ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಂತ ಜತೆಗಿರುವನು ಚಂದಿರ : ಗಮನಿಸಿದಿರಾ ಮೇ ಫ್ಲವರ್‌ ಹೂವಿನ ಕೇಸರ

By Staff
|
Google Oneindia Kannada News

*ಸತ್ಯವ್ರತ ಹೊಸಬೆಟ್ಟು

ನಮ್ಮ ಯುವ ಬರಹಗಾರರಾದ ಜಯಂತ ಕಾಯ್ಕಿಣಿಯವರು ಇಂದು ನಮ್ಮೊಂದಿಗಿದ್ದಾರೆ.

1982ರಲ್ಲಿ ಮೊದಲ ಕಥಾ ಸಂಕಲನ ‘ತೆರೆದಷ್ಟೇ ಬಾಗಿಲು’, ‘ಅದೇ ವರ್ಷ’ ಮತ್ತೊಂದು ಸಂಕಲನ ‘ಗಾಳ’, 1989ರಲ್ಲಿ ‘ದಗಡೂ ಪರಬನ ಅಶ್ವಮೇಧ’, 1996ರಲ್ಲಿ ‘ಅಮೃತ ಬಳ್ಳಿ ಕಷಾಯ’, ಕವನಗಳ ಮಾತಿಗೆ ಬಂದರೆ, ಇವೆಲ್ಲಕ್ಕೂ ಮುಂಚೆ 1974ರಲ್ಲೇ ‘ರಂಗದಿಂದೊಂದಷ್ಟು ದೂರ’ ಎಂಬ ಕವಿತೆಗಳ ಸಂಕಲನ, 82 ರಲ್ಲಿ ‘ಕೋಟಿತೀರ್ಥ’, 87ರಲ್ಲಿ ‘ಶ್ರಾವಣ ಮಧ್ಯಾಹ್ನ’, 97ರಲ್ಲಿ ‘ನೀಲಿ ಮಳೆ’...

ಹೀಗಿದ್ದರೂ ನಮ್ಮೆಲ್ಲಾ ವಿಮರ್ಶಕರಿಗೆ, ಕಾರ್ಯಕ್ರಮ ನಿರೂಪಕರಿಗೆ ಕಾಯ್ಕಿಣಿ ಯುವ ಬರಹಗಾರ. ರವಿಬೆಳಗೆರೆಯಿಂದ ಅಣ್ಣ ಅಂತ ಕರೆಸಿಕೊಂಡರೂ ಸಾಹಿತ್ಯ ಸರಸ್ವತಿಗೆ ತುಂಟಾಟದ ತಮ್ಮ.

ಜಯಂತ ಕಾಯ್ಕಿಣಿ ಯಾವುದೇ ಚಳವಳಿಯ ವಕ್ತಾರರಾಗದೇ ಬರೆದವರು. ‘ಸೇವಂತಿ ಪ್ರಸಂಗ’ದಂತ ನಾಟಕ, ಇದೀಗ ಹೊರಬಂದಿರುವ ‘ಜತೆಗಿರುವನು ಚಂದಿರ’ ಎಂಬ ಮತ್ತೊಂದು ನಾಟಕ.... ಹೀಗೆ ತನಗನಿಸಿದ್ದನ್ನು ಬರೆದವರು. ತಮ್ಮ ಅಂಕಣ ಬರಹಗಳಲ್ಲಿ ‘ಬೊಗಸೆಯಲ್ಲಿ ಮಳೆ’(ಹಾಯ್‌ ಬೆಂಗಳೂರು), ‘ಶಬ್ದತೀರ’(ಭಾವನಾ), ಜಯಂತ್‌ ಯಾರೂ ಕಾಣದ ವಿಶಿಷ್ಟ ಭಾವಲೋಕದ ಪದರಗಳನ್ನು ಸ್ಪರ್ಶಿಸಿದರು. ನಾವೆಲ್ಲ ಕಂಡೂ ಕಾಣದಂತಿರುವ ಮೇ ಫ್ಲವರ್‌ ಹೂವಿನ ಕೇಸರ, ಮರಗಳ ಜೊತೆ ಮಾತಾಡುವ ನೇಸರ, ಅನಾಥ ಲಿಫ್ಟಿನೊಳಗೆ ಮೊಣಕಾಲೂರಿ ಕೂತ ಹೆಣ್ಣು ಬೇಸರ- ಹೀಗೆ ಮುದಗೊಳಿಸುವ ಸಂಗತಿಗಳ ಬಗ್ಗೆ ಬರೆದೇ ಬರೆದರು.

ವ್ಯಾನು ದೂರವಾಗುತ್ತಿದ್ದಂತೆ ಉಸಿರು ಬಿಗಿಹಿಡಿದು ನಿಂತಿದ್ದ ಗಾಳಿ ಮರಗಳ ನಡುವಿನಿಂದ ಗಾಳಿಯಾಂದು ಮೂವರನ್ನು ಸಂತೈಸುವಂತೆ ಸುಯ್ಯತೊಡಗಿತು.

ಹೆಣ್ಣು ಮಕ್ಕಳು ವಿಗ್ರಹಗಳಂತೆ ಕಾಣುತ್ತಿದ್ದರು. ಅವರ ಕಣ್ಣುಗಳು ಎವೆಯಿಕ್ಕುತ್ತಲೇ ಇರಲಿಲ್ಲ. ಹೀಗೆ ಕೆಲವೊಂದು ಕ್ಷಣಗಳನ್ನು ಜಯಂತ್‌ ಶಬ್ದ ಚಿತ್ರಗಳಲ್ಲಿ ಕೊರೆದಿಡಬಲ್ಲರು. ನವ್ಯದ ಸಂದರ್ಭದಲ್ಲಿ ತೀರಾ ಕ್ಲೀಷೆ ಎನ್ನಿಸಿದ ಒಂದು ಸನ್ನಿವೇಶವನ್ನು ಅದರ ಎಲ್ಲಾ ವಿವರಗಳೊಂದಿಗೆ ಕಟ್ಟಿಕೊಡುವ ಚಿತ್ರಕ ಶಕ್ತಿ ಇವತ್ತಿಗೂ ಮಾಸದೇ ಉಳಿದಿರುವುದು ಕಾಯ್ಕಿಣಿ ಬರಹಗಳಲ್ಲಿ ಮಾತ್ರ.

ಜಯಂತ್‌ ಕಾಯ್ಕಿಣಿವರ ಬರಹಗಳನ್ನು ನಮ್ಮ ಆಧುನಿಕ ವಿಮರ್ಶಕ ಮಹಾಶಯರು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಅಮೂರರಿಂದ ಶೇಷಗಿರಿರಾಯರ ತನಕ, ಓ.ಎಲ್‌. ನಾಗಭೂಷಣ ಸ್ವಾಮಿಯಿಂದ ನರಹಳ್ಳಿ ಬಾಲಸುಬ್ರಹ್ಮಣ್ಯರ ತನಕ ಎಲ್ಲರ ಪಾಲಿಗೂ ಇವತ್ತು ಕತೆಗಾರ ಎಂದರೆ ಅನಂತಮೂರ್ತಿ, ಕವಿಯೆಂದರೆ ಅಡಿಗ, ಬೇಂದ್ರೆ, ನಾಟಕಕಾರರೆಂದರೆ ಕಾರ್ನಾಡ.

