ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಕ್ಕಿಮೌಸ್‌ ಡಿಸ್ನಿಗೆ ನೂರು

By Staff
|
Google Oneindia Kannada News

ಆಲಿಬಾಬಾ ಹಾಗೂ ನಲವತ್ತು ಜನ ಕಳ್ಳರ ಕತೆ ಗೊತ್ತಿಲ್ಲದ ಮಕ್ಕಳಿರಬಹುದು, ಬೊಮ್ಮನಹಳ್ಳಿ ಕಿಂದರಿಜೋಗಿ ಗೊತ್ತಿಲ್ಲದ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿಯೇ ಇರಬಹುದು. ಆದರೆ, ಮಿಕ್ಕಿಮೌಸ್‌ ಗೊತ್ತಿಲ್ಲದ, ಮಿಕ್ಕಿಮೌಸ್‌ ನೋಡಿ ಬೆರಗುಗೊಳ್ಳದ ಮಕ್ಕಳು ಕಡಿಮೆ. ಗಡಿಗಳ ಮೇರೆ ಮೀರಿ ಜಗತ್ತಿನ ಮಕ್ಕಳಿಗೆಲ್ಲ ಮೆಚ್ಚಾದ ಖ್ಯಾತಿ ಮಿಕ್ಕಿಮೌಸ್‌ನದು. ಆ ಮಿಕ್ಕಿಮೌಸ್‌ನ ಜನಕ ವಾಲ್ಟ್‌ ಡಿಸ್ನಿಗೀಗ ನೂರು. 2001 ರ ಡಿಸೆಂಬರ್‌ 5 ವಾಲ್ಟ್‌ ಡಿಸ್ನಿಯ ನೂರನೇ ಬರ್ತಡೇ!

ವಾಲ್ಟ್‌ ಡಿಸ್ನಿ ಈಗ ಬದುಕಿಲ್ಲ . ಆದರೆ ಆತನ ಮಿಕ್ಕಿ ಮೌಸ್‌ ಚಿರಂಜೀವಿ. ಇವತ್ತಿನ ಆಧುನಿಕ ಸಿನಿಮಾ ಜಗತ್ತು ಸದಾ ಡಿಸ್ನಿಗೆ ಋಣಿ. ಡಿಸ್ನಿಯ ಅನಿಮೇಷನ್‌ ತಂತ್ರಗಳೇ ಇವತ್ತಿನ ಸಿನಿಮಾ ತಾಂತ್ರಿಕತೆಯ ಜೀವಾಳ. ಇಂಥ ಡಿಸ್ನಿ ಬೆಳೆದುಬಂದದ್ದೇ ಒಂದು ಸಿನಿಮಾದಂಥ ಕಥೆ.

ಡಿಸ್ನಿ ಹುಟ್ಟಿದ್ದು 1901ರ ಡಿಸೆಂಬರ್‌ 5 ರಂದು, ಚಿಕಾಗೊದಲ್ಲಿ . ಪೋಷಕರೊಂದಿಗೆ ಮಿಸ್ಸೌರಿಗೆ ಬಂದಾಗ ಡಿಸ್ನಿ 5 ವರ್ಷದ ಹುಡುಗ. ಕಲಿತದ್ದು ಕಲೆ. ಮೊದಲನೆ ಮಹಾಯುದ್ಧದಲ್ಲಿ ಅಮೆರಿಕಾ ಯುದ್ಧ ಪ್ರವೇಶಿಸಿದಾಗ ಡಿಸ್ನಿ ಫ್ರಾನ್ಸ್‌ನಲ್ಲಿ ಸ್ವಯಂ ಸೇವಕನಾಗಿ ಆ್ಯಂಬುಲೆನ್ಸ್‌ ಚಾಲಕನಾಗಿದ್ದ . ಯುದ್ಧ ಕುತೂಹಲಿಯಾದ ಡಿಸ್ನಿ, ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿ ಚಾಲಕನ ಅರ್ಹತೆ ಗಿಟ್ಟಿಸಿದ್ದ .

ಯಶಸ್ಸಿನ ಧಾರಾವಾಹಿಗೆ ಸರಣಿ ಸೋಲಿನ ಮುನ್ನುಡಿ

Mickey Mouseಯುದ್ಧಾನಂತರ ಕನ್ಸಸ್‌ ನಗರಿಗೆ ಹಿಂತಿರುಗಿದ ಡಿಸ್ನಿ , ವಾಣಿಜ್ಯ ಕಲಾವಿದನಾಗಿ ಅನಿಮೇಷನ್‌ ಚಿತ್ರಗಳ ತಯಾರಿಕೆ ಮಾಡತೊಡಗಿದ. ಆ ವ್ಯಾಪಾರವೊಂದು ದುರಂತ. ಸರಣಿ ಸೋಲುಗಳಿಂದ ಡಿಸ್ನಿ ಕಂಗೆಟ್ಟ . 1923 ರಲ್ಲಿ ಹಾಲಿವುಡ್‌ನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಹೊರಟು, ಸೋದರ ರಾಯ್‌ನೊಂದಿಗೆ ಅನಿಮೇಷನ್‌ ಸ್ಟುಡಿಯೋ ಸ್ಥಾಪಿಸಿದ. ಆನಂತರದ್ದು ಯಶಸ್ಸಿನ ಧಾರಾವಾಹಿ.

ಡಿಸ್ನಿಯ ಮೇರು ಕಲಾಕೃತಿ ಮಿಕ್ಕಿ ಮೌಸ್‌ ರೂಪುಗೊಂಡದ್ದು 1928 ರಲ್ಲಿ . ಸ್ವಲ್ಪ ಕಾಲದಲ್ಲಿ ರೂಪುಗೊಂಡ ಡೊನಾಲ್ಡ್‌ ಡಕ್‌, ಗೂಫಿ ಮತ್ತು ಪ್ಲುಟೊ ಡಿಸ್ನಿಗೆ ವಿಶ್ವಖ್ಯಾತಿ ತಂದುಕೊಟ್ಟವು. ಯಶಸ್ಸಿನಿಂದ ಉತ್ತೇಜಿತನಾದ ಡಿಸ್ನಿ 1937 ರಲ್ಲಿ ತನ್ನ ಮೊದಲ ಫೀಚರ್‌ ಫಿಲ್ಮ್‌ Snow White and the Seven Dwarves ರಿಲೀಸ್‌ ಮಾಡಿದ. 1940 ರಲ್ಲಿ Fantasia, 1950 ರಲ್ಲಿ Treasure Island ಡಿಸ್ನಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ದವು.

A Walt Disney Cartoonದೈತ್ಯ ಸಾಧಕನಿಗೆ ಸಂದದ್ದು 29 ಆಸ್ಕರ್‌!

600 ಕ್ಕೂ ಹೆಚ್ಚು ಫೀಚರ್‌ ಫಿಲ್ಮ್‌ ಹಾಗೂ ಅನಿಮೇಟಡ್‌ ಷಾರ್ಟ್ಸ್‌ಗಳನ್ನು ರೂಪಿಸಿದ ಡಿಸ್ನಿಯ ಅಪರೂಪದ ಸಾಧನೆಗೆ ಸಂದ ಪ್ರಶಸ್ತಿಗಳು ಅಸಂಖ್ಯ, ಅವುಗಳಲ್ಲಿ 29 ಆಸ್ಕರ್‌ ಪ್ರಶಸ್ತಿ ಎನ್ನುವುದು ವಿಶೇಷ. ಎರಡನೇ ವಿಶ್ವ ಯುದ್ಧದಲ್ಲಿ ಡಿಸ್ನಿಯ ಸ್ಟುಡಿಯೋ ಯುದ್ಧ ಪಡೆಗಳ ವಶವಾಯಿತು. ಯುದ್ಧ ತರಬೇತಿ ಚಿತ್ರಗಳ ತಯಾರಿಕೆಯಾದದ್ದು ಆಗಲೇ. ಯುದ್ಧಾನಂತರ ಅಮ್ಯೂಸ್‌ಮೆಂಟ್‌ ಉದ್ಯಮದತ್ತ ಕಣ್ಣು ಹಾಯಿಸಿದ ಡಿಸ್ನಿ- 1955 ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಡಿಸ್ನಿಲ್ಯಾಂಡ್‌ ಪಾರ್ಕ್‌ ಪ್ರಾರಂಭಿಸಿದ. ಡಿಸ್ನಿಲ್ಯಾಂಡ್‌ ಕನಸಿನ ಲೋಕ, ಅದ್ಭುತಗಳ ಪ್ರಪಂಚ!

ಡಿಸ್ನಿಯ ಇನ್ನೊಂದು ಪಾರ್ಕ್‌, ಡಿಸ್ನಿ ವರ್ಲ್ಡ್‌ 1971 ರಲ್ಲಿ ಪ್ಲೋರಿಡಾದಲ್ಲಿ ಪ್ರಾರಂಭವಾಯಿತು. ಡಿಸ್ನಿಯ ಮಹತ್ವಾಕಾಂಕ್ಷೆ - the Experimental Prototype Community of Tomorrow ಡಿಸ್ನಿ ವರ್ಲ್ಡ್‌ನಲ್ಲಿ ಸಾಕಾರವಾಗುವ ಮುನ್ನವೇ ಡಿಸ್ನಿ ತೀರಿಕೊಂಡ. ಡಿಸೆಂಬರ್‌ 15, 1996 ರಲ್ಲಿ ಡಿಸ್ನಿ ನಿಧನನಾದಾಗ ಆತನ ಸಾವಿಗೆ ವೈದ್ಯರು ನೀಡಿದ ಕಾರಣ, ಕ್ಯಾನ್ಸರ್‌!

ಡಿಸೆಂಬರ್‌ 31 ರಂದು ಡಿಸ್ನಿ ವರ್ಲ್ಡ್‌, 100 Years of Magic ಆಚರಿಸುತ್ತಿದೆ. ಡಿಸ್ನಿ ಅಜರಾಮರ. ಆತನ ಸಾಧನೆಗೆ ನಮಸ್ಕಾರ!

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X