192 ಕೃತಿಗಳ ಸಾಮ್ರಾಟ ಅನಕೃ ಬಗೆಗೊಂದು ಹೊಸಪುಸ್ತಕ
ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯರ ‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಲೋಕಾರ್ಪಣೆ
ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬರೆದಿರುವ ‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಪುಸ್ತಕವನ್ನು ಕವಿ ನಿಸಾರ್ ಅಹಮದ್ ಮತ್ತು ಪ್ರೊ. ರಾಘವೇಂದ್ರ ಪಾಟೀಲ್ ಬಿಡುಗಡೆ ಮಾಡಿದ್ದಾರೆ. ಅಂಕಿತ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರೂ.95.
ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಅನಕೃ ವಿಶ್ವರೂಪವನ್ನು ವಿಮರ್ಶಕ ಸಿ.ಎನ್.ರಾಮಚಂದ್ರನ್ ವಿವರಿಸಿದರು.
ಸುಮಾರು 111 ಕಾದಂಬರಿ, 24 ನಾಟಕ, 31 ವೈಚಾರಿಕ ಕೃತಿ, 11 ಸಂಪಾದಿತ ಕೃತಿ, ಎರಡು ಅನುವಾದ ಮತ್ತು ಒಂದು ಆತ್ಮಕತೆ ಸೇರಿದಂತೆ, ಒಟ್ಟು 192 ಕೃತಿಗಳನ್ನು ಅನಕೃ ರಚಿಸಿದ್ದಾರೆ. ಆ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರಂತಹ ಉತ್ತಮ ಭಾಷಣಕಾರರು ಅತಿ ವಿರಳ ಎಂದು ರಾಮಚಂದ್ರನ್ ಶ್ಲಾಘಿಸಿದರು.
‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಕೃತಿಯಲ್ಲಿ ಅನಕೃ ಅವರ ದೈತ್ಯ ಶಕ್ತಿಯನ್ನು, ಆ ಶಕ್ತಿಯನ್ನು ಕನ್ನಡಕ್ಕಾಗಿ ಬಳಸಿಕೊಂಡ ವಿವರಗಳನ್ನು ಬಾಲಸುಬ್ರಹ್ಮಣ್ಯ ದಾಖಲಿಸಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುವೆಂಪು ಸಾಹಿತ್ಯದ ಬಗ್ಗೆ ಅಧ್ಯಯನವನ್ನು ಪ್ರಸ್ತುತ ಬಾಲಸುಬ್ರಹ್ಮಣ್ಯ ಮುಂದುವರೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications