ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಓದಿದ ಪುಸ್ತಕ ವೈ.ಆರ್‌. ಮೋಹನ್‌ರ ‘ನೆನಪುಗಳು’

By Oneindia Staff
|
Google Oneindia Kannada News

*ಎನ್‌. ಶಶಿರೇಖಾ, ಬೆಂಗಳೂರು.

Y.R. Mohan - Writer of Nenapugaluಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದು, ಇಲ್ಲೇ ನೆಲೆಸಿ, ಕನ್ನಡ.. ಕನ್ನಡ ಎನ್ನುವ ಮಂದಿಯೇ ತಾಯ್ನುಡಿಯನ್ನು ಮರೆತು, ಅನ್ಯಭಾಷೆಗೆ ಮನ ಒಲಿದು, ಅಲ್ಲೂ ಸಲ್ಲದೆ... ಇಲ್ಲೂ ಸಲ್ಲದವರಾಗಿರುವಾಗ, ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದರೂ ಕನ್ನಡದ ಬಗ್ಗೆ ಅಪಾರ ಗೌರವ ಅಭಿಮಾನ ಉಳಿಸಿಕೊಂಡ ವೈ.ಆರ್‌. ಮೋಹನ್‌ ಅವರು ಬರೆದಿರುವ ‘ನೆನಪುಗಳು’ ನಿಜಕ್ಕೂ ಒಂದು ಅಮೂಲ್ಯ ಕೃತಿ.

ಸಾಮಾನ್ಯವಾಗಿ ತೀವ್ರ ಅನಾರೋಗ್ಯಪೀಡಿತರಾದಾಗ, ಮಾನವ ಪ್ರಯತ್ನವಾಗಿ ವೈದ್ಯರಲ್ಲಿಗೆ ಹೋಗಿಬಂದರೂ, ಹೆಚ್ಚಿನ ಮಂದಿ ದೇವರ ಮೇಲೆ ಭಾರಹಾಕಿ - ಹಣೆಬರಹವನ್ನು ಹಳಿಯುತ್ತಾ ಕುಳಿತುಕೊಳ್ಳುವುದೇ ಹೆಚ್ಚು. ಆದರೆ ಮೋಹನ್‌ ಅವರು ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಕಾಲದಲ್ಲಿ, ನೆನಪಿನ ಗಣಿಹೊಕ್ಕಿ ಹೆಕ್ಕಿ ತೆಗೆದ ಒಂದೊಂದೆ ಮುತ್ತುಗಳನ್ನು ಮಾಲೆ ಮಾಡಿ ಸುಂದರ ಮುತ್ತಿನ ಹಾರ ಮಾಡಿದ್ದಾರೆ.

ಮೋಹನ್‌ರ ಅಸಾಧಾರಣ ಮೇಧಾಶಕ್ತಿಯ ಜೊತೆಗೆ ಭಾಷೆ- ಭಾವನೆಗಳು ಮೇಳೈಸಿ ಅತ್ಯುತ್ತಮವಾದ ಕೃತಿಯಾಂದು ಹೊರಹೊಮ್ಮಿದೆ. ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಅತ್ಯುತ್ತಮ ಕೃತಿ ಎಂದು ಪರಿಗಣಿಸಿ ಪುರಸ್ಕರಿಸಿದೆ. ಮೋಹನ್‌ರವರಿಗೆ ಅಭಿನಂದನೆಗಳು.

ನೆಮ್ಮದಿಯ ಮಹಿಮೆ : ಅಂದಹಾಗೆ ಈ ಪುಸ್ತಕ ಅಮೆರಿಕನ್ನಡ ಮತ್ತು ಅಭಿವ್ಯಕ್ತಿ ವೇದಿಕೆಯವರ ಸಹಯೋಗದಲ್ಲಿ ಪ್ರಕಟಗೊಂಡ ನಂತರ ಮೋಹನ್‌ ಅವರ ಆರೋಗ್ಯ ದಿನೇ ದಿನೇ ಸುಧಾರಿಸುತ್ತಾ ಬಂತು. ಒಬ್ಬ ಬರಹಗಾರನಿಗೆ ನೆಮ್ಮದಿ ಏನೆಲ್ಲ ಮೋಡಿ ಮಾಡಲು ಸಾಧ್ಯ ಎಂಬ ಸೋಜಿಗದ ಸಂಗತಿ ಇಲ್ಲಿ ಇನ್ನೂ ಅರ್ಥಪೂರ್ಣ.

