'ತೇರಿ ಇಟ್‍ಮೇಲ್ ಅಸ್ಯವಿರೆಕಾಳ್': ಹಳ್ಳಿಗರ ಪ್ರಶಂಸೆ, ಬಯ್ಗುಳ ಹೀಗೂ ಉಂಟು...

By: ಸ.ರಘುನಾಥ
Subscribe to Oneindia Kannada

ಈ ಮಾತು ಕೆಲವರಲ್ಲಿ ನೆನಪಿದ್ದೀತು, ಮತ್ತೆ ಕೆಲವರಿಗೆ ನೆನಪಾದೀತು. ಆಗುವವರಿಗೆ ಇಲ್ಲಿ ಓದಿ, 'ಅತ್ತೇರಿಕೇ ನಮ್ಮಾತು ಪೇಪರ್ನಾಗೆ ಬಂದದೆ' ಅಂತ ಕುಸಿಯಾದಾತು. ಕೇಳದೆಯೇ ಇದ್ದವರಿಗೆ ಇದೆಂಥ ಮಾತು ಅಂತ ಕುತೂಹಲ 'ಉಟ್ಟಿಕೊಣಂಗಾದಾತು.' ಈ ಮಾತು 'ಕಲ್ದಿರ ಕುಂಡ್ರೊಣಾಕಂತೂ ಬುಡೂದ್ಲ' 'ಇದೇ ತಾಯ್ಗ ಈ ಮಾತ್ನ ಗಮ್ಮತ್ತು.'

ಇದೇನು ಪ್ರಶಂಸೆಯ ಮಾತೆ, ಬೈಗುಳವೆ, ವ್ಯಂಗ್ಯವೆ, ಕುಶಾಲಿನದೆ? ಪ್ರಯೋಗಿಸಿದವರಿಗೆ, ಕೇಳಿಸಿಕೊಂಡವರಿಗೆ ತಿಳಿದರುತ್ತೆ. ಇದರ ಬಳಕೆ ಎಲ್ಲೆಲ್ಲಿತ್ತು, ಇದೆ? ಎಲ್ಲೆಲ್ಲಿತ್ತೊ ಗೊತ್ತಿಲ್ಲ. ಮಾಲೂರಿನ ಕಡೆಯಂತೂ ಇತ್ತು. ತಿಳಿದುಕೊಳ್ಳಲು ಗೆಳೆಯರಿಗೆ ಫೋನು ಮಾಡಿದಾಗ ಮುಳಾಗಿಲಿ(ಮುಳಬಾಗಿಲು)ನಿಂದ ಹಿಡಿದು ಗುಡಿಬಂಡೆವರೆಗೆ ಇದೆಯೆಂದು ತಿಳಿಯಿತು. ಹಾಗೆಯೆ ಬಯಲುಸೀಮೆಯ ಕೆಲವು ಕಡೆ ಇರುವುದಾಗಿ ಗೆಳೆಯರು ಹೇಳಿದರು.

Flat bean word usage by villages in idioms

ಸಿನೆಮಾ ಒಂದರ (ಹೆಸರು ನೆನಪಿಲ್ಲ) ಸಂಭಾಷಣೆಯಲ್ಲಿ ಚಿ.ಉದಯಶಂಕರ್ 'ಇಟ್ ಮೇ ಅಸವರೆಕಾಳ್' ಎಂದು ಬಳಸಿದ್ದಾರೆ. ಅವರು ಅದನ್ನು ಎಲ್ಲಿಂದ ಕೇಳಿ ತಿಳಿದಿದ್ದರೋ ಗೊತ್ತಿಲ್ಲ.

