• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸ್ಯ ಲೇಖನ: ಕ್ವಾಪ ಮಾಡ್ಕೊಂಡಿದೆ ಕೂದ್ಲು ತಲೆಮ್ಯಾಲೆ!

By Sadashiva
|
Google Oneindia Kannada News

ಭಾನುವಾರ ಪೇಟೆಗೆ ಹೊರಟಿದ್ದೋನು ಕನ್ನಡಿ ಮುಂದೆ ನಿಂತಿದ್ದೆ. ಅದೆಲ್ಲಿದ್ನೋ ಗೊತ್ತಿಲ್ಲ ಸ್ನೇಹಿತ ಬಳಿ ಬಂದು, 'ಇರೋ ನಾಲ್ಕು ಕೂದ್ಲನ್ನು ಏನೂಂತ ಬಾಚ್ತೀಯ..' ಅಂದೇಬಿಟ್ಟ! ಸ್ವಲ್ಪ ರೇಗಿಬಿಡ್ತಾದ್ರೂ ಹಾಸ್ಟೆಲ್‌ನಲ್ಲಿ ನನ್ ತರ್ಲೆ ಸ್ನೇಹಿತರ ಈ ವ್ಯಂಗ್ಯ ಇದ್ದಿದ್ದೇ ಅನ್ನಿಸಿ ಸುಮ್ಮನಾದೆ. ಈಗಷ್ಟೇ ಇಪ್ಪತ್ತು ತುಂಬ್ತಾ ಇರೊ ನಂಗೆ ವಿಪರೀತ ಕೂದ್ಲು ಉದುರೋ ತೊಂದ್ರೆ. ಅದೆಷ್ಟೋ ಬಾರಿ ಸ್ನೇಹಿತರು ಕೈಲೊಂದು ಬಾಚಣಿಗೆ ಕೊಟ್ಟು 'ತಗೋ ಚೆನ್ನಾಗಿ ಬಾಚ್ಕೋ..' ಅಂತ್ಹೇಳಿ ನಕ್ಕಿದ್ದೂ ಇದೆ.

ಟಾರೋ ಕಾರ್ಡ್ ಭವಿಷ್ಯ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು?ಟಾರೋ ಕಾರ್ಡ್ ಭವಿಷ್ಯ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು?

ಮೊನ್ನೆ (ನಾಲ್ಕನೇ ಸೆಮಿಸ್ಟರ್ ಮುಗ್ಸಿ) ರಜೇಲಿ ಊರಿಗೆ ಹೋಗಿದ್ದೆ. ತಲೇಲಿ ಕೂದ್ಲು ಕಡಿಮೆಯಾಗಿದ್ದು ನೋಡಿ ಅಮ್ಮ ಗಾಬರಿಯಾದ್ಲು. 'ಇದೇನು ಮಗಾ.. ಕೂದ್ಲೆಲ್ಲಾ ಉದುರ್ತಾ ಇದೆ..! ನಿನ್ನ ಏಜಲ್ಲಿ ನಿನ್ ಅಪ್ಪಂಗೂ ಹೀಗ್ ಕೂದ್ಲು ಉದುರ್ತಾ ಇರ್ಲಿಲ್ಲ' ಅಂದ್ಲು. ಅಪ್ಪನತ್ತ ದಿಟ್ಟಿಸುವಾಗ ಅಪ್ಪ ತನ್ನ ಬಟಾಬಯಲಿನ ಮಂಡೆಯ ಮೇಲೆ ಕೈಯಾಡಿಸಿದ್ದು ನೋಡಿ ತುಟಿಯರಳಿತು. ಅಮ್ಮ ಮಾತು ಮಂದುವರೆಸಿ, 'ಅದ್ಯಾವ್ದ್ಯಾವ್ದೋ ಎಣ್ಣೆ ಸಿಗುತ್ತಲ್ಲ ಮಗಾ ಹಚ್ಚಿದ್ರೆ ಕೂದ್ಲು ಬರುತ್ತೇಂತೆ.. ದುಡ್ಡು ಎಷ್ಟಾದ್ರೂ ಪರ್ವಾಗಿಲ್ಲ ತಗೊಂಡು ನೋಡು' ಹೇಳಿದ್ಲು, ಅದ್ಕೆ ಅಪ್ಪನೂ ಧ್ವನಿ ಸೇರಿಸಿದ್ರು. 'ಏ.. ಸುಮ್ನಿರಮ್ಮ.. ನಿಂಗೆ ನನ್ ತಲೇಲಿರೋ ನಾಲ್ಕು ಕೂದ್ಲು ಮೇಲೂ ಕಣ್ಣು, ಅದನ್ನೂ ಉದುರ್ಸೋಕೆ ಐಡಿಯ ಹೇಳ್ತಿದ್ದೀಯ' ಅಂತ ಆಕೆಯ ಬಾಯಿ ಮುಚ್ಚಿಸಿಬಿಟ್ಟೆ.

