ಹಸಿರು ಬೆಳೆದು ಉಸಿರು ನೀಡಿರುವ ಡಾ. ಲಲಿತಮ್ಮ

ತಾವು ಏನೇ ಆಗಿದ್ದರೂ, ಯಾವುದೇ ಸಾಧನೆಗಳನ್ನು ಮಾಡಿದ್ದರೂ ಅದರಲ್ಲಿ ಅವರ ತಂದೆಯ ಪಾತ್ರವೇ ದೊಡ್ಡದು ಎನ್ನುತ್ತಾರೆ ಲಲಿತಮ್ಮ. ಅವರು ಹೆಣ್ಣುಮಗಳೆಂದು ಯಾವುದೇ ಭೇದಭಾವದಿಂದ ನೋಡಲಿಲ್ಲ ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಿದರು, ಲಲಿತಮ್ಮನವರು ಶಿಕ್ಷಕಿಯಾಗಿ, ವೈದ್ಯೆಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಮರ್ಥ ಕಾರ್ಯನಿರ್ವಹಿಸುವಲ್ಲಿ ತಂದೆಯವರು ಬೆಂಬಲ ನೀಡಿದ್ದಾರೆ.
ಲಲಿತಮ್ಮನವರ ಹೈಸ್ಕೂಲ್ ವಿದ್ಯಾಭ್ಯಾಸ ಹಾಸನದಲ್ಲಿಯೇ ಆಯಿತು. ಕಾಲೇಜ್ ವ್ಯಾಸಂಗ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮತ್ತು ಬಿಎ ಪದವಿಯನ್ನು ಮಾನಸಗಂಗೋತ್ರಿಯಲ್ಲಿ ಪಡೆದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಶಿಕ್ಷಕಿಯಾಗಿ 4-5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ನಂತರ ಮಣಿಪಾಲದಲ್ಲಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಿಂದ MBBS ಪದವಿಯನ್ನು ಪಡೆದು ವೈದ್ಯಕೀಯ ವೃತ್ತಿ ಸೇರಿದರು. ನಂತರ ಬೆಂಗಳೂರಿನ NIMHANSನಿಂದ ಪಿಎಚ್ ಡಿ ಪದವಿ ಗಳಿಸಿಕೊಂಡು ಕಳೆದ 25 ವರ್ಷಗಳಿಂದ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಡಾ|| ಲಲಿತಮ್ಮನವರ ಪ್ರಮುಖವಾದ ಸಾಧನೆ- ಬೆಂಗಳೂರಿನಂತಹ ಕಾಂಕ್ರೀಟ್ ನಗರದ ಮಧ್ಯಭಾಗದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ, ವೈದ್ಯಕೀಯ ಮೌಲ್ಯಗಳನ್ನುಳ್ಳ ಜೈವಿಕ ಉದ್ಯಾನವನವೊಂದನ್ನು ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿ ಇಂದಿನವರೆಗೂ ಅದರ ಪೋಷಣೆ, ಬೆಳವಣಿಗೆಗಾಗಿ ಸತತವಾಗಿ ತನು-ಮನ-ಧನಗಳನ್ನು ಅರ್ಪಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.
ಪದ್ಮನಾಭನಗರದ ಗುಡ್ಡದಂತಹ ಪ್ರದೇಶದಲ್ಲಿ 30 ವರ್ಷಗಳ ಹಿಂದೆ ಮುಳ್ಳುಗಿಡಗಳಿಂದ ತುಂಬಿಕೊಂಡಿದ್ದ ದೇವರಗುಡ್ಡವನ್ನು ತಮ್ಮ ಸ್ವಂತ ಪರಿಶ್ರಮ ಮತ್ತು ಖರ್ಚಿನಿಂದ ಎಕೋ ಉದ್ಯಾನವನ್ನಾಗಿ ಪರಿವರ್ತಿಸಿರುತ್ತಾರೆ. ಇಲ್ಲಿನ ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ಮತ್ತು ಅಲ್ಲಿ ದೇವಸ್ಥಾನ ಸಂಕೀರ್ಣವನ್ನು ನಿರ್ಮಿಸಿದ್ದಾರೆ. ದೇವರಗುಡ್ಡವನ್ನು ಶ್ರೀಗಿರಿ ಎಂದು ಮರುನಾಮಕರಣ ಮಾಡಿದ್ದಾರೆ.
ಈ ವನದಲ್ಲಿ ಧಾರ್ಮಿಕ ಚಟುವಟಿಕೆಗಳು, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಸಾರ್ವಜನಿಕರ ಆರೋಗ್ಯಧಾಮವಾಗಿ ಜೀವವೈವಿಧ್ಯ ವನ (echo park) ನಿರ್ಮಿಸಿದ್ದಾರೆ. ಸಾರ್ವಜನಿಕರಿಗೆ ಔಷಧಿ ರಹಿತ, ಶ್ರಮ ರಹಿತ, ಶುಲ್ಕ ರಹಿತ ಚಿಕಿತ್ಸೆ ದೊರಕುವ ಆರೋಗ್ಯಧಾಮವನ್ನು ಹಸಿರು ಸಿರಿಯ ನಡುವೆ ನಿರ್ಮಿಸಿ ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಈ ವನ ಮಾನವ ನಿರ್ಮಿತ ವನಕ್ಕಿಂತ ವಿನೂತನ ಮತ್ತು ವಿಭಿನ್ನವಾಗಿದೆ. ಪರಿಮಳ ಶೈಲ (aromatic theraphy) ಚಿಕಿತ್ಸೆಯನ್ನು ಸಹಜವಾಗಿ ನೀಡುವ ಈ ವನ ವಾಯು ಮಾಲಿನ್ಯವನ್ನು ಪರಿಹರಿಸಿ, ಅಧಿಕ ಆಮ್ಲಜನಕವನ್ನು ಪೂರೈಸುತ್ತದೆ. ಸುಮಾರು 150ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಔಷಧಿಯ ಸಸ್ಯಗಳು, ಮರಗಿಡಗಳನ್ನೊಳಗೊಂಡ ಈ ವನ ಇಲ್ಲಿನ ಮರಗಿಡಗಳ ಎಲೆಗಳ ತಳಭಾಗದಲ್ಲಿರುವ ಮೈಕ್ರೊ ಹೆರ್ಸ್ ಗಾಳಿಯಲ್ಲಿರುವ ವಿಷ ವಸ್ತುಗಳನ್ನು ಸೆರೆಹಿಡಿದು ವಾಯುಮಂಡಲವನ್ನು ಶುದ್ಧಗೊಳಿಸುತ್ತವೆ.
ಡಾ. ಲಲಿತಮ್ಮನವರನ್ನು ಆಗಸ್ಟ್ 1ರಂದು ಸಮಾಜ ಸೇವಾ ದಿನಾಚರಣೆಯ ದಿನ ಸಮಾಜ ಸೇವಕರ ಸಮಿತಿ ಬೆಂಗಳೂರಿನಲ್ಲಿ ಸನ್ಮಾನಿಸುತ್ತಿದೆ. ನೀವೂ ಬನ್ನಿರಿ, ಸಾಧಕರನ್ನು ಗೌರವಿಸಿರಿ.
ಇವರೇ ನಿಜವಾದ ಸಮಾಜ ಸೇವಕರು, ಬನ್ನಿ ಗೌರವಿಸೋಣ
ನಿಸ್ವಾರ್ಥಿ ಗೋಪಾಲಕ ಭರಮಣ್ಣ ಗುರಿಕಾರ












Click it and Unblock the Notifications