ಜನಪದ ಲೋಕದ ನಿಜವಾದ ಆಸ್ತಿ ಚೌಡಮ್ಮ

8ನೇ ವರ್ಷದಿಂದಲೂ ಜನಪದ ಗೀತೆಗಳ ಗಾಯನ ಕಲಿತು ಹಾಡುತ್ತಿದ್ದ ಚೌಡಮ್ಮನಿಗೆ ಅರಳು ಮರಳು ಎನ್ನುವ ವಯಸ್ಸಿನಲ್ಲಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಆದರೆ, ಜನಪದ ಸಾಹಿತ್ಯ, ಹಾಡು ಚೌಡಮ್ಮಳ ಅನಾಥಪ್ರಜ್ಞೆಯನ್ನು ಕಳೆದಿದೆ. ಚೌಡಮ್ಮಳ ಸಾಹಿತ್ಯ ಬಂಢಾರವೇ ಬದುಕಾಗಿಸಿದೆ, ಅದೇ ಬಂಡವಾಳವಾಗಿದೆ. ಇಡೀ ಬದುಕನ್ನು ಸಾರ್ಥಕಗೊಳಿಸಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಮಸಾಗರ ನಿವಾಸಿ ಹರಿಜಯ ಚೌಡಮ್ಮ ಜಾನಪದ ಅಕಾಡಮಿ ಪ್ರಶಸ್ತಿಗೆ ಆಯ್ಕೆ ಆಗುವ ಮೂಲಕ ಚಿರಪರಿಚಿತಳಾಗುತ್ತಿದ್ದಾರೆ. ಈವರೆಗೆ ಸದ್ದಿಲ್ಲದೇ ಸವೆಸಿದ ತನ್ನ ಬದುಕಿಗೆ ಹೊಸ ಕಳೆಯನ್ನು ಮುಡಿಗೇರಿಸಿಕೊಳ್ಳುತ್ತಾ ಅನೇಕರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾಳೆ. ಎಲೆಮರೆಯ ಕಾಯಿಯಂತೆ ಇದ್ದ ಚೌಡಮ್ಮನಿಗೆ ಪ್ರಶಸ್ತಿ ಬಂದಿರುವುದು ಜನರಲ್ಲೂ ಸಂತಸ ತಂದಿದೆ.
ಚೌಡಮ್ಮ ಬಾಲ್ಯದಲ್ಲಿ ಇದ್ದಾಗ ಆನೆಗುಂಡಮ್ಮ ಎನ್ನುವ ವೃದ್ಧೆ ಹಾಡುತ್ತಿದ್ದ ಜನಪದ ಸಾಹಿತ್ಯವನ್ನು ಕಲಿತು, ನಿರಂತರ ಗುನುಗುತ್ತಲೇ ತನಗೆ ಅರಿವೇ ಇಲ್ಲದಂತೆ ಕಾಳಿಂಗರಾಯನ ಪದ, ಕರಿಗೊಲ್ಲ ಕಥನ ಗೀತೆ, ಕುರುಗೋಡು ನೀಲಮ್ಮ ಕಥೆ, ಸುಲಿಹಲ್ಲಿ, ಕೆಂಚಮ್ಮ ದೇವತೆ, ಹೊನ್ನಮ್ಮನ ಕಥೆ, ಸಂಪ್ರದಾಯ ಪದಗಳು, ಸೋಬಾನೆ ಪದಗಳು, ಮದುವೆ, ಸೀಮಂತ, ತೊಟ್ಟಿಲು ಪದಗಳು, ಗೀಗೀ ಪದಗಳನ್ನು ಹಾಡುವುದನ್ನು ಕಲಿತರು.
ಈ ಕಲಿಕೆ ಚೌಡಮ್ಮ ಅವರನ್ನು ಒಂಟಿ ಮಾಡಲಿಲ್ಲ. ಆಧುನಿಕ ಜಗತ್ತಿನ ಟಿವಿ, ಸಿನಿಮಾ, ಪಾಪ್ ಗೀತೆಗಳ ನಡುವೆಯೂ ಹೊಲಗದ್ದೆಗಳಲ್ಲಿ ಸಸಿ ನೆಡುವಾಗ, ಕಳೆ ಕಿತ್ತುವಾಗ, ಋತುಮತಿ ಸಂಭ್ರಮ, ಸೋಬಾನೆ, ಗೌರಿ ಹಬ್ಬ, ಮದುವೆ ಸಂಭ್ರಮಗಳಲ್ಲಿ ತನ್ನ ಕಂಠಸಿರಿಯನ್ನು ತೋರಿದ್ದಾರೆ. ಜನಪದ ಸಾಹಿತ್ಯ ಬಂಢಾರವನ್ನು ಪ್ರಚುರಪಡಿಸಿದ್ದಾರೆ.
ಚೌಡಮ್ಮ ಹಾಡಲು ಶುರು ಮಾಡಿದರೆ ಸಂಜೆಯಾಗಿದ್ದಾಗಲೀ, ಮುಂಜಾನೆ ಸೂರ್ಯ ಬೆಳಗಾಗಿದ್ದಾಗಲೀ ಗೊತ್ತಾಗುವುದೇ ಇಲ್ಲ. ಚೌಡಮ್ಮರ ಜಾನಪದ ಕಥನ ಗೀತೆಗಳು ಖಂಡಕಾವ್ಯವಾಗಿ ಗುರುತಿಸಿಕೊಂಡಿವೆ. ಕಾರಣಕ್ಕಾಗಿಯೇ ಅಳಿಯುತ್ತಿರುವ ಈ ಸಾಹಿತ್ಯ ಹಾಗೂ ಹಾಡಿನ ಪ್ರಕಾರ ಉಳಿಯಲು ಈ ಚೌಡಮ್ಮ ದೊಡ್ಡ ಆಸ್ತಿಯಾಗಿ ಗುರುತಿಸಿಕೊಂಡಿದ್ದಾರೆ.












Click it and Unblock the Notifications