ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ

By: ಬಿ.ಎಂ. ಲವಕುಮಾರ್, ಮೈಸೂರು
Subscribe to Oneindia Kannada

"ಹೀಗೇ ಆದ್ರೆ ಮುಂದೊಂದು ದಿನ ಭೀಕರ ಜಲಕ್ಷಾಮ ಎದುರಾಗುತ್ತದೆ" ಎಂದು ಹಿರಿಯರು, ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದರು. ಅದೀಗ ನಿಜವಾಗಿದೆ. ಕರ್ನಾಟಕ ಕೇಳರಿಯದಂತಹ ಬರಗಾಲ ಎದುರಿಸುತ್ತಿದೆ. ಬಯಲು ಪ್ರದೇಶ ಅತ್ಲಾಗಿರಲಿ ಮಲೆನಾಡುಗಳಲ್ಲೇ ಭೀಕರ ಜಲಕ್ಷಾಮ ಎದುರಾಗಿದೆ.

ಈ ಬಾರಿಯ ಬೇಸಿಗೆ ಅದರ ಅನುಭವವನ್ನು ನಮಗೆ ತೆರೆದಿಟ್ಟಿದೆ. ಕೆರೆಗಳು ಒಣಗಿ ಬಿರುಕು ಬಿಟ್ಟಿವೆ. ಬಾವಿಗಳಲ್ಲಿ ನೀರು ತಳ ಸೇರಿದೆ. ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ನದಿಯಲ್ಲಿ ನೀರು ಹರಿಯುತ್ತಿಲ್ಲ. ಅಣೆಕಟ್ಟೆಗಳು ಭಣಭಣ ಎನ್ನುತ್ತಿವೆ. ಇದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಂಡು ಬರುತ್ತಿರುವ ದೃಶ್ಯ.

ಬಿಸಿಲಿನ ಝಳ ಮೈ ಸುಡುತ್ತಿದೆ.. ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. ಬೇರೇನು ಬೇಡ ಬೇರು ಕೊಡಿ ಸಾಕು ಎನ್ನುವ ಸ್ಥಿತಿಗೆ ಕೆಲವು ಗ್ರಾಮೀಣ ಪ್ರದೇಶದಲ್ಲಿ ಜನ ಬಂದು ನಿಂತಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ವಾಡಿಕೆಯ ಮಳೆಯಾಗುತ್ತಿಲ್ಲ. ಬರುವ ಮಳೆಯೂ ಸಕಾಲದಲ್ಲಿ ಸುರಿಯುತ್ತಿಲ್ಲ. ಇದರಿಂದ ಮಳೆ ಬಂದರೂ ಪ್ರಯೋಜನವಾಗುತ್ತಿಲ್ಲ. ಮೊದಲೆಲ್ಲ ಯುಗಾದಿ ಕಳೆಯುತ್ತಿದ್ದಂತೆಯೇ ಮಳೆಯೂ ಆರಂಭವಾಗುತ್ತಿತ್ತು. ಜೂನ್ ಜುಲೈನಲ್ಲಿ ಎಡೆಬಿಡದೆ ಮಳೆ ಸುರಿದು ಮಲೆನಾಡಿನಲ್ಲಿ ನೀರಿನ ಸೆಲೆಯಿರುವ ಸ್ಥಳಗಳಲ್ಲಿ ಜಲ ಹುಟ್ಟಿ ನೀರು ಹರಿಯುತ್ತಿತ್ತು. ಬೆಟ್ಟಗುಡ್ಡಗಳ ಮೇಲಿನಿಂದ ನೀರು ಉಕ್ಕಿ ಬರುತ್ತಿತ್ತು. [ಉಡುಪಿಯಲ್ಲೂ ಬರ, ಶ್ರೀಕೃಷ್ಣನಿಗೆ ಕೇಳುವುದೇ ಮೊರೆ?]

Drought in Malenadu Karnataka : Who is responsible for it

ಹಿರಿಯರು ತಮ್ಮೂರಿನ ಬೆಟ್ಟದಲ್ಲಿ ಮಳೆಯಾಗಿ ಜಲ ಉಕ್ಕಿ ಹರಿದರೆ ಈ ಬಾರಿ ಉತ್ತಮ ಮಳೆಯಾಗಿದೆ. ಮುಂದಿನ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಿದ್ದರು. ಇಂತಹ ಅನುಭವದ ಮಾತುಗಳನ್ನು ಕೇಳಿದರು ಹಲವರಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಅಂತಹ ನೀರಿನ ಸೆಲೆಗಳು ಕಾಣುತ್ತಿಲ್ಲ. ಮಳೆಗಾಲ ಕಳೆದರೂ ಹಿಂದಿನ ಕಾಲದಲ್ಲಿ ಜಲ ಹುಟ್ಟಿ ನೀರು ಹರಿಯುತ್ತಿತ್ತು ಎಂದು ಹೇಳಲಾಗುತ್ತಿರುವ ಸ್ಥಳಗಳಲ್ಲಿ ನೀರು ಕಾಣುತ್ತಿಲ್ಲ.

