ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಡಿತ ಪರಮೇಶ್ವರ ಹೆಗಡೆಯವರ ರಾಗ್-ಅನುರಾಗ್

By Staff
|
Google Oneindia Kannada News

Rag-Anurag : Musical CD by Parameshwar Hegdeಸಂಗೀತದ ಪಟ್ಟುಗಳನ್ನು ಕಲಿಸುವಲ್ಲಿ ಗುರುಗಳ ಪಾತ್ರ ಅತೀ ಮುಖ್ಯ. ಪಂಡಿತ ರಾಜಗುರುಗಳಂಥ ಗುರುಗಳು ಶ್ರೇಷ್ಠವಾದ ಸಂಗೀತವನ್ನು ಜನಮಾನಸದಲ್ಲಿ ಉಳಿಸಿಹೋಗಿದ್ದು ಮಾತ್ರವಲ್ಲ, ಅತ್ಯುತ್ತಮ ಶಿಷ್ಯಪರಂಪರೆಯನ್ನೂ ಹುಟ್ಟುಹಾಕಿದ್ದಾರೆ. ಅವರ ಶಿಷ್ಯಪರಂಪರೆಯ ಪರಮೇಶ್ವರ ಹೆಗಡೆಯವರೂ ಗುರುಗಳು ಹಾಕಿಕೊಟ್ಟಂಥ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ಪರಮೇಶ್ವರವರು ಹೊರತಂದಿರುವಂಥ 'ರಾಗ್-ಅನುರಾಗ್' ಧ್ವನಿಮುದ್ರಣದಲ್ಲಿ ಅವರ ಶಿಷ್ಯಂದಿರೇ ಹಾಡಿದ್ದಾರೆ.

* ಸಚ್ಚಿದಾನಂದ ಹೆಗಡೆ, ಬೆಂಗಳೂರು

ಕರ್ನಾಟಕದ ಹಿಂದುಸ್ಥಾನೀ ಸಂಗೀತದ ಶ್ರೇಷ್ಠ ಇತಿಹಾಸದಲ್ಲಿ ಪಂಡಿತ್ ರಾಜಗುರುರವರಿಗೆ ವಿಶಿಷ್ಟ ಸ್ಥಾನ. ಆ ಸ್ಥಾನ ಮುಖ್ಯವಾಗಿ ಎರಡು ಕಾರಣಕ್ಕೆ. ಒಂದು, ಅವರ ಶ್ರೇಷ್ಠ ಗಾಯನಕ್ಕೆ, ಎರಡನೇಯದು, ಅವರು ತಯಾರು ಮಾಡಿದ ಮುಂದಿನ ತಲೆಮಾರಿನ ಶಿಷ್ಯವೃಂದಕ್ಕಾಗಿ. ಅವರು ಈ ಸಮಾಜಕ್ಕೆ ಶಾಸ್ತ್ರೀಯ ಚೌಕಟ್ಟಿನಲ್ಲೇ ಮುಂದಿನ ಎರಡು ತಲೆಮಾರನ್ನು ಅತ್ಯಂತ ಆಸ್ಥೆಯಿಂದ ಹಿಂದೂಸ್ಥಾನೀ ಸಂಗೀತ ಪ್ರಕಾರದಲ್ಲಿ ತಯಾರು ಮಾಡಿದ್ದಾರೆ. ಶಿಷ್ಯಂದಿರ ಬೆಳೆಯುವ ವೇಗ, ಪುಷ್ಟಿಯನ್ನು ಗಮನಿಸಿ ಮಾನಸಿಕವಾಗಿ ಎಲ್ಲ ಸಂಗೀತಾಸಕ್ತರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುವಂತೆ ಮಾಡಿದವರು ರಾಜಗುರುಗಳು.

ರಾಜಗುರುರವರ ನಂತರದ ತಲೆಮಾರು ಈ ವಿಷಯದಲ್ಲಿ ಎಂದೂ ಅಸಡ್ಡೆ ತೋರಿಸಿಲ್ಲ. ಗುರು ಪರಂಪರೆಯ ಜವಾಬ್ದಾರಿಯನ್ನು ಕರ್ತವ್ಯವೆಂದು ಭಾವಿಸಿಕೊಂಡವರು. ಈ ನಿಟ್ಟಿನಲ್ಲಿ ಪಂ. ಪರಮೇಶ್ವರ ಹೆಗಡೆಯವರ ಹೊಸ ಪ್ರಾಯೋಗಿಕ ಹೆಜ್ಜೆಯೇ "ರಾಗ್-ಅನುರಾಗ್" ಧ್ವನಿ ಮುದ್ರಿಕೆ. ಈ ಕಾಲದ ಮೇಲುಸ್ತರದ ಹೆಸರಾಂತ ಹಾಡುಗಾರರಾದ ಪಂಡಿತಜೀ ತಮ್ಮ ಪರಂಪರೆಯ ಮುಂದಿನ ತಲೆಮಾರನ್ನು ತಯಾರು ಮಾಡುತ್ತಿರುವುದಲ್ಲದೇ ಆ ಪ್ರಕಾರಕ್ಕೆ ಸಂಬಂಧಪಟ್ಟ ಉಲ್ಲೇಖಕ್ಕೆ ಮುಂದಾಗಿದ್ದಾರೆ. ಒಂದು ಪದ್ಧತಿ, ಪ್ರಕಾರದ ಉಳಿವಿಗೆ ಹಾಗೂ ಅದರ ಬೆಳವಣಿಗೆಗೆ ಆಯಾ ಕಾಲಘಟ್ಟದಲ್ಲಿನ ಉಲ್ಲೇಖ ಬಹಳ ಮುಖ್ಯ. ಅದಕ್ಕೆ ನಾವು ಇಂದೂ ಭಾತಕಾಂಡೆ, ಭಾಸ್ಕರ ಚಂದಾವರಕರ್, ವೈದೇಹಿ, ಹಾಗೂ ಸಂಗೀತ ವಿಶ್ವ ವಿದ್ಯಾಲಯಗಳ ನಿರಂತರ ಕೆಲಸಗಳನ್ನೂ ನೆನೆಸಿಕೊಳ್ಳುವುದು.

"ರಾಗ್-ಅನುರಾಗ್" ಧ್ವನಿಮುದ್ರಿಕೆ ಮುಖ್ಯವಾಗಿ 24 ಪ್ರಮುಖ ರಾಗಗಳನ್ನು ಆಯ್ದುಕೊಂಡು ಆಯಾ ರಾಗಗಳಿಗೆ ಸಂಬಂಧಪಟ್ಟ ಖ್ಯಾಲ್ ಮತ್ತು ಲಘು ಶಾಸ್ತ್ರೀಯ ಮಾದರಿಯ ಭಜನೆ, ನಾಟ್ಯಗೀತೆ, ವಚನಗಳನ್ನು ಒಳಗೊಂಡಿದೆ. ಪ್ರತೀ ರಾಗದ ಆರಂಭದಲ್ಲಿ ಆ ರಾಗದ ಅರೋಹ, ಅವರೋಹ, ವಾದಿ, ಸಂವಾದಿ, ಹಾಡುವ ಸಮಯ ಇತ್ಯಾದಿ ವಿವರಗಳಿವೆ. ದ್ವನಿಮುದ್ರಿಕೆಯ ಮುಖಚಿತ್ರ, ಕಲೆ ಮತ್ತು ಸಂಗೀತದ ಮೂಲಗುಣಧರ್ಮಗಳಾದ ಫೊರ್ಮ್ ಮತ್ತು ಟೆಕ್ಸ್‌ಚರನ್ನು ಉಚ್ಚಮಟ್ಟದಲ್ಲಿ ಅಭಿವ್ಯಕ್ತಿಸಿದ್ದು ಹಾಡುಗಳ ಅನುಕ್ರಮಣಿಕೆಯಲ್ಲಿ ಗೊಂದಲವಿದೆ. ಈ ಎರಡು ಸಿ.ಡಿ.ಗಳಲ್ಲಿ ಬರುವ ಸುಮಾರು 33 ಸಂಯೋಜನೆಗಳನ್ನು ಪಂಡಿತಜಿಯ ಶಿಷ್ಯವೃಂದ ಹಾಡಿದೆ. ಅದಕ್ಕೆ ಗೋಪಾಲಕೃಷ್ಣ ಹೆಗಡೆ ಮತ್ತು ವ್ಯಾಸಮೂರ್ತಿ ಕಟ್ಟಿಯವರ ತಬಲ ಮತ್ತು ಹಾರ್ಮೋನಿಯಮ್ ಸಂಗವಿದೆ. ಇವರಿಬ್ಬರೂ ಕರ್ನಾಟಕದ ಹೆಸರಾಂತ ತಬಲಾ ಹಾಗೂ ಹಾರ್ಮೋನಿಯಮ್ ವಾದಕರು. ಸಂಗೀತ, ಸಾಹಿತ್ಯದಲ್ಲೆರೆಡರಲ್ಲೂ ಶ್ರೇಷ್ಠ ಮಟ್ಟದ ತಿಳಿವಳಿಕೆ ಇರುವವರು.

