ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಬಿಡುಗಡೆ ನೆವದಲ್ಲಿ ಸಾಹಿತ್ಯ 'ಸಂ'ವಾದ

By * ಮಹೇಶ್ ಮಲ್ನಾಡ್
|
Google Oneindia Kannada News

Rajalakshmi, Abdul, Kambar, Diwakar, Malagi, Siddu
ಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಎಂಬ ಕಥಾ ಸಂಕಲನ ಹಾಗೂ ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಕವನ ಸಂಕಲನಗಳನ್ನು ಭಾನುವಾರ ಮೇ 3ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೊಸ ಸಾಹಿತ್ಯದ ಗೋಚಾರಫಲದ ಬಗ್ಗೆ ರಸಿಕಾ ಕೇಳೋ ತಂಡ ಹಮ್ಮಿಕೊಂಡಿದ್ದ ಚರ್ಚೆ/ಸಂವಾದ ಕಾರ್ಯಕ್ರಮ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

ಪುಸ್ತಕ ಬಿಡುಗಡೆ:
ಬೆಂಗಳೂರಿನ ಅಭಿನವ ಪ್ರಕಾಶನದವರು ರಸಿಕಾ ಕೇಳೋ ತಂಡ ಜಂಟಿಯಾಗಿ ಆಯೋಜಿಸಿದ್ದರು. ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಪುಸ್ತಕ ಅನಾವರಣಗೊಳಿಸಿ, ಅದರಲ್ಲಿನ 'ಅವಳ ಪ್ರಶ್ನೆ' ಎಂಬ ಶಕುಂತಳೆಯ ಕಥೆ ಕುರಿತು ಮೆಚ್ಚುಗೆಯ ಮಾತನಾಡಿದರು. ಕಥೆಗಳ ನಿರೂಪಣೆ ಅನನ್ಯವಾಗಿದೆ. ಕಥಾ ವಿಸ್ತರಣೆ ಹೆಚ್ಚಿಸಬಹುದಿತ್ತು ಅನ್ನುವುದನ್ನು ಬಿಟ್ಟರೆ ಈ ಕಥಾ ಸಂಕಲನದಲ್ಲಿ ದೋಷಗಳು ಕಂಡುಬರಲಿಲ್ಲ. ಇದು ಇವರ ಮೊದಲ ಕಥಾ ಸಂಕಲನ ಎಂದು ತಿಳಿದು ಆಶ್ಚರ್ಯವಾಗುತ್ತದೆ. ತಾಜಾತನದಿಂದ ಕೂಡಿರುವ ಕಥೆಗಳು ಕಥಾ ರಚನೆಯ ಸಿದ್ಧ ಸೂತ್ರಗಳನ್ನು ಮುರಿದಿದೆ. ರಾಜಲಕ್ಷ್ಮಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಕಂಬಾರರು ಹಾರೈಸಿದರು.

ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಚೊಚ್ಚಲ ಕವನ ಸಂಕಲನವನ್ನು ಕಥೆಗಾರ ಎಸ್ ದಿವಾಕರ್ ಬಿಡುಗಡೆ ಮಾಡಿ ಮಾತಾಡಿ, ಇತ್ತೀಚಿನ ಹೊಸ ಲೇಖಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಿದ್ದು ಅವರೂ ಎದುರಿಸುತ್ತಿದ್ದಾರೆ. ಕೆಲ ಕವಿತೆಗಳಲ್ಲಿ ಯಶಸ್ವಿಯೂ ಆಗಿದ್ದಾರೆ. ಗದ್ಯಕ್ಕೆ ಹೆಚ್ಚು ಹತ್ತಿರವಾದ ಕವನಗಳನ್ನು ಕಾಣಬಹುದಾದ ಈ ದಿನಗಳಲ್ಲಿ ಅದಕ್ಕೆ ವ್ಯತಿರಿಕ್ತವಾಗಿ, ಆದರೆ ಅಷ್ಟೇ ಸಮರ್ಥವಾಗಿ ಕವನಗಳನ್ನು ಸಿದ್ದು ಅವರು ರಚಿಸಿದ್ದಾರೆ ಎಂದರು. ನಂತರ ಆಯ್ದ ಎರಡು ಕವನಗಳನ್ನು ಓದಿದರು.