ಎದೆಯೊಡ್ಡಿ ನಿಂತು ಉಗ್ರರನ್ನು ಕೊಂದಿದ್ದ ಕನ್ನಡಿಗನ ಸಾಹಸಗಾಥೆ ಪುಸ್ತಕ ರೂಪದಲ್ಲಿಎದೆಯೊಡ್ಡಿ ನಿಂತು ಉಗ್ರರನ್ನು ಕೊಂದಿದ್ದ ಕನ್ನಡಿಗನ ಸಾಹಸಗಾಥೆ ಪುಸ್ತಕ ರೂಪದಲ್ಲಿ

ಅಂದೇನೋ ಆಕೆಯ ಬಾಯಿ ಮುಚ್ಚಿಸಿಬಿಟ್ಟಿದ್ದೆ ಆದ್ರೆ ಹಾಸ್ಟೆಲ್‌ಗೆ ಬಂದ್ಮೇಲೆ ಫ್ರೆಂಡ್ಸ್ ನನ್ನ ಮುದುಕಾಂತ ಕೂಗುವಾಗ, ಬಾಂಡ್ಲೀಂತ ಗೇಲಿ ಮಾಡೋವಾಗ ಮತ್ತೆ ಟೆಂಷನ್ ಶುರು! 'ಏಯ್ ಹೋಗ್ರೋ ನಮ್ಗೆ ನನ್ ಕಂಡ್ರೆ ಹೊಟ್ಟೆ ಉರಿ.. ನೋಡ್ತಾಇರಿ; ಶಿವಾಜಿ (ರಜಿನಿಕಾಂತ್) ಸ್ಟೈಲಲ್ಲಿ ಬರ್ತೀನಿ, ಘಜ್ನಿ ತರ ಕಾಣಿಸ್ಕೋತೀನಿ' ಅಂತ ಆಗೆಲ್ಲ ತುಸು ಕೋಪದಿಂದ ಹೇಳ್ತೀನಿ. ಹಾಗೆ ನೆತ್ತಿಗೇರಿರೋ ಪಿತ್ತ ಮತ್ತೆ ಇಳಿಯೋದು ನನ್ ಹಾಗಿನ ಮತ್ತೊಂದು ಬೋಳು ತಲೆ ನನ್ನ ಕಣ್ಣಿಗೆ ಬಿದ್ದಾಗಲೇ...

