ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಮ್ಮೆಯ ದಾದಾಮೋನಿ

By Staff
|
Google Oneindia Kannada News

*ವಿಶಾಖ ಎನ್‌.

Ashok Kumar1934. ಕುಮುದ್‌ಲಾಲ್‌ ಗಂಗೂಲಿ ಎಂಬೊಬ್ಬ ವಕೀಲ. ಗೀಳೆಲ್ಲಾ ಸಿನಿಮಾ ಕಡೆಗೆ. ಆ ಕಾರಣಕ್ಕೇ ನ್ಯೂ ಥಿಯೇಟರ್ಸ್‌ ಜೊತೆಗೆ ಒಡನಾಟ. ನಿರ್ದೇಶನದ ವರಸೆಗಳಲ್ಲಿ ಪಳಗಲು ಜರ್ಮನಿಗೆ ಹಾರುವ ದಿಢೀರ್‌ ಯೋಚನೆ. ಬೆಳ್ಳಿ ಚಮಚೆಯನ್ನು ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ್ದರಿಂದ ಅಂಥಾ ಕನಸು ಎಟುಕದಂಥಾದ್ದೇನೂ ಆಗಿರಲಿಲ್ಲ. ಅದೇ ಸಮಯದಲ್ಲಿ ಹಿಮಾಂಶು ರೈ, ‘ಜೀವನ್‌ ನಯ’ ಎಂಬ ಹಿಂದಿ ಸಿನಿಮಾ ನಿರ್ದೇಶಿಸುತ್ತಿದ್ದರು. ಅವರಿಗೆ ಚೆನ್ನಾಗಿ ಗೊತ್ತಿದ್ದ ಹುಡುಗ ಕುಮುದ್‌ಲಾಲ್‌. ಜೀವನ್‌ ನಯ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿ ಹಾಸಿಗೆ ಹಿಡಿದಿದ್ದ. ಹಿಮಾಂಶು ಹೇಳಿದರು, ‘ಕುಮುದ್‌ಲಾಲ್‌, ನೀನೇ ನನ್ನ ಸಿನಿಮಾದ ಹೀರೋ’. ಕುಮುದ್‌ಲಾಲ್‌ಗೆ ಜರ್ಮನಿ ಮರೆತೇ ಹೋಯಿತು. ಭಾರತೀಯ ಹಿಂದಿ ಸಿನಿಮಾ ಜೀವನವಾಯಿತು.ಆ ಕುಮುದ್‌ಲಾಲೇ ಅಶೋಕ್‌ ಕುಮಾರ್‌ ಗಂಗೂಲಿ ಆದದ್ದು. ಆಮೇಲೆ ಎಲ್ಲರ ನೆಚ್ಚಿನ ದಾದಾಮೋನಿ. ಕೊಯ್ಯುವಷ್ಟು ಮೊನಚು ಕಂಠ. ಬಂಗಾಳಿ ಖದರು. ಚೂಪು ನೋಟ. ದೇಹಕ್ಕೆ ತನ್ನದೇ ಆದ ವಿಶೇಷ ಚರಿಷ್ಮಾ. ಎಲ್ಲಕ್ಕೂ ಮೇಲಾಗಿ ಸಿನಿಮಾ ಜಗತ್ತೇ ಜೀವನ ಎಂಬಷ್ಟು ಅಖಂಡ ಪ್ರೀತಿ. 91 ವರ್ಷ ಕಾಲದ ಸಾರ್ಥಕ ಬದುಕನ್ನು ಬದುಕಿದ ದಾದಾಮೋನಿ ಇನ್ನಿಲ್ಲವಾದರೂ, ‘ಆಯೇಗಾ ಆಯೇಗಾ ಆಯೇಗಾ ಆನೇ ವಾಲ’ ಹಾಡಿನ ಗುನುಗು ನೆನಪಿನಾಳದಲ್ಲಿ ತರುವ ತುಣುಕಲ್ಲಿ ಇವತ್ತೂ ಇಣುಕುವುದು ಸೊಗಸುಗಾರ ಅಶೋಕ್‌ ಕುಮಾರ್‌.

