ಕಂಪ್ಯೂಟರ್ ಬರೋಕ್ಕೆ ಮುಂಚೆ ಬೆಂಗ್ಳೂರ್ ಜೀವನ

ಆದರೆ ಅವರ ಹಿಂದೆಯೇ ಬಂದ ಫ್ರೆಂಚ್ ರಾಷ್ಟ್ರಪತಿ ನಿಕೊಲಾಸ್ ಸರಕೋಜಿ ಮತ್ತು ಅವರ ಪತ್ನಿ ಕಾರ್ಲ ಬ್ರೂನಿ ಸರಸರನೆ ಬೆಂಗಳೂರಿಗೇ ಮೊದಲು ಬಂದು ಇಳಿದರು! ಐಟಿ ಹಬ್ ಎಂದು ಇಷ್ಟು ಹೆಸರುವಾಸಿ ಆಗುವ ಮುಂಚೆ, ಊರು ಹೇಗಿತ್ತು? ಬೆಂಗಳೂರಿನ ಜನ ಜೀವನ ಹೇಗಿತ್ತು ಎಂದು ನೋಡೋಣ ಬನ್ನಿ....
ಬೆಂಗಳೂರು ಗತ ವೈಭವ ಮಾಲಿಕೆ ಲೇಖನಗಳನ್ನು ಓದಿರಿ
ನಸುಕಿನಿಂದ ಬೆಳಕಿಗೆ ತಿರುಗುವ ಮುಂಚೆ, ಊರಿಗೆ ತನ್ನದೇ ಒಂದು ವೈಶಿಷ್ಟ್ಯವಿತ್ತು.
ಕೊರೆಯುವ ಚಳಿ ಊರಿಗೆಲ್ಲಾ ಒಂದು ಬ್ಲಾಂಕೆಟ್ ಹೊದಿಸಿ, ಜನರಿಗೆ, "ಏಳಬೇಕೆ...." ಎಂದು ಕಂಬಳಿಯನ್ನು ಎಳೆದುಕೊಂಡು ಬೆಚ್ಚಗೆ ಇನ್ನೂ ಸ್ವಲ್ಪ ಹೊತ್ತು ಮಲಗುವಾ" ಎಂಬ ಆಸೆ. ಕೊನೆಗೆ ಸೊಳ್ಳೆ ಪರದೆಯಿಂದ ಮೈಮುರಿಯುತ್ತಾ ಹೊರಗೆ ಬಂದು, ನಡುಗುವ ಚಳಿಯಲ್ಲಿ ನಂಜನಗೂಡಿನ ಬಿ.ವಿ. ಪಂಡಿತರ ಪಿಂಕ್ ಬಣ್ಣದ ಹಲ್ಲು ಪುಡಿಯಿಂದ ಹಲ್ಲುಜ್ಜಿ ಕಾಫಿ ಕುಡಿದರೆ, ಬೆಳಗಿನ ಜಾವದ ಫಿಲ್ಟರ್ ಕಾಫಿಯ ರುಚಿಯೇ ಬೇರೆ! ಚಳಿಗೂ, ಕಾಫಿಗೂ ಅದೇನೊ... ಯಾವಾಗಲೂ ಒಂದು ವಿಶೇಷ ಕಂಪಿನ ನಂಟು.
ಅದಕ್ಕಿಂತಲೂ ಮುಂಚೆ, ಹಕ್ಕಿಗಳು ಚಿಲಿಪಿಲಿ ಮಾಡಲು ಶುರುಮಾಡುವುದಕ್ಕಿಂತಲೂ ಮುಂಚೆ, ಬೆಂಗಳೂರಿನ ಮೊದಲ ಕೆಲಸಗಾರ "ಹಾಲು ಕರೆಯುವನು" ಬಂದಾಗ, ಮನೆಯೊಡತಿ, ಹಸು ಕರುವಿನ ಗೊರಸಿನ ಶಬ್ದ ಕೇಳಿ, ಎದ್ದು, ಪುಟ್ಟನ ಹೊದಿಕೆಯನ್ನು ಸರಿಯಾಗಿ ಹೊದಿಸಿ ಹಾಲಿಗೆ ಕಾಯುತ್ತಿದ್ದಳು.
ಹಾಲು ಕರೆಯುವ ಹರಿಶ್ಚಂದ್ರ ಪಾತ್ರೆಯಲ್ಲಿ ನೀರಿಲ್ಲವೆಂದು ಪಾತ್ರೆಯನ್ನು ತಲೆಕೆಳಗೆ ಮಾಡಿಸಿತೋರಿಸಿ ಹಾಲು ಕರೆಯುಷ್ಟರಲ್ಲಿ, ಡಿಕಾಕ್ಷನ್ ರೆಡಿ. ಕಾಫಿ ತಯಾರಾಗುವಷ್ಟರಲ್ಲಿ ರಾಯರು ಮುಖ ತೊಳೆದು ಹೊರಬರುವರು.
ಮೊದಲ ಸೂರ್ಯನ ಕಿರಣವನ್ನು ವೀಕ್ಷಿಸುತ್ತಾ, ಪತಿ ಪತ್ನಿಯರು ಮನೆಯ ಮುಂದಿದ್ದ ಸಣ್ಣ ತೋಟದಲ್ಲಿ ಕುಳಿತು ಕಾಫಿಯನ್ನು ಹೀರುವರು. ಸ್ವರ್ಗದಲ್ಲಿ ಇಂದ್ರನಿಗೇ ಕಿಚ್ಚು ಬರುವ ಸೀನ್ ದಿನಾ!
ಹೋಗಪ್ಪ ಆಫೀಸಿಗೆ : ರಾಯರಿಗೋ ಆಫೀಸಿಗೆ ರೆಡಿಯಾಗಿ ಹೋಗಲು ಟೈಮ್ ಇದೆ; ಅವರೀಗ ಹೋಗಬೇಕು, ಏ.ಜೀಸ್. ಆಫೀಸಿಗೆ.
ಆಷ್ಟರಲ್ಲಿ ರಾಯರ ತಮ್ಮ ದಢದಢನೆ ಎದ್ದು ತಲೆಗೆ ಒಂದು ಚೆಂಬು ನೀರು ಸುರಿದು ಕೊಂಡು, ಪ್ಯಾಂಟು, ಶರ್ಟು ಹಾಕಿಕೊಳ್ಳುತ್ತಲೇ, ಅತ್ತಿಗೆ ಕೊಟ್ಟ ರಾತ್ರಿಮಿಕ್ಕಿದ ಹಾಗೂ ಅವನಿಗೆ ಪ್ರಿಯವಾದ ಅಕ್ಕಿ ರೊಟ್ಟಿಯನ್ನು ಬಾಯಲ್ಲಿ ಕಚ್ಚಿಕೊಂಡು ಶೂ ಹಾಕಿಕ್ಕೊಳ್ಳುತ್ತಾ, ಕೈಲಿ ಹಿಂದಿನದಿನದ ಪಿ. ಆರ್.ರಾಮಯ್ಯನವರ "ತಾಯಿನಾಡು" ಅಥವ ವಾರಪತ್ರಿಕೆ "ಪ್ರಜಾಮತ"ವೋ ಇಟ್ಟುಕೊಂಡು ಬಿ.ಇ.ಎಲ್. ಫಾಕ್ಟರಿ ಬಸ್ಸು ಹಿಡಿಯಲು ಓಡುವನು!
"ಈ ಫ್ಯಾಕ್ಟರೀಲಿ ಕೆಲಸ ಮಾಡೋವ್ರುದು ದಿನಾ ಇದೇ ಗೋಳು, ಒಂದ್ನಿಮಿಷ ಪುರುಸೊತ್ತಿರೊಲ್ಲ" ಎಂದು ರಾಯರ ಉದ್ಗಾರ...
ಆಗಲೇ ಬೆಂಗಳೂರಿನ ರಸ್ತೆ ಕೊನೆಯಲ್ಲಿ, ಸರ್ಕಲ್ ಗಳಲ್ಲಿ ಸಣ್ಣ ಸಣ್ಣ ಗುಂಪು ಫ್ಯಾಕ್ಟರಿಗಳಿಗೆ ಹೋಗಲು ಬಸ್ಸಿಗೆ ಕಾಯುತ್ತಿರುವವರನ್ನು ನೋಡಬಹುದು.
ಯಾರ‍್ಯಾರು ಇಂಜಿನೀರಿಂಗ್ ಮತ್ತು ಡಿಪ್ಲೊಮಾ ಓದಿದ್ದರೋ ಅವರನ್ನು ಬಸ್ಸಿನೊಳಗೆ ತುಂಬಿಕೊಂಡು ಊರಚೆ ಇರುವ ಫ್ಯಾಕ್ಟರಿಗೆ ಹಾಕಿ ಬರುತ್ತಿದ್ದದ್ದು ಬೆಂಗಳೂರಿನ ಪ್ರಾಚೀನ ಕಾಲದಿಂದಲೂ ಬಂದ ಒಂದು ಸಂಪ್ರದಾಯವೇ ಅನ್ನಿ.
ಐ.ಟಿ.ಐ, ಬಿ.ಇ,ಎಲ್, ಎಚ್.ಏ.ಎಲ್., ಎಚ್.ಎಮ್.ಟಿ. ಇತ್ಯಾದಿ ಕಂಪನಿಗಳು ಬೆಳದಿದ್ದು ನಿದ್ದೆಗೆಟ್ಟು ಕೆಲಸ ಮಾಡಿದ ಈ ತ್ಯಾಗಿಗಳಿಂದಲೇ!
"ಯಾವ ಜನ್ಮದ ಶಾಪವೋ, ಈ ಚಳಿಯಲ್ಲಿ ಹೋಗಿ ಸಾಯಬೇಕು" ಅಂತ ಅಂದುಕೊಂಡರೂ, ಫುಲ್ ಸ್ಲೀವ್ಸ್ ಶರ್ಟು, ಸ್ಲೀವ್ಲೆಸ್ ಸ್ವೆಟರೋ, ಕತ್ತಿಗೆ ಮಫ್ಲರ್ ಸುತ್ತಿಕೊಂಡು ನೆಗಡಿ ಬಂದ ಮೂಗಿಗೆ ಯೂಕಲಿಪ್ಟಸ್ ಹಚ್ಚಿ, ಇನ್ಹೇಲರ್ ಹಿಡಕೊಂಡು ಒಂದು ದಿನವೂ ಚಕ್ಕರ್ ಹಾಕದೆ ಬಂದು ಸೇರುವರು ಅವರವರ ಬಸ್ ಸ್ಟಾಪಿಗೆ.
ಬೆಂಗಳೂರು ಪ್ರಸಿಧ್ದಿಯಾಗಲು, ತನ್ನ ಛಾಪನ್ನು ಅಂತಾರಾಷ್ಟ್ರಮಟ್ಟದಲ್ಲಿ ಸಾರುವುದರಲ್ಲಿ ಇವರೆಲ್ಲರ ಕೊಡುಗೆ ಕಡಿಮೆಯೇನಿರಲಿಲ್ಲ....ಅದನ್ನು ಫಸ್ಟ್ "ಟೆಕ್ನಾಲಾಜಿಕಲ್ ರೆವಲ್ಯೂಷನ್" ಅಂತ ಕರೆದರೆ ತಪ್ಪಾಗಲಾರದು.
ಅದು ಅಷ್ಟಿಕ್ಕೇ ಬಿಟ್ಟಿದ್ದರೆ ಚೆನ್ನಾಗಿತ್ತಾ, ಅಂತ ಅನ್ನಿಸುತ್ತೆ, ಒಂದೊಂದುಸಲ....??
ನಿರೀಕ್ಷಿಸಿ: ಕಚೇರಿ ಚಿತ್ರಣ. . .[ಬೆಂಗಳೂರು]












Click it and Unblock the Notifications