ಇದು ಸರಿ. ಆದರೆ ಹುಟ್ಟಿಕೊಂಡದ್ದೆಲ್ಲಿ ಎಂಬುದು ಸ್ಪಷ್ಟವಾಗದ ವಿಚಾರ. 'ಇಟ್ಟು' ಎಂಬುದನ್ನು ಗಮನಿಸಿದರೆ, ಇದು ಕೋಲಾರ(ಅವಿಭಜಿತ) ಜಿಲ್ಲೆಯಲ್ಲಿ ಹೆಚ್ಚಿಗೆ ಬಳಕೆಯಲ್ಲಿರುವ ಶಬ್ದವಾಗಿರುವುದರಿಂದ ಇಲ್ಲಿಯೇ ಹುಟ್ಟಿದ್ದೀತು. ಏಕೆಂದರೆ ಇಲ್ಲಿ 'ಇಟ್ಟು' ಮುದ್ದೆ ಎಂದಷ್ಟೇ ಅರ್ಥದಲ್ಲಿ ಬಳಕೆಯಾಗದು. ಇದಕ್ಕೆ ಹತ್ತುವ ಕ್ರಿಯಾಪದಗಳು ಬಿನ್ನಾರ್ಥಗಳನ್ನು ತರುತ್ತವೆ.

Flat bean word usage by villages in idioms

'ಇಟ್ಟಿಕ್ಕು' (ಇಟ್ಟು + ಇಕ್ಕು, ಲೋಪಸಂಧಿ), ಊಟ ಬಡಿಸು; 'ಇಟ್ಟುಣ್ಣು' (ಇಟ್ಟು + ಉಣ್ಣು. ಲೋಪಸಂಧಿ) ಊಟಮಾಡು; 'ಇಟ್ಟುಕ ಬಾ'( ಇಟ್ಟು + ಕ. 'ಕ' ಚತುರ್ಥೀವಿಭಕ್ತಿ ಪ್ರತ್ಯಯಗಳಲ್ಲಿ ಒಂದಾದ 'ಕೆ'ಗೆ ಪರ್ಯಾಯವಾದುದು. ಊಟಕ್ಕೆ ಬಾ. ಇಲ್ಲಿ ಅದೇ ವಿಭಕ್ತಿಯ ಪ್ರತ್ಯಯ 'ಅಕ್ಕೆ' ಹತ್ತುತ್ತದೆ. ಆದರೆ 'ಇಟ್ಟುಕ' ಅನ್ನುವಲ್ಲಿ 'ಅಕ್ಕೆ' ಬರದು. 'ಕೆ' ಮಾತ್ರ ಬರುತ್ತದೆ.

'ಇಟ್ಟುಕೇಳು' (ಇಟ್ಟುಕ + ಏಳು. ಲೋಪಸಂಧಿ. ಊಟಕ್ಕೇಳು. 'ಇಟ್ಟಾತ' ಇಟ್ಟು + ಆತ. ಇದಕ್ಕೆ ಊಟವಾಯಿತೆ. ಅಡುಗೆಯಾಯಿತೆ ಎಂಬ ಎರಡು ಕ್ರಿಯಾರ್ಥಗಳಿವೆ.) 'ನಿಮ್ಮನೆನಾಗ ಇವತ್ತು ಇಟ್ಟುಗಳೇನು?' ಎಂಬ ವಿಶೇಷ ಪ್ರಯೋಗದಲ್ಲಿ ನಿಮ್ಮ ಮನೆಯಲ್ಲಿ ಇಂದು ಏನೇನು ಅಡುಗೆಗಳು ಎಂಬ ಅರ್ಥವಿದೆ.

Flat bean word usage by villages in idioms

'ಇಟ್ಟುನ ಇಂಗಾ ಮಾಡೂದು?' (ಇಟ್ಟು + ನ) ಇಲ್ಲಿಯ 'ನ' ದ್ವಿತಿಯಾ ವಿಭಕ್ತಿಯ ಅನ್ನು ಪ್ರತ್ಯಯಕ್ಕೆ ಬದಲಿ. 'ನಿಂದು ಇಟ್ಟುಗಳಾಯ್ತ?' (ನಿನ್ನ ಊಟವಾಯಿತೆ?) ಇಲ್ಲಿಯ 'ಇಟ್ಟುಗಳು' ಬಹುವಚನ ರೂಪಿ ಏಕವಚವನ. ಇದು, ಇನ್ನೂ ಇಂಥವು ಕೆಲವು ಪದಗಳಿವೆ. (ಉದಾ: ನೀರುಗಳು. 'ನೀರುಗಳಟ್ಟುಕೊ'= ಸ್ನಾನ ಮಾಡು). 'ಇಟ್ಟುಕ/ ಇಟ್ಟುಗಳಕ ಬರ್ಯಾ' (ಊಟಕ್ಕೆ ಬನ್ನಿ). 'ಇಟ್ಟು'ವಿಗೆ ಮುದ್ದೆ, ಊಟ, ಅಡುಗೆ ಸಮಾನರ್ಥಕ ಪದಗಳು.

