ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಯೆ ಥಾ ಸಪ್ನಾ ಮೇರಾ- ಮೀರಾ ಸೂರ್‌ ಕಬೀರ’

By ಸುಭಾಶ್‌ ಕೆ. ಝಾ
|
Google Oneindia Kannada News

ಮುಂಬಯಿ : ಏಪ್ರಿಲ್‌ 25ರ ಬುಧವಾರ ರಾತ್ರಿ ಗುಜರಾತ್‌ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ 'ಯೇ ಮೇರೆ ವತನ್‌ ಕೆ ಲೋಗೋ' ಎಂಬ ಸಂಗೀತ ಸಂಜೆ ಸೋನಿ ಟೀವಿಯಲ್ಲಿ ಪ್ರಸಾರವಾಯಿತು. ಭಾರತರತ್ನ ಲತಾ ಮಂಗೇಶ್ಕರ್‌ ಕಿಂಚಿತ್ತೂ ದಣಿಯದೆ ಒಂದರ ಹಿಂದೊಂದರಂತೆ ಮೊನಾಟನಿ ಅನಿಸದ ಹಾಡುಗಳ ಹರಿಸುತ್ತಿದ್ದಾಗ ಯಾರಿಗಾದರೂ ಅನ್ನಿಸಿರಲೇಬೇಕು- 'ರಾಮ್‌ ರತನ್‌ ಧನ್‌ ಪಾಯೋ'ದಂಥ ಭಕ್ತಿಗೀತೆಗಳು ಆಕೆಯ ಕಂಠದಿಂದ ಮತ್ತಷ್ಟು ಹೊಮ್ಮಲಿ ಎಂದು.

ಅಭಿಮಾನಿಗಳ ಈ ಆಸೆ ಅಷ್ಟು ಹೊತ್ತಿಗೆ ಈಡೇರಿತ್ತು ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಹೌದು, 20 ವರ್ಷಗಳ ದೀರ್ಘಾವಧಿಯ ನಂತರ ಲತಾ, ತಮ್ಮ ಅಣ್ಣ ಹೃದಯನಾಥ್‌ ಮಂಗೇಶ್ಕರ್‌ ಅವರೊಟ್ಟಿಗೆ ಭಕ್ತಿ ಗೀತೆಯ ಕ್ಯಾಸೆಟ್ಟೊಂದನ್ನು ಏಪ್ರಿಲ್‌ 19ರಂದು ಮಾರುಕಟ್ಟೆಗೆ ತಂದಿದ್ದಾರೆ. ಆಲ್ಬಂನ ಹೆಸರು ಮೀರಾ ಸೂರ್‌ ಕಬೀರ. ಲತಾರ 'ಚಾಲಾ ವಾಹಿ ದೇಸ್‌' ಆಲ್ಬಂ ಆ ದಿನಗಳಲ್ಲಿ ಕಂಡ ಪ್ರಚಂಡ ಯಶಸ್ಸನ್ನೇ ಮೀರಾ ಭಜನೆಗಳೂ ಕಾಣಲಿವೆ ಎಂಬುದು ಕೆಸೆಟ್‌ ಹೊರ ತಂದಿರುವ ಎಚ್‌ಎಂವಿ ನಂಬುಗೆ.

ಲತಾರ ಮನೆಯ ಕದ ತಟ್ಟಿದಾಗ...
ಇಪ್ಪತ್ತು ವರ್ಷಗಳ ಕಾಲ ಭಕ್ತಿ ರಸವ ಕೆಸೆಟ್ಟಿಗೆ ತುಂಬದೆ ಇದ್ದುದಕ್ಕೆ ಕಾರಣವೇನಾದರೂ ಇದೆಯಾ, ಮೀರಾ ಭಜನೆ ಲತಾರ ಬಹುದಿನಗಳ ತುಡಿತವೇ- ಇಂಥಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮುಂಬಯಿಯ ಪೆಡ್ಡಾರ್‌ ರಸ್ತೆಯಲ್ಲಿರುವ ಲತಾರ ಮನೆಯ ಕದ ತಟ್ಟಿದಾಗ, ಖುದ್ದು ಲತಾ ಬಾಗಿಲು ತೆರೆದರು. ಮುಕ್ತವಾಗಿ ಮಾತನಾಡಿದರು. ಅದರ ಸಾರ, ಇದೋ ನಿಮಗಾಗಿ...

ಚಿಕ್ಕಂದಿನಿಂದ ನನಗೆ ಭಕ್ತಿಗೀತೆಗಳೆಂದರೆ ನೆಚ್ಚು. ದೇವಸ್ಥಾನದಲ್ಲಿ ಕೂತರೆ ಯಾವುದೋ ಸಿನಿಮಾ ಹಾಡು ನಾಲಗೆ ಮೇಲೆ ಬರುತ್ತಿರಲಿಲ್ಲ ; ಹಾಡಾಗುತ್ತಿದ್ದುದು ದೇವರನಾಮ. ಅಂದಿನಿಂದ ಇಂದಿನವರೆಗೆ ಭಜನೆಗಳೇ ನನ್ನ ಮೆಚ್ಚು.

1960ರಲ್ಲಿ ಪಂಡಿತ್‌ ಭೀಮ್‌ಸೇನ್‌ ಜೋಷಿ ಅವರ ಜೊತೆ ಸೇರಿ ಕೆಲವು ಭಜನೆಗಳನ್ನು ರೆಕಾರ್ಡ್‌ ಮಾಡಿದ್ದೆ. ಭಗವದ್ಗೀತೆಯ ಶ್ಲೋಕಗಳಿಗೂ ರಾಗ ತುಂಬಿ, ಅವನ್ನೂ ಕೆಸೆಟ್ಟಿಗೆ ತುಂಬಿಸಿದೆ. ಈಗ ಅಣ್ಣ ಹೃದಯನಾಥ್‌ ಜೊತೆ ಮೀರಾ ಭಜನೆಗಳನ್ನ ಹಾಡಿದ್ದೇನೆ. ಮೀರಾ ಭಜನೆ ನನ್ನ ಬಹು ವರ್ಷಗಳ ಕನಸು. ಈಗ ಅದು ನನಸಾಗಿದ್ದಕ್ಕೆ ಖುಷಿಯಾಗಿದೆ.

ಕಳೆದುಹೋಗಿದ್ದೆ : ಇವತ್ತಿನ ಯುವಜನ ಭಜನೆಯನ್ನ ಕನಸಿನಲ್ಲೂ ಕೇಳಲು ಇಚ್ಛಿಸುವುದಿಲ್ಲ. ಬಹುಶಃ ನನ್ನ ಕನಸು ಇಷ್ಟು ತಡವಾಗಿ ನನಸಾಗಲು ಇದೇ ಮುಖ್ಯ ಕಾರಣ. 20 ವರ್ಷಗಳ ಕಾಲ ಜನಕ್ಕೆ ಬೇಕಾದ್ದನ್ನ ಕೊಡೋದರಲ್ಲೇ ಕಳೆದುಹೋದೆ. ಸಿನಿಮಾ ಹಾಡುಗಳಿಗೇ ಹೆಚ್ಚು ಒತ್ತು ಕೊಟ್ಟೆ. ಆದರೂ ನನ್ನ ಮನದಲ್ಲಿ ಮೀರಾ ಭಜನೆಯ ಗುನುಗು ನಿರಂತರವಾಗಿತ್ತು. ಅದರ ಫಲವೇ ಮೀರಾ ಸೂರ್‌ ಕಬೀರ.

ಧನ್ಯೋಸ್ಮಿ ಅನಿಸಿತು : ಅಣ್ಣ ಹೃದಯಾನಾಥ್‌ ಜೊತೆ ಕೆಲಸ ಮಾಡಿದ್ದು ಒಂದು ಅನನ್ಯ ಅನುಭವ ಕಟ್ಟಿಕೊಟ್ಟಿತು. ಆತ ಪಕ್ಕಾ ಸಂಗೀತ ಸಂಯೋಜಕ. ನಾನು ಸಣ್ಣ ತಪ್ಪು ಮಾಡಲೂ ಅವಕಾಶ ಇಲ್ಲ. ಈ ವಿಷಯದಲ್ಲಿ ಅಣ್ಣ ಕಿಂಚಿತ್ತೂ ರಾಜಿ ಮಾಡಿಕೊಳ್ಳುವವನಲ್ಲ. ಆತನ ದೃಷ್ಟಿಯಲ್ಲಿ ಕೆಲಸ ಮಾಡುವಾಗ ನಾನು ತಂಗಿಯಲ್ಲ, ಒಬ್ಬ ಗಾಯಕಿ. ಹೀಗಾಗಿ ಫಲಿತಾಂಶ ಸಹಜವಾಗೇ ಉತ್ತಮವಾಯಿತು. ಎಲ್ಲಾ ಹಾಡುಗಳಿಗೂ ಆತನ ಮಾರ್ಗದರ್ಶನದಲ್ಲಿ ಜೀವ ತುಂಬಿದ ಮೇಲೆ ಧನ್ಯೋಸ್ಮಿ ಅನಿಸಿತು.

ಇವತ್ತು ಸಿನಿಮಾ ಹಾಡುಗಳಲ್ಲಿ ಕೂಡ ನಮ್ಮತನ ಮಾಸುತ್ತಿದೆ. ಸಂಸ್ಕೃತಿಯ ಗಂಧವೇ ಇಲ್ಲವಾಗುತ್ತಿದೆ. ನನ್ನ ಮನಸ್ಸನ್ನು ಕಾಡುತ್ತಿರುವ ಗಂಭೀರ ವಿಷಯ ಇದು. ಖಂಡಿತ ಸಿನಿಮಾ ಸಂಗೀತದಲ್ಲಿ ನಮ್ಮತನ ಪೂರ್ತಿ ಮರೆಯಾಗದಂತೆ ನೋಡಿಕೊಳ್ಳಲು ನನ್ನ ಕೈಮೀರಿ ಯತ್ನಿಸುತ್ತೇನೆ. ಇಂಥಾ ಹೊತ್ತಿನಲ್ಲಿ ಮೀರಾ ಭಜನೆ ಕಿಂಚಿತ್ತಾದರೂ ನಮ್ಮ ಸಂಗೀತ ಸೊಗಡನ್ನು ಪಸರಿಸಿದರೆ, ನನ್ನ ಯತ್ನಕ್ಕೆ ಪೂರ್ಣ ಯಶಸ್ಸು ಸಿಕ್ಕಿತು ಅಂದುಕೊಳ್ಳುತ್ತೇನೆ.

ಯೇ ಮೇರೆ ವತನ್‌ ಕೇ ಲೋಗೋ, ವಂದೇ ಮಾತರಂ ಮೊದಲಾದ ದೇಶಭಕ್ತಿ ಗೀತೆಗಳಿಂದ ಹೃದಯದಲ್ಲಿ ಮನೆ ಮಾಡಿರುವ ಲತಾರ ಮೀರಾ ಭಜನೆಗಳೊಂದಿಗೆ ದಿನದ ಶುಭಾರಂಭವಾಗಲಿ.
(ಐಎಎನ್‌ಎಸ್‌)

English summary
Meera Soor Kabeera Lata and Hrudaynath Mangeshkar restore bhakthiras
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X