ಈ ಕೃತಿಯಲ್ಲಿ ಮೊದಲಿನಿಂದ ಕೊನೆಯವರೆಗೆ ಮೋಹನ್‌ ಅವರು ನೆನಪಿನಂಗಳದಿಂದ ಒಂದಾದ ಮೇಲೆ ಒಂದು ಸ್ವಾರಸ್ಯಕರ ಘಟನೆಗಳನ್ನು ಬರೆದು ಓದುಗರು ಮಧ್ಯದಲ್ಲಿ ಕೈಬಿಡದಂತೆ ತಮ್ಮ ಹಿಡಿಕೆಯಲ್ಲಿಟ್ಟುಕೊಂಡಿದ್ದಾರೆ. ಮೊದಲಿನಿಂದ ಕೊನೆಯವರೆಗೂ ನಿಷ್ಕಲ್ಮಶ ಮನಸ್ಸಿನಿಂದ ತಮ್ಮ ಎಲ್ಲಾ ಅನುಭವಗಳನ್ನೂ ಕೂಲಂಕಷವಾಗಿ ಓದುಗರ ಕಣ್ಮುಂದೆಯೇ ನಡೆದಿರುವಂತೆ ಬರೆದಿದ್ದಾರೆ. ಈ ಕೃತಿ ಓದುವಾಗ ಎಲ್ಲರೂ ತಮ್ಮ ಬಾಲ್ಯದ ದಿನಗಳು ಮರುಕಳಿಸುತ್ತವೆ. (ನಾನೂ ನನ್ನ ಬಾಲ್ಯದ ನೆನಪುಗಳಲ್ಲಿ ಕೆಲಕಾಲ ಕಳೆದುಹೋಗಿದ್ದೆ) ನೆನಪುಗಳನ್ನು ಹೆಕ್ಕಿ ಅಷ್ಟು ವಿಚಾರಶೀಲತೆಯಿಂದ ಬರೆಯುವುದಕ್ಕೆ ಎಲ್ಲರಿಗೂ ಸಾಧ್ಯವೇ?

ಕಥಾ ಸಾಗರ : ಅವರ ಫುಟ್‌ಬಾಲ್‌ ಚೆಂಡು ಘಟನೆ ನಿಜವಾಗಿಯೂ ಯಾವುದೇ ಪುಟ್ಟ ಹುಡುಗನ ಮನಸ್ಸಿನಲ್ಲಿ ಆಗಬಹುದಾದ ನಿರೀಕ್ಷೆ, ಸಂತೋಷ, ನಂತರ ಚೆಂಡು ಹಾಳಾದಾಗ ಆಗುವ ದುಃಖ ಚೆನ್ನಾಗಿ ಮೂಡಿ ಬಂದಿದೆ. ಮತ್ತೆ ಕಡುಬಿನ ಕಥೆ. ಎಲ್ಲಾ ಹಳ್ಳಿಗಳಲ್ಲೂ ಈ ತರಹ ಹಾಸ್ಯ ಮಾಡಲು ಯಾರಾದರೂ ಈರಯ್ಯನಂತಹವರು ಸಿಕ್ಕರೆಂದರೆ ಹುಡುಗರಿಗೆಲ್ಲಾ ಏನೋ ಒಂದು ತರಹದ ಸಂತೋಷ. ಭೋಜಯ್ಯ ಮೆಸ್ಟರ ಕತೆಯೂ ಸೊಗಸಾಗಿದೆ. ನಂತರ ನಂದು ಬಿಡು ನಂದು ಬಿಡು, ದಾಯಾದಿಗಳ ನಡುವೆ ಹಳ್ಳಿಗಳಲ್ಲಿ ನಡೆಯುವ ಕಾಳಗದ ಚಿತ್ರ ಕಣ್ಣಿಗೆ ಕಟ್ಟಿದಂತಿದೆ. ಅವರ ತಂದೆ, ಸೋದರಮಾವ, ಅಜ್ಜಯ್ಯ ಇವರುಗಳು ನಡೆಸುತ್ತಿದ್ದ ಕಾಳಗದಲ್ಲಿ ಪುಟ್ಟ ಮಕ್ಕಳ ಆಂತಕ ಎಷ್ಟು ಎಂಬುದು ಅರಿವಾಗುತ್ತದೆ.

