ಚಿತ್ರಕಲೆಯ ಉತ್ಥಾನಕ್ಕಾಗಿ ನಂಜನ್ನುಂಡ ನಂಜುಂಡರಾವ್‌

ಕರ್ನಾಟಕದ ಕಲಾದಿಗಂತದಲ್ಲಿ ಉಲ್ಕೆಯಂತೆ ಗಗನಕ್ಕೇರಿ ಕಣ್ಣು ಕೋರೈಸುವಂತೆ ಮಿಂಚಿ ಮರೆಯಾದವರು ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಮಹಾ ಕಾರ್ಯದರ್ಶಿ ಎಂ.ಎಸ್‌.ನಂಜುಂಡರಾವ್‌.

ನಾಡಿನ ಚಿತ್ರಕಲಾ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಪಥ ಪ್ರವರ್ತಕ, ಪ್ರದರ್ಶಕ, ಸುಸಂಸ್ಕೃತ, ಕಲಾವಂತ ಕುಟುಂಬದಲ್ಲಿ ಜನಿಸಿ ಬಾಲ್ಯದ ಮುಗ್ಧತೆ ಜೊತೆಗೆ ಸ್ವದೇಶಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ನಿಕಟ ಸಂಪರ್ಕಕ್ಕೆ ಬಂದ ನಂಜುಂಡರಾಯರು ಶಾಲಾ ಉಪಾಧ್ಯಾಯರಾಗಿದ್ದ ತಮ್ಮ ತಂದೆ ಎಂ.ಎಸ್‌.ದಾಸಪ್ಪನವರ ಮಾರ್ಗದರ್ಶನದ ಫಲವಾಗಿ ನಾಟಕ, ಬಯಲಾಟ, ತೊಗಲು ಗೊಂಬೆಯಾಟ ಮುಂತಾದ ಕಲಾ ಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಹಳ್ಳಿ ಹಳ್ಳಿಗಳನ್ನು ಸುತ್ತಿದರು.

Reminiscence of M.S.Nanjundaraoಮುಂದೆ ಹಿರಿಯರ ಅಪೇಕ್ಷೆಯಂತೆ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಶಾಲೆಯನ್ನು ಸೇರಿ ಹಿರಿಯ ಕಲಾ ಗುರುಗಳಿಂದ ಶಿಕ್ಷಣ ಪಡೆದು ಕಲಾವಿದನಾಗಿ ರೂಪುಗೊಂಡ ನಂಜುಂಡರಾಯರು ಅಂದಿನಿಂದ ಕಲೆಯನ್ನೇ ನಂಬಿ ಜೀವನ ನಡೆಸಿದರು.

ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ಬಂದ ಶ್ರೀಯುತರು ಸ್ವಲ್ಪ ಕಾಲ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಕೆಂಗಲ್‌ ಹನುಮಂತಯ್ಯವರ ಕಣ್ಣಿಗೆ ಬಿದ್ದರು.

ಅಖಿಲ ಭಾರತ ಪ್ರದರ್ಶನಗಳು

ತಮ್ಮ ಕಾರ್ಯದಕ್ಷತೆ, ಸಂಘಟನಾ ಸಾಮರ್ಥ್ಯಗಳಿಂದ ಅವರ ಮನ ಗೆದ್ದರು. ಅವರ ಸಲಹೆಯಂತೆ ನಾಡಿನ ಕಲಾವಿದರುಗಳಿಗೆ ವೇದಿಕೆಯಾಂದನ್ನೊದಗಿಸುವ ಉದ್ದೇಶದಿಂದ ಮೈಸೂರು ಪ್ರದೇಶ ಚಿತ್ರಕಲಾ ಪರಿಷತ್ತನ್ನು ಬೆಂಗಳೂರಿನ ಮಲ್ಲೇಶ್ವರದ ಕಟ್ಟಡದಲ್ಲಿ ಸ್ಥಾಪಿಸಿದರು.

ಪರಿಷತ್‌ ವತಿಯಿಂದ ಬೆಂಗಳೂರು ಅದುವರೆಗೆ ಕಂಡಿರದ ಅಖಿಲ ಭಾರತ ಕಲಾ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಿದರು. ರುಮಾಲೆ ಚನ್ನಬಸವಯ್ಯ, ಎಂ.ಆರ್ಯಮೂರ್ತಿ, ಸುಧಾ ವಿ. ರೆಡ್ಡಿ, ಎಸ್‌.ಎಸ್‌.ಕುಕ್ಕೆ, ಜಿ.ವೆಂಕಟಾಚಲಂ ಮುಂತಾದವರ ಸಲಹೆ- ಸಹಕಾರಗಳಿಂದ ಪರಿಷತ್ತನ್ನು ಬೆಳೆಸಿದರು. ಕರ್ನಾಟಕದ ಧೀಮಂತ ಮುಖ್ಯಮಂತ್ರಿ ಡಿ.ದೇವರಾಜ ಅರಸರ ಕಾಲದಲ್ಲಿ ಬೆಂಗಳೂರಿನ ಹೃದಯ ಭಾಗದ ಕುಮಾರ ಕೃಪಾ ರಸ್ತೆಯಲ್ಲಿ ನಿವೇಶನವೊಂದನ್ನು ಕರ್ನಾಟಕ ಸರಕಾರದಿಂದ ಪರಿಷತ್ತಿಗಾಗಿ ಪಡೆದ ನಂಜುಂಡರಾಯರು ಕಲ್ಲು ಕೊರಕಲುಗಳನ್ನು ಕಲೋದ್ಯಾನವನ್ನಾಗಿ ಪರಿವರ್ತಿಸಿದರು.

