‘ಹೈಕು’ ಕವಯಿತ್ರಿ ವಿಮಲಾ ಶೇಷಾದ್ರಿ

‘ಅಲ್ಲಿ ಕತ್ತಲೆ ಇಲ್ಲಿ ಬೆಳಗು ಎಲ್ಲಾ ತಲೆಕೆಳಗು
ಅಲ್ಲಿಯ ಕೆಟ್ಟದ್ದು, ಇಲ್ಲಿ ಒಳ್ಳೆಯದು
ತಲೆಯೇ ಕೆಟ್ಟಿರುವಾಗ ಬೇರಿನ
ಯೋಚನೆಯಿಂದೇನಾಯಿತು
ಹರಹರಾ ಡಾಲರೇಶ್ವರಾ.

*

ತಕಥೈ ಕುಣಿಸಿ
ನಾಲ್ಕು ಹಾಡು ಗುಣುಗುಣಿಸಿದರೆ
ಸಂಸ್ಕೃತಿಯ ಹರಿಕಾರರಾದಾರೆಯೇ?
ಕುರುಡು ಕಾಂಚಾಣದ
ತುಳಿತಕ್ಕೆ ಸಿಕ್ಕಿದವರಿಗೆ
ನಮ್ಮ ನೆಲ, ನಮ್ಮ ಜಲ,
ನಮ್ಮ ಔದಾರ್ಯ ಮನುಷ್ಯತ್ವದ
ನೆನಪಾದರೂ ಉಳಿದೀತೇ
ಹರಹರಾ ಡಾಲರೇಶ್ವರಾ.

*

ಅತ್ತ ಹೆತ್ತ ಕರುಳು ಕಿತ್ತು
ಇತ್ತ ಕರುಳ ಕುಡಿಗಳ ಭ್ರಮೆಯ
ವ್ಯೂಹದಲಿ ಸಿಕ್ಕಿಸುವ
ಅಪರಾಧಿ ಭಾವದ
ತಿಳಿಗೇಡಿಗಳನೇನೆಂಬರೋ
ಹರಹರಾ ಡಾಲರೇಶ್ವರಾ.

*

ನಮ್ಮಲ್ಲಿ ಜನ ಹೆಚ್ಚು
ಅಲ್ಲಿ ದನ ಹೆಚ್ಚು
ಯಾಂತ್ರಿಕ ಜೀವನ ನಡೆಸಿ
ಸ್ವಾರ್ಥಿಗಳು, ಕಲ್ಲು ಹೃದಯದ
ಕಟುಕು ಯಂತ್ರಗಳೋ ನಮ್ಮವರು ಇಲ್ಲಿ
ಹರಹರಾ ಡಾಲರೇಶ್ವರಾ.

*

ಹಂಚಿ ತಿನ್ನುವ ನಮ್ಮವರೆಲ್ಲಿ
ಗಿಂಜಿ ತಿನ್ನುವ ಇಲ್ಲಿನ ಎನ್ನಾರೈಗಳೆಲ್ಲಿ
ಬಾಳಿನ ಗುರಿ ಬರಿ ಐಹಿಕ ಸುಖವೇ?
ದುಡಿದು ತಿಂದು ಮಲಗುವುದೇ ಸಾರ್ಥಕತೆಯೇ
ಹರಹರಾ ಡಾಲರೇಶ್ವರಾ.

Vimala Sheshadriಈ ಪದ್ಯವನ್ನು ಬರೆದವರು ಬೆಂಗಳೂರಿನ ಚಿತ್ರಕಲಾವಿದೆ, ಸಮಾಜ ಕಾರ್ಯಕರ್ತೆ, ಕವಯಿತ್ರಿ ವಿಮಲಾ ಶೇಷಾದ್ರಿ. ಕನ್ನಡದ ಪ್ರಸಿದ್ಧ ಹಾಸ್ಯ ಬರೆಹಗಾರ ಡಾ. ಶಿವರಾಂ ಅವರ ಪುತ್ರಿ. ಅನೇಕ ಸಲ ಅಮೇರಿಕಾ ಪ್ರಯಾಣ ಮಾಡಿದ್ದಾರೆ. ಸಮಾಜ ಕಾರ್ಯದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ವಿಮಲಾ ಶೇಷಾದ್ರಿ ಇತ್ತೀಚೆಗೆ ಅನೇಕ ಹೈಕು ಕವನಗಳನ್ನು ಇಂಗ್ಲೀಷಿನಲ್ಲಿ ರಚಿಸಿ ‘ಪೊಯೆಟ್ಸ್‌ ಇಂಟರ್‌ನ್ಯಾಶನಲ್‌’ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಇವರ ‘ಹೈಕು’ ಎಂಬ ಕವನ ಸಂಗ್ರಹ ಕಳೆದ ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಕಟವಾಯಿತು. ಈ ಸಂಕಲನವನ್ನು ಸುಧಾ ಪತ್ರಿಕೆಯ ಉಪಸಂಪಾದಕರಾದ ಶರತ್‌ ಕಲ್ಕೋಡ್‌ರು ಬಿಡುಗಡೆ ಮಾಡಿದರು. ಭರ್ಜರಿ ‘ಹೈಪ್‌’ಪಡೆದ ಸಮಾರಂಭ ಯಾವ ಕವಿಗೂ ಅಭಿಮಾನ ತರುವಂತಹದು.

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಡಾ.ಎಂ.ಫಕರುದ್ದೀನರು ಹೈಕು ಪ್ರಕಾರ ಭಾರತದಲ್ಲಿ ಇತ್ತಿಚೆಗೆ ಪ್ರಸಿದ್ಧಿ ಪಡೆಯುತ್ತಿರುವುದರ ಬಗ್ಗೆ ಬರೆಯುತ್ತ ವಿಮಲಾ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ‘ಪೊಯೆಟ್ಸ್‌ ಇಂಟರ್‌ನ್ಯಾಶನಲ್‌’ ಪತ್ರಿಕೆಯ ಸಂಪಾದಕರಾದ ಫಕರುದ್ದೀನ್‌- ವಿಮಲಾ ಅವರಿಗೆ ಕನ್ನಡದಲ್ಲಿ ಬರೆಯಲು ಪ್ರೇರಣೆ ನೀಡಿದ್ದಾರೆ.

ಸರ್ವಜ್ಞನ ತ್ರಿಪದಿ, ದಿನಕರರ ಚೌಪದಿ, ಚುಟುಕು ಪದ್ಯಗಳಿಗಿಂತ ಹೈಕು ಪ್ರಕಾರ ವಿಭಿನ್ನವಾದುದು. ಹೈಕು ಜಪಾನಿ ಕಾವ್ಯದ ಒಂದು ಪ್ರಸಿದ್ಧ ಮಾದರಿ. ಇದರ ಮೇಲೆ ಝೆನ್‌ ಗುರುಗಳ ಪ್ರಭಾವವಿದೆ. ಅತ್ಯಂತ ಕಡಿಮೆ ಶಬ್ದಗಳಲ್ಲಿ ಹೆಚ್ಚು ವಿಚಾರ ತುಂಬಿ ಓದುಗ ಚಿಂತನಪರನಾಗುವಂತೆ ಮಾಡುತ್ತದೆ. ಈ ಪದ್ಯದಲ್ಲಿ 17 ಸಿಲೆಬಲ್‌(ಒಂದು ಸಲದ ಉಚ್ಚಾರಣೆಗೆ ಶಕ್ಯವಾಗುವಷ್ಟರ ಪದ ಭಾಗ) ಇರುತ್ತವೆ.

ಹೈಕುವಿನಲ್ಲು ಪ್ರತೀಕ, ಪ್ರತಿಮೆಗಳ ಬಳಕೆ ಇರುತ್ತದೆ. ಋತುಗಳು ಜನನ, ಬಾಲ್ಯ, ಮುಪ್ಪು, ಸಾವುಗಳ ಸಂಕೇತವಾಗುತ್ತವೆ. ನೀರು ಭಾವನಾ ತರಂಗ ಸೂಚಿಸಿದರೆ, ಗಾಳಿ ಅದಮ್ಯ ಚೈತನ್ಯವನ್ನು ಧ್ವನಿಸುತ್ತದೆ.

Dr. Jeevi Kulakarni, The Author‘ಪೊಯೆಟ್ಸ್‌ ಇಂಟರ್‌ನ್ಯಾಶನಲ್‌’ ಸಂಸ್ಥೆ 1995 ರಲ್ಲಿ ಭಾರತದಾದ್ಯಂತ ‘ಹೈಕು’ ಚಳವಳಿಯನ್ನೇ ಪ್ರಾರಂಭಿಸಿತು. ತನ್ನ ಮಾಸ ಪತ್ರಿಕೆಯಲ್ಲಿ ನಿಯಮಿತವಾಗಿ ಹೈಕು ಪದ್ಯಗಳನ್ನು ಪ್ರಕಟಿಸಿತು. 1997 ರಲ್ಲಿ ‘ಆಲ್‌ ಇಂಡಿಯಾ ಹೈಕು ಕಾನ್ಫರನ್ಸ್‌’ನ್ನು ಬೆಂಗಳೂರಲ್ಲಿ ನಡೆಸಿತು. ‘ದಿ ಹೈಕು ಸೊಸೈಟಿ ಆಫ್‌ ಇಂಡಿಯಾ’ ಸ್ಥಾಪಿಸಿತು. ಹೈಕು ಕಮ್ಮಟಗಳನ್ನು ಆಯೋಜಿಸಿತು.

ಕನ್ನಡದಲ್ಲಿ ಅಲ್ಲಲ್ಲಿ ಬಿಡಿಯಾದ ಹೈಕು ಕವನಗಳು ಪ್ರಕಟಗೊಂಡಿವೆ. ಆದರೆ ಪೂರ್ತಿ ಕವನ ಸಂಗ್ರಹಗಳಿಲ್ಲ ಎಂದು ಡಾ. ಫಕರುದ್ದೀನರು ವಿಮಲಾ ಅವರನ್ನು ಪ್ರಥಮ ಕನ್ನಡ ಹೈಕು ಕವಯಿತ್ರಿ ಎಂದು ಕರೆದಿದ್ದಾರೆ.

ವಿಮಲಾ ಅವರ ಹೃದ್ಗತ ಹೀಗಿದೆ: ‘ಇತ್ತೀಚೆಗೆ ಅಮೇರಿಕಾದಲ್ಲಿ ಹೈಕು ಬಹಳ ಜನಪ್ರಿಯವಾಗಿದೆ. ಆಂಗ್ಲ ಭಾಷೆಯಲ್ಲಿ ಮೂರು ಸಾಲುಗಳಲ್ಲಿ 5-7-5 ರಂತೆ ಒಟ್ಟು 17 ಸಿಲೆಬಲ್‌ ಬಳಸಿ ಈ ಕವಿತೆ ರಚಿಸಲಾಗುತ್ತಿದೆ. ಜಪಾನ್‌ ಭಾಷೆಯಲ್ಲಿ 17 ಓನ್‌ಜಿ (onji- sound syllable)ಗಳಲ್ಲಿ ಒಂದೇ ಸಾಲಿನಲ್ಲಿ ಮೇಲಿನಿಂದ ಕೆಳಗೆ ಬರೆಯಲ್ಪಟ್ಟು ಐದನೆಯ ಅಥವಾ ಹನ್ನೆರಡನೆಯ ಓನ್‌ಜಿಯಾದ ಮೇಲೆ ಕಿರಿಜಿ (kireji or cutting word)ಯಿಂದ ಬೇರ್ಪಟ್ಟಿರುತ್ತದೆ. ಇದು ಆಳವಾದ ಅರ್ಥವುಳ್ಳದ್ದು. ಅನೇಕ ಪದರ ಪದರಗಳಲ್ಲಿ ಸೂಚಿಸುವ, ಅರ್ಥೈಸಿಕೊಳ್ಳುವ ಶಕ್ತಿ ಅದಕ್ಕಿದೆ. ಸಂಕ್ಷಿಪ್ತವಾಗಿದ್ದರೂ ಅದು ಸ್ಪಷ್ಟವಾಗಿರುತ್ತದೆ. ಅದರಲ್ಲಿ ವಿವರಣೆ ಇರುವುದಿಲ್ಲ. ಅನಾವಶ್ಯಕ ಪದಗಳಿಗೆ ಅವಕಾಶವಿಲ್ಲ. ಇದರಿಂದ ಓದುಗರು ತಮ್ಮದೇ ಆದ ರೀತಿಯಲ್ಲಿ ಅನುಭವ ಹೊಂದಿ ಆನಂದ ಪಡೆಯಬಹುದು. ಪ್ರತಿ ಸಲ ಓದಿದಾಗಲೂ ಹೊಸ ಅರ್ಥಗಳು ಹೊಳೆಯುತ್ತ ಹೋಗುತ್ತವೆ. ಹೈಕುವಿನಲ್ಲಿ ಪದಗಳು ಪ್ರತಿಮಾ ರೂಪ ಪಡೆದು ಬರೆದವರನ್ನು ಮತ್ತು ಓದುಗರನ್ನು ಭಾವನಾಲೋಕಕ್ಕೆ ಕೊಂಡೊಯ್ಯುತ್ತವೆ.’ ಎನ್ನುತ್ತಾರೆ.

‘ಝೆನ್‌’ ಶಬ್ದ ಸಂಸ್ಕೃತ ಧ್ಯಾನದಿಂದ ಬಂದಿದೆ. ಚೀನಿ ಭಾಷೆಯಲ್ಲಿ ಅದು ‘ಚಾನ್‌’ ಆಗಿದ್ದು ಅದನ್ನು ಜಪಾನೀಯರು ಝೆನ್‌ ಎಂದು ಕರೆದರು. ಆತ್ಮಸಾಕ್ಷಾತ್ಕಾರದ ದಾರಿಯಲ್ಲಿ ಎಲ್ಲದರಲ್ಲಿಯೂ ಬೋಧಿಸತ್ವವನ್ನು ಕಾಣಬಯಸುತ್ತದೆ ಝೆನ್‌. ಹೈಕು ಕವಿಗಳು ಅಹಂಕಾರವನ್ನು ತೊರೆದು, ತಮ್ಮತನವನ್ನು ಬಿಟ್ಟು, ಪ್ರಕೃತಿಯಾಂದಿಗೆ ಒಂದಾಗುತ್ತಾರೆ. ಅಂತರ್‌ದೃಷ್ಟಿ ಹೊಂದುತ್ತಾರೆ. ತನ್ಮಯತೆಯಿಂದ ಅರಿವು(ಸೆಟೋರಿ) ಪಡೆಯುತ್ತಾರೆ. ಈ ಆನಂದಾನುಭವವೇ ಹೈಕುವಿನ ಆವಿರ್ಭಾವ.

ವಿಮಲಾ ಶೇಷಾದ್ರಿ ಅವರು ಅಕ್ಷರಗಳನ್ನು ಎಣಿಸಿ ಬರೆಯುತ್ತಾರೆ. ಇವರು ಮಾತ್ರಾ ಹಾಗೂ ಅಂಶಗಣಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. 5-7-5 ಒಟ್ಟು 17 ಅಕ್ಷರಗಳನ್ನು ಬಳಸುತ್ತಾರೆ. ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಬಹುದು.

‘ತುಂಟ ಮುಗಿಲ
ಹಿಂದೆ ಓಡುತ್ತಿರುವ
ತಾಯಿ ಮುಗಿಲು.’

ಇಲ್ಲಿಯ ಭಾವ ಅರ್ಥಗರ್ಭಿತವಾಗಿದೆ. ಕರುವಿನ ಹಿಂದೆ ತಾಯಿ ಆಕಳು ಬರುತ್ತದೆ. ಈ ವಾತ್ಸಲ್ಯದ ಚಿತ್ರವನ್ನು ಕವಿಯ ಮನ ಅಂಡಲೆಯುವ ಮೋಡಗಳಲ್ಲಿಯೂ ಕಾಣುತ್ತದೆ.

‘ಬಾಳಲ್ಲಿ ನಗು
ಸೌದಾಮಿನಿ ಕತ್ತಲ
ಬೆಳಗಿದಂತೆ.’

ಕತ್ತಲೆಯಲ್ಲಿ ಮಿಂಚು ತನ್ನ ಅಸ್ತಿತ್ವವನ್ನು ತೋರುವಂತೆ ಬಾಳ ಕತ್ತಲೆಯಲ್ಲಿ ನಗು ಮಿಂಚಿನಂತೆ ಕಾಣಿಸಿಕೊಳ್ಳುತ್ತದೆ. ಈ ಪ್ರತಿಮೆ ಎಷ್ಟು ಸೊಗಸಾಗಿ ಮೂಡಿದೆ. ವಿಮಲಾ ಅವರು ಅಭಿಜಾತ ಚಿತ್ರಕಾರ್ತಿಯಾಗಿರುವುದರಿಂದ ಅವರ ಕವನಗಳು ಶಬ್ದಚಿತ್ರಗಳಾಗಿಬಿಡುತ್ತವೆ.

