• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮ್ಯುಸಿಕಾಲಜಿಸ್ಟ್ ಪ್ರಶಸ್ತಿ ವಿಜೇತೆ ಡಾ. ಟಿಎಸ್ ಸತ್ಯವತಿ

By ಅಶ್ವಿನಿ ಸತೀಶ್, ಸಿಂಗಪುರ
|

ಸಂಗೀತಮಯ ವಾತಾವರಣದಲ್ಲಿಯೇ ಜನಿಸಿದ ಸತ್ಯವತಿ ಅವರ ಪ್ರತಿಭೆ ಎಳೆಯ ವಯಸ್ಸಿನಲ್ಲಿಯೇ ಬೆಳಕಿಗೆ ಬಂದಿತು. ಮೈಸೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ಎದುರಲ್ಲಿ ಗೌಳ ರಾಗದ ಪ್ರಣಮಾಮ್ಯಹಮ್ ಹಾಗು ಅಭೇರಿ ರಾಗದ ನಗುಮೋಮು ಕೃತಿಗಳನ್ನು ರಾಗ ತಾಳ ಬದ್ಧವಾಗಿ ಹಾಡಿದಾಗ ಅವರಿಗೆ 2 ವರ್ಷ ವಯಸ್ಸು!

ಅಷ್ಟೇ ಪ್ರತಿಭಾವಂತರಾಗಿದ್ದು, ಆಸಕ್ತಿಯಿಂದ ಸಂಗೀತವನ್ನು ಅಭ್ಯಸಿಸುತ್ತಿದ್ದ ಅಕ್ಕಂದಿರು, ಖ್ಯಾತ ವಿದುಷಿಯರಾದ ಕರ್ನಾಟಕ ಕಲಾಶ್ರೀ ಟಿ.ಎಸ್. ವಸಂತಮಾಧವಿ ಹಾಗು ಟಿ.ಎಸ್.ವಸುಂಧರಾ ಅವರ ಒಡನಾಟ ಹಾಗು ಮಾರ್ಗದರ್ಶನ, ಗಂಟೆಗಟ್ಟಲೆ ಸಂಗೀತಾಭ್ಯಾಸ ಮಾಡಿಸುತ್ತಿದ್ದ ಶಿಸ್ತಿನ ಸಿಪಾಯಿಯಾಗಿದ್ದ ತಾಯಿ - ಇಂತಹ ವಾತಾವರಣದಲ್ಲಿ ಈ ಪ್ರತಿಭಾವಂತ ಬಾಲಕಿಗೆ ಸಂಗೀತ ಸಹಜವಾಗಿಯೇ ಒಲಿಯಿತು.

11 ವರ್ಷ ವಯಸ್ಸಿನಲ್ಲಿ ಶಾಲೆಯಲ್ಲಿ "ಕಿಸಾ ಗೌತಮಿ" ಎಂಬ ಗೀತಾ ನಾಟಕವನ್ನು ಒಂದೇ ಬಾರಿ ನೋಡಿ, ನಾಟಕದ ಇಡೀ ಪ್ರಸಂಗದ ಮಾತು ಮತ್ತು ಧಾತುವನ್ನು ಗ್ರಹಿಸಿ "ಏಕಸಂಧಿಗ್ರಾಹಿ"ಎನಿಸಿಕೊಂಡು, ಬೆರಳು ತೋರಿಸಿದರೆ ಹಸ್ತ ನುಂಗುವ ಚುರುಕುತನಕ್ಕೆ ಸಾಕ್ಷಿಯಾದರು ಸತ್ಯವತಿಯವರು.

ಅಕ್ಕ ವಸಂತಮಾಧವಿ ಅವರಲ್ಲಿಯೇ ಮೊದಲು ಸಂಗೀತಾಭ್ಯಾಸವನ್ನು ಪ್ರಾರಂಭಿಸಿ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಮುಂದೆ ಸಂಪ್ರದಾಯಬದ್ಧ ಶೈಲಿಯ ಸಂಗೀತ, ಅದರ ಅಚ್ಚುಕಟ್ಟಾದ ನಿರ್ವಹಣೆ, ಅಷ್ಟೇ ಶಿಸ್ತಿನ ಶಿಕ್ಷಣಕ್ರಮಕ್ಕೆ ಹೆಸರಾದ ಪದ್ಮಭೂಷಣ ಡಾ. ಆರ್. ಕೆ. ಶ್ರೀಕಂಠನ್ ಅವರಲ್ಲಿ ಕಲಿಕೆಯನ್ನು ಮುಂದುವರೆಸಿದರು.

ಸಂಗೀತ ಕಲಾರತ್ನ ಬಿ.ವಿ.ಕೆ. ಶಾಸ್ತ್ರಿ ಅವರಲ್ಲಿ ಸಂಗೀತದ ಲಕ್ಷಣವನ್ನೂ, ಸಂಗೀತ ಕಲಾರತ್ನ ಬೆಂಗಳೂರು ಕೆ. ವೆಂಕಟರಾಮ್ ಅವರಲ್ಲಿ ಮೃದಂಗವನ್ನೂ ಅಭ್ಯಸಿಸಿದುದು ಲಯ, ಲಕ್ಷಣಗಳ ಸೂಕ್ಷ್ಮವನ್ನು ಅರಿತು, ಆ ಅಂಶಗಳನ್ನೆಲ್ಲ ತಮ್ಮ ಅದ್ಭುತ ಗಾಯನ ಪ್ರತಿಭೆಯೊಂದಿಗೆ ಬೆರೆಸಿ, ಎಲ್ಲದರ ಹದವಾದ ಮಿಶ್ರ ಪಾಕದಂತಿರುವ ಸೌಂದರ್ಯಯುತ ಗಾಯನವನ್ನು ರೂಢಿಸಿಕೊಳ್ಳುವಲ್ಲಿ ಸಹಕಾರಿಯಾಯಿತು.

ಹದಿನಾರನೇ ವಯಸ್ಸಿನಲ್ಲಿ 'ಕರ್ನಾಟಕ ಗಾನಕಲಾ ಪರಿಷತ್'ನ ವೇದಿಕೆಯಲ್ಲಿ ತಮ್ಮ ಮೊದಲ ಕಚೇರಿಯನ್ನು ನೀಡಿದರು. ಕರ್ನಾಟಕ ಸಂಗೀತದಲ್ಲಿ ಬಹು ಕಷ್ಟ ಎನಿಸಿಕೊಳ್ಳುವ ಅವಧಾನ ಪಲ್ಲವಿ(ಎರಡೂ ಕೈಗಳಲ್ಲಿ ಬೇರೆ ನಡೆಯ ತಾಳಗಳನ್ನು ಹಾಕುತ್ತ ಪಲ್ಲವಿಯ ವಿನಿಕೆ ಮಾಡುವುದು)ಯನ್ನು ಸುಲಲಿತವಾಗಿ ಹಾಡುವಷ್ಟು ಪರಿಣತಿ ಪಡೆದಿದ್ದರು.

ರಾಗಮಾಲಿಕ ತಾಳ ಅವಧಾನ ಪಲ್ಲವಿಯ ವಿಶೇಷ ಆವಿಷ್ಕಾರಕ್ಕೆ ಕಾರಣರಾಗಿದ್ದಲ್ಲದೇ ಅದನ್ನು ಹಿರಿಯ ವಿದ್ವಾಂಸರ ಮುಂದೆ ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು. ಅಂದಿನಿಂದ ಎಂದೂ ತಿರುಗಿ ನೋಡಲಿಲ್ಲ. ಸಂಸ್ಕೃತ ಎಂ.ಎ., ಎಂ.ಫಿಲ್. ಪದವಿಯನ್ನು ಪಡೆದು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿಯೂ ಸಂಗೀತವನ್ನು ಪ್ರವೃತ್ತಿಯಾಗಿ ಮುಂದುವರೆಸಿದರು.

