಿಸಿದ್ದ ಈ ತಂಡ ಈಗ ಕೊಡಗಿನಲ್ಲಿ ರಸವತ್ತಾದ ಖಾದ್ಯ ತಯಾರಿಸಲು ಸಿದ್ದಗೊಳ್ಳುತ್ತಿದೆ. ಒಟ್ಟು 600 ಮಂದಿ ಹುಬ್ಬಳ್ಳಿಯಿಂದ ಬರಲಿದ್ದು, ಅವರಲ್ಲಿ 250 ಮಂದಿ ಬಾಣಸಿಗರು. ಅಡುಗೆ ತಯಾರಿ ಮತ್ತು ಅಡುಗೆ ಪಾತ್ರೆಗಳಿಗೆ 20 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ. ಆಹಾರ ಧಾನ್ಯವನ್ನು ಸಮಿತಿಯಿಂದ ಪೂರೈಸಲಾಗುತ್ತಿದೆ
ಸಮ್ಮೇಳನ ವೇದಿಕೆಯಿಂದ ಸುಮಾರು 500 ಮೀಟರ್ ದೂರದಲ್ಲಿ, ಮಡಿಕೇರಿಯ ಜಿಲ್ಲಾ ಪೊಲೀಸ್ ಪೇರೆಡ್ ಮೈದಾನದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಹತ್ತು ಕೌಂಟರ್ ತೆರೆಯಲಾಗುತ್ತಿದ್ದು, ಬಫೆ ಶೈಲಿಯಲ್ಲಿ ಬಡಿಸಲಾಗುತ್ತದೆ. ಇದಕ್ಕಾಗಿ ಸುಮಾರು 300 ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಮಾಂಸಹಾರ ಇಲ್ಲದಿದ್ದರೂ ಭರ್ಜರಿ ಭೋಜನ ಉಣಬಡಿಸಲು ಆಹಾರ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸಮ್ಮೇಳನದ ಮೆನು: ಬಿಸಿ ಕಾಫಿ, ಅಕ್ಕಿರೊಟ್ಟಿ-ಚಟ್ನಿ, ಕಡಬು- ಕೂಟುಕರಿ, ಪಲಾವ್- ಪಚ್ಚಡಿ, ಕ್ಯಾರೇಟ್ ಹಲ್ವಾ, ಅನ್ನ, ಸಾಂಬಾರ್, ರಸಂ, ಬಿಸಿ ಬೇಳೆ ಬಾತ್, ಖಾರಾ ಬೂಂದಿ, ಶ್ಯಾವಿಗೆ, ಚಪಾತಿ, ಕುರ್ಮ, ಗೀ ರೈಸ್, ಜೋಳದ ರೊಟ್ಟಿ, ಎಣ್ಣೆಗಾಯಿ, ಅವಲಕ್ಕಿ ಒಗ್ಗರಣೆ, ಪೂರಿ, ಸಾಗು ಪ್ರಮುಖ ಖಾದ್ಯಗಳು. ಕೇಸರಿ ಬಾತ್, ಕ್ಯಾರೇಟ್ ಹಲ್ವಾ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ಜಿಲೇಬಿ ಸಿಹಿ ಖಾದ್ಯಗಳಾಗಿವೆ. ಉಳಿದಂತೆ ಮಜ್ಜಿಗೆ, ಉಪ್ಪಿನಕಾಯಿ, ಮೆಣಸು, ಪಲ್ಯ, ಕೆಂಪು ಚಟ್ನಿ ಟೇಸ್ಟ್‍ಗೆ ತಕ್ಕಂತೆ ಉಣಬಡಿಸಲಾಗುತ್ತಿದೆ.












Click it and Unblock the Notifications