‘ದೇಹದ ಗಾಯ
ಮಾಗಬಹುದು. ನೊಂದ
ಮನ ಮಾಗದು.’
- ಇದು ಅನುಭವಸಿದ್ಧವಾದ ಸತ್ಯ.

‘ಕಿಚ್ಚು ಆರಿಸ-
ಬಹುದು. ಹೊಟ್ಟೆಕಿಚ್ಚು
ಆರಲಾರದ್ದು.’

ಇಲ್ಲಿಯ ಕಿಚ್ಚು ಹಾಗೂ ಹೊಟ್ಟೆ ಕಿಚ್ಚು ಶಬ್ದಗಳ ಪ್ರಯೋಗ ಕನ್ನಡದಲ್ಲಿ ಮಾತ್ರ ಕಾವ್ಯದ ಉದ್ದೇಶವನ್ನು ಸಾಧಿಸುತ್ತವೆ.

‘ಗೋಡೆಯ ಕಟ್ಟಿ
ನೀ ಬೇರೆಯಾದರೆ ನೀ
ಬಂದಿಯಾಗುವೆ.’
- ಇದು ಬಹಳೇ ಮಾರ್ಮಿಕವಾಗಿದೆ.

‘ಬೇವಿನ ಬೀಜ
ಬೆಲ್ಲದ ನೀರೆರೆದರೆ
ಸಿಹಿ ಹಣ್ಣೆಲ್ಲಿ.’

- ಇದು ಅಪ್ಪಟ ಕನ್ನಡ ಭಾವವನ್ನು ಬಂಧುರವಾಗಿ ಹೆಣೆದ ಪದ್ಯ.

ವಿಮಲಾ ಅವರು ತಾವು ಇಂಗ್ಲೀಷಿನಲ್ಲಿ ಬರೆದ ಹೈಕುಗಳನ್ನು ಕನ್ನಡಕ್ಕಿಳಿಸಿದ್ದಾರೆ. ಆದರೆ ಅವನ್ನು ತುಲನೆಮಾಡಿದಾಗ ಇಂಗ್ಲೀಷ್‌ ಅಭಿವ್ಯಕ್ತಿಯ ಕೈ ಮೇಲಾಗಿರುವಂತೆ ತೋರುತ್ತದೆ.

‘ಲೋಕದ ಹಾಸ್ಯ
ಮುದ, ಸಂತೋಷ ಹಿಡಿ
ಆಂಟಿನಾದಿಂದ.’

Love and light are in
abundance, develop an
antina to catch.

‘ಸ್ವಿಚ್‌ ಎಲ್ಲಿದೆ
ಗೊತ್ತಿಲ್ಲ. ಹತ್ತಿರದಿ
ರಿಮೋಟೂ ಇಲ್ಲ.’

Switches are
somewhere
no remote with me.

‘ಜಗ ನಾಟಕ-
ರಂಗ ವಿರಮಿಸಲು
ಗ್ರೀನ್‌ರೂಮಿಲ್ಲ.’

Life is a drama
we are only actors
sans sidewings to rest

ವಿಮಲಾ ಅವರ ಹೈಕು ಪದ್ಯಗಳು ನಮಗೆ ಒಂದು ಹೊಸ ಅನುಭವ ನೀಡುತ್ತವೆ. ಝೆನ್‌ ವಿಚಾರ ತುಂಬಿದ ಒಂದು ಅವರ ಹೈಕು ಇಂತಿದೆ. ಅದನ್ನು ಅವರಿಗೆ ಕನ್ನಡಿಸುವುದು ಸಾಧ್ಯವಾಗಲಿಕ್ಕಿಲ್ಲ. ವಿಚಾರ ಬಹಳ ಗಂಭೀರವಾಗಿದೆ. ಸೃಷ್ಟಿಕರ್ತನ ಬಗ್ಗೆ ಕಟುವಾದ ಶರಾ ಈ ಸಾಲು ಬರೆಯುತ್ತಿವೆ:

Deaf, dumb
blind
Lifes script writer

ಈ ಬಗೆಯ ಇಂಗ್ಲಿಷ್‌ ಹೈಕುಗಳಿಗೆ ಸಿಲೆಬಲ್‌ಗಳ ಬಂಧನವಿಲ್ಲ.

ಮುಖಪುಟ

/ ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+