ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಾಗ್ಯ ಸೋದರಿಯ ನಿರಾಡಂಬರ ಮದುವೆ

By Staff
|
Google Oneindia Kannada News

(ಇನ್ಫೋ ವಿಶೇಷ)

ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ. ಆದರೆ, ಅವುಗಳು ನಡೆಯುವುದು ಮಾತ್ರ ಭೂಮಿಯಲ್ಲಿ . ಮುರಿದು ಬೀಳುವುದೂ ಇಲ್ಲೇ. ಸ್ವರ್ಗದಲ್ಲಿ ನಿಶ್ಚಯವಾಗುವುದರಿಂದಲೇ ಇರಬೇಕು, ಮದುವೆಗಳು ಸಾಮಾನ್ಯವಾಗಿ ಅದ್ದೂರಿತನ ಹೊಂದಿರುತ್ತವೆ. ಅಲ್ಲೆಲ್ಲಾ ಸ್ವರ್ಗವನ್ನು ಭೂಮಿಯಲ್ಲಿ ತಂದಿರಿಸುವ ಪ್ರಯತ್ನಗಳು.

ಅದ್ದೂರಿ ಇರದ ಮದುವೆಗಳೂ ಅಲ್ಲಿಲ್ಲೊಂದು ಕಾಣುತ್ತವಾದರೂ, ಅಲ್ಲೆಲ್ಲಾ ಯಾವುದೋ ಆದರ್ಶದ ಭಾರವಿರುತ್ತದೆ. ಹಾಗಾಗಿ ಅದು ದಕ್ಕುವುದು ಕೆಲವರಿಗೆ ಮಾತ್ರ. ಮಿಗಿಲಾಗಿ ಆ ಮದುವೆ ಯಾವುದೋ ಅಹಂನ ಲೇಪವನ್ನೂ ಹೊಂದಿರುತ್ತೆ . ಇಂಥ ಯಾವ ವಿಕಾರವೂ ಭಾರವೂ ಇರದ ಮದುವೆ ಭಾನುವಾರ ಬೆಂಗಳೂರಿನಲ್ಲಿ ನಡೆಯಿತು. ಅರ್ಥಾತ್‌ ಅಲ್ಲಿ ನಡೆದದ್ದು ಮನಸ್ಸುಗಳ ಮದುವೆ.

ವಧುವಿನ ಹೆಸರು ಹರಿಣಿ. 21 ರ ಯುವತಿ. ಬ್ಯೂಟಿಷಿಸಿಯನ್‌ ಕೋರ್ಸ್‌ ಕಲಿತಿದ್ದಾಳೆ. ಉಳಿದಂತೆ ವಿದ್ಯಾಭ್ಯಾಸ 9 ಕ್ಕೇ ನಿಂತಿದೆ. ಊರು ಬೆಂಗಳೂರು ಅಂತಲೇ ಇಟ್ಟು ಕೊಳ್ಳಬಹುದು. ವರನ ಹೆಸರು ರಾಜು. ಊರು ದಾವಣಗೆರೆ, ಇರುವುದು ಬೆಂಗಳೂರಿನಲ್ಲೇ. ಪಿಯುಸಿ ಕಲಿತು ಸದ್ಯಕ್ಕೆ ರೇಷ್ಮೆ ಗೂಡಿನಿಂದ ಹಾರ ತಯಾರಿಸುವ ವೃತ್ತಿಯಲ್ಲಿದ್ದಾರೆ. ಇವೆಲ್ಲಾ ವಧೂ ವರರ ಸಾಮಾನ್ಯ ವಿವರಗಳು. ಇಬ್ಬರೂ ಸ್ವಾವಲಂಬಿಗಳು. ಮತ್ತೂ ಸಾಮ್ಯತೆಯ ಸಂಗತಿಯೆಂದರೆ ಇಬ್ಬರೂ ಅನಾಥರು. ಇದು ವಿಷಾದದ ಸಂಗಾತಿಯಾದರೂ, ಈ ಸ್ವಾಮ್ಯವೇ ಹರಿಣಿ- ರಾಜು ಬಾಳ ಬಂಧನಕ್ಕೆ ಕಾರಣವಾದದ್ದು ವಿಶೇಷ.

ಬೆಂಕಿಯಲ್ಲಿ ಅರಳಿದ ಹೂವು : ಒಡಹುಟ್ಟಿದವರು, ಹೆತ್ತವರು ಯಾರ ಮಮತೆಯನ್ನೂ ಅನುಭವಿಸಿದೆ ಹಸುಗೂಸಾಗಿದ್ದಲೇ ಅಬಲಾಶ್ರಮದ ಹೊಸಿತಿಲು ಮೆಟ್ಟಿದ ಹರಿಣಿ, ಒಂದೆರಡೇ ವರ್ಷಗಳ ಕೆಳಗೆ ಇಷ್ಟು ಸುಲಭವಾಗಿ ತನ್ನ ಮದುವೆಯಾಗುತ್ತದೆಂದು ಕನಸು ಕಾಣುವುದು ದುಸ್ತರವಾಗಿತ್ತು . ಅಬಲಾಶ್ರಮದಲ್ಲಿ ಬದುಕು ಕಂಡ ಎಲ್ಲ ಹೆಣ್ಣುಗಳೂ ಕಂಕಣ ಭಾಗ್ಯದ ಅದೃಷ್ಟ ಕಾಣುವುದು ಸುಲಭವಲ್ಲ . ಈ ಹಿನ್ನೆಲೆಯಲ್ಲಿ ಹರಿಣಿ ಭಾಗ್ಯವಂತೆ.

ಅನಾಥೆ ಅನ್ನುವುದು ಗೊತ್ತಿದ್ದರೂ ಒಂದಲ್ಲಾ ಒಂದು ದಿನ ನನ್ನ ಪುಟ್ಟ ಸಂಸಾರದ ಕನಸು ನನಸಾಗುತ್ತದೆಂದು ಬಲವಾಗಿ ನಂಬಿದ್ದೆ . ಅದೀಗ ನನಸಾಗಿದೆ. ನಾಲ್ಕು ಗೋಡೆಗಳ ಬದುಕು ಸಾಕಾಗಿತ್ತು . ಸಂಗಾತಿ ಸಿಕ್ಕಿದ್ದಾರೆ ಎಂದು ಬೀಗುವ ಹರಿಣಿಯ ಕಣ್ಣಲ್ಲೀಗ ಹೊಸ ಹೊಳಹುಗಳು.

ಆಶ್ರಮದ ಅಂಗಳದಲ್ಲೇ ಮದುವೆ ನಡೆಯಿತು, ಆರ್ಯ ಸಮಾಜದ ಪದ್ಧತಿಯ ಪ್ರಕಾರ. ಆಶ್ರಮದ ಸದಸ್ಯರು, ಸಹೃದಯರು ನೂತನ ದಂಪತಿಗಳನ್ನು ಹರಸಿದರು. ಅಬ್ಬರ, ಆದರ್ಶ ಯಾವುದೇ ಸೋಗಿಲ್ಲದ ಅಲ್ಲಿದ್ದುದು ಸಮಾನಸ್ಕಂದರ ಅವ್ಯಾಜ ಪ್ರೀತಿ. ಜೊತೆಗೆ ಸಿಹಿಯೂಟ. ದಂಪತಿಗಳ ಹೊಸ ಸಂಸಾರಕ್ಕೆ ಅಗತ್ಯವಾದ ವಸ್ತುಗಳನ್ನು ಅಬಲಾಶ್ರಮ ಕೊಡುಗೆ ನೀಡಿದೆ.

ನಾ ನಿನಗೆ ನೀನೆನಗೆ ಜೇನಾಗುವಾ : ಅನಾಥ ಬದುಕು ಎಷ್ಟು ಕ್ರೂರ ಅನ್ನೋದು ನನಗೆ ಗೊತ್ತು . ಅದಕ್ಕಾಗೆ ಅನಾಥ ಹುಡುಗಿಯಾಬ್ಬಳನ್ನು ಮದುವೆಯಾಗಿ ಎರಡು ಬದುಕುಗಳ ತಬ್ಬಲಿತನವನ್ನು ಕೊನೆಗಾಣಿಸಲು ಯೋಚಿಸಿದ್ದೆ ಎಂದು ರಾಜು ಮನಸ್ಸು ಬಿಚ್ಚಿಕೊಳ್ಳುತ್ತಾರೆ. ರಾಜು ಅಂತಹವರು ಹೆಚ್ಚಲಿ.

ಪ್ರತಿ ವರ್ಷವೂ ಒಬ್ಬೊಬ್ಬ ಹುಡುಗಿಗೆ ಮದುವೆ ಮಾಡುವ ಉದ್ದೇಶವನ್ನು ಅಬಲಾಶ್ರಮ ಹೊಂದಿದೆ. ಮದುವೆ ಆದವರು ಆನಂತರವೂ ಅಶ್ರಮಕ್ಕೆ ಬರುತ್ತಾರೆ. ಅವರಿಗೆಲ್ಲಾ ಆಶ್ರಮ ತವರು ಎಂದು ಅಬಲಾಶ್ರಮದ ಪದಾಧಿಕಾರಿಗಳು ಹೇಳುತ್ತಾರೆ. ಸದ್ಯಕ್ಕೆ ಹರಿಣಿ ಹೊಸ ಬಾಳಿನ ಖುಷಿಯಲ್ಲಿದ್ದಾಳೆ. ಆದರೆ ಅಬಲಾಶ್ರಮದಲ್ಲಿ ಹರಿಣಿಯಂಥವರ ಸಂಖ್ಯೆ ಸಾಕಷ್ಟಿದೆ. ಅವರಲ್ಲೂ ಕನಸುಗಳಿವೆ.

ಅಬಲಾಶ್ರಮವನ್ನು ಸಂಪರ್ಕಿಸ ಬೇಕಾದಲ್ಲಿ - ಅಬಲಾಶ್ರಮ, ಡಾ. ಡಿವಿಜಿ ರಸ್ತೆ , ಬಸವನಗುಡಿ, ಬೆಂಗಳೂರು- 4, ದೂರವಾಣಿ : 6678694, ಇ ಮೇಲ್‌ : [email protected] ಸಂಪರ್ಕಿಸಬಹುದು. ನಿಮಗೆ ದಾರಿ ಸಿಕ್ಕಲಿ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X