Vehicle Registration: ವಾಹನಗಳ ರಿಜಿಸ್ಟ್ರೇಷನ್ - ಡಿಜಿಟಲೀಕರಣದಲ್ಲಿ ಹಿಂದುಳಿದ ಕರ್ನಾಟಕ
Vehicle Registration: ಕರ್ನಾಟಕದಲ್ಲಿ ಗಾಡಿ ರಿಜಿಸ್ಟ್ರೇಷನ್ ಹಾಗೂ ಡೀಲರ್‌ಗಳ ವಿಚಾರವಾಗಿ ಬರಹಗಾರ ಕೃಷ್ಣ ಭಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ಬರಹವು ವೈರಲ್ ಆಗುತ್ತಿದೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಮಾತ್ರ ಈ ರೀತಿ ಇದೆ. ಕೇರಳದಲ್ಲಿ ಈ ಮಾದರಿ ಇಲ್ಲ ಎಂದು ಕೆಲವರು ಹೇಳಿದ್ದಾರೆ.
ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರ್‌ಗಳ ರಿಜಿಸ್ಟ್ರೇಷನ್ ಮತ್ತು ಡಿಜಿಟಲೀಕರಣದಲ್ಲಿ ಕರ್ನಾಟಕವು ಹಿಂದುಳಿದೆ ಎನ್ನುವ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ನಾವು ಒಂದು ಗಾಡಿ ಖರೀದಿ ಮಾಡಿದಾಗ ಡೀಲರ್‌ಗಳು ರಿಜಿಸ್ಟ್ರೇಶನ್ ಮಾಡಿಸಿಕೊಡ್ತಾರಲ್ಲ. ಅದನ್ನು 2016ರಲ್ಲೇ ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡಿದೆ. ಡೀಲರ್‌ಗಳೇ ಅಂದರೆ ನಾವು ಗಾಡಿ ಖರೀದಿ ಮಾಡುವುದಕ್ಕೆ ಹೋದ ಶೋರೂಮ್‌ನವರೇ ಗಾಡಿ ರಿಜಿಸ್ಟ್ರೇಷನ್ ಸಹ ಮಾಡಿ ಆಗಿಂದಾಗ ಡೆಲಿವರಿ ಮಾಡಿ ಕೊಡ್ತಾರೆ. ಅದಕ್ಕೆಂದು, ಡಾಕ್ಯುಮೆಂಟ್‌ಗಳ ಫೈಲ್ ಹಿಡ್ಕೊಂಡು ಆರ್‌ಟಿಒ ಕಚೇರಿಗೆ ಹೋಗುವ ಅಗತ್ಯವೇ ಇರೋದಿಲ್ಲ. ಈ ವ್ಯವಸ್ಥೆಯನ್ನ ಬಹುತೇಕ ಎಲ್ಲ ರಾಜ್ಯಗಳೂ ಅಳವಡಿಸಿಕೊಂಡಿವೆ. ಈಚೆಗೆ ತೆಲಂಗಾಣದಲ್ಲೂ ಸಹ ಇದೇ ವಿಧಾನವನ್ನ ಜಾರಿಗೆ ತರುತ್ತಿದ್ದೇವೆ ಅಂತ ಹೇಳಿಕೊಂಡಿದ್ದಾರೆ.
ಆದರೆ, ಸಿಲಿಕಾನ್ ಸಿಟಿ ಬೆಂಗಳೂರು ಇರುವ ನಮ್ಮ ಘನ ಕರ್ನಾಟಕ ರಾಜ್ಯದ ಎಲ್ಲ ಡೀಲರ್‌ಗಳೂ ಇನ್ನೂ ನಾವು ಗಾಡಿ ಬುಕ್ ಮಾಡಿ ದುಡ್ಡು ಕೊಟ್ಟ ಮೇಲೆ, ಎಲ್ಲ ಡಾಕ್ಯುಮೆಂಟ್‌ಗಳನ್ನ ಒಂದು ಫೈಲ್‌ಗೆ ಹಾಕಿಕೊಂಡು ಕಂಕುಳಲ್ಲಿ ಚಚ್ಕೊಂಡು ಆರ್‌ಟಿಒ ಕಚೇರಿಗೆ ಓಡ್ತಾರೆ. ಅಲ್ಲಿ ಏನೇನಾಗುತ್ತೆ ಅಂತ ಗೊತ್ತಲ್ಲ.
ಆ ಮೇಲೆ ಮೂರ್ನಾಲ್ಕು ದಿನ ಆದ ಮೇಲೆ ನಮಗೆ ನಂಬರ್ ಪ್ಲೇಟ್ ವಿತ್ ಗಾಡಿ ಕೈಗೆ ಬರುತ್ತೆ. ನಮ್ಮದು ಡಿಜಿಟಲ್ ಕರ್ನಾಟಕ ಎಂದು ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು ?
ಇನ್ನು ಈ ವಿಚಾರವಾಗಿ ನೆಟ್ಟಿಗರು ಸಹ ಸಹಮತ ಸೂಚಿಸಿದ್ದಾರೆ. ಹೌದು, ಕಾರಿನ ಹೈಪೊಥೆಕೆಷನ್ ತೆಗೆದುಹಾಕಲು ಮಾತ್ರ 3000 ರೂಪಾಯಿ ಹಾಗೂ ವಿಳಾಸ ಬದಲಾವಣೆಗೆ 1500 ರೂಪಾಯಿ ಆಗುತ್ತದೆ. ಬಿಜೆಪಿ ಸರ್ಕಾರ ಇದ್ದಾಗಲೂ ಮಾಡಲಿಲ್ಲವೇ ಅಥವಾ ಮಾಡಿದ್ದನ್ನು ಪ್ರಸ್ತುತ ಸರ್ಕಾರ ತೆಗೆದು ಹಾಕಿತೇ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣ ಭಟ್ ಅವರು, ಮಾಡಲಿಲ್ಲ ಎಂದಿದ್ದಾರೆ. ಕೇರಳದಲ್ಲಿ ವಾಹನ ನೋಂದಣಿಯಾದ ನಂತರವೇ ರಸ್ತೆಗೆ ಇಳಿಯುವುದಕ್ಕೆ ಅವಕಾಶ ಇದೆ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಗೋಳಿಕೈ ಚಿದಂಬರ ಎನ್ನುವವರು, ಮೂರು ತಿಂಗಳ ನಂತರ ಒಂದು ಖಾಲಿ ಕವರ್ ರಿಜಿಸ್ಟರ್ ಪೋಸ್ಟ್‌ನಲ್ಲಿ ಮನೆಗೆ ಬರುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ಈ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications