
ಪೇಜಾವರ ಶ್ರೀಗಳಿಗೆ 80 ಅಂದ್ರೆ ಯಾರೂ ನಂಬಲ್ಲ
ಮೊನ್ನೆ ಭಾನುವಾರ ನನ್ನ ಸ್ನೇಹಿತರೊಬ್ಬರ ಕತ್ರಿಗುಪ್ಪೆ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ ಕಾರ್ಯಕ್ರಮ ಇತ್ತು. ಪೊಲೀಸ್ ಬೆಂಗಾವಲು ವಾಹನದಲ್ಲಿ ಮಟಮಟ ಮಧ್ಯಾಹ್ನ ಬಂದಿಳಿದರು. ಕಾರಿನಿಂದ ಇಳಿಯುವವರೆಗೂ ಯಾರಿಗೋ ಫೋನು, ಏನೋ ಟಿಪ್ಪಣಿ ಮಾಡಿಕೊಳ್ಳುವುದು, ಬಿಜಿ ಬಿಜಿ ಬಿಜಿ. ಕಾರಿಳಿದು ಮೊದಲ ಅಂತಸ್ತಿನ ಮನೆಯ 16 ಮೆಟ್ಟಿಲು ಏರಿ ಬಂದರು. ಉಸ್ಸಪ್ಪಾ ಅನ್ನಲಿಲ್ಲ.
ಅದು ಶ್ರೀಕೃಷ್ಣನ ಪೂಜೆಯಾಗಲಿ ಅಥವಾ ಪಟ್ಟದದೇವರ ಪೂಜೆಯಾಗಲಿ ಅಥವಾ ರಾಮ ಜನ್ಮಭೂಮಿ ಕುರಿತ ಚರ್ಚೆಯಾಗಲೀ, ನಾನೇ ಫಸ್ಟ್ ಬರುತ್ತೇನೆ ಎನ್ನುವ ಶ್ರೀಗಳು, ನಾಡಿನ ಇತರ ಶ್ರೀಗಳಿಗಿಂತ ಸ್ವಲ್ಪ ಭಿನ್ನ. ಪಾದಪೂಜೆಯಿಂದ ಹಿಡಿದು ಪಾದಯಾತ್ರೆ ವರೆಗೆ ಎಲ್ಲದಕ್ಕೂ ಸೈ. ಹರಿಜನ ಕೇರಿಗೆ ಹೋಗಿ ಪಾದಯಾತ್ರೆ ನಡೆಸಿ ಅಸ್ಪೃಶ್ಯತೆ ನಿವಾರಣೆಗೆ ಹೋರಾಟ ನಡೆಸುವ ಶ್ರೀಗಳು, ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಮೂಲಕ ರೈತರಿಗಾಗುವ ಅನ್ಯಾಯದ ವಿರುದ್ದವೂ ಹೋರಾಡುತ್ತಾರೆ.
ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಶ್ರೀಗಳು ಅಯೋಧ್ಯಾ ಚಳುವಳಿಯಲ್ಲೂ ಭಾಗವಹಿಸುತ್ತಾರೆ. ಅಷ್ಟೇ ಏಕೆ ತಮ್ಮದೇ ಅಷ್ಟ ಮಠದ ಪರ್ಯಾಯ ವಿವಾದ ತಾರಕಕ್ಕೇರಿದಾಗ ಉಪವಾಸ ಸತ್ಯಾಗ್ರಹ ನಡೆಸುವ ಶ್ರೀಗಳು, ಮಡೆಸ್ನಾನದ ವಿಚಾರದಲ್ಲೂ ನಾಡಿನ ಇತರ ಸ್ವಾಮೀಜಿಗಳು ಇವರ ವಿರುದ್ದ ತಿರುಗಿ ಬಿದ್ದಾಗಲೂ ತನ್ನದೇ ದಾಟಿಯಲ್ಲಿ ಸಮರ್ಥಿಸಿ ಕೊಳ್ಳುವ ಮಹಾನ್ ವಾಗ್ಮಿ. ರಾಜಕೀಯ ನಾಯಕರುಗಳು ದಾರಿತಪ್ಪಿದಾಗ ಶ್ರೀಗಳು ಹಿತವಚನ ನೀಡಿದ ಬಹಳಷ್ಟು ಉದಾಹರಣೆಗಳಿವೆ.
ಪೇಜಾವರರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ ಸುತ್ತುತ್ತಾರೆ. ನಿತ್ಯ ನೂರಾರು, ಸಾವಿರಾರು ಮೈಲಿ ಪ್ರಯಾಣ ಮಾಡುವ ಅವರ ಉತ್ಸಾಹ ಬೆರಗಾಗಿಸುತ್ತದೆ. ಅವರ ಕಾರಿಗೆ ಒಬ್ಬರಲ್ಲ ನಾಲಕ್ಕು ಚಾಲಕರಿದ್ದಾರೆ. ಪಾದಪೂಜೆ, ಮಂತ್ರಾಕ್ಷತೆ, ಆಶೀರ್ವಚನ ನಂತರ ಶ್ರೀಗಳು ತೆರಳಿದ ಮೇಲೆ ಮನೆಯಲ್ಲಿ ಎಲ್ಲರದೂ ಒಂದೇ ಮಾತು. ಪೇಜಾವರರು ಈ ವಯಸ್ಸಿನಲ್ಲಿ ಇಷ್ಟು ಚುರುಕಾಗಿದ್ದಾರೆ, ನಾವು ಅವರನ್ನು ನೋಡಿ ಕಲಿಯಬೇಕು, ನೋಡಿ ಕಲಿಯಬೇಕು.
ಶ್ರೀಗಳೇ ಹೇಳಿದಂತೆ ಈ ವಯಸ್ಸಲ್ಲೂ ತಾವು ಇಷ್ಟು ಲವಲವಿಕೆಯಿಂದ ಇರುವುದಕ್ಕೆ ಕಾರಣ ಮತ್ತು ಪ್ರೇರಣೆ 'ತಾನು ನಂಬಿದ ದೇವರು, ಪಟ್ಟದ ದೇವರ ಪೂಜೆ'.