ಸ್ವಯಂಸೇವಕರುಗಳು ಮಾಡಿದ ಗಲಾಟೆ ಮತ್ತು ಶಾನುಭೋಗರು ಅವರ ಸೇಡು ತೀರಿಸಿಕೊಂಡ ರೀತಿ, ಓದುವಾಗ ಅನುಭವಿಸುವ ಕಷ್ಟ ಕಾರ್ಪಣ್ಯಗಳು, ಬೇರೆ ಬೇರೆ ಊರುಗಳಲ್ಲಿ ಬೇರೆಬೇರೆ ಹುಡುಗರ ಜೊತೆ ಸೇರುವುದು, ಶಾಲೆಗಳು ಅರ್ಧಕ್ಕೆ ಮುಚ್ಚಿ ಹೋಗುವುದು, ಆದರೂ ಎದೆಗುಂದದೆ ಓದು ಮುಂದುವರಿಸಿರುವುದು ಬಹಳ ಚೆನ್ನಾಗಿ ಓದಲು ಆಸಕ್ತಿ ಇರುವವರಿಗೆ ಎಷ್ಟೇ ಮುಲ್ಳು ಹಾದಿಗಳು ಅಡ್ಡ ಬಂದರೂ ಸಹ ತಾನು ಮುಂದುವರಿಯುತ್ತೇನೆ ಎಂಬ ಛಲ ಇರಬೇಕು ಎಂಬುದನ್ನು ಚಿತ್ರಿಸಿದೆ.

ಮಲೆನಾಡಿನ ಪರಿಸರದಲ್ಲಿ ಹುಟ್ಟಿ ಬೆಳೆಯದೇ ಇದ್ದರೂ, ಮನೆನಾಡಿನ ಪರಿಚಯವೇ ಇಲ್ಲದವರಿಗೂ ಸಹ ಮೋಹನ್‌ರು ತಮ್ಮ ಪುಸ್ತಕದಲ್ಲಿ ಮಲೆನಾಡಿನ ದರ್ಶನ ಮಾಡಿಸಿದ್ದಾರೆ. ಓದುಗನಿಗೆ ತಾನು ಈ ಹೊತ್ತು ಮಲೆನಾಡಿನಲ್ಲೇ ವಿಹರಿಸುತ್ತಿರುವೆ ಎನ್ನುವ ಭಾವನೆ ಮೂಡಿಸುವಷ್ಟು ಸಮರ್ಥವಾಗಿ ಬಣ್ಣಿಸಿದ್ದಾರೆ.

ಮುಚ್ಚು ಮರೆಯಿಲ್ಲ : ತಮ್ಮ ಅಜ್ಜನವರ ವಿಷಯ, ತಂದೆ ತಾಯಿಯರ ವಿಷಯಗಳನ್ನು ಬರೆಯುವಾಗ ಒಂದು ಚೂರೂ ಮುಚ್ಚು ಮರೆಯಿಲ್ಲದೇ, ಎಲ್ಲಾ ವಿಷಯವನ್ನು ವಿವರಿಸಿದ್ದಾರೆ. ಮನೆಯಲ್ಲಿ ಹೆಣ್ಣು ಮಗಳೊಬ್ಬಳಿಗೆ ಯಾವುದಾದರೂ ರೀತಿಯಲ್ಲಿ , ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ ಊನ ಉಂಟಾದರೆ, ಮನೆಯವರೆಲ್ಲ ಅನುಭವಿಸುವ ನೋವು, ಯಾತನೆ, ಹೊರಗಿನವರ ದೂಷಣೆ, ಆದರೂ ದಿಟ್ಟತನದಿಂದ ಅವನ್ನೆಲ್ಲಾ ಎದುರಿಸಿ, ಡಾಕ್ಟರ್‌ ಪದವಿ ತೆಗೆದುಕೊಂಡ ಅವರ ಸೋದರಿಯ ವಿಷಯ ನಿಜಕ್ಕೂ ಅದ್ಭುತವಾಗಿದೆ.

