ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ

By Staff
|
Google Oneindia Kannada News

Poetic rendering on elections by DVG
ಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.

* ಎಚ್. ಆನಂದರಾಮ ಶಾಸ್ತ್ರೀ

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ. ಅಂದು ಡಿವಿಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಚುನಾವಣೆಯೆಂದರೆ ಇಂದು ಜಾತ್ರೆ-ಗದ್ದಲ-ಪರಿಷೆ ತಾನೆ? 'ವರಣ ಪ್ರಸ್ತ' (ಅರ್ಥಾತ್, '(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ') ಎಂಬ ಪದ್ಯದಲ್ಲಿ ಡಿವಿಜಿ ಹೇಳುತ್ತಾರೆ:

ಆ ಏನ್ಹೇಳಲಿ! ನಾಡಿಗೆ ನಾಡೇ
ಜಾತ್ರೆ ಗೊಂದ್ಲವಾಯ್ತು,
ಮಗುವೇ, ಜಾತ್ರೆ ಗೊಂದ್ಲವಾಯ್ತು.
ಆವೂರೀವೂರ್‍ಯಾವೂರ್ ನೋಡಲಿ
ಪ್ರಸ್ತದ ಹುಯಿಲಾಯ್ತು,
ಮಗುವೇ, ಪ್ರಸ್ತದ ಹುಯಿಲಾಯ್ತು.

ಶಿಕ್ಷಣವಂತರು ಲಕ್ಷಣವತಿಯರು
ಲಕ್ಷಮಂದಿ ಪರಿಷೇ,
ಮಗುವೇ, ಲಕ್ಷಾಂತರ ಪರಿಷೇ.
ಅಕ್ಷರವರಿಯದ ಕುಕ್ಷಿಯ ಮರೆಯದ
ಅಕ್ಷಯಜನ ಪರಿಷೇ,
ಮಗುವೇ, ಸಾಕ್ಷಾತ್ ಜನ ಪರಿಷೇ.

ಪುಢಾರಿಗಳ ಪೊಳ್ಳು ಆಶ್ವಾಸನೆ ಮತ್ತು ಕಪಟ ನಾಟಕಗಳು ಇಂದು ಜನಜನಿತವಷ್ಟೆ. ಡಿವಿಜಿ ಅವರ ಈ ಪದ್ಯಭಾಗ ನೋಡಿ:

ದೇಶೋದ್ಧಾರಕ ಮೋಸನಿವಾರಕ
ವೇಷದ ನಾಟಕವೋ,
ಮಗುವೇ, ವೇಷದ ನಾಟಕವೋ.
ಆಶಾದಾಯಕ ಘೋಷಣಕಾರಕ
ಹಾಸ್ಯವಿಕಾರಕವೋ,
ಮಗುವೇ, ಹಾಸ್ಯವಿಕಾರಕವೋ.

ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಚುನಾವಣಾ ಪ್ರಚಾರದ ಬಗೆಯನ್ನು 'ಜನಜನವರಿಗೆ' ಎಂಬ ಪದ್ಯದಲ್ಲಿ ಡಿವಿಜಿ ಈ ರೀತಿ ಬಣ್ಣಿಸುತ್ತಾರೆ:

ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು;
ಕೊಡಿರೆನಗೆ ಮತವ,
ಹಿಡಿಯಿರಿದೊ ಹಿತವ;
ಇಂತೆಂದು ಬಂದನಾ ಘನ ಕಾಂಗ್ರೆಸಿಗನು.

ರಷ್ಯ ಕಲ್ಪಕವೃಕ್ಷ ಕೃಷಿಯ ಬಲ್ಲವ ನಾನು;
ಇತ್ತ ತಾ ಮತವ,
ಎತ್ತಿಕೋ ಹಿತವ;
ಇಂತೆಂದು ಬಂದನಾ ಕಮ್ಯುನಿಸ್ಟವನು.

