• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೀರಂ ನಾಗರಾಜ್ ಬಿಟ್ಟ ಸ್ಥಳ ತುಂಬುವವರ್ಯಾರು?

By * ಪ್ರಶಾಂತ್ ಬೀಚಿ, ತಾನ್ಜಾನಿಯ
|
ಬೇಂದ್ರೆಯವರ ಬಗ್ಗೆ ಮತ್ತು ಅವರ ಸಾಹಿತ್ಯದ ಬಗ್ಗೆ ಮಾತನಾಡಲು ಕೀರಂ ನಾಗರಾಜರವರಿಗೆ ಅದೇನು ಆನಂದವೊ? ಬೇಂದ್ರೆ ಎಂಬ ಮಾಂತ್ರಿಕನ ಬಗ್ಗೆ ತಿಳಿಯಲು ಕೀರಂರವರಂತಹ ಮಾಂತ್ರಿಕರೇ ಬೇಕಾಗಿತ್ತು. ಹಾಗಾಗಿ ಅನಾರೋಗ್ಯದ ನಡುವೆಯೂ ಈ ಕಾರ್ಯಕ್ರಮಕ್ಕೆ ಇಲ್ಲ ಎನ್ನದೆ ನಡೆಸಿಕೊಡಲು ಒಪ್ಪಿದ್ದರು. ಕೀ ರಂ ರವರಿಗೆ ಮಾತನಾಡುವುದು ಒಂದು ಶ್ರಮದ ಕ್ರಿಯೆಯಾಗಿರಲೇ ಇಲ್ಲ. ಮಾತನಾಡುತ್ತಿದ್ದರೆ ಅವರಲ್ಲಿ ಶಕ್ತಿ ಹೆಚ್ಚುತ್ತಿತ್ತು, ಕೇಳುಗರಲ್ಲಿ ಯುಕ್ತಿ ಬೆಳೆಯುತ್ತಿತ್ತು. ಭಿನ್ನ ಮನುಷ್ಯರ ಚೆಹರೆಯೂ ಭಿನ್ನವಾಗಿರುತ್ತದೆ ಎನ್ನುವುದಕ್ಕೆ ಇವರು ಹೊರತಾಗಿರಲಿಲ್ಲ. ಆದರೆ, ಅದೇ ಕೀರಂ ನಮ್ಮೆದುರಿಂದ ಕಣ್ಮರೆಯಾಗಿದ್ದಾರೆ. ಗುರು ಶಿಷ್ಯರ ಪದ್ಧತಿಯ ಕೊನೆಯ ಕೊಂಡಿ ಕಳಚಿದಂತಾಗಿದೆ.

ಕೀ ರಂ ನಾಗರಾಜ್ ಎಂದರೆ ಏನೋ ಒಂದು ತರಹದ ಆಕರ್ಷಣೆ. ಅವರ ಮಾತು, ನೇರ ನುಡಿ, ಮಾತಿನ ಮಧ್ಯೆ ತೂರುವ ಸಿಗರೇಟಿನ ಹೊಗೆ, ವಿವರಣೆ, ವಿಶ್ಲೇಷಣೆ, ಜಾನಪದ, ಪರಂಪರೆ, ಸಾಹಿತ್ಯ, ಭಾಷೆ, ಹೀಗೆ ಎಲ್ಲವೂ ಬಂದು ಹೋಗುತ್ತಿತ್ತು. ಕೀ ರಂ ಜೊತೆ ಮಾತು-ಕಥೆ ಎಂದರೆ ಅಲ್ಲಿ ಇರುತ್ತಿದ್ದುದ್ದು ಮಾತು ಮತ್ತು ಕಥೆ ಆದರೆ ಅದೆರಡೂ ಕೀ ರಂ ಅವರ ಬಾಯಿಯಿಂದ ಮಾತ್ರ, ಎದುರಿಗಿದ್ದವರು ಕೇವಲ ಕೇಳುಗರಾಗಬೇಕು. ಇದು ಅವರ ಮಾತಿನ ಮೋಡಿ. ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂದು ಆಸೆ ಹುಟ್ಟಿದ್ದು ಅವರ ಬಗ್ಗೆ ಇದ್ದ ಕುತೂಹಲದಿಂದ. ಕೆಲವು ಮನುಷ್ಯರೆ ಹಾಗೆ, ತಮ್ಮ ಪ್ರಭಾವದಿಂದ ಎಲ್ಲರಲ್ಲೂ ಕುತೂಹಲ ಹುಟ್ಟಿಸಿ ಬಿಡುತ್ತಾರೆ. ಬೇಂದ್ರೆ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ ತರಹದ ಮನುಷ್ಯರು ಎಲ್ಲರ ಹತ್ತಿರವಿದ್ದರೂ ಅವರನ್ನು ಭೇಟಿಯಾಗುವುದೇ ಒಂದು ವಿಶೇಷತೆ. ಅಂತಹ ವಿಶೇಷ ಜನರ ಗುಂಪಿಗೆ ಸೇರುವವರು ಕೀರಂ.

ಕಾಲೇಜಿನ ಕೆಲಸಕ್ಕೆ ನಿವೃತ್ತಿ ಹೊಂದಿದ್ದರೂ ಮನೆಯನ್ನೇ ಕಾಲೇಜು ಮಾಡಿಕೊಂಡು ಪಾಠ ಪ್ರವಚನಗಳನ್ನು ಕೊಡುತ್ತಿದ್ದರು. ಮನೆಯ ಮುಂದೆ ಕಾವ್ಯ ಮಂಡಲ ಎಂಬ ಫಲಕವನ್ನು ಹಾಕಿ ಮನೆಯನ್ನು ಸಾಹಿತ್ಯದ ಆಶ್ರಮ ಮಾಡಿ, ಗುರು - ಶಿಷ್ಯರ ಸಂಬಂಧ ಅವರ ಕೊನೆಯ ಉಸಿರಿನವರೆಗೂ ಇಟ್ಟುಕೊಂಡಿದ್ದರು. ಆಗಾಗ ಯೂನಿವರ್ಸಿಟಿಗೆ ಹೋಗಿ ಪ್ರವಚನಗಳನ್ನು ಕೊಟ್ಟು ಬರುತ್ತಿದ್ದರು. ತಮ್ಮ ವೃತ್ತಿಯನ್ನು ಕೇವಲ ಕೆಲಸವೆಂದು ತಿಳಿಯದ ನೇಗಿಲು ಹೊತ್ತ ರೈತನಂತೆ ಅಕ್ಷರಗಳನ್ನು ಹೊತ್ತು, ಎಲ್ಲಾ ಶಿಷ್ಯರಲ್ಲೂ ಬಿತ್ತಿದ ಮಹಾ ಮಾಂತ್ರಿಕ ಕೀ ರಂ ನಾಗರಾಜ್. ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ಪುಸ್ತಕಗಳನ್ನು ಮತು ವಿಮರ್ಶೆಗಳನ್ನು ತಪ್ಪದೆ ಓದುತ್ತಿದ್ದ ಕೀ ರಂ ಅದರ ಬಗ್ಗೆ ಎಲ್ಲರೊಂದಿಗೆ ಚರ್ಚಿಸುತ್ತಿದ್ದರು.

ನನ್ನ ಮೊದಲನೆ ಪುಸ್ತಕ ಲೇರಿಯೋಂಕ ಬಿಡುಗಡೆಯಾಗಿ ಅದನ್ನು ಅವರಿಗೆ ಕೊಟ್ಟು ಬರೋಣ ಎಂದು ನನ್ನ ಸ್ನೇಹಿತ ಪ್ರದೀಪ್ ಮಾಲ್ಗುಡಿಯೊಂದಿಗೆ ಹೋಗಿದ್ದೆ. ನಾವು ಹೋದಾಗ ಒಬ್ಬ ಪಿ ಎಚ್ ಡಿ ಮಾಡುವ ಶಿಷ್ಯೆ ಕೂತಿದ್ದಳು. ಭಾಷಾ ವಿಜ್ಞಾನದ ಬಗ್ಗೆ ಏನೋ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಳು. ಭಾಷೆ ಬಳಸುವುದರಿಂದ ಬೆಳೆಯುತ್ತದೆ, ಯಾರು ದಿನ ನಿತ್ಯ ಭಾಷೆಯನ್ನು ಬಳಸುತ್ತಾರೋ, ಸರಿಯಾದ ರೀತಿಯಲ್ಲಿ ಉಚ್ಚಾರ ಮಾಡುತ್ತಾರೋ ಅವರೆಲ್ಲಾರೂ ಭಾಷಾ ಪಂಡಿತರೆ ಎಂದು ಹೇಳುತ್ತಿದ್ದರು. ಅದನ್ನು ಕೇಳಿಸಿಕೊಂಡು ನಿಂತಿದ್ದ ನಮಗೆ ಅಲ್ಲೆ ಇದ್ದ ಬೆಂಚನ್ನು ತೋರಿಸಿ ಕುಳಿತುಕೊಳ್ಳಲು ಸೂಚಿಸಿದರು.

ಅವರು ಹೇಳಿದ್ದು...

ನೋಡಮ್ಮ ನೀನು ಸ್ವಲ್ಪ ಮುಂಚೆ ಬಂದಿದ್ದರೆ ನಮ್ಮ ಮನೆಗೆ ತರಕಾರಿ ತರುವ ಮಂಜಮ್ಮನನ್ನು ಭೇಟಿ ಮಾಡಿಸುತ್ತಿದ್ದೆ, ಪ್ರತಿ ದಿನ ಎಂಟು ಗಂಟೆಗೆ ಬರುವ ಅವಳು ಏನೇನೊ ಮಾತನಾಡಿ ಸ್ವಲ್ಪ ಕಾಫಿ ಕುಡಿದು ಹೋಗುತ್ತಾಳೆ. ಸುಮಾರು 10-15 ನಿಮಿಷದಲ್ಲಿ ಕಾಫಿ ಕುಡಿಯುವಾಗ ಮಾತ್ರ ಮಾತು ನಿಲ್ಲುತ್ತದೆ, ಉಳಿದ ಸಮಯದಲ್ಲಿ ವಟ ವಟ ಎಂದು ಮಾತನಾಡುತ್ತಾಲೆ ಇರುತ್ತಾಳೆ. ಆದರೆ ಎಲ್ಲೂ ಕೂಡ ತಪ್ಪಾಗಿ ಅಥವ ಬೇರೆ ಅರ್ಥ ಬರುವ ಪದಗಳನ್ನು ಉಪಯೋಗಿಸುವುದಿಲ್ಲ. ಅವಳ ಮಾತಿನಲ್ಲಿ ತಪ್ಪು ಕಂಡು ಹಿಡಿಯಲು ಸಾಧ್ಯವೆ ಇಲ್ಲ ಎನ್ನುವ ಹಾಗೆ ಇರುತ್ತದೆ. ಹೀಗೆ ಭಾಷೆ ಎನ್ನುವುದು ಜನಸಾಮಾನ್ಯರ ಸ್ವತ್ತು ಮತ್ತು ಅದರ ಪಾಂಡಿತ್ಯ ಬಳಸುವವರಲ್ಲಿ ಕಾಣಬಹುದು. ಸರಿ ನೀನು ಹೊರಡು, ಮತ್ತೇನಾದರೂ ಅನುಮಾನವಿದ್ದರೆ ಬರೆದು ಕೊಡು.


ನಮ್ಮನ್ನು ನೋಡಿ ಮಾತನಾಡಿಸುವ ಬದಲು ಬೇಗ ಎದ್ದು ಒಳಗೆ ಹೋದರು. ಬರುವಾಗ ಅವರ ಕೈಲಿ ಇದ್ದುದ್ದು ಒಂದು ಸಿಗರೇಟು ಪ್ಯಾಕ್. ಆ ಹುಡುಗಿ ಇದ್ದುದ್ದಕ್ಕೆ ಬಹಳ ಹೊತ್ತಿನಿಂದ ಸಿಗರೇಟು ಸೇದಿಲ್ಲ ಅನ್ನಿಸುತ್ತೆ ಹಾಗಾಗಿ ಮೊದಲು ಸಿಗರೇಟು ತರಲು ಹೋದರು ಎಂದು ಪ್ರದೀಪ ಕಿವಿಯಲ್ಲಿ ಬುಸುಗುಟ್ಟಿದ. ಅವರು ಬಂದು ಮತ್ತೆ ಅದೇ ಜಾಗದಲ್ಲಿ ಕೂತು ಸಿಗರೇಟು ಹಚ್ಚಿ ಹೊಗೆ ಬಿಟ್ಟಾಗ ಅವರ ನೆಮ್ಮದಿಯ ಉಸಿರು ಕೇಳಿಸಿತು. ಇವರ್ಯಾರು? ಎನ್ನುತ್ತಾ ಪ್ರದೀಪನನ್ನು ನೋಡಿ ನನ್ನ ಕಡೆಗೆ ಕೈ ತೋರಿಸಿದರು. ಪ್ರಶಾಂತ್ ಬೀಚಿ ಅಂತ, ನಿಮಗೆ ಹೇಳಿದ್ನಲ್ಲ ಸರ್, ಲೇರಿಯೋಂಕ ಕಾದಂಬರಿ ಬಗ್ಗೆ...

ಇನ್ನು ಹೇಳುತ್ತಿದ್ದ, ಅಷ್ಟರೊಳಗೆ..

ಓಹೋ ನಿನ್ನೆ ಜಯಂತ್ (ಕಾಯ್ಕಿಣಿ) ಫೋನ್ ಮಾಡಿ ಹೇಳಿದ್ದ, ನಿಮ್ಮ ಪುಸ್ತಕ ತಂದು ಕೊಡ್ತೀನಿ ಅಂತ, ನೀವೇ ತಂದಿದ್ದು ಒಳ್ಳೆದೆ ಆಯಿತು ಕೊಡಿ. ಆಫ್ರಿಕಾ ಲಿಟರೇಚರ್ ಇದ್ಯಲ್ಲಾ ಅದು ಬಹಳ ಆಸಕ್ತಿ ತರೋ ಅಂತದ್ದು, ನೀವು ಅನುವಾದ ಮಾಡಿದ್ದೀರಿ, ಪ್ರಜಾವಾಣಿಯಲ್ಲಿ ಕೋಡಸೆ ಅವರು ಒಳ್ಳೆಯ ವಿಮರ್ಶೆ ಬರೆದಿದ್ದಾರೆ...


ಅವರ ಮಾತು ಶುರುವಾಯಿತು. ಅನುವಾದದ ಬಗ್ಗೆ ಕೂಡ ಬಹಳ ಹೊತ್ತು ಮಾತನಾಡಿದರು. ಮಧ್ಯೆ ಮಧ್ಯೆ ನನಗೂ ಕೆಲವು ಪ್ರಶ್ನೆಗಳನ್ನು ಕೇಳುತ್ತಾ ನನ್ನನ್ನು ಅವರ ಶಿಷ್ಯನನ್ನಾಗಿ ಮಾಡಿಕೊಂಡು ಬಿಟ್ಟರು.

ಅಂತಹ ಮೇಧಾವಿ ನನ್ನನ್ನು ಮೊದಲನೆ ಬಾರಿಗೆ ಬಹಳ ಆತ್ಮೀಯತೆಯನ್ನು ತೋರಿದ್ದು ನನಗೆ ಆಕಾಶವೆ ಸಿಕ್ಕಂತಾಯಿತು. ಮಾತು ಮುಗಿಯುವ ದಾರಿಯೆ ಕಾಣಿಸುತ್ತಿರಲಿಲ್ಲ, ಮಂಟೆ ಸ್ವಾಮಿ ಎನ್ನುವ ಜಾನಪದ ಗುರುಗಳ ಬಗ್ಗೆ ಹೇಳಲು ಶುರುಮಾಡಿದರು. ಈಗಲೂ ಅವರ ಜಾತ್ರೆ ನಡೆಯುತ್ತದೆ, ಅದು ಬಹಳ ಖಾಸಗಿ ಎನ್ನುವಂತೆ ಅವರ ಶಿಷ್ಯರು ನಡೆಸಿಕೊಂಡು ಹೋಗುತ್ತಾರೆ, ಮುಂದಿನವಾರ ನಾನು ಅಲ್ಲಿಗೆ ಹೋಗುತ್ತಿದ್ದೇನೆ, ನೀವು ಬಿಡುವಿದ್ದರೆ ಬನ್ನಿ, ಅದು ಒಂದು ಸುಂದರ ಕಲ್ಪನೆ, ಎಂದು ಮಂಟೆಸ್ವಾಮಿಯ ಬಗ್ಗೆ ಮತ್ತು ಅವರ ಸಹೋದರ ಮತ್ತೊಬ್ಬ ಸ್ವಾಮಿಯ ಬಗ್ಗೆ ಬಹಳ ಹೇಳಿದರು. ಶಿಶುನಾಳ ಷರೀಫರ ಹಾಗೆ ಮಂಟೆ ಸ್ವಾಮಿಯ ಕಥೆ ಕೂಡ ಬಹಳ ಸ್ವಾರಸ್ಯಕರವಾಗಿದೆ. ಇಂತಹ ಬಹಳ ಕಥೆಗಳು ಇವತ್ತಿಗೂ ಜೀವಂತವಾಗಿದ್ದುದ್ದು ಮತ್ತು ಜನರಿಗೆ ತಿಳಿಸಲ್ಪಡುತ್ತಿದ್ದುದು ಕೀ ರಂ ರವರಿಂದ. ಅವರ ಜೊತೆಗೆ ಮಂಟೆ ಸ್ವಾಮಿ ಜಾತ್ರೆಗೆ ಹೋಗಲಾಗಲಿಲ್ಲ ಆದರೂ ಕೀ ರಂ ರೊಡನೆ ಕಳೆದ ಆ ಎರಡು ಗಂಟೆಗಳು ನನಗೆ ಮರೆಯಲಾಗದ ಸಮಯ.

ಕನ್ನಡ ಎಂಎ, ಪಿ ಹೆಚ್ ಡಿ, ಎಂಫಿಲ್ ಮಾಡುವ ವಿಧ್ಯಾರ್ಥಿಗಳಿಗೆ ಕೀರಂ ಎಂದರೆ ಎಲ್ಲಿಲ್ಲದ ಪ್ರೀತಿ, ಅವರಿಗೆ ಬೇಕಾದ ಯಾವುದೇ ವಿಷಯವಿರಲಿ, ಕೀರಂ ಹತ್ತಿರ ಹೋದರೆ ಅದಕ್ಕೆ ಪರಿಹಾರ ಇತ್ತು. ಹೊಸ ವಿದ್ಯಾರ್ಥಿಯಾಗಿರಲಿ, ಹಳೆ ವಿದ್ಯಾರ್ಥಿಯಾಗಿರಲಿ, ಯಾವುದೇ ಯೂನಿವರ್ಸಿಟಿಗೆ ಸೇರಿರಲಿ ಎಲ್ಲರನ್ನು ಹುರಿದುಂಬಿಸಿ ಹೇಳಿಕೊಡುತ್ತಿದ್ದಂತಹ ಮಹಾನ್ ಪ್ರಾಚಾರ್ಯರು. ವಿದ್ಯಾರ್ಥಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ಪಾಠ ಹೇಳಿಕೊಡುವ ಉಪನ್ಯಾಸಕರು ಈಗಿನ ಕಾಲದಲ್ಲಿ ಎಷ್ಟುಜನ ಸಿಗುತ್ತಾರೆ. ಎಂಫಿಲ್ ಮಾಡಿಸಲು ವಿದ್ಯಾರ್ಥಿಗಳಿಗೆ ಕೊಠಡಿ ಬಾಡಿಗೆಗೆ ತಗೆದುಕೊಂಡರೆ ಸುಮ್ಮನೆ ಹಣದ ಹೊರೆ ಎಂದು ತಮ್ಮ ಮನೆಯಲ್ಲಿಯೆ ಹೇಳಿಕೊಡುತ್ತಿದ್ದರು. ಕನ್ನಡ ಕಲಿಯುವ ಹೆಚ್ಚಿನ ಹುಡುಗರು ಹಣದವರಲ್ಲ, ಆದರೂ ಅವರಿಗೆ ಕನ್ನಡದ ಉನ್ನತಿ ಸಿಗಲಿ ಎಂದು ಶ್ರಮಿಸಿದ ಮಹಾನ್ ಆತ್ಮ. ಗುರು - ಶಿಷ್ಯರ ಪರಂಪರೆಯನ್ನು ಉಳಿಸಿಕೊಂಡು ಬಂದಂತಹ ಮಹರ್ಷಿ. ಮತ್ತೆ ಎಲ್ಲಿ ಇಂತಹ ಗುರುಗಳು ಸಿಗಬಹುದು. ಕನ್ನಡದಲ್ಲಿ ಹೆಚ್ಚು ಬರೆದಿಲ್ಲ ಎನ್ನುವವರಿಗೆ, ಕನ್ನಡದ ಅನೇಕ ಪುಸ್ತಕಗಳ ಹಿಂದ ಕೀ ರಂ ಇದ್ದಾರೆ ಎನ್ನುವುದು ಏಕೆ ತಿಳಿಯುವುದಿಲ್ಲ?

