ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ವಿಶಿಷ್ಟ ಹಬ್ಬ 'ಕೈಲ್‌ ಮುಹೂರ್ತ'

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Kail muhurta in Coorg
ಸುರಿಯುವ ಮಳೆಗೆ... ಕೊರೆಯುವ ಚಳಿಗೆ... ಸಮಯದ ಅರಿವಿಲ್ಲದೆ ವಿಶಾಲ ಗದ್ದೆ ಬಯಲನ್ನು ಉತ್ತು, ಬಿತ್ತಿ, ತಿಂಗಳಾನುಗಟ್ಟಲೆ ಸೊಂಟ ಬಗ್ಗಿಸಿ ಕೆಸರುಗದ್ದೆಯಲ್ಲಿ ನಾಟಿ ಮಾಡಿ ಮುಗಿಸಿದ ಕೊಡಗಿನ ಮಂದಿ ಮುಂದೆ ಬರಲಿರುವ "ಕೈಲ್‌ ಮುಹೂರ್ತ" ಹಬ್ಬಕ್ಕಾಗಿ ಕಾಯುವುದು ಮಾಮೂಲಿ.

ಈ ಕೊಡಗಿನವರ ಪಾಲಿಗೆ ಮನರಂಜನೀಯ ಹಬ್ಬ. ಗದ್ದೆ ಕೆಲಸದಲ್ಲಿ ದೇಹವನ್ನು ದಂಡಿಸಿದವರು ಹೊಟ್ಟೆ ತುಂಬಾ ಉಂಡು... ಕಂಠಮಟ್ಟ ಕುಡಿದು... ಸಂಭ್ರಮಿಸುವ ಹಾಗೂ ಮೈದಾನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಕೌಶಲ್ಯತೆಯನ್ನು ಪ್ರದರ್ಶಿಸುವ ಹಬ್ಬವೂ ಹೌದು. ಅಷ್ಟೇ ಅಲ್ಲ ಕೊಡಗಿನವರಿಗೆ ಇದೊಂದು ಆಯುಧಪೂಜೆ.

ಕೊಡಗಿನ ಆಯುಧಪೂಜೆ : ಹಾಗೆ ನೋಡಿದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳೆಲ್ಲವೂ ಇತರೆಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ಭಿನ್ನ, ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇಲ್ಲಿಯ ಹಬ್ಬಗಳ ಆಚರಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಪ್ರತಿಯೊಂದು ಹಬ್ಬವೂ ಭತ್ತದ ಕೃಷಿಗೆ ಅನುಗುಣವಾಗಿ ಆಚರಣೆಗೆ ಬಂದಿರುವುದು ಗೋಚರಿಸುತ್ತದೆ. ಜೊತೆಗೆ ಎಲ್ಲಾ ಹಬ್ಬಗಳ ಹಿಂದೆಯೂ ಶೂರತ್ವ, ಕ್ರೀಡೆಯ ಹಿನ್ನೆಲೆ, ಸಂಪ್ರದಾಯದ ಕಾಂತಿಯೊಂದಿಗೆ ಸಂಭ್ರಮ ಉಲ್ಲಾಸ ಎದ್ದು ಕಾಣುತ್ತಿರುತ್ತದೆ.

"ಕೈಲ್‌ಮುಹೂರ್ತ" ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್‌ಪೊಳ್ದ್" ಎಂದು ಕರೆಯಲಾಗುತ್ತದೆ. "ಕೈಲ್" ಎಂದರೆ ಆಯುಧ "ಪೊಳ್ದ್" ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ... "ಕೈಲ್‌ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಖಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.

ಕೈಲ್‌ ಮುಹೂರ್ತ ವೈಶಿಷ್ಟ್ಯ : ಕೊಡಗಿನಲ್ಲಿ ಕೈಲ್‌ ಮುಹೂರ್ತ ಹಬ್ಬದ ದಿನದಂದು ಮೇಲ್ನೋಟಕ್ಕೆ ಕಂಡುಬರುವ ಹಬ್ಬದ ದೃಶ್ಯಗಳೆಂದರೆ ಊರ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ನಡೆಯುತ್ತಿರುತ್ತವೆ. ಮನೆಗಳಲ್ಲಿ ಹಂದಿಮಾಂಸದ ಸಾರು ಹಾಗೂ ಅಕ್ಕಿ ಕಡಂಬಿಟ್ಟು(ಕಡುಬು)ನ ಅಡುಗೆ ಘಮಘಮಿಸುತ್ತಿರುತ್ತದೆ. ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಸಾಂಪ್ರದಾಯಿಕವಾಗಿ ಮದ್ಯ ಸೇವಿಸಿ ಖುಷಿಯಾಗಿರುತ್ತಾರೆ.

ರೋಮಾಂಚನಕಾರಿ ಹಿನ್ನೆಲೆ : ಹಾಗೆಂದು ಕೈಲ್‌ಮುಹೂರ್ತ ಹಬ್ಬ ಕುಡಿಯುವುದು ತಿನ್ನುವುದರಲ್ಲಿ ಕಳೆದು ಹೋಗುವುದಿಲ್ಲ. ಈ ಹಬ್ಬಕ್ಕೆ ತನ್ನದೇ ಆದ ಆಚರಣೆ ಹಾಗೂ ರೋಮಾಂಚನಕಾರಿ ಹಿನ್ನೆಲೆಯಿದೆ. ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ದಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು. ಆದುದರಿಂದ ಅಂದಿನಿಂದ ಇಂದಿನವರೆಗೆ ಇಲ್ಲಿನವರು ಶೂರರೇ. ಕೋವಿಯನ್ನು ಹಿಡಿಯದ ಕೈಗಳೇ ಇಲ್ಲವೆನ್ನಬೇಕು.

ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು. ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ದಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ(ದೇವರಕೋಣೆ)ಯಲ್ಲಿಡಲಾಗುತ್ತಿತ್ತು. ಅಲ್ಲದೆ ಕಕ್ಕಡ ಮಾಸ (ಜು. 17ರಿಂದ ಆ. 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು.

English summary
Kail Muhurtha' or 'Kail poldh' is a festival celebrated by Kodavas in the first week of September every year. The event marks the end of transplanting in the paddy fields. Worship, use of arms and re dedication to the cause of the land are the important aspects of the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X