ಈ ಎಲ್ಲವನ್ನು ಗಮನಿಸಿ 'ಇಟ್ಟು'ವಿನ ತವರು ಕೋಲಾರ (ಚಿಕ್ಕಬಳ್ಳಾಪುರ)ವೇ ಆಗಿದ್ದಾತು. ಇಂಥ ವ್ಯಾಕರಣದ ವಿಷಯಗಳತ್ತ ಈಗ ಹೋಗೋದು ಬೇಡ. ಆದರೆ ಕೋಲಾರಗನ್ನಡಕ್ಕೆ ವಿಭಕ್ತಿ ಪ್ರತ್ಯಯಗಳೂ ಸೇರಿದಂತೆ ಪ್ರತ್ಯೇಕ ವ್ಯಾಕರಣವುಂಟು ಎಂಬುದನ್ನು ಗಮನಿಸಲೇಬೇಕಿದೆ.

Flat bean word usage by villages in idioms

ಇನ್ನು ಈ ವಾಕ್ಯ ಹೇಗೆ ಹೇಗೆ ಬಳಕೆಯಲ್ಲಿದೆ ಎಂದು ನೋಡಬಹುದು. 'ತೇರಿ ಇಟ್‍ಮೇಲ್ ಅಸ್ಯವಿರೆಕಾಳ್' ಒಂದು ಬಗೆಯದು. 'ಇಟ್ ಮೇ ಅಸ್ಯವರೆ ಕಾಳ್' ಇನ್ನೊಂದು. 'ಇಟ್ ಮೇ ಅವರೆಕಾಳ್' ಮತ್ತೊಂದು. 'ಇಟ್ ಮೇಲ್ ಅವರೆಕಾಳ್' ಮಗುದೊಂದು. 'ಇಟ್ಟು ಮ್ಯಾಲೆ ಅವರೆಕಾಳು' ಮತ್ತೂ ಒಂದು.

ಇದು ಮುಖ್ಯವಾಗಿ ಪ್ರಶಂಸಾ ವಾಚಕವೇ. (ಈ ಮಾತನ್ನು ಕನ್ನಡ ಉಪನ್ಯಾಸಕ ಮಿತ್ರ ಜೆ.ಜಿ.ನಾಗರಾಜ್ ಸಮರ್ಥಿಸುವರು). 'ವಾರೆವಾ ಇಟ್ ಮೇಲ್ ಅವರೆಕಾಳ್' ಎಂದರೆ 'ಶಬ್ಬಾಷ್ ಅಥವಾ ಷಬಾಷ್'ಎಂದು. 'ತೇರಿ ಇಟ್ ಮೇ ಅವರೆ ಕಾಳ್. ಬಾರೋ ಇಲ್ಲಿ' ಅನ್ನುವುದು ಅಭಿಮಾನದ ಕರೆ ವಾಚಕ.

Flat bean word usage by villages in idioms

'ಬಿಡ್ಲೇ ಏನ್ ನಿನ್ನಿಟ್ ಮೇಲ್ ಅವರೆಕಾಳು' ಅಂದರೆ 'ಏನು ಮಹಾ' ಎಂದು. 'ತಗಿ ನಿನ್ (ತೇರಿ) ಇಟ್ಟು ಮ್ಯಾಲೆ ಅಸ್ಯವಿರೆಕಾಳ್' ಎಂದರೂ ಇದೇ. ಅಂದರೆ ಇದೊಂದು ನುಡಿಗಟ್ಟು ಎಂದಾಯಿತು. ಇದು ಆಡುವವರ ಧ್ವನಿಭಾವವನ್ನು ಅನುಸರಿಸಿ ಪ್ರಶಂಸೆ, ವ್ಯಂಗ್ಯ, ಬೈಗುಳ ಮುಂತಾದ ರೂಪ ಪಡೆಯುತ್ತದೆ. 'ಅಸ್ಯವಿರೆಕಾಳ್' ಅಂದರಂತೂ ವ್ಯಂಗ್ಯವೇ. ಪ್ರಯೋಜನವಿಲ್ಲದ್ದು ಎಂದು ಆಗುವುದು. ಏಕೆಂದರೆ ಹಿಟ್ಟಿಗೆ (ಮುದ್ದೆಗೆ) ಹಸಿ ಅವರೆಕಾಳಿನಿಂದ ಉಪಯೋಗವಿಲ್ಲ. ಬೆಂದು ಸಾರು ಆದರೇನೇ ಅದು ಉಣ್ಣಲು ಬರುವುದು.

ಸರಿಯಾದ ರೀತಿಯಲ್ಲಿ ಅಂದರೆ ಗಟ್ಟಿಯಾಗಿ, ಗೋಳಾಕಾರದಲ್ಲಿ ಮುದ್ದೆ ಮಾಡಿ, ಅವರೆಕಾಳು ಸಾರನ್ನು ಸೌಟಿನಿಂದ ಮುದ್ದೆಯ ಮೇಲೆ ಸುರಿದರೆ ಅದು ಮುದ್ದೆಯ ಮೇಲೆ ನಿಲ್ಲುವುದಿಲ್ಲ. ಇದನ್ನೂ ಗಮನಿಸಬೇಕು. ಜೊತೆಗೆ ಮುದ್ದೆಯ ಮೇಲೆ ಅವರೆಕಾಳಿನ ಸಾರನ್ನು ಹಾಕುವುದಿಲ್ಲ. ಹಾಗಾಗಿ ಮುದ್ದೆಯ ಮೇಲಕ್ಕೆ ಅವರೆಕಾಳು ಬರುವುದಾದರು ಹೇಗೆ? ಆದುದರಿಂದ 'ಪ್ರಯೋಜನವಿಲ್ಲದ' ಎಂಬ ಅರ್ಥ ಇಲ್ಲಿನದಾಗಿದೆ.

Flat bean word usage by villages in idioms

ಈ 'ಇಟ್ಟು' ಹೇಗಿರಬೇಕು ಅನ್ನುವದನ್ನು ನಮ್ಮೂರಿನ (ಮಲಿಯಪ್ಪನಹಳ್ಳಿ) ಶಿವಾರಪಟ್ಟಣದ ಚಿನ್ನಪ್ಪನ ಮಾತಿನಲ್ಲಿ 'ಐನೋರೆ ಇಟ್ಟು ಎಂಗಿರಬೇಕಂದ್ರೆ, ತ್ವಳಿಸಿ ಮುದ್ದಿ ಮಾಡಿ ಗ್ವಾಡಿಕೆಸುದುರೆ ಅಂಗೇ ಸೆಂಡಪ್ಪಂದ ವಾಪುಸು ಬರಬೇಕು.' ಈ ಇಟ್ಟು ಬರೀ ರಾಗಿಹಿಟ್ಟಿನ ಮುದ್ದೆ. ಅಕ್ಕಿನುಚ್ಚು ಹಾಕಿ ಮಾಡಿದರೆ ಈ ಗಟ್ಟಿತನ ಬರದು. ಕೆಲವರು ಅಕ್ಕಿಯನ್ನೇ ಬಳಸುವರು.

