ಮುಂಜಾವು
- ಎಚ್.ಆರ್.ಜಯಶ್ರೀ
[email protected]
ನಿದ್ರೆಗೆ ಜಾರಿದ ಲೋಕವು ಮೆಲ್ಲಗೆ
ಮಂಪರು ಕಳೆಯುತ ಅರೆಬರೆ ಎಚ್ಚರ
-ಗೊಂಡಿಹ ಸಮಯದ ಸವಿಸವಿ ನೀರವ
ಗಾನವ ಕೇಳಲು ಎದ್ದಿಹ ಜೀವಿ
ಸುತ್ತಲು ಸುಮ್ಮಗೆ ನಗುತಿಹ ಪ್ರಕೃತಿ
ಮೆತ್ತಗೆ ಬಿದ್ದಿಹ ಮಂಜಿನ ಮುಸುಕು
ಕೋಳಿಯ ಕೂಗಿನ ಜೊತೆಯಲೆ ಒಡತಿ
ಹಾಲನು ಕರೆಯಲು ನಡೆದಿಹ ಠೀವಿ
ಚುಮು-ಚುಮು ನಸುಕಲಿ ಮೂಡಿದ ಬಣ್ಣ
ಬಾನಲಿ ಕಂಡಿತು, ತೊಯ್ದಿತು ಕಣ್ಣ
ಮೆಲ್ಲಗೆ ಮೂಡಿಹ ಬಿಸಿಲಿನ ಕೋಲು
ಸಪ್ಪಳವಿಲ್ಲದ ಬೆಳಗಿನ ಹಾಡು
ಎಲೆಗಳ ನಡುವಲಿ ಮೆಲ್ಲಗೆ ಸರಸರ
ಕೇಳಿಯು ಕೇಳದ ಹೆಜ್ಜೆಯ ಚರಚರ
ಕುರಿಮರಿ ತಾಯಿಯ ಕರೆಯುವ ಮೆಲುಸ್ವರ
ಒಲೆಯಲಿ ಮರಳಿಹ ನೀರಿನ ಮರ್ಮರ
ಕೋಣೆಯ ಮೂಲೆಯ ಕಂದನ ಕುಸು-ಕುಸು
ಅಂಗಳ ತೊಯ್ದಿಹ ನೀರಿನ ರಿkು್ಹಲ್-ರಿkು್ಹಲ್
ನಸುಕಲೆ ಹೊರಟಿಹ ಮಂದಿಯ ಪಿಸು-ಪಿಸು
ಕಾದಿಹ ಹಂಚಲಿ ದೋಸೆಯ ಸುಂಯ್ ಸುಂಯ್
ನಿದ್ರೆಯ ವಶದಿಂ ಬಿಡುಗಡೆ ಹೊಂದುತ
ಸಿಹಿಸಿಹಿ ಸದ್ದಿನ ಜೊತೆಯಲೆ ಮೀಯುತ
ನಸುಕಿನ ನಿಧಾನ ಗತಿಯನು ಸವಿಯುತ
ಲೋಕವ ಎದುರಿಸೆ ತಯಾರು ಜೀವಿ
ಇಂದು:
ಬೆಳಗಿನ ಹಾಲಿನ ಹುಡುಗನ ವಾಹನ
ಕಿಂಯ್ಯನೆ ಕಿರಿಚಲು ಸಟ್ಟನೆ ಎಚ್ಚರ
ಮಂಪರುಗಾಲನು ಎಳೆಯುತ ನಿತ್ಯದ
ಕರ್ಮವ ಗಡಬಡ ಮುಗಿಸಿಹ ಜೀವಿ
ರುಬ್ಬುವ ಯಂತ್ರವು ಆಗಲೇ ಚಾಲೂ
ಪಕ್ಕದ ಮನೆಯಲು ಕುಕ್ಕರ್ ಸಿಳ್ಳೂ
ಅನ್ನವು ಬೆಂದಿರೆ, ಕಾಫಿಯು ಕುದ್ದು
ಊಟದ ಡಬ್ಬಿಯ ಢಮರುಗ ಸದ್ದು
ಪಕ್ಕದ ಕಟ್ಟಡ ಕಟ್ಟುವ ಕೆಲಸ
ಕಲ್ಲುಕುಟ್ಟಿಗರ ಕೆಲಸದ ರಭಸ
ಆಚೆಯ ಮನೆಯಲಿ ಬಗುಳಿಹ ಶ್ವಾನ
ಬೀದಿಯ ಬಸ್ಸಿನ ‘ಪಂ-ಪಂ’ ಗಾನ
ಕಿರುಚುವ ಕಂದನ ಬಯ್ಯುವ ಕೊರಳು
ಕೆಲಸದ ‘ಬಾಯಿ’ಯ ಧಡಬಡ ಸಿಡಿಲು
ಫೋನಿನ ರಿಂಗಣ, ಎದೆಯಲಿ ತಲ್ಲಣ
ಏನು ಕಾದಿದೆಯೋ ದಿನದಲಿ ಇನ್ನು ?
ತೂಗಿಹ ನಿದ್ರೆಯ ಬಲದಿಂ ಹೊಸಕುತ
ಧಡಬಡ ಗಡಿಬಿಡಿ ಸದ್ದಲೆ ಸಾಗುತ
ಬೆಳಗಿನ ದಿನಚರಿಗಡಿಯಾಳಾಗುತ
ಲೋಕವ ಎದುರಿಸೆ ತಯಾರು ಜೀವಿ












Click it and Unblock the Notifications