ಕಾಲ ಕಾಲಕ್ಕೆ ಪರಿಷತ್ತಿನ ಅಧ್ಯಕ್ಷರುಗಳಾಗಿದ್ದ ವೈಕುಂಠ ಬಾಳಿಗ, ಎನ್‌.ಎಂ.ಕೆ. ಸೋಗಿ, ಕೆ.ಎಸ್‌.ನಾಗರತ್ನಮ್ಮ, ಡಾ. ಜೀವರಾಜ ಆಳ್ವ ಅವರುಗಳ ನೇತೃತವ್ದಲ್ಲಿ ಪರಿಷತ್‌ ವಿಶ್ವಖ್ಯಾತಿಯ ಉತ್ತುಂಗಕ್ಕೇರಿತು. ಈಗಿನ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಪರಿಷತ್‌ ಟ್ರಸ್ಟಿನ ಅಧ್ಯಕ್ಷರಾದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಿದೆ. ಪರಿಷಚ್ಚಿನ ಕಲಾ ಸಂಕೀರ್ಣದಲ್ಲಿರುವ ರೋರಿಕ್‌ ಹಾಗೂ ಕೇಜ್ರಿ ಬಾಲ್‌ ಗ್ಯಾಲರಿಗಳು ಅತ್ಯುತ್ತಮ ಕಲಾಕೃತಿಗಳಿಂದ ತುಂಬಿವೆ.

ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಚಿತ್ರಕಲಾ ವಿದ್ಯಾಲಯದಲ್ಲಿ ದೇಶ ವಿದೇಶದ ಸಾವಿರಾರು ವಿದ್ಯಾರ್ಥಿಗಳು ಪದವಿ- ಸ್ನಾತಕೋತ್ತರ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾಲಯಕ್ಕೆ ಸದ್ಯದಲ್ಲೇ ಸ್ವಾಯತ್ತತೆ ದೊರಕಲಿದೆ.

ನನಸಾಗಬೇಕಾದ ಕನಸು

ರಾಯರ ಪ್ರಯತ್ನದ ಫಲವಾಗಿ ಬೆಂಗಳೂರಿನ ಹೊರವಲಯದಲ್ಲಿ ಸರಕಾರವು 15 ಎಕರೆ ಜಮೀನನ್ನು ಪರಿಷತ್ತಿಗೆ ನೀಡಿದೆ. ಅಲ್ಲೊಂದು ಬೃಹತ್‌ ಚಿತ್ರಕಲಾ ಸಂಕೀರ್ಣ ನಿರ್ಮಿಸುವ ಕನಸು ನನಸಾಗಬೇಕಿದೆ.

ನಾಡಿನಾದ್ಯಂತ ಸಂಚರಿಸಿ ಮೈಸೂರು ಶೈಲಿಯ ನೂರಾರು ಸಾಂಪ್ರದಾಯಿಕ ಚಿತ್ರಗಳನ್ನು ಸಾವಿರಾರು ತೊಗಲುಬೊಂಬೆಗಳನ್ನು ಸಂಗ್ರಹಿಸಿದ ನಂಜುಂಡರಾಯರು ಅವುಗಳ ಬಗ್ಗೆ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದರು. ನಂಜುಂಡರಾಯರು ಭಾರತ- ರಷ್ಯಾ ಬಾಂಧವ್ಯಕ್ಕೆ ನೀಡಿದ ಕೊಡುಗೆ ಅನನ್ಯ. ಅವರಿಗೆ ಪ್ರಿಯವಾಗಿದ್ದ ಮೈಸೂರು ಶೈಲಿಯ ಚಿತ್ರಕಲಾಕೃತಿಗಳು ಮತ್ತು ತೊಗಲು ಬೊಂಬೆಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಬೆಂಗಳೂರಿನಲ್ಲಿ ಜುಲೈ 5ರಿಂದ 3 ದಿನಗಳ ಕಾಲ ನಡೆಯಲಿದೆ.

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+