ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆಂಟಾಫೀಸಲ್ಲಿ ಕೆಲಸ ಶಾಸನದಲ್ಲಿ ತುಡಿತ

By Staff
|
Google Oneindia Kannada News

*ವಿಶಾಖ ಎನ್‌.

Gopal Raoಬೆಂಗಳೂರು ಕಟ್ಟಿದ್ದು ಇಮ್ಮಡಿ ಕೆಂಪೇಗೌಡ. ಅದರಗುಂಚಿ ಶಂಕರೇಗೌಡ ಪಾಟೀಲರು ಕರ್ನಾಟಕ ಏಕೀಕರಣಕ್ಕಾಗಿ 23 ದಿನ ಉಪವಾಸ ಮಾಡಿದ್ದರು- ಇಂಥಾ ಎಷ್ಟೋ ಮಾಹಿತಿಗಳು ಇವರಲ್ಲಿ ಹುದುಗಿವೆ. ಇವರೊಟ್ಟಿಗೆ ಇಡೀ ದಿನ ಮಾತಾಡಿದರೂ ಮಾತು ಮುಗಿಯದು. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿರುವ ಗೋಪಾಲರಾಯರ ಪ್ರವೃತ್ತಿ ಸಂಶೋಧನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿ ವಾಸವಾಗಿರುವ ರಾಯರ ಮೂಲ ಇದೇ ಊರಿನ ಸಮೀಪದ ಹುಲ್ಲೇಗೌಡನಹಳ್ಳಿ. ಇತಿಹಾಸಕ್ಕೆ ಸಂಬಂಧಿಸಿದಂತೆ ಇವರ ಪುಸ್ತಕಗಳು ಪ್ರಕಟವಾಗಿವೆ. ಹೊಸ ಶಾಸನಗಳನ್ನು ಹುಡುಕಿ, ಅವನ್ನು ಓದಿ, ವಿಶ್ಲೇಷಿಸಿ ಪ್ರಕಟಿಸುವುದರಲ್ಲಿ ರಾಯರದು ಎತ್ತಿದ ಕೈ.

ಗೋಪಾಲರಾಯರು ಹುಟ್ಟಿದ್ದು 1946 ರಲ್ಲಿ . ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರು. ರಾಯರ ಪ್ರಾಥಮಿಕ ಶಿಕ್ಷಣ ನಡೆದದ್ದು ಬರಗೇನಹಳ್ಳಿ ಹಾಗೂ ಶಿವಗಂಗೆಯಲ್ಲಿ . ಪ್ರೌಢ ವಿದ್ಯಾಭ್ಯಾಸ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಬೆಳವಂಗಲದಲ್ಲಿ . ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದರು.

ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮ ಪಡೆದ (1966) ರಾಯರಿಗೆ ಸಾಹಿತ್ಯದ ಕಡೆಗೂ ಒಲವಿತ್ತು . ತರಾಸು, ಅನಕೃ ಹಾಗೂ ದೇವುಡು ಬರಹಗಳು ಇವರ ಮೇಲೆ ಬೀರಿದ ಪ್ರಭಾವ ಅಪಾರ.

ಡಿಪ್ಲೊಮ ಮುಗಿಸಿದ ನಂತರ ಕೆಲಸಕ್ಕಾಗಿ ಹುಡುಕಾಡಿದರು. ಮಹಾರಾಷ್ಟ್ರದಲ್ಲೊಂದು ವರ್ಷ ಅಲ್ಲಿಯ ಎಲೆಕ್ಟ್ರಿಸಿಟಿ ಬೋರ್ಡ್‌ನಲ್ಲಿ ಕೆಲಸ ಮಾಡಿದರು. ಈ ನಡುವೆ ಮನೆಪಾಠ, ಪ್ರಿಂಟಿಂಗ್‌ ಪ್ರೆಸ್‌ ಎಂದೆಲ್ಲಾ ಓಡಾಡಿದ ರಾಯರು ನೆಲೆ ಕಂಡಿದ್ದು ಕೆಇಬಿಯಲ್ಲಿ . ಜೀವನಕ್ಕೊಂದು ಭದ್ರನೆಲೆ ಒದಗಿದ ಮೇಲೆ ಅವರ ಜ್ಞಾನತೃಷೆ ಮತ್ತಷ್ಟು ಹೆಚ್ಚಿತು. 1975 ರಲ್ಲಿ ಸಾಹಿತ್ಯ ಪರಿಷತ್‌ ನಡೆಸುವ ಶಾಸನಶಾಸ್ತ್ರ ಪ್ರೌಢ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಶಾಸನ ಕ್ಷೇತ್ರದಲ್ಲಿ ಆ ಹೊತ್ತು ಹೆಸರು ಮಾಡಿದ್ದ ಎನ್‌. ಲಕ್ಷ್ಮೀನಾರಾಯಣ ರಾವ್‌ ಇವರ ಮೇಲೆ ಪ್ರಭಾವ ಬೀರಿದರು. ಒಂದೆಡೆ ಶಾಸನ ಮತ್ತೊಂದೆಡೆ ಸೃಜನಶೀಲ ಬರವಣಿಗೆ, ಎರಡರ ಸಾಂಗತ್ಯವೂ ಇವರಿಗಿದೆ.

ಓದಿದ್ದು, ಬರೆದಿದ್ದು, ಪಡೆದಿದ್ದು : 1975 ರಿಂದ 80 ರ ಅವಧಿಯಲ್ಲಿ ಜೇನು ನಂಜು, ಗತಿ, ಬಿನ್ನ , ಪರಿಗ್ರಹಣ ಎನ್ನುವ ನಾಲ್ಕು ಕಾದಂಬರಿಗಳನ್ನು ಬರೆದರು. ಜೊತೆಗೆ ಗುಲ್ಪುಟ್ಟಿ - ಮುನ್ಪುಟ್ಟಿ ಎಂಬ ಮಕ್ಕಳ ನಾಟಕ ರಚಿಸಿದರು. ಈ ನಾಟಕಕ್ಕೆ ಉತ್ತಮ ಮಕ್ಕಳ ನಾಟಕ ರಚನೆಗಾಗಿ ನೀಡುವ ರಾಜ್ಯಪ್ರಶಸ್ತಿಯು 1977 ರಲ್ಲಿ ದೊರೆತಿದೆ.

ಡಾ.ಎಂ. ಚಿದಾನಂದ ಮೂರ್ತಿ ಹಾಗೂ ಗೆಳೆಯ ಡಾ.ಶೇಷಶಾಸ್ತ್ರಿ ಅವರ ಒಡನಾಟದಿಂದ ಶಾಸನಶಾಸ್ತ್ರದಲ್ಲಿ ಮತ್ತಷ್ಟು ಆಳವಾಗಿ ತೊಡಗಿಸಿಕೊಂಡ ರಾಯರು ಓದನ್ನೂ ಮುಂದುವರಿಸಿದರು. 1984 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ.ಎ.ಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪೂರೈಸಿದರು. ಶಾಸನಲೋಕ ಮರೆಯಬಾರದ ಮಹಾನುಭಾವ ದಿವಂಗತ ಡಾ.ಬಾ.ರಾ. ಗೋಪಾಲ್‌ ಅವರ ಮಾರ್ಗದರ್ಶನದಲ್ಲಿ ಬರೆದ ‘ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು- ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ 1991 ರಲ್ಲಿ ಒಂದು ಚಿನ್ನದ ಪದಕದ ಪಿಎಚ್‌.ಡಿ ಪದವಿ ಪಡೆದರು.

ಇತಿಹಾಸ ಕ್ಷೇತ್ರದಲ್ಲೂ ರಾಯರದ್ದು ಎತ್ತರದ ಸಾಧನೆ. ನಮ್ಮ ನಾಡು ಕರ್ನಾಟಕ, ಇತಿಹಾಸದ ಅಧ್ಯಯನ- ಅಂದು ಇಂದು ಮುಂತಾದ ಇತಿಹಾಸಕ್ಕೆ ಸಂಬಂಧಿಸಿದ ಆರು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಕರ್ನಾಟಕ ಏಕೀಕರಣ ಇತಿಹಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಗೋಪಾಲರಾಯರು ಕೆಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಅವು - ನಾಗಾಭಿನಂದನ (ಡಾ. ಎಂ.ಜಿ. ನಾಗರಾಜ್‌ ನೆನಪಿನ ಸಂಚಿಕೆ), ನೆಲದಸಿರಿ, ಎನ್‌.ಎಲ್‌. ರಾವ್‌ ಅವರ ಲೇಖನಗಳ ಸಂಗ್ರಹವಾದ ಎಪಿಗ್ರಫಿಕಲ್‌ ಸ್ಟಡೀಸ್‌. ಮಹಾರಾಷ್ಟ್ರದ ಪ್ರವಾಸ ಕಥನ, ಚೆಂಗಾಳ್ವರು- ಒಂದು ಅಧ್ಯಯನ, ತಮಿಳುನಾಡಿನ ಶಾಸನಗಳು. ಕನ್ನಡದಲ್ಲಿ ಸುಮಾರು 150 ಹಾಗೂ ಇಂಗ್ಲೀಷ್‌ನಲ್ಲಿ 50 ಲೇಖನಗಳನ್ನು ಬರೆದಿದ್ದಾರೆ.

ಸದಾ ಪಾದರಸದಂತಿರುವ ರಾಯರು ಕರ್ನಾಟಕ ಇತಿಹಾಸ ಅಕಾದೆಮಿಯ ಪ್ರಧಾನ ಕಾರ್ಯದರ್ಶಿ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಶಾಸನಶಾಸ್ತ್ರ ತರಗತಿಗಳಲ್ಲಿ ಉಪನ್ಯಾಸ ನೀಡುತ್ತಾರೆ. ಇಷ್ಟೆಲ್ಲಾ ಸಾಧಿಸಿದ್ದರೂ ವ್ಯಕ್ತಿ ಸರಳ. ಕಾಲಗರ್ಭದಲ್ಲಿ ಹುದುಗಿಹೋಗುವ ಐತಿಹಾಸಿಕ ಸಂಪತ್ತನ್ನು ಹೊರಗೆತ್ತಲು ತಮ್ಮೆಲ್ಲಾ ಕೆಲಸ ಬದಿಗೊತ್ತುತ್ತಾರೆ. ಎನ್‌ಎಸ್‌ಎಸ್‌ ಕ್ಯಾಂಪಿನ ನೆಪದಲ್ಲಿ ಕಾಲೇಜು ಹುಡುಗರ ಸೇರಿಸಿ, ಮಣ್ಣೆಯಲ್ಲಿ ಹುದುಗಿ ಹೋಗಿದ್ದ 4 ಅಡಿ ಗಣೇಶನ ಮೂರ್ತಿಯನ್ನು ಹೊರತೆಗೆಸಿ ಮಕ್ಕಳೊಟ್ಟಿಗೆ ಮಗುವಾಗುತ್ತಾರೆ.

ಅವರು ಯಾವಾಗಲೂ ಹೇಳುವ ಮಾತು We should not go behind money or fame. It should come to us, ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X