ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡಿದ ಜೀವಗಳಿಗೆ ಸಂತಸವನ್ನೀಯುವ ಹಬ್ಬ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Kodava festival in Madikeri
ದುಡಿಮೆಯಲ್ಲೇ ತಮ್ಮನ್ನು ತೊಡಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‌ಮುಹೂರ್ತ ಹಬ್ಬದ ಸಂದರ್ಭವೇ ಆಗಿತ್ತು. ಹಾಗಾಗಿ ಕೈಲ್‌ಮುಹೂರ್ತ ದುಡಿದ ಜೀವಗಳಿಗೆ ಸಂತಸವನ್ನೀಯುವ ಹಬ್ಬವಾಗಿ ಆಚರಣೆಯಾಗುತ್ತಾ ಬಂದಿದೆ. ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. (ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ.) ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗಿ ಕಾಫಿ ತೋಟಗಳು ತಲೆ ಎತ್ತಿರುವುದರಿಂದ ಹಾಗೂ ಎತ್ತಿನ ಬದಲಾಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳು ಬಂದಿರುವುದರಿಂದ ಎತ್ತುಗಳ ಬದಲಿಗೆ ಗೋಪೂಜೆ ಮಾಡುವುದು ಕೆಲವೆಡೆ ಕಂಡು ಬರುತ್ತದೆ.

ಹಿರಿಯರಿಂದ ಕಿರಿಯರಿಗೆ ಆಶೀರ್ವಾದ : ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸುತ್ತಾರೆ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಾರೆ. (ಇದನ್ನು ಕೊಡವ ಭಾಷೆಯಲ್ಲಿ "ಆಪ್‌ಪತರ್" ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು ತಳಿಯತಕ್ಕಿ ಬೊಳಕ್(ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಾರೆ. ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಬೇಡಿಕೊಳ್ಳುತ್ತಾರೆ. ಅಲ್ಲದೆ ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು. ಆದುದರಿಂದಲೇ ಇಂದಿಗೂ ಈ ಹಬ್ಬದಲ್ಲಿ ಮಾಂಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ.

ಪಂದಿಕರಿ ಕಡಂಬಿಟ್ಟಿಗೆ ಮದ್ಯ ಸಾಥ್ : ಇಂದು ಎಲ್ಲವೂ ಬದಲಾಗಿದೆ ಆದರೆ ಸಾಂಪ್ರದಾಯ ಉಳಿದುಕೊಂಡಿದ್ದರೂ ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್‌ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.

ಸಾಮಾನ್ಯವಾಗಿ ಕೈಲ್‌ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹದು. ಕೆಲವು ಮನೆಗಳಲ್ಲಿ ಕೈಲ್ ಮುಹೂರ್ತ ಹಬ್ಬಕ್ಕೆಂದೇ ಹಂದಿಗಳನ್ನು ಸಾಕಲಾಗುತ್ತದೆ. ಈ ಹಂದಿಗಳು ಸುಮಾರು 150ಕೆಜಿ ಗಿಂತಲೂ ಹೆಚ್ಚು ಬೆಳೆದಿರುತ್ತವೆ. ಇಂತಹ ಹಂದಿಗಳ ಮಾಂಸಕ್ಕೆ ತಿಂಗಳಿರುವಾಗಲೇ ಮುಂಗಡವಾಗಿ ಕಾಯ್ದಿರಿಸಲಾಗುತ್ತದೆ. ಹಬ್ಬದ ಹಿಂದಿನ ದಿನ ಅಂದರೆ ಸೆಪ್ಟೆಂಬರ್ 2ರಂದು ಜಿಲ್ಲೆಯಾದ್ಯಂತ ಅರ್ಧ ಭಾಗಕ್ಕಿಂತಲೂ ಹೆಚ್ಚಿನ ಹಂದಿಗಳು ಜನರ ಉದರ ಸೇರುತ್ತವೆ. ಪ್ರತಿ ಮನೆಯಲ್ಲಿ ಕನಿಷ್ಟ ಐದರಿಂದ ಹತ್ತು ಕೆಜಿಯಷ್ಟು ಮಾಂಸವನ್ನು ಉಪಯೋಗಿಸುತ್ತಾರೆ. ಜೊತೆಗೆ ವಿವಿಧ ಬಗೆಯ ಮದ್ಯಗಳು ಸಾಥ್ ನೀಡುತ್ತವೆ. ಅಂದು ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲದೆ ಒಟ್ಟಾಗಿ ಮದ್ಯ ಸೇವಿಸುವುದು ಸಂಪ್ರದಾಯವಾಗಿದೆ. ಅಲ್ಲದೆ ಕೈಲ್‌ಮುಹೂರ್ತ ಅಂಗವಾಗಿ ಹಲವು ದಿನಗಳ ಕಾಲ ಜಿಲ್ಲೆಯಾದ್ಯಂತ ಕ್ರೀಡಾಕೂಟಗಳು ನಡೆಯುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಬ್ಬ ಕಳೆದ ನಂತರ ಕೈಲ್‌ಮುಹೂರ್ತ ಸಂತೋಷಕೂಟ ಏರ್ಪಡಿಸಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಾರೆ.

ಸಾಮಾನ್ಯವಾಗಿ ಕೈಲ್‌ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಕೈಲ್‌ಮುಹೂರ್ತ ಪ್ರತಿ ಕುಟುಂಬ ಹಾಗೂ ಊರಿನಲ್ಲಿ ಆತ್ಮೀಯ ಸಂಬಂಧ ಬೆಸೆಯುವ ಹಾಗೂ ಎಲ್ಲರೂ ಸಂಭ್ರಮ ಪಡುವ ಹಬ್ಬವಾಗಿದೆ.

English summary
Kail Muhurtha' or 'Kail poldh' is a festival celebrated by Kodavas in the first week of September every year. The event marks the end of transplanting in the paddy fields. Worship, use of arms and re dedication to the cause of the land are the important aspects of the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X