ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರವಾಗಿ ಬಂದ ಮಳೆರಾಯ ಯಮನಾಗಿ ಕಂಡ!

By Staff
|
Google Oneindia Kannada News

L Revanasiddaiah, former police commissioner of Bengaluru
ಮಳೆಗಾಲದಲ್ಲಿ ಮಳೆ ಬಂದರೆ ರಾಜ್ಯದೆಲ್ಲೆಡೆಯ ಜನತೆ ಸಂಭ್ರಮ ಆಚರಿಸಿದರೆ ಬೆಂಗಳೂರಿನ ಕೊಳೆಗೇರಿಯ ಜನತೆ, ತಗ್ಗುಪ್ರದೇಶದಲ್ಲಿ ವಾಸಿಸುವ ನಾಗರಿಕರು, ಪ್ರತಿನಿತ್ಯ ಕಚೇರಿಗೆ ಸಂಚರಿಸುವ ಜನರು ಶಪಿಸಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ ಅಭಿಷೇಕ್ ನಾಪತ್ತೆಯಾದ ಘಟನೆ ಒಂದು ಉದಾಹರಣೆಯಷ್ಟೇ. ಇಂತಹ ಘಟನೆಗಳು ಏಕೆ ಮರುಕಳಿಸುತ್ತವೆ ಎಂಬುದಕ್ಕೆ ನಮ್ಮ ಆಡಳಿತದಲ್ಲಿ ಉತ್ತರವಿಲ್ಲ. ಇದಕ್ಕೆ ನಾವು ಸಿದ್ಧರಾಗಿಲ್ಲವೆಂದಲ್ಲ. ಆದರೆ ಸಾಧನವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಆದರೆ, ಮುಂದೆ ಇಂತಹ ಅವಘಡಗಳು ಮರುಕಳಿಸದಂತೆ, ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ರೇವಣಸಿದ್ದಯ್ಯ ವಿವರವಾಗಿ ಬರೆದಿದ್ದಾರೆ.

* ಎಲ್. ರೇವಣಸಿದ್ದಯ್ಯ, ಮಾಜಿ ಪೊಲೀಸ್ ಆಯುಕ್ತ

ಅಭಿಷೇಕ್ ಮನೆಯ ಅನತಿ ದೂರದಲ್ಲಿದ್ದ ತೆರೆದ ಚರಂಡಿಯಲ್ಲಿ ಬಿದ್ದು ಕೊಚ್ಚಿಹೋಗಿ ಅದೃಶ್ಯವಾದ ಘಟನೆಯ ನಂತರ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸದ ಬಿಬಿಎಂಪಿ ಅಧಿಕಾರಿಗಳ ಮೇಲೆ ಸಾರ್ವಜನಿಕರ ದೂಷಣೆಯ ಮಹಾಪೂರವೇ ಹರಿದಿತ್ತು. ನ್ಯೂಸ್ 9ನಂತಹ ದೃಶ್ಯಮಾಧ್ಯಮ ಘಟನೆಯ ಬಗ್ಗೆ ಕ್ಷಣಕ್ಷಣಕ್ಕೂ ವರದಿಯನ್ನು ಕೊಡುವುದೇ ಅಲ್ಲದೆ, ಘಟನೆಗೆ ಸಂಬಂಧಪಟ್ಟಂತೆ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಸಾರ್ವಜನಿಕರ ಮುಂದಿಟ್ಟಿತ್ತು. ಪ್ರಜ್ಞಾವಂತ ನಾಗರೀಕರು ತಮ್ಮ ಅಭಿಪ್ರಾಯವನ್ನು ಅತಿ ರಚನಾತ್ಮಕವಾಗಿ ಮಂಡಿಸಿದರೆ ಅನೇಕ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಅತಿ ಕಠಿಣ ಭಾಷೆಯಲ್ಲಿ ವ್ಯಕ್ತಪಡಿಸಿದ್ದರು.

ಸರ್ಕಸ್ ಬೆಂಕಿಯ ಅನಾಹುತದಲ್ಲಿ ನೂರಾರು ಮಕ್ಕಳು ಅಗ್ನಿದೇವನಿಗೆ ಆಹುತಿಯಾದ ಘಟನೆಯಾಗಬಹುದು, ನಗರದ ಸೆರಗಿನಲ್ಲಿ ಜನಭರಿತ ಪ್ರದೇಶದಲ್ಲಿ ಆದ ವಿಮಾನ ದುರಂತವಿರಬಹುದು, ಆಗಿಂದ್ದಾಗ್ಗೆ ಆಗುತ್ತಾ ಬಂದಿರುವ ರೈಲು ದುರ್ಘಟನೆಗಳಾಗಿರಬಹುದು, ಕೆರೆ ಏರಿ ಒಡೆದು ಸಾಕಷ್ಟು ಕುಟುಂಬಗಳು ಜಲಸಮಾಧಿಯಾದ ಹಾಗೂ ಆಗಿಂದಾಗ್ಗೆ ಆಗುತ್ತಲೇ ಇರುವ ಡ್ರೈನೇಜ್ ಅನಾಹುತಗಳಾಗಿರಬಹುದು, ಇವೆಲ್ಲವೂ ಉಂಟಾದಾಗ ಸರ್ವೇ ಸಾಮಾನ್ಯ. ಸಾರ್ವಜನಿಕರ ಆಕ್ರೋಶಭರಿತ ಪ್ರತಿಕ್ರಿಯೆಗೆ ಸ್ಪಂದಿಸಲು ಆಡಳಿತ ಯಂತ್ರ ಕಣ್ಣಿಗೆ ಎದ್ದು ಕಾಣುವಂತೆ ಡ್ಯಾಮೇಜ್ ಕಂಟ್ರೋಲ್ ಕಸರತ್ತನ್ನು ನಡೆಸುವುದು ಅಂತಹ ಕಸರತ್ತಿನಲ್ಲಿ ಸಂದರ್ಭದ ಕಾವಿಗೆ ತಕ್ಕಂತೆ ಹಿರಿಯ ಅಧಿಕಾರಿಯಿಂದಲೋ, ನಿವೃತ್ತ ನ್ಯಾಯಾಧೀಶರಿಂದಲೋ ಅಥವಾ ಸದನ ಸಮಿತಿಯಿಂದಲೋ ತನಿಖೆಗೆ ಆದೇಶ ಜಾರಿಯಾಗುವುದು, ಸಂತ್ರಸ್ತರಿಗೆ ಪರಿಹಾರ ಮತ್ತು ಯಾರಾದರೂ ಹಲವು ಅಧಿಕಾರಿಗಳನ್ನು ದಿಢೀರನೇ ಅಮಾನತ್ತಿನಲ್ಲಿಡುವುದು ಕೂಡ ಅಷ್ಟೇ ಸಾಮಾನ್ಯವಾಗಿದೆ. ಎಲ್ಲಾ ದುರಂತಗಳಾದ ನಂತರ ಸರ್ಕಾರ ನಡೆಸುವ ಕಸರತ್ತು ಪ್ರಸವ, ಗಜಗರ್ಭದಂತೆ ವಿಳಂಬವಾದ ತನಿಖೆಯಿಂದ ಹೊರಬಂದ ಅಂಶಗಳ ವರದಿ ಕೇವಲ ಒಂದು ಅಧ್ಯಯನ ತಂಡದ ಕಡತವಾಗಿ ಸರ್ಕಾರದ ಕಪಾಟಿನಲ್ಲಿ ಹಲವು ವೇಳೆ ಟಾಪ್ ಸೀಕ್ರೆಟ್ ಡಾಕ್ಯುಮೆಂಟ್ಸ್‌ಗಳ ಸಮೂಹದಲ್ಲಿ ಕೊಳೆತುಹೋಗುತ್ತದೆ. ಇಷ್ಟೆಲ್ಲಾ ಮಾಡಿದ್ದು ಏತಕ್ಕಾಗಿ? ಎಂಬಂತೆ ಮುಂದೆ ಇನ್ನೊಂದು ದುರ್ಘಟನೆ ನಡೆಯುವವರೆಗೆ ಈ ದುರಂತ ಸಾರ್ವಜನಿಕ ಸ್ಮೃತಿಪಟಲದಲ್ಲಿ ಅಳಿಸಿಹೋಗುತ್ತವೆ.

ಆಗಿದ್ದೇನು?: 30.04.2009ರ ಸಂಜೆ ಬೆಂಗಳೂರಿನಲ್ಲಿ ಯಥಾಪ್ರಕಾರ ಮಳೆ ಆಯಿತು. ಅದು ಕೆಲವು ಪ್ರದೇಶಗಳಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿ ಆಗಿರಬಹುದು. ಅಂತೂ ಊರು-ಊರನ್ನೇ ಕೊಚ್ಚಿಕೊಂಡುಹೋಗುವ ಪ್ರವಾಹವಾಗಲೀ, ಸ್ಪಾರಂ ವಾಟರ್‌ಡ್ರೈನ್ ತುಂಬಿ-ತುಳುಕಿ ಹರಿದಿದ್ದರಿಂದ ಈ ಅಭಿಷೇಕ್ ಕೊಚ್ಚಿಹೋದ ಘಟನೆ ಆಗಲಿಲ್ಲ. ಮನೆಮುಂದೆ ಹಾದುಹೋಗುವ ಚರಂಡಿಯ ಮೇಲಿನ ಕಲ್ಲು ಅಥವಾ ಸಿಮೆಂಟ್ ಚಪ್ಪಡಿ ಹಾಕಿದ್ದರೆ ಅಥವಾ ಯಾವುದೇ ಕಾರಣದಿಂದ ಚರಂಡಿಯನ್ನು ತೆರೆದಂತೆಯೇ ತಾತ್ಕಾಲಿಕವಾಗಿ ಇಡಬೇಕಾಗಿದ್ದರೆ ಅಂತಹವುಗಳ ಸುತ್ತ ಪ್ರತಿಬಂಧಕ ಪಟ್ಟಿ ಮತ್ತು ಎಚ್ಚರಿಸುವ ವ್ಯವಸ್ಥೆ ಮಾಡಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಅಭಿಷೇಕ್ ನಾಳೆ ಶಾಲೆಗೆ ಹೋಗಬೇಕಾಗಿತ್ತು, ಅವನ ಹುಟ್ಟುಹಬ್ಬ ಆಚರಿಸಲಿದ್ದೆವು ಎಂದು ಗೋಳಾಡುವ ತಾಯಿತಂದೆಯರಿಗೆ ಹಲವು ಪ್ರಜ್ಞಾವಂತ ನಾಗರಿಕರು ಮಗುವನ್ನು ತಾಯಿ ಮಳೆಬರುವಾಗ ಜೋಪಾನವಾಗಿ ಇರಿಸಿಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎನ್ನುವರೂ ಉಂಟು! ಮಗು ಕೊಚ್ಚಿ ಹೋಗಿ ನಾಲ್ಕು ದಿನಗಳಾದರೂ ಅದರ ಅವಶೇಷವೂ ಸಿಗದೆ ಇರುವ ಸಂದರ್ಭದಲ್ಲಿ ಇಂತಹ ಬೋಧನೆ ಅಮಾನವೀಯ. ತಾಯಿಯ ಕರುಳು ತನ್ನ ಕಂದನ ಕಡೆಗೆ ಸೆಳೆಯುತ್ತಿರುವುದು ಪ್ರಕೃತಿಯ ನಿಯಮ. ಕೂಲಿ ಕಾರ್ಮಿಕ ತಾಯಂದಿರು ತಮ್ಮ ಕಂದಮ್ಮಗಳನ್ನು ತಾವು ಕೆಲಸಮಾಡುವ ಸ್ಥಳದಲ್ಲೇ ಬಟ್ಟೆಯಿಂದ ತೂಗುಯ್ಯಾಲೆ ಕಟ್ಟಿ ಕೆಲಸದ ಕಡೆಗೆ ಒಂದು ಕಣ್ಣು, ಮಗುವಿನ ಕಡೆಗೆ ಇನ್ನೊಂದು ಕಣ್ಣು ಇಟ್ಟುಕೊಂಡು ದುಡಿಮೆ ಮಾಡುವ ಲಕ್ಷೋಪಲಕ್ಷ ತಾಯಂದಿರನ್ನು ಕಾಣುವ ಈ ನಾಡಿನಲ್ಲಿ ಇಂತಹ ಬೋಧನೆ ಅನಗತ್ಯ ಮತ್ತು ಅಮಾನವೀಯ.

ನಾಡಿನಾದ್ಯಂತ ಮಳೆಯಾಗಬೇಕು, ಸಮೃದ್ಧಿಯಾದ ಬೆಳೆ ಬೆಳೆಯಬೇಕು, ಅತ್ಯಂತ ಕೊರತೆ ಇರುವ ವಿದ್ಯುಚ್ಛಕ್ತಿ ಉತ್ಪಾದನೆ ಜಾಸ್ತಿಯಾಗಬೇಕೆಂಬ ಉದ್ದೇಶದಿಂದ ಅನೇಕ ವೇಳೆ ಜನರು ಮುಗಿಲಿನ ಕಡೆಗೆ ಮುಖಮಾಡಿ ವರುಣ ದೇವನನ್ನು ಪ್ರಾರ್ಥಿಸುತ್ತಾರೆ. ಬೆಂಗಳೂರು ನಗರದ ಪಕ್ಕ ಪ್ರವಾಹವನ್ನು ಉಂಟುಮಾಡುವ ಯಾವ ನದಿಯೂ ಇಲ್ಲ. ಕರಾವಳಿಯಂತಹ ಪ್ರದೇಶದ ಜನರು ಅನುಭವಿಸುವ ಸಮುದ್ರದ ಕೊರೆತ ಅಥವಾ ಚಂಡಮಾರುತದಿಂದ ಆಗುವ ನಷ್ಟವನ್ನೂ ಸಹ ಅನುಭವಿಸುವ ಸಂದರ್ಭವೇ ಇಲ್ಲ. ವಿಪರ್ಯಾಸವೆಂದರೆ ಇಡಿ ನಾಡೆಲ್ಲಾ ಹೆಚ್ಚು ಮಳೆಗಾಗಿ ಮೊರೆಇಡುವಾಗ ಬೆಂಗಳೂರಿನ ಜನ ಮಳೆ ಬಂದರೆ ಭೀತಿಯಿಂದ ತಲ್ಲಣಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಸ್ತವ್ಯಸ್ತವಾಗಿ ಡ್ರೈನೇಜ್‌ಗಳನ್ನು ಅತಿಕ್ರಮಿಸಿ ಕಟ್ಟಿರುವ ಕಟ್ಟಡಗಳು ಅಂತಾರಾಷ್ಟ್ರೀಯ ಐಟಿ-ಬಿಟಿ ನಗರ, ಸಿಲಿಕಾನ್ ವ್ಯಾಲಿ ಎಂದೇ ಕರೆಸಿಕೊಳ್ಳುವ ನಗರದಲ್ಲಿ ಕಸವನ್ನು ವಿಸರ್ಜಿಸುವ ವ್ಯವಸ್ಥೆ ಇಲ್ಲದೆ ಮಳೆಯ ನೀರಿನ ಕೊಯ್ಲು ಮಾಡಿ ಬಿದ್ದ ನೀರನ್ನು ಮತ್ತು ಕೊಚ್ಚಿಹೋಗುವ ಕೊಳೆನೀರನ್ನು ಪುನರ್ಬಳಕೆ ಮಾಡುವ ವ್ಯವಸ್ಥೆಗಳು ಫಲಕಾರಿಯಾಗಿಲ್ಲ. ಅವು ಕೇವಲ ತೋರ್ಪಟದ ಮಾದರಿಗಳಾಗಿಯೇ ಉಳಿದಿವೆ. ಹೀಗಾಗಿ ವರವಾಗಿ ಬರುವ ಮಳೆರಾಯ... ಯಮನಾಗಿ ಬೆಂಗಳೂರಿಗರಿಗೆ ಕಾಣಿಸಿಕೊಳ್ಳುತ್ತಾನೆ.

ಮಳೆಯಿಂದಾಗುವ ಹಾನಿ ತಪ್ಪಿಸಲು ಏನು ಮಾಡಿದ್ದರು?: ಮಳೆಯ ಆರ್ಭಟವನ್ನು ಅರಿತು 16 ತುಕಡಿಗಳನ್ನು ಹೊಂದಿರುವ 8-9 ಕಂಟ್ರೋಲ್ ರೂಂಗಳನ್ನು ನಿರ್ಮಿಸಲಾಗಿತ್ತು. ಬಿಬಿಎಂಪಿಯ ಮಾನ್ಯ ಕಮಿಷನರ್ ಸಹಾ ಸೇರಿದಂತೆ ಹಲವು ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು, ಮಧ್ಯರಾತ್ರಿ 12-30 ಗಂಟೆಯವರೆಗೆ ಕಮಿಷನರ್‌ರವರೇ ಖುದ್ದು ಕಂಟ್ರೋಲ್ ರೂಂನಲ್ಲಿದ್ದಾಗ ಅಭಿಷೇಕ್ ಘಟನೆಯ ಬಗ್ಗೆ ಯಾವ ವರದಿಯೂ ಬರಲಿಲ್ಲ. ನಂತರ ಬಂದ ಮಾಹಿತಿಯ ಆಧಾರದ ಮೇಲೆ ಬಿಬಿಎಂಪಿಯ ಅಧಿಕಾರಿಗಳು, ಹತ್ತಾರು ಜನ ಪೌರ ಕಾರ್ಮಿಕರು, ಅಗ್ನಿಶಾಮಕ ದಳದವರು ಚರಂಡಿಯನ್ನು ಶೋಧಿಸಿದರು. ಕತ್ತಲು ಮತ್ತು ಪ್ರಕೃತಿಯ ಪ್ರತಿಕೂಲ ವಾತಾವರಣದಿಂದ ಮುಂದಿನ ದಿನ ಹಗಲೂ-ರಾತ್ರಿ ಕಾರ್ಯಾಚರಣೆ ಮಾಡಿದರೂ ಮಗುವಿನ ಕಳೇಬರದ ಸುಳಿವೇ ಇಲ್ಲ. 48 ಗಂಟೆ ಕಳೆದರೂ ಮಗುವಿನ ಸುಳಿವಿಲ್ಲದೆ ಸಹನೆಗೆಟ್ಟ ಹಲವು ನಾಗರಿಕರು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿ ಅಸಮರ್ಪಕ ಕಾರ್ಯಾಚರಣೆಯನ್ನು ಖಂಡಿಸಿ ಘೋಷಣೆಯನ್ನು ಕೂಗಿದ್ದನ್ನು ಮಾಧ್ಯಮಗಳು ಬಿತ್ತರಿಸಿವೆ. ಆಗಲೂ ಸಹ ಕೇವಲ ಜಂಟಿ ಕಮಿಷನರ್, ಮುಖ್ಯ ಅಭಿಯಂತರರಂತಹ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿದ್ದರು. ಹೋಗಿ ಮಾಡಿದ್ದೇನು? ಒಂದು ಮಗು ಸತ್ತಿದ್ದಕ್ಕೆ ಇಷ್ಟೊಂದು ರಂಪವೇ? ಎಂಬ ಭಾವನೆಯನ್ನು ವ್ಯಕ್ತಪಡಿಸಿದರೆನ್ನಲಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹನೆ ಕಟ್ಟೆ ಒಡೆಯಿತು. ಪೋಷಕರ ದು:ಖ ನೂರ್ಮಡಿಯಾಯಿತು.

ಕ್ಷಿಪ್ರವಾಗಿ ಸ್ಥಳವನ್ನು ತಲುಪಿ ಬಿಬಿಎಂಪಿಯಲ್ಲಿ ವರಿಷ್ಠಾಧಿಕಾರಿಯಾದ ನನ್ನ ಮಾರ್ಗದರ್ಶನದಲ್ಲಿ ಸಾಧ್ಯವಾದ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ, ಹಗಲೂ-ಇರುಳೂ ನಾನೇ ಸ್ಥಳದಲ್ಲಿದ್ದೇನೆ, ಸಮಯವನ್ನು ಕಳೆಯದೆ ಒಂದಾದ ಮೇಲೊಂದು ಸಾಧನಗಳನ್ನು ಮತ್ತು ಪರಿಣಿತರನ್ನು ಬಳಸಿಕೊಂಡು ಮಗುವನ್ನು ಪತ್ತೆ ಮಾಡೇ ಮಾಡುತ್ತೇವೆಂಬ ಛಲವನ್ನು ಯಾವ ಅಧಿಕಾರಿಯೂ ತೋರಿಸಲಿಲ್ಲ. ಶೋಧನೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದ ಹಿರಿಯ ಅಧಿಕಾರಿಗಳು ಯಾವ ವಿಶೇಷ ಸಾಧನವನ್ನೂ ಇಟ್ಟುಕೊಳ್ಳದೆ, ಹಲವರು ಕೈಯಲ್ಲಿ ಡೈರಿ ಹಿಡಿದಿದ್ದು, ಕಾಲಲ್ಲಿ ಸಾಧಾರಣ ಪಾದರಕ್ಷೆ ಹಾಕಿಕೊಂಡಿದ್ದರು. ಅವರು ಘಟನೆಯ ಸವಾಲನ್ನು ಎದುರಿಸುವ ದೃಢತೆಯನ್ನು ಬಿಂಬಿಸಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಶೋಧನೆಯ ನಾಲ್ಕನೆಯ ದಿನ ಬಿಬಿಎಂಪಿ ಕಮಿಷನರ್ ಅರ್ಧ ದಿನ ರಜೆ ಹಾಕಿ ತಮ್ಮ ಡೇ ಅಂಡ್ ನೈಟ್ ಶೋಧನೆಗೆ ವಿರಾಮ ಕೊಟ್ಟರು. ಇನ್ನೊಬ್ಬರು ಎಂಇಜಿಗೆ ಶೋಧನೆ ಮಾಡಲು ವಿನಂತಿಸಿದ್ದೇವೆಂಬ ಕಣ್ಣೀರು ಒರೆಸುವ ಪ್ರಯತ್ನ ಮತ್ತು ಸುಳ್ಳು ಹೇಳಿ ನುಣುಚಿಕೊಳ್ಳುವ ಪ್ರಯತ್ನ ನಡೆಯಿತು.

ಅಗ್ನಿಶಾಮಕ ದಳ ಪ್ರಯತ್ನವನ್ನು ಮುಂದುವರೆಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಡಿಷನಲ್ ಪೊಲೀಸ್ ಕಮಿಷನರ್‌ರವರಿಂದ ತನಿಖೆ ಮಾಡಿಸಿ ವರದಿ ಪಡೆಯಲಾಗುತ್ತದೆಂದು ಹೇಳಿದರು. 4ನೇ ದಿನವೂ ಆ ಪ್ರಮುಖರ ಮುಖವನ್ನು ಸಾರ್ವಜನಿಕರು ನೋಡಲಿಲ್ಲ. ಮಾಹಿತಿ ಪ್ರಕಾರ ಈ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಮೂಲಭೂತ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಅಸ್ವಾಭಾವಿಕ ಮರಣವಾಗಿದೆ, ಸಿ.ಆರ್.ಪಿ.ಸಿ. 174ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬದುಕಿದ್ದ ಅಥವಾ ಅಸುನೀಗಿದ ಮಗುವಿನ ಶರೀರ ಪತ್ತೆ ಮಾಡಬೇಕಾಗಿತ್ತು. ತಪಾಸಣೆ ಮಧ್ಯರಾತ್ರಿಯಲ್ಲಿಯೇ ಪ್ರಾರಂಭವಾಗಬೇಕಿತ್ತು. ಮಗು ತೆರೆದ ಚರಂಡಿಗೆ ಬಿದ್ದಿದ್ದಾದರೂ ಯಾರೋ ಬಿಬಿಎಂಪಿ ಅಧಿಕಾರಿಗಳ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ನಿರ್ಲಕ್ಷತೆ ಕಾರಣವಾಗಿದ್ದರಿಂದ ಐಪಿಸಿ 304ರ ಪ್ರಕಾರ ಅಪರಾಧವನ್ನು ದಾಖಲಿಸಿ ಸಂಬಂಧಪಟ್ಟವರನ್ನು ಗುರ್ತಿಸಿ ಜೈಲಿಗೆ ಕಳಿಸಬೇಕಾಗಿತ್ತು. ಪೊಲೀಸರಾದರೂ ಸಹ ಮೀನಾಮೇಷ ಎಣಿಸುತ್ತಾ ಆಗಿರುವುದು ಒಂದು ಅಮಾಯಕ ಬಾಲಕನ ಹತ್ಯೆ, ಅದರ ತನಿಖೆ ನಡೆಸುತ್ತಿದ್ದೇವೆಂಬ ಭಾವನೆಯನ್ನೇ ಪ್ರದರ್ಶಿಸಲಿಲ್ಲ.

ಮಳೆ ಬರುತ್ತೆ! ಪ್ರವಾಹ ಹರಿಯುತ್ತೆ! ಜನರು ಕೊಳಚೆ ನೀರಿನಲ್ಲಿ ಬದುಕಿ ಸತ್ತಿರುತ್ತಾರೆ ಅಥವಾ ಸಾಯುತ್ತಿದ್ದಾರೆ. ನಾವು ನಮ್ಮ ದಾರಿಯಲ್ಲೇ ನಡೆಯುತ್ತೇವೆ. ಪ್ರತಿಯೊಂದು ಅವಘಡಕ್ಕೂ ಒಂದಲ್ಲ ಒಂದು ಸಬೂಬನ್ನು ಹೇಳುವುದು ಅಧಿಕಾರಶಾಹಿಯ ಮಂತ್ರವಾಗಿದೆ. ಈ ಮಧ್ಯೆ ಮಾದ್ಯಮದ ಮೂಲಕ ಹಲವರು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಳಕ್ಕೆ ಧಾವಿಸಲಿಲ್ಲ ಇತ್ಯಾದಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಶುಕ್ರವಾರ ಜೂನ್ 5ರಂದು ಮಾನ್ಯ ಮುಖ್ಯಮಂತ್ರಿಗಳು ಭೇಟಿ ಕೊಟ್ಟಿದ್ದು ಅಭಿಷೇಕ್ ಪೋಷಕರನ್ನು ಭೇಟಿ ಮಾಡಿ ಸಾಂತ್ವನವನ್ನು ಸಲ್ಲಿಸಿದ್ದಾರೆ. ನಾನು ಯಡಿಯೂರಪ್ಪನವರ ವಕಾಲತ್ತನ್ನು ವಹಿಸುತ್ತಿಲ್ಲ, ಆದರೆ ವಾಸ್ತವ ಪರಿಸ್ಥಿತಿಯ ಕಡೆಗೆ ನಾವು ಗಮನ ಕೊಡಬೇಕು, ಸಹಸ್ರಾರು ಸಿಬ್ಬಂದಿ, ನುರಿತ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಆಡಳಿತ ಯಂತ್ರವೇ ಇರುವಾಗ ಅದನ್ನೆಲ್ಲಾ ನಿರ್ಲಕ್ಷಿಸಿ ಮುಖ್ಯಮಂತ್ರಿಗಳು ಸ್ಥಳಕ್ಕೆ ಧಾವಿಸಬೇಕೆಂದು ಅಪೇಕ್ಷಿಸುವುದು ಪ್ರಾಕ್ಟಿಕೆಬಲ್ ಅಲ್ಲ. ಅಭಿಷೇಕ್ ಘಟನೆಗೆ ಒಂಭತ್ತು ದಿನಗಳ ಹಿಂದೆ ವೃದ್ದೆಯೋರ್ವರು ತೆರೆದ ಮೋರಿಯ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದರು. 12 ದಿನಗಳ ನಂತರ ಅಕೆಯ ವಾರಸುದಾರರಿಗೆ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ಬಿಬಿಎಂಪಿ ಅಧಿಕಾರಿಗಳು ಕೊಟ್ಟರು ಎಂಬ ಹಿನ್ನೆಲೆಯನ್ನು ಅವಲೋಕಿಸಿದಾಗ ಪರಿಹಾರದ ರೂಪದಲ್ಲಿ ಹಣವನ್ನು ಕೊಟ್ಟರೆ ಸಾಕು, ನೊಂದವರನ್ನು ಸಂತೈಸಬಹುದು ಎಂಬ ಭಾವನೆ ಬಹಳಷ್ಟು ಅಧಿಕಾರ ವರ್ಗದಲ್ಲಿದ್ದು, ಅಭಿಷೇಕ್ ದೇಹದ ಪತ್ತೆಗೆ ಎಲ್ಲಾ ಸಂಪನ್ಮೂಲವನ್ನು ಬಳಸಿ ಸಮಗ್ರ ಪರಿಶೀಲನೆ ನಡೆಸಲಿಲ್ಲ ಎಂಬಂತೆ ಕಾಣುತ್ತದೆ.

ಬೆಂಗಳೂರಿನಲ್ಲಿ ಮಳೆಯಿಂದಾಗುವ ದುರಂತ ಪ್ರಕೃತಿ ವಿಕೋಪದಿಂದಲ್ಲ. ಅದು ಮಾನವ ನಿರ್ಮಿತವಾದದ್ದು. ಇನ್ನು ಮುಂದೆ ಇಂತಹ ದುರ್ಘಟನೆಗಳು ಆಗದಂತೆ ಅನಿವಾರ್ಯವಾಗಿ ಆದ ದುರ್ಘಟನೆಯನ್ನು ಸರಿಯಾದ ರೀತಿಯಲ್ಲಿ ಎದುರಿಸುವ ಕಾರ್ಯಯೋಜನೆಯ ಅವಶ್ಯಕತೆ ಇದೆ. ಅಂತಹ ಯೋಜನೆಗಳು ಕಡತಗಳಲ್ಲಿ ಮಾತ್ರ ಇದ್ದು, ಆ ಯೋಜನೆಯನ್ನು ಜಾರಿ ಮಾಡಿದ ಉದಾಹರಣೆಗಳು ಬೆಂಗಳೂರಿಗರಿಗೆ ದೊರೆತಿಲ್ಲ. ಮಳೆಯಿಂದಾಗುವ ದುರ್ಘಟನೆಗಳನ್ನು ತಪ್ಪಿಸಲು ಹಲವು ಕ್ರಮಗಳ ಅವಶ್ಯಕತೆ ಇದೆ.

1. ದುರ್ಘಟನೆಗಳ ನಿಯಂತ್ರಣಕ್ಕೆಂದೇ ಶುಲ್ಕರಹಿತ ದೂರವಾಣಿಯನ್ನು ಕೇಂದ್ರ ಸ್ಥಾನದ ಕಂಟ್ರೋಲ್ ರೂಂನಲ್ಲಿ ಸ್ಥಾಪಿಸಿ, ಒಂದೇ ದಿವಸ ಹಲವು ಕರೆಗಳು ಬಂದಾಗ ಅವುಗಳನ್ನು ಸಮನ್ವಯಗೊಳಿಸುವ ಮತ್ತು ದಾಖಲಿಸುವ ವಿದ್ಯುನ್ಮಾನ ಉಪಕರಣಗಳನ್ನು ಒದಗಿಸುವುದು.
2. ಕಂಟ್ರೋಲ್ ರೂಂ ಮತ್ತು ದುರ್ಘಟನೆಯನ್ನು ನಿಯಂತ್ರಿಸಲು ರಚಿಸುವ ತಂಡಗಳಿಗೆ ಸೂಕ್ತ ತರಭೇತಿ ಮತ್ತು ಉಪಕರಣಗಳನ್ನು ಕೊಡಬೇಕು. ದುರ್ಘಟನೆಯನ್ನು ನಿಯಂತ್ರಿಸುವ ತಂಡಕ್ಕೆ ಫ್ಲಡ್ ಲೈಟ್, ಹಗ್ಗ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸ್ಟ್ರೆಚರ್, ಧ್ವನಿವರ್ಧಕ ಇತ್ಯಾದಿಗಳನ್ನು ನೀಡಬೇಕು.
3. ಉದ್ದೇಶಿತ ಕಂಟ್ರೋಲ್ ರೂಂನಲ್ಲಿ, ಪೊಲೀಸ್, ಹೋಂಗಾರ್ಡ್ಸ್ ಮತ್ತು ಅಗ್ನಿಶಾಮಕ ದಳದವರ ಪ್ರಾತಿನಿಧ್ಯ ಇರಬೇಕು.
4. ಕಂಟ್ರೋಲ್ ರೂಂಗೆ ಮಾಹಿತಿ ಬಂದ ತಕ್ಷಣವೇ ಕರೆ ಮಾಡಿದವರ ಸಹಾಯಕ್ಕೆ ಶೀಘ್ರವಾಗಿ ತಲುಪಲು ವಾಹನ ಸೌಲಭ್ಯವಿರಬೇಕು, ಆ ವಾಹನಗಳಿಗೆ ಜಿಪಿಎಸ್ ಅಳವಡಿಸಿರಬೇಕು ಮತ್ತು ಸದರಿ ವಾಹನಗಳಿಗೆ ಪೊಲೀಸ್ ವಾಹನಗಳು ಹಾಗೂ ಆಂಬುಲೆನ್ಸ್ ವಾಹನಗಳಿಗೆ ಅಳವಡಿಸಿರುವಂತೆ ತುರ್ತು ಬಣ್ಣದ ದೀಪ ಅಳವಡಿಸಬೇಕು.
5. ದುರ್ಘಟನೆ ನಡೆದಾಗ ಸರ್ಕಾರದೊಂದಿಗೆ ಸ್ವಯಂಪ್ರೇರಿತರಾಗಿ ಕೈಜೋಡಿಸಲು ಮುಂದೆಬರುವ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ಹೋಂಗಳ ಪಟ್ಟಿ ಇರಬೇಕು
6. ಕಂಟ್ರೋಲ್ ರೂಂ ಮತ್ತು ಕಾರ್ಯಾಚರಣೆಯ ತಂಡಗಳು ಸರದಿಯ ಮೇರೆಗೆ ದಿನದ 24 ಗಂಟೆಗಳೂ ವೃತ್ತಿ ನಿರತರಾಗಿರಬೇಕು.
7. ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಟೀಮಿನವರಿಗೆ ಸೂಕ್ತ ತರಬೇತಿ ನೀಡಬೇಕು.
8. ಸದಾಕಾಲದಲ್ಲೂ ಜಾಗೃತರಾಗಿರುವುದೇ ಪ್ರಜಾಪ್ರಭುತ್ವದ ಮೌಲ್ಯ ಅಂತಹ ಜಾಗೃತಿ ಮೂಡಿಸಲು, ಸರ್ಕಾರೇತರ ಸಂಸ್ಥೆಗಳು ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು.
9. ಸಾಲಿಡ್ ವೇಸ್ಟಿನ ನಿರ್ವಹಣೆ ಸರಿಯಾಗಿಲ್ಲದಿರುವುದರಿಂದ ಅನೇಕ ಕೊಳಚೆ ಹೊಂಡಗಳು, ಚರಂಡಿಗಳು ಕಟ್ಟಿಕೊಳ್ಳುವ ಮತ್ತು ರಸ್ತೆಯಲ್ಲಿ ಕಲುಷಿತ ನೀರು ಹರಿಯುವ ಅಸಹ್ಯ ಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ಮೂಲನೆ ಮಾಡಬೇಕು.
10. ರಾಜಕಾಲುವೆಗಳು, ಕೊಳಚೆ ಪ್ರದೇಶಗಳಲ್ಲಿನ ಚರಂಡಿ ಇನ್ನಿತರ ಜಲವಾಹಿನಿಗಳನ್ನು ಕನಿಷ್ಠ ತಿಂಗಳಲ್ಲಿ ಒಂದು ಬಾರಿಯಾದರೂ ಮತ್ತು ಮಳೆಗಾಲದಲ್ಲಿ ಪ್ರತಿನಿತ್ಯವೂ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಇರಬೇಕು.
11. ಕಂಟ್ರೋಲ್ ರೂಂ ಕೇವಲ ಕರೆಗಳಿಗೆ ಪ್ರತಿಕ್ರಿಯಿಸುವ ವ್ಯವಸ್ಥೆ ಆಗಿರಬಾರದು. ನಗರದ ವಿವಿಧ ಭಾಗಗಳಲ್ಲಿ ಆದ ಮಳೆಯ ಮಟ್ಟ, ಕಟ್ಟಿಕೊಂಡಿರುವ ಚರಂಡಿಗಳು, ಕೊಳಚೆ ಹೊಂಡಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಪಟ್ಟವರಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮಾಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X