ಹೊಸ ತಲೆಮಾರಿನ ವಿಮರ್ಶಕರು ಹುಟ್ಟಿಕೊಂಡಿಲ್ಲ ಎಂದೇನಿಲ್ಲ. ಅವರೆಲ್ಲರಿಗೂ ಚರಿತ್ರೆಯ ಭಾಗವಾಗುವ ತವಕ. ಹೀಗಾಗಿ ಅವರು ಬರೆಯುವುದು ಜ್ಞಾನಪೀಠಸ್ಥರ ಬಗ್ಗೆ. ಈಗಾಗಲೇ ನೂರಾರು ಪುಟ ವಿಮರ್ಶೆ ಪ್ರಕಟವಾಗಿರುವ ಲೇಖಕರ ಬಗ್ಗೆ. ಇಂಥ ಪೈಕಿ ಒಂದು ಉದಾಹರಣೆ ಕೊಡುವುದಾದರೆ, ಕೆ. ಸತ್ಯನಾರಾಯಣ, ಇವರ ಆಸಕ್ತಿ ಏನಿದ್ದರೂ ಕುವೆಂಪು ಆತ್ಮ ಕತೆಯ ಬಗ್ಗೆ. ಅನಂತ ಮೂರ್ತಿಯವರ ಎರಡು ದಶಕದ ಕತೆಗಳ ಬಗ್ಗೆ, ಶಿಕಾರಿಯ ಬಗ್ಗೆ, ಕಾರಂತರ ಕಾದಂಬರಿಗಳ ಬಗ್ಗೆ, ಗಾಂಧಿ ಮತ್ತು ಆರ್ವೆಲ್ಲರ ಬಗ್ಗೆ,..... ಸಮಕಾಲೀನರನ್ನು ಬಿಟ್ಟು ಮಿಕ್ಕೆಲ್ಲರ ಬಗ್ಗೆ ! ಇನ್ನೊಬ್ಬ ಸ್ವಯಂ ಘೋಷಿತ ವಿಮರ್ಶಕ ಪ್ರಭು ವಿಜಯಶಂಕರ್‌ ಅವರದ್ದೂ ಇದೇ ಕತೆ. ಮಿಕ್ಕ ಹೆಸರುಗಳದ್ದೂ ಇದೇ ವ್ಯಥೆ. ಇದರಿಂದಾಗಿ, ಎರಡು ಸಾಹಿತ್ಯಿಕ ತಲೆಮಾರುಗಳ ನಡುವೆ ಕಂದರವೊಂದು ಸೃಷ್ಟಿಯಾದಂತಾಗಿದೆ. ಅನಂತಮೂರ್ತಿ ನಂತರ ಕತೆಗಾರರ ಪಟ್ಟಿಯಲ್ಲಿ ಹೆಸರುಗಳು ಕಾಣಿಸುತ್ತಿಲ್ಲ. ಬಹುಶಃ ನವ್ಯದ ನಂತರ ಸಾಹಿತ್ಯಿಕ ಚಳವಳಿಗಳು ಹುಟ್ಟಿಕೊಂಡದ್ದೂ ಇದಕ್ಕೆ ಕಾರಣವಿರಬಹುದು.

ಇವೆಲ್ಲದರ ನಡುವೆ ಗ್ರಾಮೀಣ ಪ್ರದೇಶಗಳ ಸಾಹಿತ್ಯಾಸಕ್ತರಿಗೆ ಇವತ್ತಿಗೂ ಇಷ್ಟವಾಗುವ ಯುವ ಬರಹಗಾರ ಜಯಂತ ಕಾಯ್ಕಿಣಿ ಅವರ ತೆರೆದಷ್ಟೇ ಬಾಗಿಲು ಎಂಬ ಪ್ರಶಸ್ತಿ ವಿಜೇತ ಕತೆ, ತೀರ ಇತ್ತೀಚೆಗಿನ ಶಬ್ದತೀರದಲ್ಲಿ ಕಾಣುವ ಒಂಟಿ ಕಾಲಿನ ಚಿತ್ರ ಎಲ್ಲವೂ ಅವರ ಮೊದಲ ಬರಹದಷ್ಟೇ ತಾಜಾ ಆಗಿದೆ. ಮಂಜು ಹನಿಗೆ ಮೈ ಮುರಿದೆದ್ದ ಹಸಿರು ಗರಿಕೆಯಂತಿದೆ. ಆಗ ತಾನೆ ಅಲೆ ಬಂದು ತೋಯಿಸಿದ ಮರಳಂತಿದೆ. ಇದೀಗ ಮರಳಿದ ಅಲೆಯಂತಿದೆ. ಅನುಭವಕ್ಕೂ ಅಕ್ಷರಕ್ಕೂ ಕಟ್ಟಿದ ಪದಗಳ ಉಯ್ಯಾಲೆಯಂತಿದೆ !

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X