ಅಪ್ಪಾ ಎಂದು ಚೀರಲೂ ನನ್ನಿಂದಾಗಲಿಲ್ಲ!

The last words of baby Afreen
ಏನೂ ಅರಿಯದ ಹಸುಗೂಸು ಬೇಬಿ ಅಫ್ರೀನ್‌ಳ ಬರ್ಬರ ಹತ್ಯೆ ಬೆಂಗಳೂರನ್ನು ಮಾತ್ರವಲ್ಲ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಅಪ್ಪಾ, ಬೇಡಪ್ಪ ಎಂದು ಕೂಗಲು, ನೋವಿನಲ್ಲಿ ಅಮ್ಮಾ ಎಂದು ಚೀರಲು ಕೂಡ ಬರದಿದ್ದ ಹಾಲುಗಲ್ಲದ ಕಂದಮ್ಮನ ಗಲ್ಲಕ್ಕೆ ಸಿಗರೇಟು ಚುಟ್ಟಲು ಮನಸ್ಸಾದರೂ ಹೇಗೆ ಬಂತು ಆ ಕ್ರೂರಿ ಅಪ್ಪನಿಗೆ? ಈ ಕ್ರೌರ್ಯ ತುಂಬಿದ ಸಮಾಜವನ್ನು ಧಿಕ್ಕರಿಸಿ, ಸಾವು ನೋವು ಯಾವುದೂ ಇಲ್ಲದ ಮತ್ತೊಂದು ಲೋಕಕ್ಕೆ ಹೊರಟು ನಿಂತಿರುವ ಆಫ್ರೀನ್ ಕಟ್ಟಕಡೆಯ ಸ್ವಗತ ಇಲ್ಲಿದೆ. ದಿನೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ತಾಣದಲ್ಲಿ ಪ್ರಕಟಿಸಿದ ಅಶ್ರುವಿನಿಂದ ಒದ್ದೆಯಾದ ಕವನವನ್ನು ಓದಿ, ಆಫ್ರೀನ್‌ಳನ್ನು ಬೀಳ್ಕೊಟ್ಟುಬಿಡಿ.

ಇವತ್ತು ನನ್ನ ನಮಾಜ್-ಇ-ಜನಾಜಾ
ಕಡೆಯ ಪ್ರಾರ್ಥನೆ ನನಗಾಗಿ, ನೀವೂ ಪ್ರಾರ್ಥಿಸಿ

ಕಿವಿಯಲ್ಲಿ ಇನ್ನೂ ಆಜಾನ್ ಮೊಳಗು ಹಾಗೇ ಇದೆ
ನಾನು ಆಫ್ರೀನ್, ಆಫ್ರೀನ್ ಅಂದರೆ ಉತ್ತೇಜನ

ಅಮ್ಮಳ ಗರ್ಭಚೀಲದಲ್ಲಿ ಬೆಚ್ಚಗೆ ಈಜಾಡುವಾಗಲೇ
ನನಗೊಬ್ಬಳು ಜತೆಗಾತಿಯಿದ್ದಳು-ನಮ್ಮಕ್ಕ
ಅಪ್ಪನ ಹಿಂಸೆಗೆ ಅವಳು ಅಲ್ಲೇ ಸತ್ತಳು

ಅಮ್ಮಳ ತುಂಬಿದ ಹೊಟ್ಟೆಯ ಮೇಲೆ
ಅಪ್ಪನ ಕೆಕ್ಕರುಗಣ್ಣು
ಭಯದಲ್ಲಿ ಮುದುಡಿ ಕುಳಿತಿದ್ದೆ ನಾನು

ಈ ಜಗಕ್ಕೆ ಕಣ್ಣು ತೆರೆದುಕೊಂಡ
ಮೊದಲ ಆರು ದಿನಗಳು ದೇವತೆಗಳೇ ಆರೈಕೆ ಮಾಡುತ್ತಾರಂತೆ
ಅಪ್ಪ ಅಡ್ಡ ನಿಂತಿದ್ದ-
ದೇವತೆಗಳಿಗೂ ನನ್ನ ಹಾಲುಗಲ್ಲಕ್ಕೂ ನಡುವೆ

ಪವಿತ್ರ ಜಮ್ ಜಮ್ ನೀರು ನನ್ನ ಗಂಟಲಿಗೆ ಇಳಿಯುವ ಮುನ್ನವೇ
ಅಪ್ಪ ನನ್ನ ಎದೆಗೆ ಉರಿಯುವ ಸಿಗರೇಟು ಚುಚ್ಚಿ ಬಿಟ್ಟ
ಮೆದುಳು ಹರಿಯುವ ಹಾಗೆ ಗೋಡೆಗೆ ತಲೆ ಜಜ್ಜಿಬಿಟ್ಟ

ನೆತ್ತಿ ಕೂಡಿಲ್ಲ, ಹೊಕ್ಕುಳ ಗಾಯ ಆರಿಲ್ಲ
ಅಳುವುದೊಂದು ಗೊತ್ತಿತ್ತು ನನಗೆ
ಅಪ್ಪನಿಗೇನು ದ್ವೇಷ ನನ್ನ ಮೇಲೆ?
ಹೇಗೆ ಕೇಳಲಿ? ನಾಲಿಗೆ ಹೊರಳುತ್ತಿಲ್ಲ
ಅಪ್ಪಾ ಎಂದು ಚೀರಲೂ ನನ್ನಿಂದ ಸಾಧ್ಯವಿಲ್ಲ

ಎಳೇ ಮೆದುಳು ನುಜ್ಜುಗಜ್ಜು ಅಪ್ಪನ ಹೊಡೆತಕ್ಕೆ
ಫಿಟ್ಸು, ತಲೆಯಲ್ಲಿ ರಕ್ತಸ್ರಾವ
ಇನ್ನು ಬದುಕಲಾರೆ ಎಂದು ಹೊರಟುಬಿಟ್ಟೆ

ನನ್ನ ಕಳಕೊಂಡು
ಅಮ್ಮ ಈಗ ತಬ್ಬಲಿಯಾಗಿದ್ದಾಳೆ
ಅವಳದಿನ್ನೂ ಹಸಿಮೈ, ಉಕ್ಕಿಚೆಲ್ಲುವ ಮೊಲೆಹಾಲು
ಎಲ್ಲ ಬಿಟ್ಟು ಹೊರಟಿದ್ದೇನೆ

ಇವತ್ತು ನನ್ನ ಜನಾಜಾ, ಆಮೇಲೆ ಮಣ್ಣು
ಹೋಗುವ ಮುನ್ನ ಅವನನ್ನು ಕೇಳಬೇಕಿತ್ತು

ಅಪ್ಪ, ನನ್ನದೇನು ತಪ್ಪು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+