ಲೋಕೇಶ ಅಗಸನಕಟ್ಟೆಗೆ ‘ಛಂದ ಪುಸ್ತಕ’ ಬಹುಮಾನ
ಬೆಂಗಳೂರು : ‘ಛಂದ ಪುಸ್ತಕ - 2006’ರ ಬಹುಮಾನವನ್ನು ಡಾ. ಲೋಕೇಶ ಅಗಸನಕಟ್ಟೆಯವರು ತಮ್ಮ ‘ಮುಂಗಾರಿನ ಪೈರು’ ಕಥಾಸಂಕಲನದ ಹಸ್ತಪ್ರತಿಗಾಗಿ ಪಡೆದುಕೊಂಡಿದ್ದಾರೆ.
ಈ ಬಹುಮಾನವು ಪುಸ್ತಕದ ಪ್ರಕಟಣೆ, ಐದು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಜನವರಿ 21ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 80 ಕತೆಗಾರರು ಭಾಗವಹಿಸಿದ್ದರು.
ಈ ಬಾರಿಯ ನಿರ್ಣಯವನ್ನು ಹಿರಿಯ ಕತೆಗಾರರಾದ ಬೊಳುವಾರು ಮಹಮದ್ ಕುಂಞಿ ಮಾಡಿದ್ದಾರೆ. ಕಳೆದ ಎರಡು ಸಾಲಿನಲ್ಲಿ ಈ ಬಹುಮಾನವನ್ನು ಸುನಂದಾ ಪ್ರಕಾಶ ಕಡಮೆ ಮತ್ತು ಅಲಕ ತೀರ್ಥಹಳ್ಳಿ ಪಡೆದುಕೊಂಡಿದ್ದರು ಎಂದು ಛಂದ ಪುಸ್ತಕದ ವಸುಧೇಂದ್ರ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications