ಗ್ಲೂಕಾನ್-ಡಿ ಅಥವಾ ಒಆರ್‌ಎಸ್, ಬೇಸಿಗೆಯಲ್ಲಿ ಯಾವುದು ಕುಡಿಯಬೇಕು ಗೊತ್ತಾ ಇಲ್ಲಿದೆ ಮಾಹಿತಿ
ಏಪ್ರಿಲ್ ತಿಂಗಳ ಕೊನೆಯ ವಾರದತ್ತ ಸಾಗುತ್ತಿದ್ದಂತೆ ಬಿಸಿಲಿನ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದೆ. ಈ ತಾಪಮಾನ ಹೆಚ್ಚಾದಂತೆ ದೇಹದ ಸಹನಶೀಲತಗೆ ಒಂದು ಸವಾಲು ಎದುರಾಗಿದೆ. ಅದೇನೆಂದರೆ ಹೀಟ್ ಎಕ್ಸಾಸ್ಷನ್, ಹೀಟ್ ಸ್ಟ್ರೋಕ್ ಮುಂತಾದ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ತೀವ್ರ ಬಿಸಿಲು, ಅಧಿಕ ಬೆವರು ಮತ್ತು ಹೆಚ್ಚುತ್ತಿರುವ ತಾಪಮಾನದಿಂದ ದೇಹದಲ್ಲಿನ ನೀರು ಹಾಗೂ ಅಗತ್ಯ ಖನಿಜಾಂಶಗಳು ಕಡಿಮೆಯಾಗುತ್ತವೆ. ಇದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ವೇಳೆ ಹಲವರು ತಣ್ಣೀರು, ಜ್ಯೂಸ್ ಅಥವಾ ಎನರ್ಜಿ ಡ್ರಿಂಕ್ಸ್ ಕಡೆ ಮೊರೆಹೋಗುವುದು ಸಹಜ. ಆದರೆ ಎಲ್ಲ ಪಾನೀಯಗಳು ದೇಹದ ಅಗತ್ಯವದ ಅಂಶಗಳನ್ನು ಪೂರೈಸುವುದಿಲ್ಲ. ದೇಹಕ್ಕೆ ನೀರಿನ ಜೊತೆಗೆ ಎಲೆಕ್ಟ್ರೋಲೈಟ್‌ಗಳೂ ಆರೋಗ್ಯಕ್ಕೆ ಅತ್ಯಂತ ಮುಖ್ಯಕರವಾಗಿವೆ.
ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಹೆಚ್ಚು ಬಳಸಲಾಗುವ ಎರಡು ಪಾನೀಯಗಳು ಗ್ಲೂಕಾನ್-ಡಿ ಮತ್ತು ಒ.ಆರ್.ಎಸ್. ಇವೆರಡರ ಬಳಕೆ ಯಾವಾಗ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಉತ್ತಮ.

ಗ್ಲೂಕಾನ್-ಡಿ ಮತ್ತು ಒ.ಆರ್.ಎಸ್ ನಡುವಿನ ವ್ಯತ್ಯಾಸ
ಗ್ಲೂಕಾನ್-ಡಿ ಮತ್ತು ಒ.ಆರ್.ಎಸ್ ಎರಡನ್ನೂ ನೀರಿನಲ್ಲಿ ಬೆರೆಸಿಯೇ ಕುಡಿಯಲಾಗುತ್ತದೆ. ಆದರೆ ಇವೆರಡರ ಕಾರ್ಯವೈಖರಿಯು ಸಂಪೂರ್ಣ ವಿಭಿನ್ನ. ಒಂದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ, ಇನ್ನೊಂದು ದೇಹದ ನೀರು ಮತ್ತು ಉಪ್ಪಿನ ಸಮತೋಲನವನ್ನು ಕಾಪಾಡುತ್ತದೆ.
ಗ್ಲೂಕಾನ್-ಡಿ ಎಂದರೆ ಏನು?
ಗ್ಲೂಕಾನ್-ಡಿ ಮುಖ್ಯವಾಗಿ ಗ್ಲೂಕೋಸ್ ಅಂಶದಿಂದ ತಯಾರಾಗಿರುವ ಎನರ್ಜಿ ಡ್ರಿಂಕ್ ಪಾನೀಯವಾಗಿದೆ. ಇದನ್ನು ನೀರಿನಲ್ಲಿ ಬೆರೆಸಿ ಕುಡಿದಾಗ ದೇಹದಲ್ಲಿ ಬೇಗ ಜೀರ್ಣವಾಗಿ ತಕ್ಷಣ ಶಕ್ತಿಯನ್ನು ನೀಡುತ್ತದೆ. ಬೇಸಿಗೆ ಬಿಸಿಲಿನಿಂದ ಬೆವರು ಹೆಚ್ಚಾಗಿ ದಣಿವು ಕಾಣಿಸಿಕೊಂಡಾಗ ಇದರಿಂದ ತಕ್ಷಣದ ರಿಲೀಫ್ ಸಿಗುತ್ತದೆ ಮತ್ತು ದೇಹದ ಆಯಾಸವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಒ.ಆರ್.ಎಸ್ ಎಂದರೆ ಏನು?