ಕೊಡಗಿನಲ್ಲೂ ಬತ್ತಿದ ಜೀವಸೆಲೆ : ಕಾವೇರಿ ತವರು ಕೊಡಗಿನಲ್ಲಿ ಇಂತಹ ಜಲದ ಸೆಲೆಗಳು ದಾರಿಯುದ್ದಕ್ಕೂ ಕಾಣಸಿಗುತ್ತಿದ್ದವು. ಈಗ ಅವುಗಳೆಲ್ಲವೂ ಬತ್ತಿ ಹೋಗಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕೊಡಗಿನಂತಹ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಎಷ್ಟೇ ಮಳೆ ಸುರಿದರೂ ಅಲ್ಲಿ ನೀರು ಇಂಗುವುದಿಲ್ಲ ಎಲ್ಲವೂ ಹರಿದು ನದಿ ಸೇರುತ್ತದೆ. [ಕಾವೇರಿ ತವರಲ್ಲೂ ಬತ್ತಿದ ಜೀವಸೆಲೆ, ನೀರಿಗೆ ಬರ]

ಇದರಿಂದಾಗಿ ಇತ್ತೀಚೆಗೆ ಕೊಡಗಿನಲ್ಲಿಯೂ ಅಂತರ್ಜಲದ ಸಮಸ್ಯೆ ಎದುರಾಗಿದೆ. ಸುಮಾರು ಎರಡು ದಶಕಗಳ ಹಿಂದೆ ಕಾಫಿ ತೋಟ ಹೆಚ್ಚು ಇರಲಿಲ್ಲ. ಏಲಕ್ಕಿ ತೋಟ ಹೆಚ್ಚಾಗಿತ್ತು. ಏಲಕ್ಕಿ ತೋಟ ಸದಾ ತಂಪನ್ನು ಬಯಸುತ್ತದೆ. ಅಲ್ಲಿ ಒತ್ತೊತ್ತಾಗಿ ಮರಗಳು ಇರಲೇಬೇಕು. ಏಲಕ್ಕಿ ತೋಟದಲ್ಲಿ ಮರಗಿಡಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು.

Drought in Malenadu Karnataka : Who is responsible for it

ಕಾರಣಗಳು ಇಲ್ಲಿವೆ : ಏಲಕ್ಕಿ ತೋಟ ನಾಶವಾಗಿ ಕಾಫಿ ತೋಟವಾಗಿ ಮಾರ್ಪಾಡಾಯಿತೋ ಎಲ್ಲವೂ ಉಲ್ಟಾಪುಲ್ಟಾ ಆಗಿದೆ. ಪ್ರಕೃತಿ ನಾಶವಾಗಿದೆ. ಇದರೊಂದಿಗೆ ಕಾರ್ಮಿಕರ ಸಮಸ್ಯೆ, ನಷ್ಟವಾಗುತ್ತಿರುವ ಕಾರಣದಿಂದ ಭತ್ತದ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಭತ್ತದ ಗದ್ದೆಯಲ್ಲಿ ಸುಮಾರು ಮೂರ‍್ನಾಲ್ಕು ತಿಂಗಳು ನೀರನ್ನು ನಿಲ್ಲಿಸುವುದರಿಂದ ಅಂತರ್ಜಲ ಹೆಚ್ಚುತ್ತಿತ್ತು.

ಇವತ್ತು ಗದ್ದೆಗಳು ತೋಟಗಳಾಗಿವೆ, ನಿವೇಶನಗಳಾಗಿವೆ. ಇನ್ನು ಕೆಲವು ಕಡೆಗಳಲ್ಲಿ ನಾಟಿ ಮಾಡಲು ಸಾಧ್ಯವಾಗದೆ ಪಾಳು ಬಿದ್ದಿವೆ. ಆಧುನಿಕತೆಯ ಭರದಲ್ಲಿ ನಮಗೆ ನಾವೇ ವಂಚನೆ ಮಾಡಿಕೊಳ್ಳುತ್ತಿದ್ದೇವೆ ಅದರ ಪರಿಣಾಮ ಪ್ರಕೃತಿ ಮೇಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ಶಾಲೆಯಲ್ಲಿ ಮಳೆಕೊಯ್ಲು ಮಾಡಲೇಬೇಕೆಂಬ ಯೋಜನೆ ಜಾರಿಗೆ ತರಲಾಯಿತು. ಒಂದಿಷ್ಟು ಶಾಲೆಗಳಲ್ಲಿ ಅನುಷ್ಠಾನವೂ ಆಯಿತು. ಒಂದಷ್ಟು ಹಣ ಬಿಡುಗಡೆಯಾಗಿ ನಾಮಕಾವಸ್ಥೆಗೆ ಯೋಜನೆ ಎಂಬಂತಾಯಿತು. ಇವತ್ತು ಕೆಲವೊಂದು ಶಾಲೆಗಳಲ್ಲಿ ಯೋಜನೆಯ ಅವಶೇಷಗಳು ಕಾಣಸಿಗುತ್ತಿವೆ. ಇದರಿಂದ ಹಣ ಪೋಲಾಯಿತೇ ವಿನಃ ಪ್ರಯೋಜನವಂತು ಆಗಲೇ ಇಲ್ಲ.

Drought in Malenadu Karnataka : Who is responsible for it

ವಿದ್ಯಾಬೋಧಿನಿ ಶಾಲೆಯ ಶ್ಲಾಘನೀಯ ಕಾರ್ಯ : ಜಲಸಂರಕ್ಷಣೆ ವಿಚಾರ ಬಂದಾಗ ನಮಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆ ನೆನಪಾಗುತ್ತದೆ. ಅವರ ಕಾರ್ಯವೈಖರಿ ಇಷ್ಟವಾಗುತ್ತದೆ. [ಕಾಡಿನಲ್ಲೇ ನೆಲೆಸಿರುವ ಸುಳ್ಯದ ಕೆಂಚಪ್ಪನ ರೋಚಕ ಕಥೆ!]

ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಅಂತರ್ಜಲದ ಮಟ್ಟ ಕುಸಿಯುತ್ತದೆ. ಅದನ್ನು ತಡೆಯಬೇಕಾದರೆ ಈಗಿನಿಂದಲೇ ಮಳೆ ಕೊಯ್ಲುನೊಂದಿಗೆ ಜಲಸಂರಕ್ಷಣೆ ಮಾಡಬೇಕೆಂದು ಕೆಲ ದಶಕಗಳ ಹಿಂದೆಯೇ ಅಲ್ಲಿನ ಶಿಕ್ಷಕರು ತೀರ್ಮಾನಿಸಿದ್ದರು. ಇದಕ್ಕೆ ಆಡಳಿತ ಮಂಡಳಿ ಪ್ರೋತ್ಸಾಹ ನೀಡಿತ್ತು. ಪರಿಣಾಮ ಜಲಸಂರಕ್ಷಣೆ ಪಾಠವನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಯಿತು.

ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿಗಳಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸಿದರೆ ಅದು ಮುಂದೆ ಪರಿಣಾಮಕಾರಿಯಾಗುತ್ತದೆ ಎಂಬುವುದನ್ನು ಅರಿತು ಜಲಸಂರಕ್ಷಣೆಯನ್ನು ಮಳೆ ಕೊಯ್ಲಿನಂತಹ ಪರಿಕಲ್ಪನೆಯೊಂದಿಗೆ ಕಲಿಕೆಯ ಒಂದು ವಿಷಯವಾಗಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆ ಮಾಡಿರುವುದು ಶ್ಲಾಘನೀಯ ಕಾರ್ಯ.

Drought in Malenadu Karnataka : Who is responsible for it

ಬಾಳಿಲದ ವಿದ್ಯಾಬೋಧಿನಿ ಶಾಲೆಯು ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 5 ಕಿ.ಮೀ ದೂರದಲ್ಲಿದೆ. "ನೀರ ಹನಿಗೆ ನೂರು ಬೆಲೆ" ಎಂಬ ಸಂದೇಶದೊಂದಿಗೆ ನೀರಿಗಿರುವ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರಿಗೆ ತಿಳಿಸಲಾಗುತ್ತಿದೆ.

ಶಾಲೆಯಲ್ಲಿ ಜಲಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭೂಮಿಗೆ ಬೀಳುವ ಮಳೆಯ ಒಂದೊಂದು ಹನಿಯೂ ಅಮೂಲ್ಯವಾಗಿದ್ದು, ಅದನ್ನು ಇಂಗಿಸುವ ಮೂಲಕ ಅಂತರ್ಜಲವನ್ನು ವೃದ್ದಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪಾಠವಾಗಿದೆ. ಶಾಲಾ ಸಂಕೀರ್ಣದಲ್ಲಿ ಬಿದ್ದ ಒಂದೊಂದು ನೀರಿನ ಹನಿಯೂ ಇಂಗುವಂತೆ ವಿದ್ಯಾರ್ಥಿಗಳು ಮಾಡುತ್ತಾರೆ. ಶಾಲೆಯ ಛಾವಣಿ ನೀರನ್ನು ಪೈಪ್ ಮೂಲಕ ಶುದ್ಧೀಕರಿಸಿ ಕೊಳವೆ ಬಾವಿಗೆ ಮರುಪೂರಣ ಮಾಡುವ ಕಾರ್ಯವೂ ನಡೆಯುತ್ತಿದೆ.

ಮತ್ತೊಂದೆಡೆ ಶಾಲೆಯ ಮುಂಭಾಗದಲ್ಲಿ ಕೃತಕ ಹೊಂಡವನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಆದ ನೀರಿನ ಮಟ್ಟದ ಸುಧಾರಣೆಯನ್ನು ವಿವರಿಸುವ ವಿವರಗಳು ಮತ್ತು ಪ್ರಾಯೋಗಿಕ ಮಾದರಿಗಳಿವೆ. ಸಂಗ್ರಹಿಸಿದ ಛಾವಣಿ ನೀರನ್ನು ಸೋಸಿ ಕೊಳವೆ ಬಾವಿಗೆ ನೇರವಾಗಿ ಹರಿಸುವ ಮೂಲಕ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ನೆಡಲಾದ ಪ್ರತಿ ಗಿಡಕ್ಕೂ ಇಂಗು ಗುಂಡಿಗಳನ್ನು ತೆಗೆದು ನೆಟ್ಟ ಗಿಡಗಳ ಬುಡದಲ್ಲಿ ತೇವಾಂಶ ಉಳಿಯುವಂತೆ ನೋಡಿಕೊಳ್ಳಲಾಗುತ್ತಿದೆ. [ನೀರಿನ ಸದ್ಬಳಕೆಗೆ ಮನೆಯಲ್ಲಿ ಮಳೆನೀರು ಕೊಯ್ಲು]

Drought in Malenadu Karnataka : Who is responsible for it

ಪಾಠದೊಂದಿಗೆ ಗಿಡಮರ, ಮಣ್ಣು, ನೀರಿನೊಂದಿಗೆ ನಿರಂತರ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳು ಮಳೆಕೊಯ್ಲು, ಜಲಸಂರಕ್ಷಣೆ ಮುಂತಾದ ವಿಚಾರಗಳ ಬಗ್ಗೆ ಹೆಚ್ಚಿನ ಅರಿವು ಪಡೆದು ಜಲಸಾಕ್ಷರರಾಗುವುದರೊಂದಿಗೆ "ನಮ್ಮ ನೀರು ನಮಗೆ" ಎಂಬ ಶಾಲೆಯ ಧ್ಯೇಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

ಇಂತಹ ಕಾರ್ಯಗಳನ್ನು ಇತರೆ ಶಾಲೆ, ರೈತರು, ಸಂಘ ಸಂಸ್ಥೆಗಳು ಮಾಡಿದರೆ ರಾಜ್ಯದಲ್ಲಿ ಎದುರಾಗುತ್ತಿರುವ ಅಂತರ್ಜಲ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಾಗಬಹುದು. ಆದರೆ ಬೆಂಕಿ ಬಿದ್ದಾಗ ಬಾವಿ ತೋಡುವ ಆಡಳಿತಾರೂಢರಿಗೆ ಅಂತಹದೊಂದು ಕಲ್ಪನೆಯಾದರೂ ಹೇಗೆ ಬರಬೇಕು?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For the past few years even malenadu in Karnataka is facing severe drought. Who is responsible for it? We cannot blame the nature. We are converting cultivating land into residential place, villages into concrete jungle. Amid these, Vidyabodhini school in Sullia stands apart with rainwater harvesting done scientifically.
Please Wait while comments are loading...