ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟರ ನಿಗ್ರಹಕ್ಕೆ ಬಾಂಬ್‌ ಹಿಡಿದ ‘ದೇಶಪ್ರೇಮಿ’

By Staff
|
Google Oneindia Kannada News

Police Inspector arresting Girish Mattannanavarಬೆಂಗಳೂರು : ಶಾಸಕರ ಭವನದಲ್ಲಿ ನೆಲೆಸಿರುವ ‘ಭ್ರಷ್ಟ ರಾಜಕಾರಣಿ’ಗಳನ್ನು ಬೆದರಿಸಲು ಬಾಂಬ್‌ ಇಟ್ಟಿರುವ ಸಬ್‌ ಇನ್ಸ್‌ಪೆಕ್ಟರ್‌ ಗಿರೀಶ್‌ ಮಟ್ಟಣ್ಣನವರ್‌ ಕೃತ್ಯದ ಹಿಂದೆ ‘ದೇಶ ಪ್ರೇಮ’ದ ಲೇಪವಿದೆಯೇ ?

ಪೂರ್ವಭಾವಿ ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದ ಅಂಶಗಳನ್ನು ನಂಬುವುದಾದರೆ ಹೌದು.

ಪೊಲೀಸರು ವಶಕ್ಕೆ ತೆಗೆದುಕೊಂಡಾಗ ಆತನ ಬಳಿ ಸ್ವಾತಂತ್ರ್ಯ ಸೇನಾನಿಗಳಾದ ಭಗತ್‌ಸಿಂಗ್‌, ಸುಭಾಷ್‌ಚಂದ್ರ ಬೋಸ್‌, ಚಂದ್ರಶೇಖರ ಆಜಾದ್‌ ಮೊದಲಾದವರ ಆತ್ಮಚರಿತ್ರೆ ಪುಸ್ತಕಗಳು ದೊರೆತಿವೆ. ರಾಷ್ಟ್ರಪತಿ ಅಬ್ದುಲ್‌ ಕಲಾಮ್‌ ಅವರ ಅಣುಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನೂ ಆತ ಓದಿದ್ದಾನೆ.

ಗಸ್ತಿನಲ್ಲಿದ್ದಾಗ ಕಾರೊಂದರಲ್ಲಿ ದೊರೆತ ಆರು ಬಾಂಬ್‌ಗಳ ಬಗ್ಗೆ ಉನ್ನತ ಅಧಿಕಾರಿಗಳಿಗೆ ತಿಳಿಸದೆ ತನ್ನಲ್ಲೇ ಇಟ್ಟುಕೊಂಡಿದ್ದ . ದೇಶದ್ರೋಹಿಗಳನ್ನು ಹೆದರಿಸಲು ಆಯುಧಗಳಾಗಿ ಅವನ್ನು ಬಳಸಿಕೊಂಡ. ಆತನಿಗೆ ಶಾಸಕರ ಭವನ ಸ್ಫೋಟಿಸುವುದು ಅಥವಾ ಕೊಲೆ ಮಾಡುವುದು ಉದ್ದೇಶವಾಗಿರಲಿಲ್ಲ . ಬದಲಿಗೆ ಭ್ರಷ್ಟ ರಾಜಕಾರಣಿಗಳನ್ನು ಹೆದರಿಸಬೇಕೆಂದುಕೊಂಡಿದ್ದ. ಗಿರೀಶನಿಗೆ ಬಾಲ್ಯದಿಂದಲೂ ಭ್ರಷ್ಟಾಚಾರದ ಬಗ್ಗೆ ಕೋಪವಿತ್ತು .