Ashok Kumar with Meenakumariಏಳು ದಶಕಗಳ ದೀರ್ಘಾವಧಿಯ ಸಿನಿಮಾ ಜೀವನ ಕಾಣುವ ಭಾಗ್ಯಶಾಲಿಗಳಾದರೂ ಎಷ್ಟು? ಅಂಥಾ ಭಾಗ್ಯಶಾಲಿ ಅಶೋಕ್‌. 1911ರಲ್ಲಿ ಕುಂಜನ್‌ ಲಾಲ್‌ ಗಂಗೂಲಿ ಎಂಬ ವಕೀಲರ ಮಗನಾಗಿ ಹುಟ್ಟಿದ ಅಶೋಕ್‌ ಕುಮಾರ್‌ ಚುರುಕುಮತಿಯ ಹುಡುಗ. ಹುಟ್ಟಿದ್ದು ಬಿಹಾರದ ಭಗಲ್‌ಪುರ್‌ನಲ್ಲಿ . ಪ್ರಾಥಮಿಕ ವಿದ್ಯಾಭ್ಯಾಸ ಖಂದ್ವಾದಲ್ಲಿ. ಪದವಿ ಪಡೆದದ್ದು ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ. ವಕೀಲಿ ಅಭ್ಯಾಸ ಶುರುಮಾಡಿಕೊಂಡರೂ ಬೆಳ್ಳಿತೆರೆಯ ಹುರಿಯಾಳುಗಳ ಪಳಗಿಸಬಲ್ಲ ನಿರ್ದೇಶಕನಾಗುವ ಕನಸು ಈತನಲ್ಲಿ. ಕೊಲ್ಕತ್ತಾದ ರಾಜ ಗಲ್ಲಿಯಿಂದ ಮುಂಬಯಿಯ (ಆಗಿನ ಬಾಂಬೆ) ಬಾಲಿವುಡ್‌ ಓಣಿಗೆ ಜಿಗಿತ. ಸೂಟು ಬೂಟಿನ ಅಂದಗಾರ. ಜೇಬಿನ ತುಂಬಾ ದುಡ್ಡು. ನಿರರ್ಗಳ ಮಾತು. ಸಿನಿಮಾದ ದೊಡ್ಡ ಜನರ ಸಾಂಗತ್ಯ. ನಾಯಕನಾಗಬಲ್ಲ ಎಲ್ಲಾ ಅರ್ಹತೆ ಈತನಿಗಿತ್ತಾದರೂ, ಅಂಥಾ ಕನಸನ್ನು ಕಂಡೇ ಇರಲಿಲ್ಲ. ಹಿಮಾಂಶು ರೈಗೆ ಧನ್ಯವಾದಗಳು.

ಮೊದಲ ಶಾಟ್‌ :The charishma of Ashok Kumar ಖಳನಾಯಕನ ಬೆನ್ನ ಮೇಲೆ ಜಿಗಿಯುವುದು. ಅಶೋಕ್‌ಗೆ ಹಿಮಾಂಶು ಹೇಳಿದ್ದು, ‘ಹತ್ತು ಎಣಿಸುತ್ತೇನೆ. ನಂತರ ನೀನು ಅವನ ಮೇಲೆ ಹಾರಬೇಕು’. ಒಂದು... ಎರಡು... ಮೂರು... ಹುಮ್ಮಸ್ಸು ತುಂಬಿಕೊಂಡ ಅಶೋಕ್‌ ಜಿಗಿದೇ ಬಿಟ್ಟರು. ಪಾಪ, ಖಳನಾಯಕನ ಪಾತ್ರಧಾರಿ ಎಣಿಕೆ ಹತ್ತಾಗುವುದನ್ನೇ ಕಾಯುತ್ತಿದ್ದ. ಅಶೋಕ್‌ ಜಿಗಿತ ಹೇಗಿತ್ತೆಂದರೆ, ಖಳನಟನ ಕಾಲು ಮುರಿಯಿತು.

‘ಜೀವನ್‌ನಯ’ದ ಹಾಲುಗೆನ್ನೆಯ ಅಶೋಕ್‌ ಪ್ರೇಕ್ಷಕರಿಗೆ ಮೆಚ್ಚಾದರು. ನಂತರ, ‘ಅಚೂತ್‌ ಕನ್ಯಾ’ ಎಂಬ ಜಾತಿ ಬೇಲಿ ಹಾರುವ ಪ್ರೇಮ ಕಥಾ ಚಿತ್ರದ ನಾಯಕನ ಅವಕಾಶ ಹುಡುಕಿಕೊಂಡು ಬಂತು. ಅದೂ ಹಿಟ್‌. ನಾಯಕ ಪಟ್ಟ ಭದ್ರವಾಯಿತು. ಮೊದಲೇ ಅನುಕೂಲಸ್ಥ. ಅದೃಷ್ಟವೂ ಖುಲಾಯಿಸಿತು. ನಟನೆಯಲ್ಲಿ ಸಾಕಷ್ಟು ಪಳಗಿದ ಅಶೋಕ್‌ ಕುಮಾರ್‌, ಚಿತ್ರ ನಿರ್ಮಾಣಕ್ಕೂ ಕೈಹಾಕಿದರು. ಬಾಂಬೆ ಟಾಕೀಸ್‌ ಬ್ಯಾನರ್‌ನಡಿ ನಿರ್ಮಿಸಿದ ಮಹಲ್‌, ಮಜ್ಬೂರ್‌, ಮಶಾಲ್‌, ಜಿದ್ದಿ ಚಿತ್ರಗಳು ಅಶೋಕ್‌ಗೆ ಹೆಸರು ತಂದುಕೊಟ್ಟವು. ನಂತರ ತನ್ನದೇ ಹೆಸರಿನ ನಿರ್ಮಾಣ ಸಂಸ್ಥೆ ಕಟ್ಟಿದ ಈತ ಮಾ, ಕಲ್ಪನ, ಮೇರೀ ಸೂರತ್‌ ತೇರೀ ಆಂಖೇಯಂಥಾ ಚಿತ್ರಗಳನ್ನು ನಿರ್ಮಿಸಿದರು.

ದಾದಾಮೋನಿಯಾದದ್ದು : ಅಶೋಕ್‌ ಕುಮಾರ್‌ ಪ್ರತಿಭಾವಂತನಾದರೂ ಮೊದಲ ಪ್ರಶಸ್ತಿ ಬಂದದ್ದು 52ನೆಯ ವಯಸ್ಸಿನಲ್ಲಿ; ರಾಖಿ ಚಿತ್ರದ ಅಭಿನಯಕ್ಕೆ ಫಿಲ್ಮ್‌ಫೇರ್‌ ಪ್ರಶಸ್ತಿ. ನಂತರ ಅಶೋಕ್‌ ಛಾಪು ಬೇರೆಯದೇ ಸ್ವರೂಪ ಪಡೆಯಿತು. ಅಪ್ಪ- ಅಜ್ಜನಾಗಿ ತನ್ನದೇ ಆದ ಐಡೆಂಟಿಟಿ ಸಿಕ್ಕಿತು. ಸಿಕ್ಕಿತು. ಅಶೋಕ್‌ ಎಲ್ಲರ ನೆಚ್ಚಿನ ದಾದಾಮೋನಿ ಆದದ್ದೇ ಆಗ. 1969ರಲ್ಲಿ ಆಶೀರ್ವಾದ್‌ ಚಿತ್ರದ ಅಭಿನಯಕ್ಕೆ ಮತ್ತೊಮ್ಮೆ ಫಿಲ್ಮ್‌ಫೇರ್‌ ಪ್ರಶಸ್ತಿ ಸಂದಿತು. 1980ರಲ್ಲಿ ತೆರೆ ಕಂಡ ಖೂಬ್‌ಸೂರತ್‌ ಚಿತ್ರದಲ್ಲಿ ನವಿರು ಹಾಸ್ಯದ ಅಭಿನಯದಲ್ಲಿ ಯುವ ನಟಿಯಾಗಿದ್ದ ರೇಖಾ ಜೊತೆ ಎಲ್ಲರ ಮೆಚ್ಚಿಗೆಗೆ ಪಾತ್ರರಾದರು ದಾದಾಮೋನಿ.

ವಯಸ್ಸಾದಷ್ಟೂ ಅವಕಾಶ ಹೆಚ್ಚುತ್ತಾ ಹೋಯಿತು. ಆದರೆ, ಆರೋಗ್ಯ ಕೈಕೊಟ್ಟಿತು. ಸಿಗರೇಟು ಗಾಳಿಯ ಮಜಾ ಮೆಚ್ಚುತ್ತಿದ್ದ ದಾದಾಮೋನಿಗೆ ಅಸ್ತಮಾ ದಾಳಿಯಿಟ್ಟಿತು. ಇದರ ನಡುವೆಯೇ ಆರು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ 1989ರಲ್ಲಿ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯ ಗರಿ.

Ashok Kumar in the happiest moment after receiving filmfare awardರಿಟರ್ನ್‌ ಆಫ್‌ ಜ್ಯೂವೆಲ್‌ ಥೀಫ್‌ ದಾದಾ ನಟಿಸಿದ ಕೊನೆಯ ಚಿತ್ರ. ಅದಾದ ನಂತರ ಹಾಸಿಗೆ ಹಿಡಿದ ದಾದಾ ಕೈಗೆ ಊರುಗೋಲು ತಂದುಕೊಳ್ಳುವುದೂ ಕಷ್ಟವಾಯಿತು. ಚೆಂಬೂರಿನ ತಮ್ಮ ಮನೆಯಲ್ಲಿ ಓಡಾಡಲು ಆಗದೇ ಇರುವ ಸಮಯದಲ್ಲೂ, ನಗೆಯಲ್ಲಿನ ಸಣ್ಣ ಜೀವಂತಿಕೆ ಮಾಸಿರಲಿಲ್ಲ. ಒಳ್ಳೆಯ ಹಾಡುಗಳನ್ನು ಕೇಳಿದಾಗ ಈ ಜೀವಂತಿಕೆ ಮತ್ತೆ ಮತ್ತೆ ಹುಟ್ಟುತ್ತಿತ್ತು. ಆದರೆ, ಎಷ್ಟು ದಿನ ಹೀಗೆ ಸವೆದೀತು? ಇಂದು (ಡಿಸೆಂಬರ್‌ 10) ಮಧ್ಯಾಹ್ನ 2.30ಕ್ಕೆ ದಾದಾಮೋನಿ ಕಣ್ಮುಚ್ಚಿದರು. ಈ ವಿಷಯ ಕೇಳಿಸಿದ ಟಿವಿ ಚಾನೆಲ್‌ನಲ್ಲಿ ‘ಆಯೇಗಾ ಆಯೇಗಾ...’ ಹಾಡು ಮತ್ತೆ ಮತ್ತೆ ಮೂಡಿತು. ಆದರೆ, ಆತ ‘ಫಿರ್‌ ನಹೀಂ ಆಯೇಗಾ’ !

Post your views

ವಾರ್ತಾ ಸಂಚಯ

ಬಾಲಿವುಡ್‌ನ ಚಿರಯೌವನಿಗ ನಾಯಕ ಅಶೋಕ್‌ ಕುಮಾರ್‌ ನಿಧನ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X