Pandit Parameshwar Hegdeಈ ಧ್ವನಿಮುದ್ರಿಕೆಯಲ್ಲಿ ಶಾಸ್ತ್ರೀಯ ಸಂಗೀತ, ಭಾವಗೀತೆ, ವಚನ, ನಾಟ್ಯಗೀತೆ, ಚಿತ್ರಸಂಗೀತ, ಎಲ್ಲವೂ ಇರುವುದರಿಂದ ಮೇಲ್ನೋಟಕ್ಕೆ ಅಭಿರುಚಿಯ ಮತ್ತು ವೃತ್ತಿಪರತೆಯ ಕೊರತೆ ಅಂದುಕೊಂಡರೂ ನಾವೆಲ್ಲಾ ಒಂದು ದಿವಸ ಸಂಗೀತಕ್ಕೆ ಒಲಿದಿದ್ದೇ ಒಳ್ಳೆಯ ಭಜನೆ, ಭಾವಗೀತೆಯಿಂದ. ಆ ಮೂಲಕ ನಾವು ಶಾಸ್ತ್ರೀಯತೆಯನ್ನು ಹುಡುಕಿಕೊಂಡು ಹೋಗಿದ್ದು. ಕಲೆ ಮತ್ತು ವ್ಯಕ್ತಿಯ ವಿಕಸನ ಶಾಸ್ತ್ರೀಯತೆಯ ಕಡೆಗೆ ಒಯ್ಯಬೇಕು. ತನ್ಮೂಲಕ ಒಳ್ಳೆಯ ಸಂಗೀತವನ್ನು ಹುಡುಕಬೇಕು. ಕಾಲಕಾಲಕ್ಕೂ ಹೊಸದು ಹುಟ್ಟಬೇಕು. ಇವೆಲ್ಲವೂ ಶಾಸ್ತ್ರೀಯ ಚೌಕಟ್ಟಿನಲ್ಲೇ ವಿಶಿಷ್ಟ ಅಭಿವ್ಯಕ್ತಿ ಆಗಬೇಕು. ಇದಕ್ಕೆ ಒಳ್ಳೆಯ ಉದಾಹರಣೆಯೇ 'ರಾಗ್-ಅನುರಾಗ್'.

ಇಲ್ಲಿ ಬರುವ 'ನಂಬಿದೆ ನಿನ್ನಾ', 'ಶಾರದೆ ಮಾ', 'ಅಡಗಿನೊಳಗಣ' ಈ ಮಾದರಿಯವೇ. ಇವ್ಯಾವದನ್ನೂ ನಾವು ಈಗ ಕರ್ನಾಟಕದಲ್ಲಿ ಕೇಳುವ ಗೊಂದಲ ಸುಗಮಸಂಗೀತಕ್ಕೆ ಹೋಲಿಸುವಂತಿಲ್ಲ. ಈ ಮುದ್ರಿಕೆಯಲ್ಲಿ ಹಾಡಿದ ಎಲ್ಲರೂ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದು, ಶಾಸ್ತ್ರೀಯ ಹಾಗೂ ಲಘುಶಾಸ್ತ್ರೀಯವನ್ನು ಹಾಡಿದ್ದಾರೆ. ಶಾಸ್ತ್ರೀಯ ಕಲಿಕೆ ಲಘುಶಾಸ್ತ್ರೀಯತೆಯನ್ನು ಶ್ರೀಮಂತಗೊಳಿಸಿದೆ. ಲಘುಶಾಸ್ತ್ರೀಯತೆ ಸುಗಮಸಂಗೀತವಲ್ಲ. ಪಂಡಿತಜೀ, ಗಣಪತಿ ಭಟ್ಟ, ವೆಂಕಟೇಶಕುಮಾರ್, ತೊರವಿಯರದನ್ನು ಯಾರೂ ಸುಗಮ ಸಂಗೀತವೆಂದು ಹೇಳುವುದಿಲ್ಲ. ಅಡುಗೆ ಕಲಿಸಬಾರದು, ಅಡುಗೆ ಮನೆಯ ಪದಾರ್ಥಗಳ ವಾಸನೆ, ರುಚಿ, ಲಭ್ಯಗಳನ್ನು ತಿಳಿಸಬೇಕು. ಖ್ಯಾಲ್‌ನಲ್ಲಿರುವ ಹೊಸತನ, ಶಾರದೆ ಮಾ, ಅಡಗಿನೊಳಗನ ಹಾಲು, ಇದೇ ಮಾದರಿಯವು.

ಈ ಧ್ವನಿಮುದ್ರಿಕೆ ಮುಖ್ಯವಾಗುವುದು ಎರಡು ಕಾರಣಕ್ಕೆ. ಮೊದಲನೆಯದು, ಈ ಕಾಲಘಟ್ಟದ ಹೊಸತಲೆಮಾರಿನ ಗಂಭೀರ ಸಂಗೀತ ವಿದ್ಯಾರ್ಥಿಗಳ ಸ್ಥಿತಿ ದಾಖಲೆ. ಕೆಲವು ವರುಷಗಳಿಂದ ಸಂಗೀತ ಕೇಳುತ್ತಿರುವವರ ಸಾಮಾನ್ಯ ಆಸಕ್ತಿ ಹಾಗೂ ಪ್ರಶ್ನೆಗಳಾದ ಇದು ಯಾವ ರಾಗ, ಇದರ ಸಮಯದ ಪ್ರಸ್ತುತಿ ಏನು? ಈ ರಾಗಗಳ ರಸಸ್ಥಾನ ಯಾವುದು ಎನ್ನುವುದಕ್ಕೆ ಉತ್ತರಿಸುತ್ತದೆ. ಶ್ರೋತ್ರವೂ ಕಾಲ ಕಳೆದಂತೇ ಹೇಳಿದಕ್ಕೆಲ್ಲಾ "ವ್ಹಾ" ಎನ್ನುವುದಕ್ಕಿಂತ ಕೆಲವು ಮುಖ್ಯ ರಾಗಗಳ ಬಗ್ಗೆ ಸಣ್ಣ ತಿಳಿವಳಿಕೆ ಬೆಳೆಸಿಕೊಂಡು ಸಂಗೀತದ ಬಗ್ಗೆ ತನ್ನ ಒಳನೋಟವನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಅದನ್ನು ಈ ದ್ವನಿಮುದ್ರಿಕೆ ಬೆಂಬಲಿಸುತ್ತದೆ. ಎರಡನೆಯದು, ಈಗಿನ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಇನ್ನೊಂದು ತನ್ನದೇ ವಯಸ್ಸಿನ ವಿದ್ಯಾರ್ಥಿ, ರಾಗಗಳನ್ನು ಪ್ರಸ್ತುತಪಡಿಸುವುದರಿಂದ, ಅದರ ಪರಿಣಾಮ, ಕಲಿಯುವ ಆಸಕ್ತಿ, ಸ್ಪೂರ್ತಿಗೆ ಕಾರಣವಾಗುತ್ತದೆ. ಪಂಡಿತಜೀಯ ಅಭಿಪ್ರಾಯದಂತೆ ಈ ಪ್ರಯತ್ನ ಜನಸ್ತೋಮವನ್ನು ಶಾಸ್ತ್ರೀಯ ಸಂಗೀತದ ಕಡೆಗೆ ಒಯ್ಯುವುದಾಗಿದೆ.

ಈ ಮುದ್ರಿಕೆಯಲ್ಲಿ ಬರುವ ಅಮೃತಾ ರಾವ್ ಅವಳ ಶಾಂತ ಮತ್ತು ಗಂಭೀರದಿಂದ ಕೂಡಿದ 'ಕೇದಾರ'ದ ಪ್ರಸ್ತುತಿ ಹಾಗೂ ಅಲ್ಲಿನ ರಸಸ್ಥಾನಕ್ಕೆ ಸಲ್ಲುವ 'ಮ', 'ಸ'ಗಳ ಪ್ರಯೋಗ ಒಳ್ಳೆಯ ಸಂಗೀತದ ಉದಾಹರಣೆಯಾಗಿದೆ. ಮಧುವಂತಿಯಲ್ಲಿನ ಅಪರೂಪದ ಬಳಕೆಯಾದ ಕೋಮಲ 'ನಿ' ಆ ರಾಗಕ್ಕೆ ಹೊಸ ಸ್ಥರ ಮತ್ತು ಅವಕಾಶಗಳನ್ನು ಕಲ್ಪಿಸಿ, ಕೇಳುಗರಿಗೆ ನಿಜವಾದ ಖುಶಿ ನೀಡುತ್ತದೆ. ಅವಳ ಸುಸ್ವರ, ಸ್ವರಗಳ ಪ್ರಯೋಗ, ತಲ್ಲೀನತೆ, ಹಾಗೂ ಅವಳ ವಚನ ಮತ್ತು ಭಕ್ತಿಗೀತೆಗಳ ಪ್ರಸ್ತುತಿಯನ್ನು ಇಂದಿನ ಕಾಲ ಕಡೆಗಣಿಸುವಂತಿಲ್ಲ.

ರಾಗಕ್ಕೆ ರಸಸ್ಥಾನ ಎನ್ನುವಂತೇ ಈ ಸಿ.ಡಿ.ಗಳಲ್ಲೂ ರಸಸ್ಥಾನಗಳಿವೆ. ಅದು ಕೌಶಿಕ್ ಐತಾಳರದ್ದು. ಅವರ ದೇಸ್, ಪೂರಿಯಾ ಕೇಳಿದಾಗಿನ ಬಿಡುಗಡೆ ಮನೋಭಾವ, ಗಮನಾರ್ಹವಾದದ್ದೇ. ಈ ಸಮಯದ ಹಿಂದೂಸ್ಥಾನೀ ಸಂಗೀತದಲ್ಲಿನ ಬೆಳೆಯುತ್ತಿರುವ ಶುದ್ಧ ಪ್ರತಿಭೆಯ ಬೆರಳೆಣಿಕೆಯಲ್ಲಿ ಈತನದ್ದು ಮೊದಲಸ್ಥಾನ. ಈವನ ದ್ವನಿಯ ಮಾಧುರ್ಯ, ಮೇಲಸ್ವರಗಳಲ್ಲಿನ ಲೀಲಾಜಾಲ ಪ್ರಯೋಗ, ಕ್ರಮಬದ್ಧ ಸ್ವರ ಹಾಗೂ ತಾನುಗಳು, ಪ್ರತೀ ತಿಹಾಯಿನಲ್ಲೂ ಲೆಕ್ಕಾಚಾರ, ಈತನ ಪರಿಶ್ರಮ, ಈ ವೃತ್ತಿಯ ಮೇಲಿನ ನಂಬಿಕೆ ಮತ್ತು ಭವಿಷ್ಯದ ವಿಶ್ವಾಸವನ್ನು ಪ್ರದರ್ಶಿಸುತ್ತದೆ.

ಮೊದಲಬಾರಿ ಧ್ವನಿ ಕೇಳಿ ಆಶ್ಚರ್ಯ, ಖುಶಿಯಾದದ್ದು ಭರತನದು. 'ನಂಬಿದೆ ನಿನ್ನಾ', 'ಎಂದೋ ಕೇಳಿದ' ಹಾಡಿನ ಪ್ರಸ್ತುತಿಯಲ್ಲಿನ ಮಾಧುರ್ಯ ಗಮನಾರ್ಹವಾದದ್ದು. ಆ ಹಾಡುಗಳಿಗೆ ಕೆಲವು ಅಂಶಗಳು ಮುಖ್ಯವಾದರೂ ಪ್ರತೀಸ್ವರ ಮತ್ತು ಶಬ್ದಗಳಿಗೆ ಅತ್ಯಂತ ನಾಜೂಕಾಗಿ ಹೆಜ್ಜೆ ಇಟ್ಟಂತೇ ಕಾಣುತ್ತದೆ. ಶಾಸ್ತ್ರೀಯ ಸಂಗೀತದ ಮೂಲ ಕಲಿಕೆಯೇ ಈ ಚೌಕಟ್ಟಿನಿಂದ ಹೊರಬರುವುದಾಗಿದೆ. "ಖುಲ್ಲಾ" ಎನ್ನುವ ಪ್ರಯೊಗವೇ ಈ ತೆರನಾದದ್ದು. ಚೈತನ್ಯನ ಧ್ವನಿಯಲ್ಲಿ ಪಟದೀಪ್ ಮತ್ತು ಹಂಸಧ್ವನಿ ಉತ್ತಮವಾಗಿ ಪ್ರಸ್ತುತವಾಗಿದೆ. ಈ ಹದಿನೈದು ವರ್ಷಗಳಲ್ಲಿ ಹಿಂದುಸ್ಥಾನಿ ಹಂಸಧ್ವನಿಗೆ ಪರಮೇಶ್ವರ ಹೆಗಡೆಯವರಿಂದ ಹೊಸ ಅರ್ಥ ಬಂದಿದೆ. ಅದರ ವ್ಯಾಪ್ತಿ ಮತ್ತು ಅವಕಾಶಗಳು ಇವರಿಂದಾಗಿ ವಿಸ್ತ್ರತಗೊಂಡಿವೆ. ಇಂತಹ ಪ್ರಸ್ತುತಿಯಲ್ಲಿ ಶಿಷ್ಯರ ಜವಾಬ್ದಾರಿ ಹೆಚ್ಚಿರುತ್ತದೆ. ಆಲಾಪ, ತಾನುಗಳ ಬಂಧ ವಿಶಿಷ್ಟವಾಗಿದ್ದು ಕೇಳುಗರನ್ನು ಮೋಹಿಸುತ್ತದೆ. ಶ್ರೀಧರರ ಮಾರುಬಿಹಾಗದ ಶುದ್ಧ 'ಮ' ಮತ್ತು 'ಗ', ನಿ' ಪ್ರಯೋಗ, ಈ ಮುದ್ರಿಕೆಗೆ ಹೆಚ್ಚು ಮೌಲ್ಯ ಒದಗಿಸಿವೆ. ಅವರ ಶಾರೀರ, ತಾಳದ ಗತಿಯ ಹೊಂದಾಣಿಕೆ ಮತ್ತು ತಾನುಗಳಿಗೆ ಪ್ರೋತ್ಸಾಹಿಸಿ ಸಮತೋಲನಗೊಳಿಸಿದೆ.

ಒಮ್ಮೆ ಪೂರ್ತಿ ಅವಲೋಕಿಸಿದಾಗ, ಎಲ್ಲರೂ ವಿದ್ಯಾರ್ಥಿಗಳೇ ಆದುದರಿಂದ ಅಲ್ಲಲ್ಲಿ 'ಸಂ'ಗೆ ಹುಡುಕಾಟಗಳಿವೆ. ಬೇಸೂರಿನ ಛಾಯೆಗಳಿವೆ. ತಾಳ ಗಟ್ಟಿ ಆಗದ ಹೊರತು ಸಂಗೀತ ಹಾಗೂ ಪ್ರಯೋಗಗಳಿಗೆ ತಮ್ಮನ್ನು ಪೂರ್ತಿ ತೊಡಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದನ್ನು ನಾವು ಈಗ ಕೆಲವು 'ಎ' ಗ್ರೇಡ್ ಕಲಾವಿದರಲ್ಲೂ ಕಾಣುತ್ತೇವೆ. ಇದರ ಪರಿಹಾರಕ್ಕೆ ಮಾರ್ಗಗಳನ್ನು ಹುಡುಕಬೇಕಾಗಿದೆ. ಹಿಂದುಸ್ಥಾನಿಯ ಮೂಲ ಗುಣಧರ್ಮವೇ ' ಅಬ್‌ಸ್ಟ್ರ್ಯಾಕ್ಟ್' ಪ್ರಸ್ತುತಿಯಾದುದರಿಂದ ವ್ಯಾಪ್ತಿ ಮತ್ತು ಅವಕಾಶಗಳಿಗೆ ಸಾಧ್ಯತೆ ಹೆಚ್ಚು. 'ಮ್ಯಾಜಿಕ್' ಎನ್ನುವುದರ ಅರ್ಥ ಹೊಸತನ್ನು ಹುಡುಕುವುದಲ್ಲ. ಇದ್ದುದರಲ್ಲಿಯೇ ಅದರ ವಿಭಿನ್ನ ವ್ಯವಸ್ಥೆ ಮತ್ತು ಪ್ರಸ್ತುತಿ. ಅದೇ ಏಳು ಸ್ವರ. ಕೆಲವುದರಲ್ಲಿ ಇದು ವರ್ಜ್ಯ, ಕೆಲವುದರಲ್ಲಿ ಅದು. ಕೆಲವು ಸ್ವರಗಳ ಪ್ರಾಮುಖ್ಯತೆ, ಸಮಯಗಳಿಂದಾಗಿ ನಾವು ಸ್ವೀಕರಿಸುವ ಹಾಗೂ ಅರಿಯುವ ವಿಧಾನ ಬದಲಾಗುತ್ತದೆ.

ನಾವು ಒಮ್ಮೆಯಾದರೂ ಕುಮಾರ್ ಗಂಧರ್ವ, ಸಲಾಮತ್ ಅಲಿ ಖಾನರ ಹತ್ತು ಹನ್ನೆರಡು ವರ್ಷವಿದ್ದಾಗಿನ ಧ್ವನಿಮುದ್ರಿಕೆಯನ್ನು ಕೇಳಬೇಕು. ಅಲ್ಲಿ ಕಾಡುವುದು ಆ ವರ್ಷಕ್ಕೆ ಅವರಲ್ಲಿದ್ದ ನಲವತ್ತು ವರ್ಷದವರ ಪ್ರೌಢಿಮೆ, ಪ್ರಸ್ತುತಿ, ಅಭ್ಯಾಸ ಹಾಗೂ ದೈವೀದತ್ತತೆ. ಇಂಥದ್ದನ್ನು ಕೇಳಿ ನಮ್ಮ ಸ್ಥಿತಿ, ಮಟ್ಟಗಳನ್ನು ಪರೀಕ್ಷಿಸಿಕೊಳ್ಳಬೇಕಾಗಿದೆ. ಆ ದ್ವನಿಮುದ್ರಿಕೆಯಲ್ಲಿ ಅವರೂ ಮಕ್ಕಳು, ವಿದ್ಯಾರ್ಥಿಗಳು ಆದದ್ದರಿಂದ ಉಳಿದ ವಿದ್ಯಾರ್ಥಿಗಳಿಗೆ ಆಗುವ ಸ್ಪೂರ್ತಿ ಪರಿಣಾಮಗಳೇ ಬೇರೆ. ಈ ಛಾಯೆಯನ್ನು ಇಲ್ಲಿನ ಒಂದೆರಡು ವಿದ್ಯಾರ್ಥಿಗಳಲ್ಲಿ ಪ್ರಬಲವಾಗಿ ಕಾಣಬಹುದಾಗಿದೆ.

ಈ ವ್ಯಾಪಾರಿ ಕಾಲಘಟ್ಟದಲ್ಲಿ ಹತ್ತು ಉತ್ತಮ ಶಿಷ್ಯರನ್ನು ಈ ಸಮಾಜಕ್ಕೆ ಕೊಟ್ಟು ಪರಂಪರೆ, ನಿಜವಾದ ಆಸಕ್ತಿ ಮತ್ತು ಬೆಳವಣಿಗೆಗೆ ಕಾರಣರಾಗುತ್ತಿರುವ ಪಂಡಿತಜೀಗೆ ಈ ಸಮಾಜ ಎಂದೂ ಕೃತಾರ್ಥವಾಗಲೇಬೇಕು.

ಎರಡು ಸಿಡಿಗಳುಳ್ಳ 'ರಾಗ-ಅನುರಾಗ'ದ ಬೆಲೆ 200 ರು.

ಈ ಸಿಡಿಗಳಿಗಾಗಿ ಕೆಳ ವಿಳಾಸವನ್ನು ಸಂಪರ್ಕಿಸಬಹುದು:
ಪರಮೇಶ್ವರ ಹೆಗಡೆ ಮ್ಯುಸಿಕ್ ಅಕಾಡೆಮಿ
ಆರೋಹಣ, ನಂ.13 ಮತ್ತು 14, ಸಿದ್ಧಿವಿನಾಯಕ ಬಡಾವಣೆ, ವಿರುಪಾಕ್ಷಪುರ
ಕೋಡಿಗೇಹಳ್ಳಿ, ಬೆಂಗಳೂರು - 560 097
ದೂರವಾಣಿ : 080 65673961
ಅಂತರ್ಜಾಲ ತಾಣ : www.parameshwarhegdeacademy.org
ಇ-ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X