ತಂದೆ ಲೋಕನಾಥ್‌ ಸಂಸ್ಥೆಯಾಂದರಲ್ಲಿ ಸಾಮಾನ್ಯ ಗುಮಾಸ್ತರು. ಅಣ್ಣ ಮಾಲತೇಶ್‌ ಸಹಾರಾ ಸಂಸ್ಥೆಯಲ್ಲಿ ಕಲಾವಿದ. ಗಿರೀಶ್‌ ಓದಿನಲ್ಲಿ ಜಾಣ. ಎಂಎಸ್ಸಿಯಲ್ಲಿ ಜೀವಶಾಸ್ತ್ರ ಅಧ್ಯಯನ ಮಾಡಿದ ಆತನ ಆಸ್ಥೆಯ ವಿಷಯ ತಳಿಶಾಸ್ತ್ರ. ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಆತ ಮೆರಿಟ್‌ಮೇಲೆ ಪಾಸಾದ. ಆಯ್ಕೆಪಟ್ಟಿಯಲ್ಲಿ ಈತನಿಗೆ 5ನೇ ಸ್ಥಾನ.

ಈತನಿಗಿಂತ ಕೆಳಗಿನ ಸ್ಥಾನ ಪಡೆದವರು ಬೆಂಗಳೂರು ಸೇರಿದಂತೆ ರಾಜ್ಯದ ಆಯಕಟ್ಟಿನ ಸ್ಥಾನಗಳಲ್ಲಿ ಎಸ್‌ಐಗಳಾಗಿದ್ದಾರೆ. ಗಿರೀಶ ಗುಲ್ಬರ್ಗಾದ ಜೇವರ್ಗಿ ತಾಲ್ಲೂಕಿನ ಎಡ್ರಾಮಿ ಪೊಲೀಸ್‌ ಠಾಣೆಗೆ ಸೇರ್ಪಡೆಯಾದ. ತರಬೇತಿ ಅವಧಿಯಲ್ಲಿರುವಾಗಲೇ ಭ್ರಷ್ಟ ಮಂತ್ರಿಗಳನ್ನು , ಅಧಿಕಾರಿಗಳನ್ನು ಈತ ಎದುರು ಹಾಕಿಕೊಂಡ. ಸರ್ಕಾರದಲ್ಲಿ ಪ್ರಭಾವಿಯಾಗಿರುವ ಅದೇ ಜಿಲ್ಲೆಯ ಸಚಿವರೊಬ್ಬರ ಬಂಟರನ್ನು ಎದುರು ಹಾಕಿಕೊಂಡ.

ಮೂರು ತಿಂಗಳ ಹಿಂದಿನ ಆ ದಿನ ಮಾತ್ರ ಆತನಿಗೆ ತೀರಾ ಬೇಸರ ಹುಟ್ಟಿಸಿತು. ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಅಪಘಾತವೊಂದು ನಡೆದಿತ್ತು . ನಾಲ್ಕೈದು ಮಂದಿ ಯಾತನೆ ಅನುಭವಿಸುತ್ತಿದ್ದರು. ಬಡವರ ಮೇಲೆ ತೀರಾ ಪ್ರೀತಿ ಹೊಂದಿರುವ ಆತ ಅಪಘಾತಕ್ಕೆ ಒಳಗಾದವರ ಸಹಾಯಕ್ಕೆ ಹೊರಡಲು ಸಿದ್ಧನಾಗಿದ್ದ. ಅಷ್ಟರಲ್ಲಿ ರಾಜ್ಯದ ಪೊಲೀಸ್‌ ಕೇಂದ್ರ ಕಚೇರಿಯಿಂದಲೇ ಕಾಣದ ಕೈಗಳ ಕೈವಾಡದಿಂದ ಆತನ ವರ್ಗಾವಣೆ ಆದೇಶ ಬಂತು.

ಆ ದಿನವೇ ಸಂಜೆ ನರೋಣಾ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಹಿರಿಯ ಅಧಿಕಾರಿಗಳ ಆದೇಶ. ಒಲ್ಲದ ಮನಸ್ಸಿನಿಂದ ಕರ್ತವ್ಯಕ್ಕೆ ಹಾಜರಾದ.

