• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೆಮರೆಯ ಚಿತ್ರನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ

By Staff
|

ಮುಂಬೈ ಕಡಲ ತೀರದಲ್ಲಿ ಅನಾಥವಾಗಿ ಬಿದ್ದಿದ್ದ ಶತಮಾನದಷ್ಟು ಹಳೆಯ ಬಾಟಲಿಯೊಂದು ವ್ಯಕ್ತಿಯಿಂದ ವ್ಯಕ್ತಿಗೆ ದಾಟುತ್ತ, ಮಾನವನ ದುರಾಸೆ, ವಾಂಛೆ, ಪ್ರೀತಿ, ಆಶಾವಾದಿತನಗಳಿಗೆ ಸಾಕ್ಷಿಯಾಗುವ ಕಥೆಯುಳ್ಳ 'Lost and Found' ಚಲನಚಿತ್ರ ಚಿತ್ರಕಥೆಯಲ್ಲಿನ ನವಿರುತನದಿಂದ, ಅದ್ಭುತ ದಿಗ್ದರ್ಶನದಿಂದ, ಅಷ್ಟೇ ಪಕ್ವವಾದ ಛಾಯಾಗ್ರಹಣದಿಂದ ವಿಶ್ವದಾದ್ಯಂತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಈ ಚಿತ್ರವನ್ನು ಬರೆದು, ನಿರ್ದೇಶಿಸಿರುವ ಅಪ್ಪಟ ಕನ್ನಡಿಗ ಹರ್ಷವರ್ಧನ್ ಕುಲಕರ್ಣಿ ಅವರ ಪರಿಚಯ.

* ಎನ್.ಆರ್. ರಾವ್ (ಮುಂಬೈ)

ದಟ್ಸ್ ಕನ್ನಡ ಅಂಕಣಕಾರ, ಲೇಖಕ, ಕವಿ ಜೀವಿ ಕುಲಕರ್ಣಿಯವರ ಎರಡನೆಯ ಮಗ ಹರ್ಷವರ್ಧನ ಜಿ ಕುಲಕರ್ಣಿಯವರು ಕಿರುತೆರೆಯ ಚಿತ್ರಜಗದಲ್ಲಿ ಲೇಖಕ, ದಿಗ್ದರ್ಶಕ, ನಿರ್ಮಾಪಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಾರೆ. ಅವರು ಬರೆದು, ದಿಗ್ದರ್ಶಿಸಿ, ನಿರ್ಮಿಸಿದ, ನೂರು ವರ್ಷ-ಹಳೆಯ ಬಾಟಲ್‌ನ ಕತೆಯ ಸುತ್ತು ಹೆಣೆದ 'ಲಾಸ್ಟ್ ಎಂಡ್ ಫೌಂಡ್' (Lost and Found) ಎಂಬ ಕಿರುಚಿತ್ರ ಪ್ರದರ್ಶಿತಗೊಂಡಲ್ಲೆಲ್ಲ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತ ಸಾಗಿದೆ. ಇದು ಬರಿ ಒಂದು ಬಾಟಲಿಯ ಕಥೆಯಲ್ಲ, ನಮ್ಮ ಜೀವನವನ್ನೇ ಚಿತ್ರಿಸುವ, ಪುನರಪಿ ಜನನಂ ಪುನರಪಿ ಮರಣಂ ಚಕ್ರವನ್ನು ಪ್ರತಿನಿಧಿಸುವ, ಅಪೂರ್ವ ಚಿತ್ರ. ಇಲ್ಲಿ ಒಬ್ಬ ತರುಣ ಕನ್ನಡಿಗನ ಪ್ರತಿಭೆ ಹಾಗೂ ಪರಿಶ್ರಮವನ್ನು ನಾವು ಮೆಚ್ಚಬೇಕು. ಚಿತ್ರದ ಪ್ರಾರಂಭದಲ್ಲಿರುವ ಇಂಗ್ಲಿಷ್ ಪದ್ಯವನ್ನು ಅಮೆರಿಕೆಯಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ ರಾಘವೇಂದ್ರ (ಜೀವಿಯವರ ಹಿರಿಯ ಮಗ) ಬರೆದಿದ್ದಾರೆ.