'ಸಂಸ್ಕೃತ, ಸಂಗೀತ' ಈ ಎರಡೂ ಸತ್ಯವತಿ ಅವರ ಜೀವನದಲ್ಲಿ ಬೇರ್ಪಡಿಸಲಾಗದ ಜೋಡಿ ಪದಗಳು. ಬೆಂಗಳೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕಿಯಾಗಿ ನಿವೃತ್ತಿ ಹೊಂದಿದ್ದಾರೆ. ಭಾರತೀಯ ಸಂಗೀತಕ್ಕೆ 'ಅಭಿಲಷಿತಾರ್ಥ ಚಿಂತಾಮಣಿಯ ಕೊಡುಗೆ' - ಎಂಬ ವಿಷಯವನ್ನು ಕುರಿತ ಪ್ರಬಂಧಕ್ಕೆ ಡಾಕ್ಟರೇಟ್ ಕೂಡ ಪಡೆದಿದ್ದಾರೆ.

ದೇಶದ ಎಲ್ಲಾ ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಹಾಗು ಅಮೆರಿಕ, ಸಿಂಗಪುರ, ಮಲೇಷಿಯಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಗಾಯನ ಕಚೇರಿಗಳನ್ನು ನಡೆಸಿರುವ ಸತ್ಯವತಿ ಅವರು 1985ರಲ್ಲಿ ಸಾರ್ಕ್ ಸಮ್ಮೇಳನ, 2010ರಲ್ಲಿ ಅಮೆರಿಕಾದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಗಳನ್ನೊಳಗೊಂಡು ಅನೇಕ ಪ್ರಮುಖ ಉತ್ಸವಗಳಲ್ಲಿ ಕಚೇರಿಗಳನ್ನು ನೀಡಿದ್ದಾರೆ.

ಶುದ್ಧ ಸಂಪ್ರದಾಯಬದ್ಧ, ಶಾಸ್ತ್ರೀಯ ಚೌಕಟ್ಟಿನಲ್ಲಿಯೇ ಇದ್ದರೂ ಎಲ್ಲಿಯೂ ಸೌಂದರ್ಯವನ್ನು ಕಳೆದುಕೊಳ್ಳದೆ ಇರುವ ಅತ್ಯಂತ ಭಾವಪೂರ್ಣ ಸಂಗೀತ ಇವರದು. ಸಾಹಿತ್ಯದ ಸ್ಫುಟವಾದ ಉಚ್ಚಾರಣೆ, ಎಲ್ಲವನ್ನು ಒಂದು ಅಳತೆಯಲ್ಲಿ ಕೊಡುವ ಔಚಿತ್ಯತೆ, ಒಂದು ರಾಗದ ಎಲ್ಲಾ ಸೂಕ್ಷ್ಮಗಳನ್ನು ಅರಿತು ಎಲ್ಲಾ ಸ್ಥಾಯಿಗಳಲ್ಲಿಯೂ ರಾಗದ ಸಂಪೂರ್ಣವಾದ ಭಾವವನ್ನು ಹೊಮ್ಮಿಸುವುದು, ಪುಂಖ - ಪುಂಖವಾಗಿ ತಾವಾಗಿ ಹುಟ್ಟಿಕೊಳ್ಳುವ ಸ್ವಾರಸ್ಯವಾದ ಸ್ವರಪ್ರಸ್ತಾರಗಳು, ಎಲ್ಲಿಯೂ ಹಗುರವೆನಿಸದ ವಿದ್ವತ್ಪೂರ್ಣ ವಿನಿಕೆ - ಇವೆಲ್ಲದರಿಂದ ಕೂಡಿದ ಗಾಯನ ಲಕ್ಷ್ಯ - ಲಕ್ಷಣಗಳ ಸಾಮರಸ್ಯಕ್ಕೆ ಸಾಕ್ಷಿಯೆನಿಸುತ್ತದೆ.

ಸತ್ಯವತಿ ಅವರು ಅದ್ಭುತವಾದ ವಾಗ್ಮಿ ಕೂಡ. ಅನೇಕ ರಾಷ್ಟೀಯ, ಅಂತಾರಾಷ್ತ್ರೀಯ ಸಮ್ಮೇಳನಗಳು, ವಿಚಾರ ಸಂಕಿರಣಗಳಲ್ಲಿ ಹಲವು ಪ್ರಬಂಧಗಳನ್ನು ಮಂಡಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಯಾವ ವಿಷಯವನ್ನು ತೆಗೆದುಕೊಂಡರೂ ಅದರಲ್ಲಿ ಸಾಕಷ್ಟು ಕೃಷಿ, ತೂಕವಾದ ಪದಗಳ ಜೋಡಣೆಯಲ್ಲಿಯೂ ಸರಳತೆಯನ್ನೂ ತೋರುವ ಮಾತಿನ ಶೈಲಿ, ತಿಳಿಹಾಸ್ಯವಿರುವ ಸಮಂಜಸವೆನಿಸುವ ಉದಾಹರಣೆಗಳು, ಇವುಗಳಿಂದ ಕೂಡಿದ ವಾಕ್ ಚಾತುರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತವೆ.

64 ವಿದ್ಯೆಗಳನ್ನು ಕುರಿತ 'ಚತುಷಷ್ಠಿ ಕಲಾ' ಎಂಬ ಇವರು ಬರೆದಿರುವ ಪುಸ್ತಕವು 'ಭಾರತೀಯ ವಿದ್ಯಾ ಭವನ'ದ ಮೂಲಕ ಪ್ರಕಟಗೊಂಡಿದೆ. ಧಾರವಾಡ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡ 'ಮಾನಸೋಲ್ಲಾಸ'ದ ಸಂಗೀತಾಭಾಗವನ್ನು ಅನುವಾದಿಸಿದ್ದಾರೆ. ಬರೆದಿರುವ ನೂರಾರು ಲೇಖನಗಳು ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಕಚೇರಿಯ ಕಲಾವಿದರು ಹಾಗು ಲಾಕ್ಷಣಿಕರದು ಎರಡು ಬೇರೆ ವಿಭಾಗಗಳು ಎನ್ನುವುದನ್ನು ಅಪವಾದವಾಗಿಸಿ ಅವೆರಡರ ಸೇತುವೆಯಾಗಿ ನಿಲ್ಲುತ್ತಾರೆ ಸತ್ಯವತಿ ಅವರು.

ಸತ್ಯವತಿ ಅವರು ಅತ್ಯಂತ ಉತ್ತಮವಾದ ಬೋಧಕಿ ಎನ್ನುವುದಕ್ಕೆ ಅವರ ಹಲವು ಶಿಷ್ಯರು ಸಾಂಪ್ರದಾಯಿಕ ಶೈಲಿಯ ಸಂಗೀತವನ್ನು ಕಠಿಣವಾಗಿ ಅಭ್ಯಸಿಸಿ ವೇದಿಕೆಯ ಕಲಾವಿದರಾಗಿ ರೂಪುಗೊಂಡು ಪ್ರಸಿದ್ಧಿ ಪಡೆಯುತ್ತಿರುವುದೇ ಸಾಕ್ಷಿ. ಮನೋಧರ್ಮ ಸಂಗೀತ ಹಾಗು ಹಲವು ವಾಗ್ಗೇಯಕಾರರ ಕೃತಿಗಳನ್ನು ಆಧರಿಸಿದ ಸಾಕಷ್ಟು ಸಂಗೀತ ಕಾರ್ಯಗಾರಗಳನ್ನು ದೇಶ, ವಿದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ.

ಮಕ್ಕಳಿಗೆ ಸಂಗೀತವನ್ನು ಆಸ್ವಾದಿಸಲು ನೆರವಾಗಬಲ್ಲ 21 ಸರಣಿಗಳಲ್ಲಿ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಬಿತ್ತರಗೊಂಡ "ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್"ನಿಂದ ಪ್ರಾಯೋಜಿಸಲ್ಪಟ್ಟ "ಹಾಡು ಹಕ್ಕಿ" ಕಾರ್ಯಕ್ರಮದ ಪರಿಕಲ್ಪನೆ ಮತ್ತು ನಿರ್ದೇಶನ ಇವರದ್ದೇ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಬಂದ ದಾಸಸಾಹಿತ್ಯ, ವಚನಗಳ ಅನೇಕ ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ.

ಇವರ ಎಲ್ಲಾ ಸಾಧನೆಗಳ ಹಿಂದೆ ಪತಿ ಅನಂತಮೂರ್ತಿ ಅವರ ಪ್ರೋತ್ಸಾಹ, ಹಾರೈಕೆಗಳು ಹಾಗು ಮಕ್ಕಳು ಸ್ಕಂದ, ಸುಶ್ರುತ;, ಸ್ವತಃ ಹಿಂದೂಸ್ತಾನಿ ಗಾಯಕಿಯಾಗಿ ಪ್ರಸಿದ್ಧಿ ಪಡೆಯುತ್ತಿರುವ ಸೊಸೆ ಅನಘ ಭಟ್ - ಇವರೆಲ್ಲರ ಸಹಕಾರ ಸ್ತುತ್ಯರ್ಹ.

ಸಂಗೀತದ ಹಲವು ಆಯಾಮಗಳಲ್ಲಿ ಸಾಧಿಸಿರುವ, ಸೇವೆ ಸಲ್ಲಿಸಿರುವ ಸತ್ಯವತಿ ಅವರು ಯಾವ ಕೆಲಸವನ್ನು ಆಯ್ದುಕೊಂಡರೂ ತುಂಬಾ ಅಚ್ಚುಕಟ್ಟು ಹಾಗು ಅದಕ್ಕೆ ಪರಿಪೂರ್ಣತೆಯನ್ನು ಒದಗಿಸುವ 'ಪರ್ಫೆಕ್ಷನಿಸ್ಟ್'. ಹತ್ತು ಸಲ ತಿದ್ದಿಯಾದರೂ ಒಂದು ಸಂಚಾರವನ್ನು ಶಿಷ್ಯರಿಂದ ಸರಿಯಾಗಿಯೇ ಹಾಡಿಸುತ್ತಾರೆ. ಇಷ್ಟೆಲ್ಲಾ ಸಾಧನೆಗಳ ನಂತರವೂ ಅತ್ಯಂತ ಸರಳ ಸ್ವಭಾವದಿಂದ ಕೂಡಿದ ಇವರ ಸುತ್ತ ಸ್ನೇಹಿತರು, ಶಿಷ್ಯರು, ಅಭಿಮಾನಿಗಳು ಸದಾ ತುಂಬಿರುತ್ತಾರೆ, ಸಕ್ಕರೆಯ ಸುತ್ತ ಇರುವೆಗಳಿದ್ದ ಹಾಗೆ!

ಅಕಾಡೆಮಿಯ ಮ್ಯುಸಿಕಾಲಜಿಸ್ಟ್ ಪ್ರಶಸ್ತಿ ಈಗಾಗಲೇ ಇವರಿಗೆ ಸಂದಿರುವ ಹಲವು ಬಿರುದು, ಪ್ರಶಸ್ತಿಗಳ ಪಟ್ಟಿಗೆ ಹೊಸ ಸೇರ್ಪಡೆ. ಈ ಸರಣಿ ಹೀಗೇ ಮುಂದುವರೆಯಲಿ ಎಂದು ಆಶಿಸೋಣ.

English summary
Madras music academy (Chennai) Musicologist award to Karnataka classical singer Dr TS Sathyavathi, a Sanskrit scholar and renowned Carnatic musician. An introduction by Ashwini Satish, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X