ಅವರ ಶಾಲೆಯಲ್ಲಿ ನಡೆಯುತ್ತಿದ್ದ ಗುರು ಶಿಷ್ಯರ ನಡುವಿನ ಕೋಳೂರ ಕೊಡಗೂಸು ಸಂಭಾಷಣೆ ಚೆನ್ನಾಗಿ ಮೂಡಿ ಬಂದಿದೆ. ಇಂಗ್ಲಿಷ್‌ ಮೆಷ್ಟರ ಕತೆಯಂತೂ ಇನ್ನೂ ಚೆನ್ನಾಗಿ ಮೂಡಿಬಂದಿದೆ. ನಾನು ಇದನ್ನು ನನ್ನ ಮಕ್ಕಳಿಗೆ ಓದಿ ಹೇಳಿದಾಗ ಎರಡು ಮೂರು ಸಲ ಓದುವಂತೆ ಒತ್ತಾಯ ಮಾಡಿ, ಸಂತೋಷದಿಂದ ಬಿದ್ದು ಬಿದ್ದು ನಕ್ಕರು. ಚರಿತ್ರೆ ಮೆಷ್ಟರ ವಿದ್ಯಾರ್ಥಿಗಳ ನಡುವಿನ ಚರ್ಚೆ ಮಮ್ತಾಜ್‌ರ ಹೆಸರಿನಲ್ಲಿ ತಾಜಮಹಲ್‌ ಕಟ್ಟಿದ ಷಹಜಹಾನ್‌ನ ವಿಷಯ ತುಂಬಾ ಚೆನ್ನಾಗಿ ಬಂದಿದೆ.

ತುಂದಿಬಿದ ಕೊಡ : ತಮ್ಮ ಅಕ್ಕನವರ ವಿಷಯ ಅವರು, ತಮಗೆ ಮಾಡಿದ ಸಹಾಯ, ಇವೆಲ್ಲವೂ ನಿಜವಾಗಿ ಹೃದಯ ಪೂರ್ವಕವಾಗಿ ಒಬ್ಬ ಮನುಷ್ಯನು ತನಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸೂಚಿಸುವ ವಿಶಾಲ ಮನಸ್ಸನ್ನು ತೋರಿಸುತ್ತದೆ.

ಮೈಸೂರಿನ ಕಾಲೇಜು, ಅಲ್ಲಿ ‘ಹಾಕಿ’ ಆಡಲು ತೋರಿದ ಉತ್ಸಾಹ, ಹುಡುಗಿಯರ ಹಾಸ್ಯ ಎಲ್ಲವೂ ಚೆನ್ನಾಗಿ ಮೂಡಿದೆ. ಮಲ್ಲಿಕಾಳ ಪ್ರೀತಿ, ನಂತರ ಕಾರಣಾಂತರಗಳಿಂದ ಒಂದಾಗದೇ ಇದ್ದದ್ದು, ಇವೆಲ್ಲವನ್ನೂ ವರ್ಣಿಸಿರುವ ಮೋಹನ್‌ ಅವರು ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಗೆ ಅನ್ವರ್ಥನಾಮವಾಗಿದ್ದಾರೆ. ಯಾರೂ ಸಹ ಇಷ್ಟು ಧೈರ್ಯ ಮತ್ತು ನಿಸ್ಸಂಕೋಚತೆಯಿಂದ ತಮ್ಮ ಪ್ರೇಮ ಪ್ರಕರಣವನ್ನು, ಅದು ಮದುವೆಯಾಗಿ, ಬೆಳೆದು ನಿಂತ ಮಕ್ಕಳಿರುವ ಸಮಯದಲ್ಲಿ ಹೇಳಿಕೊಂಡಿರುವುದು ಬಹಳ ಕಡಿಮೆ.

ನಿರುದ್ಯೋಗದ ದಿನಗಳು, ಎಲ್ಲಾ ಯುವಕರಲ್ಲೂ ತಲುಪುವ ಒಂದು ನಿರೀಕ್ಷಿತ ಸಮಯ ಅದು. ಒಂದು ತರಹ (unstable unsettled time with lots of hope) ಕೆಲವರಿಗೆ ಬೇಗ ಕೆಲಸ ಸಿಗುತ್ತದೆ, ಕೆಲವರು ಬಹಳಷ್ಟು ಪಾಡು ಪಡುವ ವಿಷಯ ಚೆನ್ನಾಗಿ ಬಂದಿದೆ. ನನಗೆ ಇನ್ನೂ ಹೆಚ್ಚು ಸಂತೋಷ ತಂದ ವಿಚಾರ ಅವರು ತುಮಕೂರಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡಿದ್ದರು. ಈ ವಿಶೇಷ ಸಂತೋಷಕ್ಕೆ ಕಾರಣ ತುಮಕೂರು ನನ್ನ ತವರುಮನೆ. ಸುತ್ತ ಮುತ್ತಲ ಊರುಗಳ ವರ್ಣನೆ ಓದುತ್ತಾ ನನಗೂ ಗೊತ್ತಿರುವ ಈ ನಾಮದ ಚಿಲುಮೆ, ಗೂಳೂರು ಗಣೇಶ ಎಲ್ಲವನ್ನೂ ಮತ್ತೆ ಮತ್ತೆ ಜ್ಞಾಪಿಸಿಕೊಂಡು ಬಹಳ ಸಂತಸಪಟ್ಟೆ.

ನಂತರ ಅವರ ಚಿತ್ರದುರ್ಗದ ವರ್ಣನೆ, ಕಾಲೇಜಿನಲ್ಲಿ ನಡೆದ ವಿಷಯ ಎಲ್ಲವೂ ಯಾವಾಗಲೂ ನಡೆಯುವ ಒಂದು ತರಹ ಸಾಮಾನ್ಯ ದಬ್ಬಾಳಿಕೆ ಎನಿಸಿದರೂ, ಇದು ಎಂದಿಗೂ ಸರಿಯಾಗದೇ ಇರುವುದರಿಂದ ಜೀವನದ ಮಾಮೂಲಿ (part of life) ಎಂದು ಕೊಳ್ಳಬೇಕಾಗುತ್ತದೆ.

ಮೋಹನ್‌ರವರು ತಮ್ಮ ಮದುವೆಯ ವಿಷಯ, ನಂತರದ ಅವರ ಉದಕ ಮಂಡಲದಲ್ಲಿನ ಪರ್ಯಟನೆಗಳನ್ನು ಅಕ್ಷರದಲ್ಲಿ ಸೆರೆಹಿಡಿದಿದ್ದರಾರೆ. ಅವರ ಮಗ ಸಂಜಯನ ವಿಷಯ, ಅವನ ತೊದಲು ನುಡಿಗಳು ಎಲ್ಲವನ್ನೂ ಚೆನ್ನಾಗಿ ವರ್ಣಿಸಿದ್ದಾರೆ. ನಂತರ ಮನೆಯವರನ್ನೆಲ್ಲರನ್ನೂ ಬಿಟ್ಟು ಅಮೆರಿಕಾಕ್ಕೆ ಪ್ರಯಾಣ ಮಾಡಿದುದು ಅಗಲಿಕೆಯಲ್ಲಿನ, ಆದರೆ ಏನನ್ನಾದರೂ ಸಾಧಿಸಬೇಕಾದ ಮನಸ್ಸು ಚಿಕ್ಕ ಮಗ ಮತ್ತು ಮಡದಿಯನ್ನು ಬಿಟ್ಟು ಅಷ್ಟು ದೂರ ಪ್ರಯಾಣ ಮಾಡಿ, ಅಲ್ಲೇ ನೆಲೆಸಲು ನಿರ್ಧಾರ ಮಾಡಿದುದು, ನಂತರ ಯಾವಾಗಲೂ ಎಲ್ಲರೂ ಒಟ್ಟಿಗೆ ಸೇರಿದುದು. ದೂರದ ದೇಶದಲ್ಲಿ ಒಂದು ತರಹ ಏಕಾಂಗಿತನ ಕಾಡಿರುವುದರಲ್ಲಿ ಸಂಶಯವೇ ಇಲ್ಲ. ನಂತರ ಮಕ್ಕಳ ಪ್ರಗತಿ, ಎಲ್ಲವೂ ಚೆನ್ನಾಗಿ ಮೂಡಿಬಂದಿದೆ.

ಹಾಸ್ಯ ಪ್ರಕರಣಗಳ ಬನಾರಸ್‌ ಸೀರೆ, its goo, amtrak ನಲ್ಲಿ ಆದದ್ದು, parking problem, hot dog ಹೆಸರಿನ ವೈಖರಿ, ಏನು ದೇಶ ಸಾರ್‌. ಚೆನ್ನಾಗಿ ಮೂಡಿ ಬಂದಿದೆ. ಪರಸ್ಪರ ಸಂಬಂಧಗಳು, ಅಗಲಿಕೆಯಿಂದ ಉಂಟಾಗಬಹುದಾದ ದುಃಖ ನಂತರ ನಡೆಸುವ ಪತ್ರ ವ್ಯವಹಾರ ಮನುಷ್ಯನ ಜೀವನದ ಒಂದು ಸಾಮಾನ್ಯ ಸಂಗತಿಯಾದರೂ ಓದಲು ಚೆನ್ನಾಗಿದೆ.