ಪೊಲೀಸ್‌ ಮೆಡಲ್‌ ಪಡೆಯಲೂ ಲಂಚ, ಅದನ್ನು ರಿಜಿಸ್ಟರ್‌ನಲ್ಲಿ ದಾಖಲಿಸಲೂ ಲಂಚ, ಪೊಲೀಸ್‌ ಠಾಣೆಗೆ ವರ್ಗವಾಗಲೂ ಲಂಚ... ಇತ್ಯಾದಿ ಗಿರೀಶ್‌ಗೆ ಬೇಸರ ತರಿಸಿತ್ತು .

ಕರ್ನಾಟಕ ಲೋಕಸೇವಾ ಆಯೋಗ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತಿತರ ಕಡೆ ಮಡೆಯುವ ಭ್ರಷ್ಟಾಚಾರ ಕಂಡು ರೋಸಿಹೋಗಿದ್ದ ಗಿರೀಶ್‌ಗೆ ಎಲ್ಲದರ ಹಿಂದೆ ಕಂಡಿದ್ದು ಭ್ರಷ್ಟ ರಾಜಕಾರಣಿಗಳೇ.

ಭ್ರಷ್ಟರನ್ನು ದಮನ ಮಾಡಲು, ನಕ್ಸಲೀಯರ ಸಹವಾಸ ಮಾಡಲೂ ಯೋಚಿಸಿದ್ದ. ಆದರೆ ನಕ್ಸಲೀಯ ನಾಯಕರ ಭೇಟಿ ಸಾಧ್ಯವಾಗಲಿಲ್ಲ .

ಇಷ್ಟು ಬೇಗ ಸಿಕ್ಕಿಹಾಕಿಕೊಳ್ಳಬಹುದೆಂದು ಗಿರೀಶ್‌ಗೆ ತಿಳಿದಿರಲಿಲ್ಲ . ರಿವಾಲ್ವರ್‌ ಶೂಟಿಂಗ್‌ನ ನಾಲ್ಕು ದಿನಗಳ ತರಬೇತಿಗೆ ಆತ ಬೆಂಗಳೂರಿಗೆ ಬಂದು ಜೂನಿಯರ್‌ ಪೊಲೀಸ್‌ ಆಫೀಸರ್ಸ್‌ ಮೆಸ್‌ನಲ್ಲಿ ಉಳಿದುಕೊಂಡಿದ್ದ . ಜತೆಗೆ ತಂದಿದ್ದ ಬಾಂಬ್‌ಗಳನ್ನು ಹೇಗೆ ಉಪಯೋಗಿಸಬೇಕೆಂದು ಆತ ಯೋಜನೆ ರೂಪಿಸಿದ. ಆದರೆ, ಆತ ಕೊಂಡಿದ್ದ ಬೈಕ್‌ ನಂಬರ್‌ ಕೈಕೊಟ್ಟಿತು. ಆತ ದೂರವಾಣಿ ಮೂಲಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ. ಆದರೆ ಪೊಲೀಸರ ತಕ್ಷಣದ ಕಾರ್ಯ ನಿರ್ವಹಣೆಯಿಂದ ಟೆಲಿಫೋನ್‌ ಬೂತ್‌ನವರು ಆತನ ಬೈಕ್‌ ನಂಬರ್‌ ಪತ್ತೆ ಹಚ್ಚಿದರು.

ತಾನು ಬಂಧನಕ್ಕೆ ಒಳಗಾದರೆ, ತನ್ನನ್ನು ನ್ಯಾಯಾಲಯಕ್ಕೆ ತಕ್ಷಣ ಒಪ್ಪಿಸಬೇಕು. ಅಲ್ಲಿ ಭ್ರಷ್ಟ ರಾಜಕಾರಣಿಗಳ ಬಗ್ಗೆ ಮಾಹಿತಿ ನೀಡುವುದಾಗಿ ಪತ್ರವನ್ನೂ ಬರೆದಿಟ್ಟಿದ್ದ .

ಮದುವೆ ಬೇಡ !

ಗಿರೀಶ್‌ ಯುವತಿಯಾಬ್ಬಳನ್ನು ಪ್ರೀತಿಸುತ್ತಿದ್ದ . ಆಕೆಯನ್ನೇ ಮದುವೆಯಾಗುವ ಆಸೆಯನ್ನೂ ಹೊಂದಿದ್ದ . ಆದರೆ ಆಕೆ ಜತೆ ಬೇರೆ ಯುವಕರು ಮಾತಾಡಿದರೆ ವಿಪರೀತ ಸಿಟ್ಟಾಗುತ್ತಿದ್ದ . ಒಂದು ವೇಳೆ ತಾನು ಮದುವೆಯಾದರೆ ವಿಪರೀತ ಸ್ವಾರ್ಥಿಯಾಗಬಹುದೆಂದು ಹೆದರಿದ ಆತ ಮದುವೆ ಆಸೆಗೆ ತಿಲಾಂಜಲಿ ನೀಡಿದ್ದ .

ದೇಶಸೇವೆಗೆ ಮದುವೆ ತೊಡಕಾಗಬಹುದು. ತನ್ನನ್ನು ನಂಬಿಕೊಂಡು ಬಂದವಳು ನಡುದಾರಿಯಲ್ಲಿ ಉಳಿಯಬಾರದೆಂಬುದೂ ಆತನ ಉದ್ದೇಶವಾಗಿತ್ತು .

ಇದು ಗಿರೀಶ್‌ ಪೊಲೀಸ್‌ ಆಗುವ ಮುನ್ನ ನಡೆದ ಘಟನೆ. ಗುಜರಾತ್‌ನಲ್ಲಿ ಭೂಕಂಪವಾದಾಗ ನೂರಾರು ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಆಗ ಹದಿನೈದು ದಿನ ಸ್ವಯಂಸೇವಾರ್ಥಿಯಾಗಿ ಹೊರಟವನು ಗಿರೀಶ್‌. ಅಲ್ಲಿ ಸರ್ಕಾರದಿಂದ ಬಂದ ಹಣವನ್ನು ಸಂತ್ರಸ್ತರಿಗೆ ನೀಡದೆ ಮಜಾ ಮಾಡುತ್ತಿದ್ದುದನ್ನು ಕಂಡ ಗಿರೀಶ್‌ ಸಿಡಿದೆದ್ದಿದ್ದ. ಕಂದಾಯ ಅಧಿಕಾರಿಗಳಂತೂ ಜನರ ನರಳಾಟದ ನಡುವೆಯೂ ಮಟನ್‌, ಚಿಕನ್‌ ತಿಂದು ಕ್ರಿಕೆಟ್‌ ಆಡುವುದನ್ನು ಕಂಡು ಕಣ್ಣೀರು ಸುರಿಸಿದ್ದ .

ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತಿತ್ತು . ಜನ ಗಣ ಮನ ಗೀತೆ ಕೇಳಿಬರುತ್ತಿದ್ದಂತೆ ಎಲ್ಲರೂ ನಿಂತು ಗೌರವ ಸೂಚಿಸಿದ್ದರು. ಆಗ ಸಭೆಯಲ್ಲಿ ಕೆಲವರು ರಾಷ್ಟ್ರಗೀತೆ ಸಮಯದಲ್ಲಿ ಮಾತಾಡುತ್ತ ನಿಂತಿದ್ದರು. ರಾಷ್ಟ್ರಗೀತೆ ಮುಗಿದ ತಕ್ಷಣ ರಾಷ್ಟ್ರಗೀತೆಗೆ ಅವಮಾನ ಮಾಡಿದವರ ಮೇಲೆ ಹರಿಹಾಯ್ದಿದ್ದವನೂ ಇದೇ ಗಿರೀಶ್‌.

(ಸ್ನೇಹಸೇತು : ವಿಜಯ ಕರ್ನಾಟಕ)

ವಾರ್ತಾ ಸಂಚಯ

ಶಾಸಕರ ಭವನದಿ ಬಾಂಬು ಬಾಂಬು ಬಾಂಬು; ಬೆಚ್ಚಿದ ನೌಕರರು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X