ಕ್ರಿಕೆಟ್, ಸಿನಿಮಾ, ನಾಟಕ ಲಾಸ್ಟ್ ಸ್ಟಾಪ್ ಮಲ್ಲೇಶ್ವರ

ಎಲ್.ಟಿ.ಆದಿಶೇಶ್, ಕಸ್ತೂರಿರಂಗನ್, ಬಾಲಾಜಿ ಶ್ರೀನಿವಾಸನ್, ವರದರಾಜ್ ಅವರಿಂದ ಹಿಡಿದು ಬಿ.ಎಸ್.ಚಂದ್ರಶೇಖರ್, ಈ.ಏ.ಎಸ್. ಪ್ರಸನ್ನ, ಜಿ.ಆರ್. ವಿಶ್ವನಾಥ್, ಮತ್ತು ಈಗೀಗ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ವರಿಗೆ ಇಲ್ಲಿ ರಣಜಿ ಮತ್ತು ದುಲೀಪ್ ಟ್ರೋಫಿ ಪಂದ್ಯ ಆಡಿದ್ದಾರೆ. ಇಲ್ಲಿಗೆ ಬರುವ ಕೆಲವು ಪ್ರೇಕ್ಷಕರಿಗೆ ಇನ್ನೂ ದೊಡ್ಡ ಹುಚ್ಚಿತ್ತು. ಬಂದ ಟೀಮ್ಗಳು ಪಂದ್ಯ ಮುಗಿದ ಮೇಲೆ ಮದ್ರಾಸಿಗೆ ಹೋಗಿ ಭಾರತದ ಮೇಲೆ ಟೆಸ್ಟ್ ಆಡಲು ಹೋಗುತ್ತಿದ್ದಿದ್ದು ವಾಡಿಕೆ. ಈ ಭೂಪರೂ ಅವರ ಜೊತೆಯೇ ರಾತ್ರಿ ಟ್ರೈನ್ ಹತ್ತಿ ಮದ್ರಾಸಿಗೆ ಓಡುತ್ತಿದ್ದರು ಟೆಸ್ಟ್ ಮ್ಯಾಚ್ ನೋಡುವುದಕ್ಕೆ!
ಒಂದು ಹುಚ್ಚು ಹಿಡಿದವರಿಗೆ ಇನ್ನೊಂದು ಹುಚ್ಚು ಇರುವುದೂ ಸಾಮಾನ್ಯವೇ! ಕ್ರಿಕೆಟ್ ಹುಚ್ಚಿನ ವಿಷಯ ಈಗಷ್ಟೇ ನೋಡಿದೆವು.
*
ಸಿನಿಮಾ ಹುಚ್ಚು :ನಮ್ ಬಸ್ಸು ಕೆಂಪೇಗೌಡರಸ್ತೆಯಲ್ಲಿ ತಿರುಗಿದಾಗ ಶುರುವಾಗುತ್ತೆ ಸಿನಿಮಾ ಹುಚ್ಚು!
ಸಾಧಾರಣವಾಗಿ ಒಂದು ರಸ್ತೆಯಲ್ಲಿ ಎಷ್ಟು ಸಿನಿಮಾ ಥಿಯೇಟರ್‌ಗಳು ಇರುತ್ತವೆ. ಒಂದು ಅಥವಾ ಎರಡು. ಅಬ್ಬಾಬ್ಬಾ ಅಂದರೆ ಮೂರು. ಇಲ್ಲಿ ಒಂದು ಕಾಲದಲ್ಲಿ ಕನಿಷ್ಟ 10 ಸಿನಿಮಾ ಥಿಯೇಟರ‍್ಗಳಿದ್ದವು!
ಪ್ರಭಾತ್, ಸಾಗರ್, ಸ್ಟೇಟ್ಸ್, ಗೀತ, ಕೆಂಪೇಗೌಡ, ಹಿಮಾಲಯ, ಮೆಜೆಸ್ಟಿಕ್, ಅಲಂಕಾರ್, ಕಲ್ಪನ, ಜೈಹಿಂದ್, ಕಪಾಲಿ... ನಿಮಗೆ ಯಾವ ಭಾಷೆ ಬೇಕು, ಯಾವ ಹೀರೊ, 30 ಇಲ್ಲ 70 ಎಮ್. ಎಮ್. ಬೇಕಾ? ಇವೆಲ್ಲವೂ ಇಲ್ಲಿ ಸಿಗುತ್ತಿತ್ತು.
ಪಿಕ್ಚರ್ ನೋಡುವುದನ್ನು ಬಿಟ್ಟು ಬೆಂಗಳೂರಿನವರಿಗೆ ಬೇರೆ ಕೆಲಸವೇ ಇಲ್ವಾ ಅಂತ ಸಂದೇಹ ಬರುತ್ತಿತ್ತು ಹೊರಗಡೆಯಿಂದ ಬಂದವರಿಗೆ!
ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಕನ್ನಡ ಪಿಕ್ಚರ‍್ಗಳಿಗಾಗಿ ನೂಕು ನುಗ್ಗಲು, "ಎಕ್ಷ್ಟರಾ "ಟಿಕೆಟ್ಗಳಿಗೆ ಹೊಡೆದಾಟ (ಬ್ಲಾಕ್ ಮಾರ್ಕೆಟ್ಗೆ ಇನ್ನೊಂದು ಹೆಸರು!) ಇಲ್ಲಿ ಸರ್ವೇ ಸಾಮಾನ್ಯ! ಅವಾಗಲೂ ಪೋಲೀಸ್ ಕಾನ್ಸ್ಟೇಬಲ್‌ರಿಗೆ ಸುಗ್ಗಿಯೋ ಸುಗ್ಗಿ!
ಸುಭಾಷ್ ನಗರ ಸುತ್ತ ಮುತ್ತ: ಕೆಂಪೇಗೌಡರ ರಸ್ತೆ ದಾಟಿ, ಸುಭಾಷ್ ನಗರದ ಮೈದಾನವನ್ನು ಸುತ್ತಿ ನಮ್ಮ ಬಸ್ ರೈಲ್ವೇ ಸ್ಟೇಷನ್ ಸ್ಟಾಪಿಗೆ ಬಂದಾಗ ಒಂದು ಯುಗ ಅಂದರೆ ಏನು ಅನ್ನುವ ಐಡಿಯ ಬಂದಿರುತ್ತೆ ಈ ಬಸ್ ಹತ್ತಿ ಕೂತವರಿಗೆ!
ಸುಭಾಷ್ ನಗರದಲ್ಲಿ ಮುಂಚೆ ನೀರಿನ ಟ್ಯಾಂಕ್ ಇತ್ತಂತೆ. ಆಮೇಲೆ ಅದು ಮೈದಾನವಾಗಿ ಭಾಷಣ ಕುಟ್ಟೋದಕ್ಕೆ ಜವಾಹರ್ ಲಾಲ್ ನೆಹರು, ರಾಮ್ ಮನೋಹರ್ ಲಾಲ್ ಲೋಹಿಯಾ, ಮೊರಾರ್ಜಿ ದೇಸಾಯಿ ಮುಂತಾದವರು ಬರುತ್ತಿದ್ದರು.
ಸುಭಾಷ್ ನಗರದಲ್ಲೇ ಮಾಸ್ಟರ್ ಹಿರಣ್ಣಯ್ಯನವರ "ಲಂಚಾವತಾರ" ಮೊಟ್ಟ ಮೊದಲು ಕರ್ನಾಟಕಕ್ಕೆ ಪ್ರವೇಶವಾಯಿತು ನಾಟಕದ ರೂಪದಲ್ಲಿ. ಈಗ ಅದು ಬೃಹದಾಕಾರವಾಗಿ ಬೆಳೆದು ಜೀವನದ ಎಲ್ಲಾ ಹಂತದಲ್ಲಿ ಪ್ರವೇಶವಾಗಿ ಭದ್ರವಾಗಿ ತಳವೂರಿಕೂತಿದೆ.
ಲಂಚಾವತಾರವನ್ನು ಉದ್ಘಾಟನೆ ಮಾಡಲು ಜೆ. ಬಿ. ಮಲ್ಲಾರಾಧ್ಯ ಬಂದಿದ್ದರು. ಅವರನ್ನು ಸ್ವಾಗತ ಮಾಡುತ್ತಾ, ಹಿರಣ್ಣಯ್ಯನವರು, "ನಾವು ನಾಟಕಕಾರರು ಬದುಕುವುದು ಟಿಕೆಟ್ ತೊಗೊಂಡು ಬರೋ ಪಬ್ಲಿಕ್ನವರಿಂದ! ಐದಾಣೆ, ಎಂಟಾಣೆ ಪ್ರಭುಗಳೇ ನಮಗೆ ಊಟ ಹಾಕೋದು" ಅಂದರು! ತಕ್ಷಣವೇ ಮಲ್ಲಾರಾಧ್ಯರು ಹೊರಗಡೆ ಹೋಗಿ ಟಿಕೆಟ್ ಕೊಂಡುಕೊಂಡು ಬಂದು ಕೂತರು!
ರೈಲ್ವೇ ಸ್ಟೇಷನ್ ದಾಟಿದ ತಕ್ಷಣ, ಬಸ್ಸಿಗೆ ಏನಾಯಿತೋ ದೇವರಿಗೇ ಗೊತ್ತು!
ಮಲ್ಲೇಶ್ವರ ಸರ್ಕಲ್ : ರೇಸ್ ಕೋರ್ಸ ಹತ್ತಿರ ಬರುತ್ತಿದ್ದಂತೆ, ಡರ್ಬಿ ರೇಸಿನ ಕುದುರೆಯಂತೆ, ನಮ್ಮ ಬಸ್ಸ್ ಆನಂದರಾವ್ ಸರ್ಕಲ್ ದಾಟಿ, ಶೇಷಾದ್ರಿಪುರಂ ಹೈಸ್ಕೂಲ್ ಮುಂದೆ ಹೋಗಿ, ರಾಜಾಮಿಲ್ ದಿಂದ, ಒಂದೇ ಉಸಿರಲ್ಲಿ ಮಲ್ಲೇಶ್ವರ ಸರ್ಕಲ್ ಸ್ಟಾಪಿಗೆ ಧಾವಿಸಿ ಓಡಿತು.
ಮಲ್ಲೇಶ್ವರ ಮತ್ತು ಬಸವನಗುಡಿ ಬೆಂಗಳೂರಿನ ಎರಡು ಕಣ್ಣುಗಳ ಹಾಗೆ. ಇಂದಿಗೂ ಬೆಂಗಳೂರನ್ನು ಸರಿಯಾಗಿ ಆರ್ಥಮಾಡಿಕೊಳ್ಳಬೇಕಾದರೆ, ಅದರ ಸಂಸ್ಕಾರವನ್ನು ಕಂಡುಕೊಳ್ಳಬೇಕಾದರೆ ಈ ಎರಡು ಬಡಾವಣೆಗಳಂದಲೇ! ಈಗಲೂ ಬಹಳ ಜನ ಮನೆ ಕೊಂಡುಕೋಳ್ಳಬೇಕೆಂದರೆ, ಇಲ್ಲ ಬಾಡಿಗೆಗೆ ಬೇಕೆಂದರೆ ಬಸವನಗುಡಿ ಅಥವಾ ಮಲ್ಲೇಶ್ವರಕ್ಕೇ ಬರುತ್ತಾರೆ!
ನಮ್ಮ ಬಸ್ ಮಲ್ಲೇಶ್ವರ ಸರ್ಕಲ್ನಲ್ಲಿ ಲೆಫ್ಟ್ ತೊಗೊಂಡು ಮುಂದೆ ಮಾರ್ಗೋಸಾ ರಸ್ತೆಯಲ್ಲಿ ಬಲಕ್ಕೆ ತಿರುಗಿ ಹೋದರೆ ಸೀದಾ 18ನೇ ಕ್ರಾಸಿನ ತನಕ ಒಂದೇ ರಸ್ತೆ! ವಾಪಸ್ಸು ಬರುವಾಗ ಟಾಟಾ ಇನ್ಸ್ ಸ್ಟಿಟ್ಯೂಟ್ನಿಂದ ಸಂಪಿಗೆ ರಸ್ತೆಯಲ್ಲಿ ಬಂದು ಮಲ್ಲೇಶ್ವರದ ಮಾರ್ಕೆಟ್ ಮುಂದಿನಿಂದ ಮಲ್ಲೇಶ್ವರದ ಸರ್ಕಲ್ಗೆ ವಾಪಸ್ಸು ಬರುತ್ತಿತ್ತು.
ಮಾರ್ಗೋಸಾ ರಸ್ತೆ ಯಲ್ಲಿ ಮಲ್ಲೇಶ್ವರಂ ಟಿಫಿನ್ ರೂಮ್ ನಲ್ಲಿ ಎರಡನೇ ಕಾಫಿಯ ಜೊತೆ ಮಸಾಲ ದೋಸೆಗೆ ಕಾಯುತ್ತಿವವರನ್ನು ನೋಡಬಹುದು. 8ನೇ ಕ್ರಾಸಿನ ಗಣಪತಿ ದೇವಸ್ಥಾನಮುಂದೆ ಹೋದರೆ 16 ನೇ ಕ್ರಾಸಿನ ಮಲ್ಲೇಶ್ವರಂ ಹೈಸ್ಕೂಲ್ ಮುಂದೆ ಸ್ಟಾಪ್.
ದಾರಿಯಲ್ಲಿ ನಮ್ಮ ಬಸ್, ನಂದಿಗೆ ಹೋಗುವ ಹಾಗೆ ಇರುವ "ಅಪ್" ಹತ್ತುವುದಕ್ಕೆ ಆಗದೆ ಕಿಯ್ಯೋ ಮರ್ರೋ ಅಂತ ಕೂಗುತ್ತಾ, ಕಂಡಕ್ಟರ್ ಜೀವ ಭಯದಿಂದ ಎರಡೂ ಕೈಗಳಿಂದ ಬಾರ್ ಅನ್ನು ಹಿಡಿದುಕೊಂಡು ಒಂದೇ ಸಮನೆ 16ನೇ ಕ್ರಾಸ್ ಬರುವವರೆಗೆ "ರೈಟ್, ರೈಟ್" ಕೂಗುವನು.
ಮಲ್ಲೇಶ್ವರಂ ಸ್ಕೂಲ್ ಬಂದಾಗ ಎರಡು ಗಂಟೆ ಬಸ್ಸಿನಲ್ಲಿ ಕುಳಿತ ಹುಡುಗರು ಕೈ ಕಾಲು ಒದರುತ್ತಾ ಗೂನಿನಿಂದ ಬಾಗಿರುವ ಬೆನ್ನನ್ನು ಸೀದಾ ಮಾಡಲು ಯತ್ನಿಸುತ್ತ ಒಬೊಬ್ಬರಾಗಿ ಇಳಿಯುವರು.
ಅಲ್ಲಿಂದ ಮುಂದೆ 18 ನೇ ಕ್ರಾಸಿನಲ್ಲಿ ಇರುವ ಟಾಟಾ ಇನ್ಸ್ ಸ್ಟಿಟ್ಯೂಟ್ ಮುಂದೆ ಹೋಗಿ ಮೈಯೆಲ್ಲಾ ಆಯಾಸವಾದಂತೆ ಒಂದು ಸಲ ಜೋರಾಗಿ ಕಿರಿಚಿ ನಿಶಬ್ದವಾಗುವುದು. ಅಲ್ಲಿ ನಮ್ಮ ಭವಿಷ್ಯ ವಿಜ್ಞಾನಿಗಳು ಬೇರೆ ಬೇರೆ ಡಿಪಾರ್ಟಮೆಂಟಿಗೆ ಹೋಗಲು ಇಳಿಯುವರು.
ಬಸ್ಸಿನ ಡ್ರೈವರ್, ಕಂಡಕ್ಟರ್ ಇಬ್ಬರೂ ಬೀಡಿಯನ್ನು ಹಚ್ಚಿ ಬೈಟೂ ಕಾಫಿ ಕುಡಿದಮೇಲೆ, ಕಂಡಕ್ಟರ್ ಮತ್ತೆ "ರ್ರೈಟ್ಟ್" ಅಂತ ಕೂಗಿದಾಕ್ಷಣ ಮತ್ತೆ ಬಸವನಗುಡಿಗೆ ವಾಪಸ್ಸು ಹೋಗುವ ಯಾತ್ರೆ ಶುರು. [ಬೆಂಗಳೂರು]












Click it and Unblock the Notifications