ಅಮ್ಮನಿಗೊಂದು ಓಲೆ
ಅಮ್ಮ ಈಗ ನಾನೂ ಕೂಡ
ನಿನ್ನ ಹಾಗೆ ಎದ್ದು ಬಿದ್ದು
ನಡೆದು ನಡೆದು ಬದುಕ ಹಾದಿ
ಚುರುಕು ಆಗಿಬಿಟ್ಟೆ ನೋಡ
ತುಳಿದು ಸವೆದ ಬಾಳ ದಾರಿ
ತೂಗಿ ತೂಗಿ ಮಾತು ಮುತ್ತು
ಹುಡುಕಿ ಹುಗಿದ ನಗೆಯ ಸ್ವತ್ತು
ಅಳುವ ಮರೆತುಬಿಟ್ಟೆ ನೋಡ
ನಿನ್ನ ಹಾಗೇ ದುಃಖದಲ್ಲು
ಸುಖವ ಹುಡುಕಿ ಅಗೆದು ತೆಗೆದು
ಬದುಕ ಬಂಡಿಯೇರಿ ಕುಳಿತು
ಹಾಡಬಲ್ಲೆ ನಾನು ಹಾಡ
ಅಂದು ನಿನ್ನ ನೋಡಿ ನಕ್ಕೆ
ಆಗ ನೀನು ಬೇಳೆ-ಅಕ್ಕಿ
ಆರಿಸುತಲೆ ಅನುಭವಗಳ
ಮುತ್ತ ನನಗೆ ಕೊಟ್ಟೆ ಹೆಕ್ಕಿ
ಈಗ ನನ್ನ ಬಳಿಯೂ ಇವೆ
ನನ್ನವೇ ಹಲ ರತ್ನಗಳು
ನನ್ನ ಬಾಳ ಪುಟಗಳಿಂದ
ನಾನು ಕದ್ದ ಕವನಗಳು
ಅಮ್ಮ ನಿನಗೆ ಗೊತ್ತೆ ಇಲ್ಲ
ನಿನ್ನ ಹಾಗೆ ನಾನು ಎಲ್ಲ
ನನ್ನ ರತ್ನ ನಿನ್ನ ಮುತ್ತು
ಎಲ್ಲ ಒಂದೆ ಬೇವು-ಬೆಲ್ಲ
ಅಂದು ನೀನು ನಡೆದ ದಾರಿ
ಹಳೆಯ ಹಾದಿ ಎನ್ನಿಸಿತ್ತು
ಸ್ವಂತಿಕೆಯನೆ ಮರೆತು ನೀನು
ಇರುವೆಯೇನೋ ಎಂಬ ಸಿಟ್ಟು
ಆದರೀಗ ಆಯ್ತು ಅರಿವು
ನೀನು ಸೋತೂ ಸೋಲಲಿಲ್ಲ
ನೀನು ಬಿಟ್ಟುಕೊಟ್ಟದ್ದೆಲ್ಲ
ನಿನಗೇ ಬಂದು ಸೇರಿತಲ್ಲ !
ನಿನ್ನ ಹಳೆಯ ಪಾಠ ನನ್ನ
ಒಳಗೇ ಕುಟುಕಿ ಸಿಡುಕಿ ನಾನು
ಥಟ್ಟನೆದ್ದು ಹೋದರೇನು
ಈಗ ಪಥ್ಯವಲ್ಲವೇನು?
ಅಮ್ಮ ನನಗೆ ಈಗ ಗೊತ್ತು
ಸೋಲಿನಲ್ಲೆ ಗೆಲುವ ಹೆಜ್ಜೆ
ನೋವಿನಲ್ಲೆ ನಗುವ ಸೊಲ್ಲು
ಹುಡುಕಬೇಕು ಕತ್ತಲಲ್ಲು
ಅಮ್ಮ ನೀನು ಎಂಥ ಜಾಣೆ
ಎಂದು ಈಗ ಆಯ್ತು ಅರಿವು
ಬದುಕುವದನು ಕಲಿಯುತಿರುವೆ
ನಿನ್ನ ಕುಡಿಯೆ ಅಲ್ಲವೇನು ?












Click it and Unblock the Notifications