ಆಂಧ್ರದ ಗಡಿಯತ್ತ ಹೋದ ಹಾಗೆಲ್ಲ ಮುಕ್ಕಾಲು ಪಾಲು ಅಕ್ಕಿ, ಕಾಲುಪಾಲು 'ಅಸಿಟ್ಟು ಅಥವಾ ಅಸುಲ್ಟು' (ರಾಗಿಹಿಟ್ಟು) ಹಾಕುತ್ತಾರೆ. ಮತ್ತೂ ಒಳ ಪ್ರದೇಶಗಳಲ್ಲಿ ಮುದ್ದೆಗೆ ಬರುವಷ್ಟು ಮಾತ್ರ ಅಸಿಟ್ಟು ಬಳಸುವರು. ಇದೂ ಮುದ್ದೆಯೇ. ಇದು ಪರಿಪೂರ್ಣ ರಾಗಿಮುದ್ದೆಯಲ್ಲ. ಇಂಥ ಅಕ್ಕಿಮುದ್ದೆ 'ಅಲವಾಟು' ಆದವರಿಗೆ ಅಸಲೀ ರಾಗಿಮುದ್ದೆ ಇಷ್ಟವಾಗದು.

Flat bean word usage by villages in idioms

ಇಂಥವರು 'ಗತಿಲ್ದೋರು ಬಿರೇ ರಾಗಿಟ್ಟು ತಿಂತಾರೆ ಅಂದರೆ, 'ಗತಿಲ್ದೋರು ನುಚ್ಚಾಕ್ಯಂಡು ತಿಂತಾರ' ಎಂದು ಪ್ರತಿಯಾಗಿ ಹೇಳುತ್ತಾರೆ. 'ಐನಾತಿ ಇಟ್ಟುಮುದ್ಯಂದುರೆ ತಲಕಾಯಿ ತಾರುನ ಬಿರೇ ರಾಗುಲ್ಟು ಮುದ್ದೇನೇ.' ಅವರೆಕಾಳು ಸಾರು, ಮುದ್ದೆ ಕೂಡಿದ ಗಂಡ-ಹೆಂಡತಿಯ ಪ್ರೀತಿ ಇದ್ದ ಹಾಗೆ.

'ಇಟ್ಟು' ಶಬ್ದ ಜನನುಡಿಯಲ್ಲಿ ಹೆಚ್ಚು ವ್ಯಾಪಕವಾಗಿರುವುದು ಅವಿಭಜಿತ ಕೋಲಾರ ಜಿಲ್ಲೆಯಲ್ಲಿಯಲ್ಲಿಯೇ. ಇಲ್ಲಿಂದಲೇ ಪಕ್ಕದ ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಿಗೆ, ಬಳಕೆಯಲ್ಲಿದ್ದರೆ ಕನ್ನಡ ನಾಡಿನ ಇತರೆಡೆಗೆ ಹೋಗಿದ್ದೀತೆ? ಸಂಶೋಧನೆ ನಡೆಯಬೇಕು.

Flat bean word usage by villages in idioms

ಈ ಎಲ್ಲ ಏನೇ ಇರಲಿ ಇದು ಒಂದು ಸೊಗಸಾದ ನುಡಿಗಟ್ಟಂತೂ ಹೌದು. ಇನ್ನು 'ತೇರಿ' ಎಂಬ ಎರವಲು ಶಬ್ದ ಸೇರಿದ್ದು ಹೇಗೆ ಎಂಬ ಪ್ರಶ್ನೆ ಬಂದುದಾದರೆ ಉತ್ತರ ಸುಲಭ. ಬುಹುಭಾಷಾ ಪ್ರದೇಶಗಳಲ್ಲಿ ಇಂಥ 'ಶಬ್ದಕೂಡಿಕೆ' ಸಾಮಾನ್ಯ. 'ಥು ತೇರಿ, ತೇರೀಕೆ, ಎತ್ತತ್ತೇರೀ, ಬಿಡ ತೇರಿ ...' ಹೀಗೆ. ಈ ತೇರಿ ಸೇರಿರುವುದರಿಂದ ಲಯವೂ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flat bean (Avare) word used by villagers in idioms. Here, writer Sa Raghunatha explains the usage of word in Kolar and Chikkaballapur district.
Please Wait while comments are loading...