'ಅಂಗೈಯ ವೈಕುಂಠ' ಎಂಬುದು ಇನ್ನೊಂದು ಪದ್ಯ. ಈ ಪದ್ಯ ಒಂದು ಕಥೆಯಾಗಿ ಸಾಗುತ್ತದೆ. ಪೊಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾದ ಅಭ್ಯರ್ಥಿಯು 'ಹೆಮ್ಮಂತ್ರಿ'ಯಾಗಿ ಮೆರೆಯುತ್ತಾನೆ, ಆದರೆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. 'ರೋಸಿದ್ದ ಜನವೆಲ್ಲ ಕಡೆಗೂರ ಚೌಕದಲಿ' ನೆರೆದು, ಔತಣದ ನೆಪದಲ್ಲಿ ಆ ಮಂತ್ರಿಯನ್ನು ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಂತ್ರಿ ಉತ್ತರಿಸುತ್ತಾನೆ:

ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ,
ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ.
ಈ ಸಾರಿ ನೀಮೆನ್ನನಾರಿಸಿರಿ, ನಾನು
ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು.

ಮುಗ್ಧ ಮತದಾರರು ಅವನನ್ನು ಮತ್ತೆ ನಂಬುತ್ತಾರೆ!
'ದೂರ್‍ವುದೇಕವನ ನಾಮ್? ಅವನ ಮನಸೊಳಿತು;
ಪೂರ್ವಕರ್ಮವು ನಮ್ಮದದರ ಫಲವಿನಿತು.'

ಹೀಗೆಂದುಕೊಂಡು ಜನರು ಮತ್ತೆ ಮುಂದಿನ ಚುನಾವಣೆಯಲ್ಲೂ ಆತನನ್ನೇ ಆಯ್ಕೆಮಾಡುತ್ತಾರೆ! ಆತನದೋ, ಮತ್ತೆ ಅದೇ ಚಾಳಿ! ಜನರು ಪಾಠ ಕಲಿಯಲಿಲ್ಲವೆಂಬ ಬೇಸರವನ್ನು ಕವಿ ಈ ರೀತಿ ವ್ಯಕ್ತಪಡಿಸುತ್ತಾರೆ:

ಕಲಿಯಿತೇಂ ಜನತೆಯಂಗೈಯ ವೈಕುಂಠದಿಂ
ರಾಜ್ಯಪಾಠವನು?
ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ
ಭೋಜ್ಯದೂಟವನು?
ಮರೆವು ಕವಿಯಿತು ಜನವ ನಿಶಿನಿದ್ದೆಯೊಡನೆ;
ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ.

ಡಿವಿಜಿ ಅವರ ಈ ಮಾತು ಇಂದಿಗೂ ಪ್ರಸ್ತುತವಲ್ಲವೆ? 'ಪಬ್ಲಿಕ್ ಮೆಮೊರಿ ಈಸ್ ಷಾರ್ಟ್' ತಾನೆ? ಅದರ ದುರುಪಯೋಗವನ್ನೇ ಅಲ್ಲವೆ ನಮ್ಮ ಪುಢಾರಿಗಳು ಮಾಡಿಕೊಳ್ಳುತ್ತಿರುವುದು? ಇಂಥ ಪುಢಾರಿಯನ್ನು 'ಜನನಾಯಕ' ಎಂಬ ಪದ್ಯದಲ್ಲಿ ಡಿವಿಜಿ ಅವರು ಸಖತ್ತಾಗಿ ಬೆಂಡೆತ್ತಿದ್ದಾರೆ. ಆ ಪದ್ಯ ಈ ರೀತಿ ಆರಂಭವಾಗುತ್ತದೆ:

ಎಲ್ಲಿಂದ ಬಂದೆಯೋ ಜನನಾಯಕಾ-ಎಂಥ
ಒಳ್ಳೆಯದ ತಂದೆಯೋ ಜನನಾಯಕ.
ಬೆಲ್ಲವನು ಕಿವಿಗೀವ ಜನನಾಯಕಾ ನೀನು
ಸುಳ್ಳಾಡದಿರು ಸಾಕು-ಜನನಾಯಕಾ.

ಡಿವಿಜಿ ಅವರ ಕಲ್ಪನೆಯು ಎಂಥ ಅದ್ಭುತವಾದದ್ದೆಂದರೆ, ಸುಳ್ಳಾಡುವ ಜನನಾಯಕನ ಬಾಯಲ್ಲಿ ಸಿಕ್ಕಿಬಿದ್ದ ಸರಸ್ವತಿ ದೇವಿಯು ಬಿಡುಗಡೆಗಾಗಿ ಬ್ರಹ್ಮನ ಮೊರೆಹೊಗುತ್ತಾಳೆ! 'ಸರಸ್ವತಿಯ ಪ್ರಾರ್ಥನೆ' ಪದ್ಯದಲ್ಲಿ ಆ ದೇವಿಯು ಬ್ರಹ್ಮನನ್ನು ಈ ರೀತಿ ಪ್ರಾರ್ಥಿಸುತ್ತಾಳೆ:

ಬಿಡಿಸೆನ್ನ ರಾಜ್ಯಕರ ಹಿಡಿತದಿಂ ವಿಧಿಯೇ
ತೊದಲು ತುಟಿಗೆನ್ನ ಬಲಿಕೊಡಬೇಡ ಪತಿಯೇ.

ಮಾತು ನೂಲನು ಜೇಡ ಬಲೆಯಾಗಿ ನೆಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ.

ಕವಿಯ ಕಲ್ಪನೆಯಿಲ್ಲಿ ಅನ್ಯಾದೃಶವಲ್ಲವೆ? ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಅಂದು ಬರೆದ ಪದ್ಯಗಳು ಇಂದಿಗೂ ಪ್ರಸ್ತುತ. 'ನಮ್ಮ ಫಾಲಲಿಪಿಯೋ ನೀನು-ಜನನಾಯಕಾ', ಎನ್ನುವ ಮೂಲಕ ಡಿ ವಿ ಜಿ ಅವರು, 'ಇಂಥ ಜನನಾಯಕನನ್ನು ಹೊಂದಿರುವುದು ನಮ್ಮ ಹಣೆಬರಹ', ಎಂಬ ತೀರ್ಮಾನಕ್ಕೆ ಬರುತ್ತಾರೆ! ಡಿವಿಜಿ ಅವರ ಈ ತೀರ್ಮಾನವನ್ನು ಸುಳ್ಳಾಗಿಸುವ, ಅಂದರೆ, ದುಷ್ಟ-ಭ್ರಷ್ಟ ಜನನಾಯಕರಿಗೆ ಗತಿ ಕಾಣಿಸುವ ಅವಕಾಶ ಭಾರತಾದ್ಯಂತ ನಮಗೀಗ ಒದಗಿಬಂದಿದೆ. ಮತಪತ್ರಗಳ ಮೂಲಕ ನಾವು ಆ ಕೆಲಸವನ್ನು ಮಾಡಬೇಕಾಗಿದೆ.

ಪೂರಕ ಓದಿಗೆ

ನೆನೆನೆನೆ ಮಂಕುತಿಮ್ಮನ ಕಗ್ಗದ ಜನಕನ</a><br><a href=ಡಿವಿಜಿ ಅವರ 122ನೇ ಜನ್ಮದಿನಾಚರಣೆಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ" title="ನೆನೆನೆನೆ ಮಂಕುತಿಮ್ಮನ ಕಗ್ಗದ ಜನಕನ
ಡಿವಿಜಿ ಅವರ 122ನೇ ಜನ್ಮದಿನಾಚರಣೆಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ" />ನೆನೆನೆನೆ ಮಂಕುತಿಮ್ಮನ ಕಗ್ಗದ ಜನಕನ
ಡಿವಿಜಿ ಅವರ 122ನೇ ಜನ್ಮದಿನಾಚರಣೆಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X