ಡಿಸೆಂಬರ 2008ರಲ್ಲಿ ನಡೆದ ಶ್ರೀಲಂಕಾದ ಯುಥ್ ನ್ಯೂ ವೇವ್- ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಇದು ಶ್ರೇಷ್ಠ ಚಿತ್ರವೆಂದು ಜ್ಯೂರಿಗಳಿಂದ ಪರಿಗಣಿತವಾಯ್ತು, (ಅಡೂರ್ ರಾಧಾಕೃಷ್ಣನ್ ಜ್ಯೂರಿ ಸಮಿತಿಯ ಅಧ್ಯಕ್ಷರಾಗಿದ್ದರು). ಅಷ್ಟೇ ಅಲ್ಲ, ಫೆಸ್ಟಿವಲ್‌ನಲ್ಲಿ ಅತಿಹೆಚ್ಚು ಪ್ರೇಕ್ಷಕರು ಮೆಚ್ಚಿದ ಪಾಪ್ಯುಲರ್ ಫಿಲ್ಮ್‌ಗೆ ಇರುವ ವಿಶೇಷ ಬಹುಮಾನವನ್ನೂ ಈ ಚಿತ್ರ ಪಡೆಯಿತು. ಶ್ರೀಲಂಕಾದ ಮಂತ್ರಿ ಪವಿತ್ರ ವನ್ನಿರಚ್ಚಿ ಬಹುಮಾನವನ್ನು ವಿತರಿಸಿದರು. ಈಗ ಬೆಂಗಳೂರಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜನವರಿ 22ರಂದು ಈ ಚಿತ್ರ ಪ್ರದರ್ಶಿತವಾಗುತ್ತಿದೆ.

ಈ ಕಿರುಚಿತ್ರವು ಈ ಮೊದಲೆ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ (ಮುಂಬೈ, ನ್ಯೂಯಾರ್ಕ, ಗೋವಾ, ಕಲಕತ್ತಾ, ಲಂಡನ್..) ಪ್ರದರ್ಶಿತವಾಗಿದ್ದು ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ಪಡೆದಿದೆ. ಮುಂಬೈಯಲ್ಲಿ ನಡೆದ ಐಡಿಪಿಎ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಚಿತ್ರಕ್ಕೆ ನಾಲ್ಕು ಸ್ವರ್ಣ ಹಾಗೂ ಒಂದು ರಜತ ಪದಕಗಳು ದೊರೆತಿವೆ.

ಹರ್ಷವರ್ಧನ್ ಪರಿಚಯ : ಹರ್ಷವರ್ಧನ ಮುಂಬೈಯಲ್ಲಿ ಜನಿಸಿದರೂ (1973) ಮನೆಯಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಾತಾವರಣ. ವಿದ್ಯಾರ್ಥಿಯಾಗಿದ್ದಾಗ ಕಾರ್ನಾಡ್, ಕಂಬಾರ್, ಶ್ರೀರಂಗರ ನಾಟಕಗಳನ್ನು ಓದುತ್ತಲೇ ಬೆಳೆದರು. ಎಂ.ವಿ.ಕಾಲೇಜಿನ ಕಾಲೇಜಿನಲ್ಲಿ ವಿಜ್ಞಾನ ಆಯ್ದುಕೊಂಡಿದ್ದರು. ಪುಣೆಯ ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಮ್‌ಐಟಿ) ಸೇರಿ ಅಲ್ಲಿಂದ ಪೆಟ್ರೋಕೆಮಿಕಲ್ಸ್ ಅಭ್ಯಸಿಸಿ ಪುಣೆ ವಿಶ್ವವಿದ್ಯಾಲಯದಿಂದ ಬಿ.ಇ.ಡಿಗ್ರಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು (1995). ಕನ್ನಡ ಮಾತ್ರವಲ್ಲದೆ ಮರಾಠಿ, ಹಿಂದೀ ಹಾಗೂ ಇಂಗ್ಲಿಷ್ ನಾಟಕಗಳಿಂದಲೂ ಪ್ರಭಾವಿತರಾಗಿದ್ದರು. ಪುಣೆಯಲ್ಲಿ ಜಬ್ಬಾರ್ ಪಟೇಲರ ನಾಟಕ ಗುಂಪಿನ ಗೆಳೆಯರೊಡನೆ ಬೆರೆತು ಮರಾಠಿ, ಹಿಂದಿ, ಇಂಗ್ಲಿಷ್ ನಾಟಕಗಳನ್ನು ಪ್ರಯೋಗಿಸಿ ಅಂತರ್ ಕಾಲೇಜು ಮಟ್ಟದಲ್ಲಿ ಬಹುಮಾನ ಗಿಟ್ಟಿಸಿದರು. ಬಿ.ಇ.ಅಂತಿಮ ವರ್ಷದಲ್ಲಿದ್ದಾಗ ಇವರು ದಿಗ್ದರ್ಶಿಸಿದ ಮೂರು ಭಾಷೆಯ ನಾಟಕಗಳು ಅಂತರ್ ಕಾಲೇಜ್ ಮಟ್ಟದಲ್ಲಿ ಬಹುಮಾನ ಪಡೆದಾಗ ಹ್ಯಾಟ್-ಟ್ರಿಕ್ ಸಾಧಿಸಿದ್ದರು. ಬಿ.ಇ. ಮುಗಿಸಿದ ಮೇಲೆ ಉತ್ತಮ ನೌಕರಿಯ ಅವಕಾಶವಿದ್ದರೂ, ಅದನ್ನು ತೊರೆದು, ಟಿವಿ ಸೀರಿಯಲ್‌ಗಳಲ್ಲಿ (ಆಹಟ್)ಉಪನಿರ್ದೇಶಕರಾಗಿ ಕೆಲಸಮಾಡಿದರು. ನಂತರ ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಿ ಪಿ.ಜಿ. ಡಿಪ್ಲೊಮಾ(ಎಡಿಟಿಂಗ್) 1997ರಲ್ಲಿ ಪಡೆದರು. ಉತ್ತಮ ಎಡಿಟಿಂಗ್‌ಗಾಗಿ ವಿಶೇಷ ಬಹುಮಾನ ಕೂಡ ಪಡೆದರು. ಮಿತ್ರರೊಂದಿಗೆ ಸೇರಿ ಟೇಲರ್‌ಮೇಡ್ ಫಿಲ್ಮಸ್ (Tailormade Films) ಎಂಬ ಸಂಸ್ಥೆಯನ್ನು ಮುಂಬೈಯಲ್ಲಿ ಸ್ಥಾಪಿಸಿ ಹಲವಾರು ಆಯ್ಡ್/ಕಾರ್ಪೊರೇಟ್ ಫಿಲ್ಮಗಳನ್ನು ತಯಾರಿಸಿದರು.

ಇಲ್ಲಿಯವರೆಗೆ ಗಳಿಸಿದ ಮಹತ್ವದ ಪ್ರಶಸ್ತಿಗಳು:

* ವಾರಣಾ ಡಾಕ್ಯುಮೆಂಟರಿ ಚಿತ್ರಕ್ಕಾಗಿ ರಾಪಾ ಅವಾರ್ಡ್(2001)

* ಮಹರಾಷ್ಟ್ರ ಟೈಮ್ಸ್ ಟಿ.ವಿ.ಕಮರ್ಶಿಯಲ್ ಸ್ಕ್ರಿಪ್ಟ್‌ಗಾಗಿ ರಾಪಾ ಅವಾರ್ಡ್(2003)

* ದಿ ಚೋಜನ್ ವನ್(The Chosen One) ಟೆಲಿ ಚಿತ್ರಕ್ಕಾಗಿ ಹಿರೋ ಹೊಂಡಾ ಬೆಸ್ಟ್ ಚೈಲ್ಡ ಆರ್ಟಿಸ್ಟ್ ಅವಾರ್ಡ್(2005)

* ದಿ ಚೋಜನ್ ವನ್ ಫಿಲ್ಮಿಗಾಗಿ, ಆರರಲ್ಲಿ ನಾಲ್ಕು ಶ್ರೇಷ್ಠ ಅವಾರ್ಡ್‌ಗಳು(2006), ಶ್ರೇಷ್ಠ ಚಿತ್ರ, ಶ್ರೇಷ್ಠ ಚಿತ್ರಕಥೆ, ಶ್ರೇಷ್ಠ ದಿಗ್ದರ್ಶಕ, ಶ್ರೇಷ್ಠ ಛಾಯಾಗ್ರಹಣ.

* ಲಾಸ್ಟ್ ಎಂಡ್ ಫೌಂಡ್ (Lost and Found) ಕಿರು ಚಿತ್ರಕ್ಕಾಗಿ ಐಡಿಪಿಎದಿಂದ ನಾಲ್ಕು ಗೋಲ್ಡ್ ಹಾಗೂ ಒಂದು ಸಿಲ್ವರ್ ಮೆಡಲ್(2008).

ಸತ್ಯಜಿತ್ ರೇ ಅವರ ತರುವಾಯ ಅತ್ಯಧಿಕ ಸ್ವರ್ಣ ಪದಕಗಳನ್ನು ಗಳಿಸಿದ ಹೆಸರಾಂತ ಕನ್ನಡ ಚಿತ್ರ ದಿಗ್ದರ್ಶಕ ಕಾಸರವಳ್ಳಿಯವರು ಲಾಸ್ಟ್ ಎಂಡ್ ಫೌಂಡ್ ನೋಡಿ ಮೆಚ್ಚಿ ಬರೆದ ಪತ್ರದಲ್ಲಿಯ ಕೆಲವು ಸಾಲುಗಳು ಇಲ್ಲಿವೆ.

“…I saw LOST AND FOUND. Congratulations. The film is absolutely revetting. The collage style of narration gives the film a great strength, the bottle starts acquiring additional meaning as the film progresses. It represents our past which is both the strength and burden, it also suggests the colonial hegemony, and at the same time it is also used as a simple tool to represent different time and space. The way it enlivens the narrative shows that you have a good control of using the narrative very cinematically. Some of the compositions are absolutely fantastic. … Beside scripting I must also add that your cinematographer and music directors have contributed meaningfully to your film."

ನಾಲ್ಕು ಬಹುಮಾನಗಳಿಸಿದ ಪ್ರಥಮ ಟೆಲಿಚಿತ್ರ ದಿ ಚೋಸನ್ ವನ್ ನಲ್ಲಿ ಜೀವಿ ಕುಲಕರ್ಣಿಯವರು ಕೂಡ ಒಂದು ಪಾತ್ರ ಮಾಡಿದ್ದಾರೆ. ಲಾಸ್ಟ್ ಅಂಡ್ ಫೌಂಡ್ ಚಿತ್ರಕ್ಕಾಗಿ ದೊರೆತ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ತಂದೆಗೆ ಹರ್ಷವರ್ಧನ್ ಅರ್ಪಿಸಿದ್ದಾರೆ ಮತ್ತು ಅದನ್ನು ಅವರಿಗೇ ನೀಡಿದ್ದಾರೆ. ಆ ಬಹುಮಾನದ ಹಕ್ಕು ತಂದೆಯವರದೇ ಎಂದು ಹರ್ಷವರ್ಧನ್ ಹೆಮ್ಮೆಯಿಂದ ಹೇಳುತ್ತಾರೆ. ಬಾಲಿವುಡ್ ನ ಬೃಹತ್ ಸಾಗರದಲ್ಲಿ ಕಳೆದುಹೋಗದೆ ಹರ್ಷವರ್ಧನ್ ತಮ್ಮತನವನ್ನು ಕಾಯ್ದುಕೊಂಡಿದ್ದಾರೆ, ವಿಶ್ವದ ಚಿತ್ರಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more