ಏಸ್ಚಿಲಸ್ ನ ಕತೆ

ಏಸ್ಚಿಲಸ್ ನ ಕತೆ

ಬೋಳು ತಲೆಯಿಂದ ಬೇಜಾರಾಗಿ ನಮ್ಕಾಲೇಜಿನ ಲೈಬ್ರೆರೀಲಿ ಕೂತಿದ್ದಾಗ ಕತೆಯೊಂದು ಕಣ್ಣಿಗೆಬಿತ್ತು ನೋಡಿ...
...ಕ್ರಿ.ಪೂ.500ರ ಒಬ್ಬ ಪ್ರಸಿದ್ಧ ನಾಟಕಕಾರ, ಇತಿಹಾಸಕಾರನಾದ ಏಸ್ಚಿಲಸ್‌ನನ್ನು ಗ್ರೀಸಿನ ದುರಂತಗಳ ದೊರೆ ಎಂದು ಪರಿಗಣಿಸಲಾಗಿದೆ. ಕತೆಗಳ ಪ್ರಕಾರ ಆಮೆಯೊಂದನ್ನು ಗಿಡುಗ ಈತನ ತಲೆಯಮೇಲೆ ಬೀಳಿಸಿದಾಗ ಸತ್ತನಂತೆ. ಗಿಡುಗಗಳು ಆಮೆಯ ಚಿಪ್ಪನ್ನು ಒಡೆಯಲು ಆಮೆಯನ್ನು ಎತ್ತರದಿಂದ ಬಂಡೆಯ ಮೇಲೆ ಹಾಕುತ್ತವೆ. ಏಸ್ಚಿಲಸ್‌ನ ಬೋಳುತಲೆಯನ್ನು ಕಂಡು ಬಂಡೆ ಎಂದೇ ಭ್ರಮಿಸಿದ ಗಿಡುಗವೊಂದು ಆಮೆಯನ್ನುಏಸ್ಚಿಲಸ್‌ನ ತಲೆಯ ಮೇಲೆ ಹಾಕಿಬಿಟ್ಟಿತಂತೆ!

ಅಮ್ಮನ ಉಪಚಾರ

ಅಮ್ಮನ ಉಪಚಾರ

ನನ್ನ ನೋಡಿದಾಗೆಲ್ಲಾ ಸ್ಮೈಲ್ ಕೊಡ್ತಿದ್ದ ನನ್ ಹುಡ್ಗಿ ಯಾಕೀಗ ಕಂಡಾಗೆಲ್ಲ ದೂರ ಓಡ್ತಿದ್ದಾಳೇಂತ ಒಮ್ಮಿಂದೊಮ್ಮೆ ನಂಗೆ ಅಚ್ಚರಿಯಾಯ್ತು! ಕನ್ನಡಿ ಮುಂದೆ ನಿಂತು ಖಾಲಿ ಖಾಲಿ ನನ್ ತಲೇನ ಕಂಡಾಗ್ಲೇ ನನ್ನೀ ಚಡಪಡಿಕೆಗೆ ಉತ್ತರ ದೊರಕಿದ್ದು. ಬೇಜಾರಾಗಿ ಅಮ್ಮನ ಹತ್ರ ಓಡೇಬಿಟ್ಟೆ. 'ಈ ಉದ್ರೋ ಕೂದ್ಲಿಗೆ ಏನಾದ್ರೂ ಮಾಡಮ್ಮಾ..' ಗೋಗರೆದೆ. ಅಮ್ಮ ನಕ್ಕು ಮರುದಿನವೇ ಜಾಜಿಮಲ್ಲಿಗೆ ಸೊಪ್ಪು ಅರೆದು ತಲೆಗೆ ಹಚ್ಚಿದ್ಲು. ಒಂದರ್ದ ಗಂಟೆ ಬಿಟ್ಟು ಸ್ನಾನ ಮಾಡಿ ನಾನು ಕನ್ನಡಿ ಮುಂದೆ ನಿಂತಿದ್ದು ನೋಡಿ ಅಮ್ಮ ನಗುತ್ತ, 'ಒಂದೇ ಬಾರಿಗೆ ಕೂದ್ಲು ಬಂದುಬಿಡೋಲ್ಲ ಮಗಾ.. ಸ್ವಲ್ಪ ದಿನ ಹಚ್ಚಿನೋಡು' ಅಂದು. 'ಹ್ಞುಂ..' ಅಂದು ಇದ್ದ ಕೂದ್ಲೂ ಅಮ್ಮನ ಉಪಚಾರದಿಂದ ಉದುರಿ ಹೋಗಿಲ್ಲ ಅನ್ನೋದನ್ನ ಕನ್ಫರ್ಮ್ ಮಾಡ್ಕೊಂಡು ಕನ್ನಡಿಯಂದೀಚೆಗೆ ಬಂದೆ.