ಪುಸ್ತಕದಲ್ಲಿ ಅನೇಕ ಸಲ ತಮಗೆ ಸಹಾಯ ಮಾಡಿರುವವರಿಗೆ ಕೃತಜ್ಞತೆ ಅರ್ಪಿಸಿರುವುದು, ಪದೇಪದೇ ಅವರನ್ನು ನೆನೆಯುವುದು, ಯಾರ ವಿಷಯದಲ್ಲಿಯೂ ಯಾರಿಗೂ ಕೆಟ್ಟದನ್ನು ಬಯಸದೇ ಇರುವುದು ತಿಳಿದು ಬರುತ್ತದೆ. ತಮ್ಮ ಮಗನ ಮದುವೆಯ ಸಮಯದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆದ ಸಂಗತಿ, ತಮ್ಮ ಚಿಕ್ಕಪ್ಪನವರ ವಿಷಯದಲ್ಲಿ ತೋರಿಸುವ ಪ್ರೀತಿ, ತಮ್ಮ ಮಕ್ಕಳು ತಮಗೆ ನೀಡಿರುವ ಪ್ರೀತಿ ವಿಶ್ವಾಸ ಅರ್ಥಪೂರ್ಣವಾಗಿದೆ. ಅವರು ತಮ್ಮ ಸೊಸೆಯರನ್ನು ತಮ್ಮ ಹೆಣ್ಣು ಮಕ್ಕಳೆಂದು ವಿಶ್ವಾಸಪೂರ್ವಕವಾಗಿ ನುಡಿದಿರುವುದು ಅವರ ತುಂಬು ಹೃದಯ ತೋರಿಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಈ ಕೃತಿಯು ಒಂದು ತುಂಬು ಹೃದಯದಿಂದ ಕೂಡಿದ ನಿಷ್ಕಲ್ಮಶ ಮನಸ್ಸಿನಿಂದ ಬರೆದ ಒಂದು ಅಸಾಧಾರಣ ಕೃತಿ ಎಂದು ನನಗೆ ಅನ್ನಿಸುತ್ತದೆ. ಮೋಹನ್‌ ಅವರ ಅನಾರೋಗ್ಯ ಬಗ್ಗೆ ಯೋಚನೆ ಮಾಡಿದರೆ, ಬಹಳ ಸಂಕಟವಾಗುತ್ತದೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರು ತಮ್ಮ ‘ನನ್ನ ಅನಿಸಿಕೆ’ಯಲ್ಲಿ ಹೇಳಿರುವಂತೆ ‘ನಾವ್ಯಾರೂ ಚಿರಂಜೀವಿಗಳಲ್ಲ, ಸರದಿ ಗೊತ್ತಿಲ್ಲವಾದ್ದರಿಂದ, ನಾವು ಹತ್ತಬೇಕಾದ ರೈಲು ಹಿಂದಿನ ಯಾವ ಸ್ಟೇಷನ್‌ವರೆಗೆ ತಲುಪಿದೆ ಎಂದು ತಿಳಿದಿಲ್ಲವಾದ್ದರಿಂದ ಲಗೇಜ್‌ ಪ್ಯಾಕ್‌ ಮಾಡಿಕೊಂಡಿಲ್ಲವಷ್ಟೇ’ ಎಂಬುದು ನೂರಕ್ಕೆ ನೂರು ಸತ್ಯ. ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇ ಬೇಕು, ಆದರೆ ಇರುವಷ್ಟು ದಿನ ಚೆನ್ನಾಗಿ ಬಾಳಿ, ಬದುಕಿ, ಇನ್ನೊಬ್ಬರಿಗೆ ಸಹಾಯ ಮಾಡಿ, ಆಲದ ಮರದಂತೆ ಬಿಸಿಲಿನಲ್ಲಿರುವವರಿಗೆ ನೆರಳಿನ ಆಶ್ರಯ ನೀಡಬೇಕಾದ್ದು ಮಾನವನಾಗಿ ಹುಟ್ಟಿದ ಮೇಲೆ ಮಾಡಬೇಕಾದ ಕರ್ತವ್ಯ ಎಂದು ನನ್ನ ಭಾವನೆ. ಅನಾರೋಗ್ಯದಿಂದ ಬಳಲುತ್ತಿರುವ ಮೋಹನ್‌ ಅವರಿಗೆ ದೇವರು ಆಯಸ್ಸು, ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X