ಒ.ಆರ್.ಎಸ್ (ಒರಲ್ ರಿಹೈಡ್ರೇಷನ್ ಸೊಲ್ಯೂಷನ್) ಒಂದು ವೈದ್ಯಕೀಯ ದ್ರಾವಣವಾಗಿದ್ದು, ಗ್ಲೂಕೋಸ್ ಜೊತೆಗೆ ಸೋಡಿಯಂ, ಪೊಟ್ಯಾಸಿಯಂ, ಕ್ಲೋರೈಡ್ ಮುಂತಾದ ಎಲೆಕ್ಟ್ರೋಲೈಟ್‌ಗಳನ್ನು ಒಳಗೊಂಡಿವ ಒಂದು ವೈದ್ಯಕೀಯ ಮಿಶ್ರಣವಾಗಿದೆ. ಇದು ದೇಹದಲ್ಲಿ ಕಡಿಮೆಯಾಗಿರುವ ನೀರು ಮತ್ತು ಉಪ್ಪಿನ ಪ್ರಮಾಣವನ್ನು ಸಮತೋಲನಕ್ಕೆ ತರುತ್ತದೆ.
ಅತಿಸಾರ, ವಾಂತಿ ಅಥವಾ ವಿಪರೀತ ಬೆವರಿನಿಂದ ದೇಹದಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ (Electrolytes) ಅಂಶ ಕಡಿಮೆಯಾದಾಗ (ನಿರ್ಜಲೀಕರಣ), ಅವುಗಳನ್ನು ಪುನಃ ತುಂಬಿಸಿ ದೇಹದ ಸಮತೋಲನವನ್ನು ಕಾಪಾಡುವುದು ಇದರ ಪ್ರಮುಖ ಕೆಲಸ. ಇಂತಹ ಸಂದರ್ಭಗಳಲ್ಲಿ ಒ.ಆರ್.ಎಸ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಯಾವಾಗ ಯಾವುದು ಬಳಸಬೇಕು?
ಬೇಸಿಗೆಯ ಸುಸ್ತನ್ನು ನೀಗಿಸಲು ಗ್ಲೂಕಾನ್-ಡಿ ಮತ್ತು ಒ.ಆರ್.ಎಸ್ ನಡುವಿನ ವ್ಯತ್ಯಾಸ ತಿಳಿಯುವುದು ಬಹಳ ಮುಖ್ಯ. ದೇಹಕ್ಕೆ ತಕ್ಷಣ ಶಕ್ತಿ ಬೇಕಾದಾಗ, ಉದಾಹರಣೆಗೆ ಬಿಸಿಲಿನಲ್ಲಿ ಕೆಲಸ ಮಾಡಿದ ನಂತರ ದಣಿವು ಕಂಡುಬಂದಾಗ ಗ್ಲೂಕಾನ್-ಡಿ ಬಳಸಬಹುದು. ಆದರೆ ಅತಿಸಾರ, ವಾಂತಿ ಅಥವಾ ವಿಪರೀತ ಬೆವರಿನಿಂದ ದೇಹದಲ್ಲಿ ನೀರಿನಾಂಶ ಮತ್ತು ಲವಣಾಂಶಗಳು ಕಡಿಮೆಯಾದಾಗ, ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಪುನಃ ಸ್ಥಾಪಿಸಲು ಒ.ಆರ್.ಎಸ್ ಬಳಸಲೇಬೇಕು.
ಇನ್ನು ಸರಳವಾಗಿ ಹೇಳುವುದಾದರೆ, ಗ್ಲೂಕಾನ್-ಡಿ ಕೇವಲ ಇಂಧನದಂತೆ ಕೆಲಸ ಮಾಡಿದರೆ, ಒ.ಆರ್.ಎಸ್ ದೇಹದ ಜೀವಕೋಶಗಳಿಗೆ ಅಗತ್ಯವಾದ ಉಪ್ಪು ಮತ್ತು ನೀರಿನ ಅಂಶದ ಪ್ರಮಾಣವನ್ನು ಹೆಚ್ಚು ಮಾಡುವ ಚಿಕಿತ್ಸೆಯ ಪಾನೀಯವಾಗಿದೆ.














Click it and Unblock the Notifications