SUMವಾದ
ಯುಆರ್ ಅನಂತಮೂರ್ತಿ ಹೇಳುವಂತೆ 'ಚರ್ಚೆ ಆಗಬೇಕ್ರಿ ಸಾಹಿತ್ಯದ ಬಗ್ಗೆ' ಎಂಬುದಕ್ಕೆ ಪ್ರತಿಯಾಗಿ ಸಂವಾದಕ್ಕಿಂತ ಸಣ್ಣ ಪ್ರಮಾಣದ ವಾದವಷ್ಟೆ ನೆರೆದಿದ್ದ ಸಾಹಿತ್ಯ ರಸಿಕರಿಗೆ ಸಿಕ್ಕಿತು. ಎಸ್ ದಿವಾಕರ್ ಪ್ರಾಸ್ತವಿಕವಾಗಿ ಮಾತನಾಡಿ ಹೊಸ ಸಾಹಿತ್ಯ, ಸಾಹಿತಿಗಳ ಬಗ್ಗೆ ತಮಗಿರುವ ಕೆಲವು ಕಳಕಳಿಯ ಪ್ರಶ್ನೆಗಳನ್ನು ಮುಂದಿಟ್ಟರು. ಅದರಲ್ಲಿ ರಾಜಕೀಯಮಯವಾಗುತ್ತಿರುವ ಪತ್ರಿಕೆಗಳು, ಸಾಹಿತ್ಯ ಬೆಂಬಲಿಸದಿರುವ ಪತ್ರಿಕೆಗಳು, ವಿಮರ್ಶಕರ ಅವಶ್ಯಕತೆ, ಸಣ್ಣ ಪತ್ರಿಕೆಗಳ ಸ್ಥಾನಮಾನ ಮುಂತಾದ ವಿಷಯಗಳಿದ್ದವು.

ಎಸ್ ದಿವಾಕರ್
ಹೊಸದಾಗಿ ಬರೆಯುತ್ತಿರುವ ಲೇಖರರ ಬರವಣಿಗೆಯಲ್ಲಿ ಲಯ ಕಾಣುತ್ತಿಲ್ಲ. ಸಾಹಿತ್ಯದ ಪ್ರಯೋಗಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ಬರವಣಿಗೆ ಮನಸ್ಸಿನಲ್ಲಿ ಉಳಿಯುತ್ತಿಲ್ಲ. ಇನ್ನು, ಸಾಹಿತ್ಯದಲ್ಲಿ ಮೂಲಭೂತ ವಾದ ಗಟ್ಟಿಯಾಗಿ ಬೇರೂರಿರುವ ಹಿನ್ನೆಲೆಯಲ್ಲಿ ಒಬ್ಬ ಕೆಟ್ಟ ಮುಸ್ಲಿಮನನ್ನು ಒಬ್ಬ ಹಿಂದು ಲೇಖಕ ಖಂಡಿಸಲು ಸಾಧ್ಯವಾಗುತ್ತಿಲ್ಲ.

ಕೇಶವ ಮಳಗಿ
ಕನ್ನಡದಲ್ಲಿ ಈಗ ವಿಮರ್ಶಕರೇ ಇಲ್ಲ. ಸಾಹಿತ್ಯ ವಲಯದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲ, ಕೆಲವು ಲೇಖಕರು, ಮುಖ್ಯವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕರೇ ಶ್ರೇಷ್ಠ ಸಾಹಿತಿಗಳು ಎಂಬ ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ. ಇನ್ನು, ಪ್ರಶಸ್ತಿ ಮತ್ತು ಖ್ಯಾತಿ- ಈ ಎರಡೇಸಾಹಿತ್ಯದ ಯಶಸ್ಸಿನ ಮಾನದಂಡ ಆಗಿರುವುದು ಶೋಚನೀಯ.

ಅಬ್ದುಲ್ ರಷೀದ್
ಹುಚ್ಚುತನ ಇಟ್ಟುಕೊಂಡು ಬರೆಯುತ್ತಾ ಹೋದರೆ ವಿನೂತನ ಆಲೋಚನೆತೆರೆದುಕೊಳ್ಳುತ್ತದೆ ಮತ್ತು ಹೊಸ ಲೋಕ ಅನಾವರಣಗೊಳ್ಳುತ್ತದೆ. ಆದರೆ, ಹೀಗೆ ಮೂಡುವ ಮತ್ತು ಕಾಣುವ ಅಂಶವನ್ನು ಧೈರ್ಯವಾಗಿ ಬರೆಯುತ್ತಾಹೋಗಬೇಕಷ್ಟೇ... ಧಾರ್ಮಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟಿಗೆ ಒಳಗಾಗದಿದ್ದರೆ ಪೂರ್ವಾಗ್ರಹವಿಲ್ಲದೆ, ಯಾವುದರ ಪ್ರಭಾವವಿಲ್ಲದೆ ಸರಳವಾಗಿ ಬರೆಯಬಹುದು.

ಜೋಗಿ
ಎಸ್ ದಿವಾಕರ್ ಅವರ ಮಾತಿಗೆ ಪ್ರತಿಯಾಗಿ ಹೇಳಿದ ಕನ್ನಡಪ್ರಭದ ಜೋಗಿ ಅವರು, ಸಾಹಿತ್ಯ/ಸಾಹಿತಿಯನ್ನು ಬೆಳೆಸುವ ಕೆಲಸ ಪತ್ರಕರ್ತರದ್ದಲ್ಲ. ನಮಗೆ ಯಾರಲ್ಲೂ ಬೇಧವಿಲ್ಲ. ಸಿನಿಮಾ ನಟರ ಪ್ರತಿಕಾಗೋಷ್ಠಿಯಂತೆ , ಸಾಹಿತ್ಯ ವಿಮರ್ಶೆನೂ ಪ್ರಕಟಿಸುತ್ತೇವೆ. ಆದರೆ ಯಾವುದೇ ಪ್ರಾಮುಖ್ಯತೆ ಕೊಡಬೇಕು ಯಾವುದಕ್ಕೆ ಬೇಡ ಎಂಬುದು ಪತ್ರಿಕೆ ಮಾಲೀಕರ, ಸಂಪಾದಕರ ಅವಗಾಹನೆಗೆ ಬಿಟ್ಟಿದ್ದು. ಸಾಹಿತ್ಯ ಬೆಳೆಸಬೇಕಾದವರು ಸಾಹಿತಿಗಳು ನಾವಲ್ಲ ಎಂದರು.

ವಸುಧೇಂದ್ರ
ವಿಮರ್ಶೆ ಅನ್ನೊದೇ ಆರ್ಥ ಆಗೋಲ್ಲ. ಯಾವುದೂ ಸತ್ವವಾದ ಸಾಹಿತ್ಯವೋ ಅದು ಉಳಿಯುತ್ತೆ. ಅದನ್ನು ಕಾಲವೇ ನಿರ್ಧರಿಸುತ್ತದೆ ಅದಕ್ಕೆ ಕಾಯಬೇಕು ಅಷ್ಟೇ ಎಂದು ಹೇಳಿ ಸಾಕ್ಷಿ ಪತ್ರಿಕೆಯಲ್ಲಿ ಆಗಿನ ಕಾಲಕ್ಕೆ ಮಲೆಗಳಲ್ಲಿ ಮದುಮಗಳು ಕೃತಿ ಬಗ್ಗೆ ಬಂದ ವಿಮರ್ಶೆಗಳ ಸಂಖ್ಯೆ ಹಾಗೂ ಅದಕ್ಕೆ ಪ್ರತಿಯಾಗಿ ಗತಿ ಸ್ಥಿತಿ ಎಂಬ ಕೃತಿಗೆ ಸಿಕ್ಕ ಮನ್ನಣೆ ಬಗ್ಗೆ ಉದಾಹರಣೆ ನೀಡಿದರು.

ಅಶೋಕ್ ಹೆಗಡೆ
ಸಣ್ಣ ಪತ್ರಿಕೆಗಳಿಂದ ಮಾತ್ರ ಸಾಹಿತ್ಯ ಉಳಿಯಲು ಸಾಧ್ಯ ಎಂಬ ದಿವಾಕರ್ ಅವರ ಮಾತನ್ನು ಅಲ್ಲಗೆಳೆದು, ಎಲ್ಲಾ ಪತ್ರಿಕೆಗಳಲ್ಲಿ ಒಳ್ಳೆದು, ಕೆಟ್ಟದ್ದು ಇರುತ್ತದೆ ನಾವು ಹೆಕ್ಕಿ ತೆಗೆದುಕೊಳ್ಳಬೇಕಷ್ಟೆ. ಲಂಕೇಶ್ ಪತ್ರಿಕೆ(ಹಿಂದಿನ ಕಾಲದ)ಯಲ್ಲಿ ಮುಖಪುಟದಲ್ಲಿ ರಾಜಕೀಯ ರಾರಾಜಿಸುತ್ತಿದ್ದರೂ ನಾವು ಒಳಪುಟದಲ್ಲಿರುತ್ತಿದ್ದ ಜಾಣ ಜಾಣೆ, ಮುಂತಾದವುಗಳನ್ನು ತಪ್ಪದೇ ಓದುತ್ತಿದ್ದೇವು ಎಂದರು.

ಕಾರ್ಯಕ್ರಮದ ನಿರೂಪಣೆಯನ್ನು ಭಾರತೀದೇವಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂವಾದಕ್ಕೆ ಮುನ್ನ ಪುಸ್ತಕ ಕರ್ತೃಗಳಾದ ರಾಜಲಕ್ಷ್ಮಿ ಮತ್ತು ಸಿದ್ದು ದೇವರಮನಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X