ಹುಚ್ಚು ಸಜೇಶನ್‌ಗಳು

ಹುಚ್ಚು ಸಜೇಶನ್‌ಗಳು

ಯಾಕ್ ಹೀಗೆ ಕೂದ್ಲು ಉದುರುತ್ತೇಂತ ಒಂದಷ್ಟು ಮಂದಿ ಹತ್ರ ಕೇಳಿದ್ರೆ; ಸೋಪು ಪದೇ ಪದೆ ಚೇಂಜ್ ಮಾಡ್ಬೇಡ, ಅವಾಗೊಮ್ಮೆ ಇವಾಗೊಮ್ಮೆ ಶಾಂಪೂ ಬಳಸ್ಬೇಡ, ಚಿಂತೆ ಇದ್ರೆ ಕೂದ್ಲು ಉದುರುತ್ತೆ ಎಂಬಿತ್ಯಾದಿ ಸಲಹೆಗಳು ಬಂದವು. ನನ್ ಸ್ಫೋರ್ಟ್ಸ್ ಕ್ಲಬ್ಬಿನ ಕ್ರೀಡಾ ಸ್ನೇಹಿತೆ ಒಬ್ಳಂತೂ 'ನೀನ್ ದಿನಾ ಓಡ್ತೀಯಲ್ವ, ಓಡೋ ರಭಸಕ್ಕೆ ಕೂದ್ಲೆಲ್ಲ ಹಾರಿ ಹೋಗ್ತಿದೆ ಅಷ್ಟೆ..' ಅಂತ ಹಲ್ಕಿರಿದಿದ್ಲು.
'ಹೋಗ್ಲೀಪ್ಪಾ ಇದ್ಕೆ ಎನಾದ್ರೂ ಸೊಲ್ಯೂಶನ್ ಇದ್ರೆ ಹೇಳ್ರೋ' ಅಂತ ನನ್(ಬಾಯ್) ಫೆಂಡ್ಸ್ ಹತ್ರ ಕೇಳಿದ್ರೆ; 'ವಿಗ್ ಹಾಕ್ಕೋ, ಬಟ್ ಫ್ಯಾನ್ ಹತ್ರ ಇರುವಾಗ ಮಾತ್ರ ಜೋಪಾನ..' ಅಂತ್ಹೇಳಿ ಜೋರಾಗಿ ನಗ್ತಾರೆ ಕತ್ತೆಗಳು. ಕಸಿ ಮಾಡ್ಕೋ ಅನ್ನೋ ಫನ್ನೀ ಸಜೆಸ್ಟ್ ಬೇರೆ! 'ಕಸಿ ಮಾಡ್ಕೊಳ್ಳೋಕೆ ಇದೇನು ಮಾವಿನ ಮರಾನ ಮರಾಯ?' ಅಂತ ತಿರುಗಿ ಕೇಳಿದ್ರೆ ಅವರದ್ದು ಬರೀ ನಗು.

ಡಾಕ್ಟ್ರು ಹೇಳಿದ್ದು

ಡಾಕ್ಟ್ರು ಹೇಳಿದ್ದು

ಎಲ್ಲರ ತಲೆಯ ಮೇಲೂ ಸುಮಾರು ಒಂದು ಲಕ್ಷ ಕೂದಲುಗಳಿರುತ್ತವೆ. ಸಮಸ್ಯೆ ಇರುವ ತಲೆಯಿಂದ ಪ್ರತಿದಿನ ಸುಮಾರು 50-100 ಕೂದಲು ಉದುರುತ್ತದೆ. ಕೂದಲು ಉದುರುವಿಕೆಗೆ ಅಲೋಪೇಸಿಯಾ ಎನ್ನುತ್ತಾರೆ. ಆಂಡ್ರೋಜೆನಿಕ್ ಅಲೋಪೇಸಿಯಾ ಎಂಬುದು ಸರ್ವೇ ಸಾಮಾನ್ಯ ಬೊಕ್ಕತಲೆ ಸಮಸ್ಯೆಯಾಗಿದ್ದು ಇದು ಪುರುಷರು-ಮಹಿಳೆಯರಲ್ಲೂ ಕಂಡುಬರುತ್ತದೆ. ಇದು ವಂಶಪಾರಂಪರ್ಯವಾದ್ದರಿಂದ ಇದಕ್ಕೆ ನಿವಾರಣೋಪಾಯವಿಲ್ಲ. ಇತರ ಕೇಶನಾಶದ ಬಗೆಗೆಳು ತೀವ್ರ ಕಾಯಿಲೆ, ಚರ್ಮದ ಸೋಂಕು, ಒತ್ತಡ, ಥೈರಾಯ್ಡ್ ಮುಂತಾದವುಗಳ ಲಕ್ಷಣಗಳಿರಬಹುದು.
1. ಸ್ವಸ್ಥ ಕೂದಲಿಗೆ ಸೂಕ್ತ ಪೌಷ್ಟಿಕತೆ ಅಗತ್ಯ.
2. ನೀರು, ಪ್ರೊಟೀನ್, ಬಯೋಟಿನ್(ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶ), ವಿಟಮಿನ್ ಎ, ಬಿ6, ಬಿ12, ಸಿ, ತಾಮ್ರ, ಕಬ್ಬಿಣ ಓಮೇಗಾ 3ಫ್ಯಾಟಿ ಆ್ಯಸಿಡ್‌ಳು, ಸತು, ಕ್ಯಾಲ್ಸಿಯಂ ಪೋಲಿಕ್ ಆ್ಯಸಿಡ್, ಮೆಗ್ನೀಸಿಯಂಗಳು ಕೇಶ ಸ್ವಾಸ್ಥ್ಯಕ್ಕೆ ಬೇಕು.
3. ವಿಪರೀತ ಗಾಳಿ, ಬಿಸಿಲು, ಶಾಖಗಳಿಗೆ ತಲೆಗೂದಲನ್ನು ಒಡ್ಡಬೇಡಿ.
4. ಬಿಗಿಯಾದ ಹ್ಯಾಟ್ಗಳು ನೆತ್ತಿಗೆ ವಾಯುಸಂಚಾರ ಕಡಿಮೆಮಾಡಿ, ಬೆವರು ಮತ್ತು ಕೊಳೆ ಶೇಖರವಾಗುವಂತೆ ಮಾಡುತ್ತದೆ.
5. ಬದುಕಿನಲ್ಲಿ ಒತ್ತಡ ಹೆಚ್ಚಿದ್ದಲ್ಲಿ, ಕೊಂಚ ವಿಶ್ರಾಂತಿ ಪಡೆದು ಒತ್ತಡ ಕಡಿಮೆ ಮಾಡಿಕೊಳ್ಳಿ.
6. ಕೂದಲಿನ ಮೇಲೆ ಅತಿಯಾದ ಒತ್ತಡ ಹಾಕಬೇಡಿ. ಮೃದುವಾಗಿ ಬಾಚಿಕೊಳ್ಳಿ. ಸಾಕಷ್ಟು ನಿದ್ರೆ ಮಾಡಿ.
ಇವಿಷ್ಟು ಡಾಕ್ಟರ್ ಮಾತುಗಳು...

ಮಂಡೆ ಬೋಳಿಸಿದೆ

ಮಂಡೆ ಬೋಳಿಸಿದೆ

ಈ ಚಿಂತೆ ಮಾಡ್ಬಾರ್ದು ಅಂತಾರಲ್ಲಾ? ನನ್ನನ್ನು ಹಿಂಗೆ ಕಾಡಿಸ್ತಿರೋ ಚಂತೆ ಯಾವ್ದು ಇರ್ಬೋದು ಅಂತ ಒಂದಿನ ಯೋಚಿಸುತ್ತ ಕುಳಿತೆ. ಈ ಕೂದ್ಲು ಉದುರ್ತಿರೋ ಚಿಂತೇನೇ ಜಾಸ್ತಿಯಾಗಿ ಇರುವ ಚೂರುಪಾರು ಕೂದ್ಲೂ ತಲೆಗೆ ಬಾಯ್ ಹೇಳ್ತಿದೆಯೋ ಅಂತ ತಲೆಕೆರೆದು ಯೋಚಿಸೋಭರದಲ್ಲಿ ಆಗತಾನೇ ಉದುರಿದ ಎರಡು ಕೂದ್ಲು ಕೆಳಗಿದ್ದ ಪುಸ್ತಕದ ಮೇಲೆ ಕುಳಿತು ನನ್ನತ್ತಲೇ ನೋಡಿ ನಕ್ಕಂತೆ ಅನ್ನಿಸಿತು.
ತಲೇಲಿ ಅಲ್ಲಲ್ಲಿ ಕೂದಲುದುರಿ ತಲೆ ಮಂಗತಿಂದ ಹಲಸಿನ ಹಣ್ಣಿನಂತಾಗಿದ್ದು ಕಂಡು ಬೇಜಾರಾಗಿ ಪೂರ್ತಿ ಗುಂಡು ಹೊಡಿಸೋಣ ಅಂತ ಧರ್ಮಸ್ಥಳಕ್ಕೆ ಹೋದೆ. ಮಂಡೆಗೆ ಟಿಕೇಟು ಮಾಡಿಸಿ ನನ್ನ ಸರದಿ ಬಂದಾಗ ಕುರ್ಚಿ ಮೇಲೇರಿ ಕುಂತುಬಿಟ್ಟೆ. '20ರೂ ಕೊಡು' ಅಂದ ಕೂದ್ಲು ತೆಗೆಯುವಾತ. 'ಮೊದ್ಲೇ ದುಡ್ಡು ಕೊಟ್ಟು ಟಿಕೇಟು ಮಾಡಿಸಿದ್ದೀನಿ ಮತ್ಯಾಕೆ ದುಡ್ಡು ಕೊಡ್ಲಿ..? ಹುಂ ಹುಂ..' ಅಂದೆ. 'ಕೊಡಲೇ ಬೇಕು' ಅಂದ ಆತ ಬ್ಲೇಡು ಕೈಗೆತ್ತಿಕೊಳ್ಳುತ್ತ. ಆತನ ಸಿಡುಕು, ಬ್ಲೇಡು ಪ್ರದರ್ಶಿಸಿದ ಪರಿ ಕಂಡು ಭಯವಾಯ್ತು. ಕೂದಲು ತೆಗೆಯೋಕೆ ಚಾಚೋ ತಲೆ ಜೋಪಾನವಾಗಿ ವಾಪಾಸು ಬರ್ಬೇಕಾದ್ರೆ 20ರೂ ಕೊಡೋದೇವಾಸಿ ಅನ್ನಿಸಿ ಬಾಯಗಲಿಸಿ, 'ಒಸಿ ಚೆನ್ನಾಗಿ ತೆಗೀರಣ್ಣ' ಅಂದೆ ನೋಟು ಕೈಗೀಯುತ್ತ. ಆತನ ಸಿಡುಕು ಕರಗಿದ್ದು ಕಂಡು ಎದೆಬಡಿತ ಕಡಿಮೆಯಾಯ್ತು.

ಅರಿವಿನ ಒಳಗಣ್ಣು ತೆರೆಯಿತು

ಅರಿವಿನ ಒಳಗಣ್ಣು ತೆರೆಯಿತು

ಮಂಡೆ ಬೋಳಿಸಿ ಸ್ನಾನ ಮುಗಿಸಿ ಹೊರ ಬರುತ್ತಲೇ ಉರಿಬಿಸಿಲಿಗೆ ನೆತ್ತಿ ಬಿಸಿಯೇರಿ ಸಹಿಸಲಾಗಲಿಲ್ಲ. ಅಂಗಡಿಗೆ ಓಡಿ ಟೋಪಿ ಹಾಕ್ಕೊಂಡುಬಂದೆ. ದೇವಸ್ಥಾನದ ಮುಂದೆನಿಂತು 'ಮಂಜುನಾಥಾ ಕಾಪಾಡಪ್ಪಾ..' ಅಂತ ಅಡ್ಡಡ್ಡ ಬಿದ್ದು ಎದ್ದೆ. ತಲೆಗೆ ಹಕ್ಕೊಂಡಿದ್ದ ಟೊಪ್ಪಿ ಕಾಣಿಸ್ಲೇ ಇಲ್ಲ! ದೇವ್ರೇ.. ತಲೇಲಿರೋಕೆ ಟೊಪ್ಪಿಗೂ ಕಿರಿಕಿರಿ ಅನ್ನಿಸಿತಾ.. ಅಂದ್ಕೊಂಡು ಬೆಪ್ಪಾಗಿ ಧರ್ಮಸ್ಥಳ ಬಸ್‌ಸ್ಟ್ಯಾಂಡ್ ಹೆಜ್ಜೆ ಹಾಕಿದೆ. ದಾರಿಬದೀಲಿ ಕಾಲುಗಳಿಲ್ಲದ, ಕಣ್ಣೇ ಕಾಣಿಸದ ವಿಕಲಚೇತನರನ್ನು ಕಾಣುವಾಗ ಕರುಳು ಚುರುಕ್ ಅಂತು. ಕತ್ತಲ ಬದುಕಿನಲ್ಲೂ ನಗುಚೆಲ್ಲುತಿದ್ದ ಅವರ ಮುಂದೆ ನನ್ನ ಕೂದಲಿಲ್ಲದ ಸಿಲ್ಲಿ ಕೊರಗಿಗೆ ಅರ್ಥವೇ ಇಲ್ಲ ಅನ್ನಿಸ್ತು. ಮುಖ ಚೆನ್ನಾಗಿರದಿದ್ದರೇನಂತೆ ಮನಸು ಮುದ್ದಾಗಿರಬೇಕು. ಅಷ್ಟಕ್ಕೂ ನಂಗೆ ದೇವ್ರು ಕೈಕಾಲು ಚೆನ್ನಾಗೇ ಕೊಟ್ಟಿದ್ದಾನೆ, ಸಾಧಿಸಿ ತೋರ್ಸೋಕೆ ಇವಿಷ್ಟು ಸಾಕು ಅಂತ ನಂಗೆ ನಾನೇ ಸಮಾಧಾನ ತಂದ್ಕೊಂಡು ಹೆಜ್ಜೆ ಹಾಕಿದೆ.

ಚಂದವಾಗಿ ಕೂದ್ಲಿರೋರು ಗಂಟೆಗಟ್ಲೆ ತಲೆ ಬಾಚ್ಕೋತಾರೆ, ಎಣ್ಣೆ ಶಾಂಪೂಂತ ಖರ್ಚು ಮಾಡ್ತಾರೆ. ಹುಡ್ಗರಾದ್ರೆ ಹೇರ್ ಕಟ್, ಹುಡ್ಗೀರಾದ್ರೆ ಹೂವು ಕ್ಲಿಪ್ಪೂಂತ ಹಣವೇಸ್ಟ್. ನಂಗೆ ಅದ್ಯಾವುದರ ಚಿಂತೆನೇ ಇಲ್ಲ.. ಯಾಕೇಂದ್ರೆ ನನ್ ತಲೇಲಿ ಕೂದ್ಲೇಇಲ್ಲ...!

English summary
I'm experiencing the problem of hair loss. I've written this article in a humorous manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X