ಇತ್ತೀಚಿನ ದಿನದಲ್ಲಿ ಬಹಳ ಶೂನ್ಯಗಳನ್ನು ಕಾಣುತ್ತಿದ್ದೇವೆ. ಸಂಗೀತ ಲೋಕದಲ್ಲಿ ಸಿ. ಆಶ್ವಥ್ ಬಿಟ್ಟು ಹೋದ ಜಾಗ, ನಟನೆಯಲ್ಲಿ ಡಾ. ರಾಜ್ ಕುಮಾರ ಬಿಟ್ಟ ಜಾಗ, ಪತ್ರಿಕೊಧ್ಯಮದಲ್ಲಿ ಪಿ. ಲಂಕೇಶ್ ಬಿಟ್ಟ ಜಾಗ, ವಿಸ್ಮಯಕಾರರಾದ ತೇಜಸ್ವಿ ಬಿಟ್ಟ ಜಾಗ ಕನ್ನಡ ಸಾಹಿತ್ಯದಲ್ಲಿ ಕೀ ರಂ ನಾಗರಾಜ್ ಬಿಟ್ಟ ಜಾಗ, ಯಾವತ್ತಿಗೂ ಖಾಲಿಯಾಗೆ ಇರುತ್ತದೆ. ಆ ಸ್ಥಳವನ್ನು ಮತೊಬ್ಬರು ತುಂಬಿದರೆ ಅಗಲಿದ ಮಹಾತ್ಮರ ಆತ್ಮಕ್ಕೆ ಶಾಂತಿ ಸಿಕ್ಕಂತೆ ಆಗುತ್ತದೆ, ಕನ್ನಡಮ್ಮ ಹೆಮ್ಮೆಯಿಂದ ವಿಜೃಂಭಿಸುತ್ತಾಳೆ.

ಕೀ ರಂ ನಾಗರಾಜರಂತಹ ಮತ್ತೊಬ್ಬ ಉಪನ್ಯಾಸಕ ಬೇಕಾಗಿದೆ, ಅವರ ಶಿಷ್ಯರಾದವರಲ್ಲಿ ಅಥವ ಅವರ ಜೊತೆಗಾರರಲ್ಲಿ ಯಾರಾದರೂ ಅವರ ಕೆಲಸವನ್ನು ಮುಂದುವರೆಸಿದರೆ ಅವರೆ ಕಟ್ಟಿ ಬೆಳಸಿದ ಕಾವ್ಯ ಮಂಡಲಕ್ಕೆ ಮತ್ತಷ್ಟು ಮೆರಗು ಸಿಗುತ್ತದೆ. ಅನಾಥರಾದ ಲಕ್ಷಾಂತರ ಅಭಿಮಾನಿಗಳು, ಸಹಪಾಟಿಗಳು ಮತ್ತು ಶಿಷ್ಯರ ಮನದಲ್ಲಿ ಕೀ ರಂ ಇದ್ದಾರೆ ಆದರೆ ಅನಾಥವಾಗಿರುವ ಕಾವ್ಯ ಮಂಡಲ ನಡೆಸುವರ್ಯಾರು?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more