‘ಅಪ್ಪಟ ಪತ್ರಕರ್ತ’
*ಸತ್ಯವ್ರತ ಹೊಸಬೆಟ್ಟು
ವಡ್ಡರ್ಸೆ ರಘುರಾಮ ಶೆಟ್ಟಿ ತೀರಿಕೊಂಡಿದ್ದಾರೆ. ದೊರಗು ದನಿಯ, ಎತ್ತರದ ನಿಲುವಿನ, ಚೂಪು ಕಣ್ಣಿನ ಶೆಟ್ಟರು ಅಪ್ಪಟ ಪತ್ರಕರ್ತರಾಗಿದ್ದವರು. ಪತ್ರಿಕೋದ್ಯಮ ಗೊತ್ತಿದ್ದಷ್ಟು ಗಿಮಿಕ್ಕುಗಳು ಗೊತ್ತಿಲ್ಲದೆ ಇದ್ದವರು. ದುಡ್ಡಿದ್ದರೆ, ಪ್ರಾಮಾಣಿಕತೆ ಇದ್ದರೆ, ಕಷ್ಟಪಟ್ಟು ಕೆಲಸ ಮಾಡಿದರೆ ಜನ ಯಾಕೆ ಪೇಪರು ಕೊಳ್ಳುವುದಿಲ್ಲ , ನೋಡಿಯೇ ಬಿಡೋಣ ಎಂದು ಮುಗ್ಧತೆಯಿಂದ ಮಾತಾಡುತ್ತಿದ್ದ ಶೆಟ್ಟರಿಗೆ, ಪೈಗಳ ವ್ಯಾಪಾರ ತಂತ್ರಗಳ ಪರಿಚಯ ಇರಲಿಲ್ಲ. ಸಂಪಾದಕೀಯವಾಗಲೀ, ಸ್ವಂತ ಅಭಿಪ್ರಾಯವಾಗಲೀ ಇಲ್ಲದ ಪತ್ರಿಕೆಯಾಂದನ್ನು ಎದುರಿಸುವುದು ಸುಲಭ ಎಂದೇ ಅವರಂದುಕೊಂಡಿದ್ದರು. ಆದರೆ ದಕ್ಷಿಣ ಕನ್ನಡದ ಜನತೆಗೆ ಸಂಪಾದ ಕೀಯದ ಬಗ್ಗೆ ಅಂಥ ಗೌರವ ಇಲ್ಲ ಅನ್ನುವುದು ಅರಿವಾಗುವ ಹೊತ್ತಿಗೆ ‘ಮುಂಗಾರು’ ಮುಚ್ಚಿತ್ತು.
ರಾಜಕೀಯದ ಒಳಹೊರಗುಗಳನ್ನು ಅರ್ಥ ಮಾಡಿಕೊಂಡಿದ್ದ ಶೆಟ್ಟರು ದೇವರಾಜ ಅರಸು ಬಗ್ಗೆ ಅಪಾರ ಗೌರವ, ಪ್ರೀತಿ ಇಟ್ಟುಕೊಂಡವರು. ಅರಸು ಸಾಧನೆಗಳನ್ನು ಪವಾಡಗಳೆಂಬಂತೆ ನೋಡಿದವರು. ಹೀಗಾಗಿ ಅರಸು ಕಾಲದ ಸುಧಾರಣೆಗಳ ಹಿಂದಿನ ಅಪಾಯ ಅವರಿಗೆ ಅರ್ಥವಾಗಲೇ ಇಲ್ಲ. ಅದನ್ನು ಅರ್ಥ ಮಾಡಿಸಲು ಬಂದವರ ಮೇಲೆ ಶೆಟ್ಟರು ಹರಿಹಾಯುತ್ತಿದ್ದರು.
ಬೈಕಂಪಾಡಿಯ ಮುಂಗಾರು ಕಚೇರಿಯಲ್ಲಿ ಕೂರುತ್ತಿದ್ದ ವಡ್ಡರ್ಸೆ, ‘ಮುಂಗಾರು’ ಕಟ್ಟುವುದಕ್ಕೆ ಸಾಕಷ್ಟು ಶ್ರಮಿಸಿದ್ದರು. ಜನರ ಹಣದಿಂದ ಕಟ್ಟಿದ ಮೊತ್ತ ಮೊದಲ ಪತ್ರಿಕೆ ಮುಂಗಾರು ಎಂದು ಹೆಮ್ಮೆ ಪಡುತ್ತಿದ್ದ ಅವರಿಗೆ, ‘ಮುಂಗಾರು’ ನಡೆಯುತ್ತಿದ್ದುದು ಡಿ.ಕೆ. ಚೌಟ ಎಂಬ ಉದ್ಯಮಿಯ ಹಣದಿಂದ ಅನ್ನುವುದು ಕೊನೆಯವರೆಗೂ ಗೊತ್ತಾಗಲೇ ಇಲ್ಲ, ಅಥವಾ ಹಾಗೆ ನಟಿಸತೊಡಗಿದರು. ಕೊನೆಗೆ ಸಂಪಾದಕರ ಕುರ್ಚಿಯಿಂದ ವಡ್ಡರ್ಸೆ ಕೆಳಗಿಳಿಯಬೇಕಾಯಿತು. ಅಲ್ಲಿಗೆ ‘ಮುಂಗಾರು’ ಅಸ್ತಂಗತ ಬಹುತೇಕ ಖಚಿತವಾಗಿತ್ತು.
ಬೆಂಗಳೂರಿನ ಹೊಟೇಲ್ ‘ಶ್ಯಾಮ್‌ಪ್ರಕಾಶ್’ ಮತ್ತು ಪ್ರೆಸ್‌ಕ್ಲಬ್‌ಗಳಲ್ಲಿ ಶೆಟ್ಟರು ಹಗಲಿರುಳು ಕಳೆಯುತ್ತಿದ್ದರು. ಕ್ರಮೇಣ ಬರೆಯುವುದನ್ನು ನಿಲ್ಲಿಸಿ ಮಾತಿಗಿಳಿದರು. ಕೇವಲ ಆಪ್ತರಿಗಷ್ಟೇ ದೊರಕತೊಡಗಿದರು. ಜಾಫರ್‌ಷರೀಫ್‌ಗೆ ಹತ್ತಿರವಾದರು.
ಹಾಗೆ ನೋಡಿದರೆ ಜಾಫರ್ ಷರೀಫ್ ಸಾಧನೆಯ ಮೇಲೊಂದು ಹೊತ್ತಿಗೆ ಬರೆಯಲು ಆರಂಭಿಸಿದಾಗಲೇ ಪತ್ರಕರ್ತ ವಡ್ಡರ್ಸೆ ತೀರಿಕೊಂಡಾಗಿತ್ತು ಎಂದು ಗೇಲಿ ಮಾಡುವುದು ಸುಲಭ. ಆದರೆ, ಅವರ ಅನಿವಾರ್ಯತೆ ಏನಿತ್ತು ಅಂತ ಹೇಳುವುದು ಕಷ್ಟ. ಯಾಕೆಂದರೆ ಶೆಟ್ಟರು ಘನತೆ ಕಳಕೊಂಡು ಬದುಕಲಿಲ್ಲ. ಉಳಿದ ನಿವೃತ್ತ ಪತ್ರಕರ್ತರಂತೆ ಸಾರ್ವಜನಿಕವಾಗಿ ದೈನೇಸಿ ಸ್ಥಿತಿಗೆ ಇಳಿಯಲಿಲ್ಲ. ಮಾತು ಮತ್ತು ಬರಹದಲ್ಲಿ ತಮ್ಮ ಮೂಲಸತ್ವವನ್ನು ಕಳೆದುಕೊಳ್ಳಲಿಲ್ಲ . ಸಾಧಕನ ಬದುಕು ಒಂದೇ ಅಪವಾದ !
ವಡ್ಡರ್ಸೆಯವರ ಶಿಷ್ಯಂದಿರ ಪೈಕಿ ಅನೇಕರು ಪತ್ರಿಕೋದ್ಯಮದಲ್ಲೇ ಇದ್ದಾರೆ. ಒಂದಿಬ್ಬರು ರಾಜಕೀಯದಲ್ಲಿದ್ದಾರೆ. ಆದರೆ ಯಾರೂ ಶೆಟ್ಟರ ಶಿಷ್ಯರೆಂದು ಹೇಳಿಕೊಂಡು ಓಡಾಡಲಿಲ್ಲ. ಅದನ್ನು ಶೆಟ್ಟರು ಬಯಸಿರಲೂ ಇಲ್ಲ, ನಿರೀಕ್ಷಿಸಿರಲೂ ಇಲ್ಲ. ಪತ್ರಿಕೋದ್ಯಮವೆಂಬುದು ಗುರುವಿಲ್ಲದ ಶಿಷ್ಯತ್ವವಿಲ್ಲದ ವಿದ್ಯೆ ಎಂದು ಎಲ್ಲ ಶಿಷ್ಯಂದಿರೂ ನಂಬಿರೋದರಿಂದಲೇ, ವಡ್ಡರ್ಸೆ ಯವರಿಗೆ ಗುರುತ್ವಾಕರ್ಷಣಾ ಶಕ್ತಿ ದೊರೆಕೊಳ್ಳಲಿಲ್ಲ !
ಅವರ ಅಷ್ಟು ರೋಚಕವಲ್ಲದ, ಅಷ್ಟೇ ಸಾಮಾಜಿಕವಾದ ಬದುಕಿನ ಬಗ್ಗೆ ಪೂರ್ವಾಗ್ರಹವಿಲ್ಲದೆ ಬರೆಯುವವರು ಸಿಗುವುದು ಕಷ್ಟ. ಬಹುಶಃ ಈಗ ಪ್ರಜಾವಾಣಿಯಲ್ಲಿರುವ ದಿನೇಶ್ ಅಮೀನ್ ಮಟ್ಟು ಬರೆಯಬಹುದೇನೋ ?
ಆದರೆ ಈಗ ಅಮೀನರ ಆದ್ಯತೆಗಳು ಬದಲಾಗಿರಬಹುದು !
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications