ದೈವಕಣದಲ್ಲಿ ದೈವತ್ವವನ್ನು ಹುಡುಕುತ್ತಾ...

By: * ಲಕ್ಷ್ಮಿ ಚೈತನ್ಯ, ಬೆಂಗಳೂರು
Subscribe to Oneindia Kannada
In search of the God Particle
"ವಿಜ್ಞಾನ ಕೊನೆಗೊಂಡ ಕಡೆ ಆಧ್ಯಾತ್ಮ ಆರಂಭವಾಗುತ್ತದೆ" ಎಂಬುದೊಂದು ಪ್ರಸಿದ್ಧ ಮಾತಿದೆ. ದೇವಕಣದ ಅಸ್ತಿತ್ವ ವಿಜ್ಞಾನ ಮತ್ತು ಆಧ್ಯಾತ್ಮದ ಅಗೋಚರ ಕೊಂಡಿಯನ್ನು ನಮಗೆ ತೋರಿಸಲಿದೆ. ವರ್ಷಾನುಗಟ್ಟಲೆ ವಿಜ್ಞಾನಿಗಳ ನಿದ್ದೆಗೆಡಿಸಿದ್ದ ಈ ದೇವಕಣ 2012ರ ಜುಲೈ ನಾಲ್ಕರಂದು ಮಾಯಾಮೃಗದಂತೆ ಮಿಂಚಿನ ದರ್ಶನ ನೀಡಿ ತನ್ನನ್ನು ಬೆನ್ನಟ್ಟಲು ವಿಜ್ಞಾನಿಗಳಿಗೆ ಸವಾಲೊಡ್ಡಿದೆ.

ಅಷ್ಟಕ್ಕೂ ಏನಿದು ದೇವಕಣ? ಇದರ ಅಸ್ತಿತ್ವದ ರುಜುವಾತಿನಿಂದ ಜಗತ್ತಿಗಾಗುವ ಲಾಭವಾದರೂ ಏನು? ಈ ಕಣವೇ ದೇವರ ಸ್ವರೂಪವೆ? ಈ ಕಣ ಕಂಡರೆ ಪರಮಾತ್ಮನನ್ನೇ ಕಂಡಂತೆಯೇ? ಕ್ಷಣಕ್ಕೊಂದು ಪ್ರಶ್ನೆ ಹುಟ್ಟಿಸಿ ರೋಚಕತೆಯ ಉತ್ತುಂಗಕ್ಕೇರಿಸುತ್ತಿರುವ ಈ ಕಣದ ಹಿಂದಿನ ಕಥೆಯೂ ಅಷ್ಟೇ ರೋಚಕವಾಗಿದೆ.

ಈ ಪ್ರಪಂಚದ ಉಗಮ ಮತ್ತು ಅಸ್ತಿತ್ವದ ಹಿಂದಿನ ರಹಸ್ಯಗಳ ಹುಡುಕಾಟವೇ ವಿಜ್ಞಾನದ ಮೂಲಸ್ಥಂಭ. ಈ ಹುಡುಕಾಟದಲ್ಲಿ ಅಣು, ಪರಮಾಣುಗಳನ್ನು ಪರಿಶೋಧಿಸಿ ಪ್ರಪಂಚದ ಮೂಲಾಧಾರವನ್ನು ಕಂಡುಹಿಡಿದುಬಿಟ್ಟೆವು ಎಂದೊಮ್ಮೆ ಬೀಗಿದ್ದ ವಿಜ್ಞಾನಿಗಳು, ಎಲೆಕ್ಟ್ರಾನ್, ಫೋಟಾನ್ ಮತ್ತು ನ್ಯೂಟ್ರಾನುಗಳನ್ನೂ ಒಡೆದು ಚೂರು ಚೂರು ಮಾಡಿ ಅವುಗಳನ್ನು ರೂಪುಗೊಳಿಸಿದಂತಹ ಕ್ವಾರ್ಕ್ ಗಳನ್ನು ನೋಡಿ ಬೆಕ್ಕಸ ಬೆರಗಾಗಿ, ಅವುಗಳ ಗುಣಗಳನ್ನು ವರ್ಣಿಸಲಿಕ್ಕೆ ಅಪ್, ಡೌನ್, ಎಂದೆಲ್ಲಾ ಹೆಸರಿಟ್ಟರು. ಮತ್ತಷ್ಟು ಕ್ವಾರ್ಕುಗಳ ಚಂದಕ್ಕೆ ಚಾರ್ಮ್ ಎಂದೇ ಹೆಸರಿಟ್ಟುಬಿಟ್ಟರು!

ಕ್ವಾರ್ಕುಗಳು ಮತ್ತು ಇನ್ನಿತರ ಕಣಗಳು ಪರಸ್ಪರ ಸಂವಹಿಸುವ ಶಕ್ತಿಯೇ ಪರಮಾಣು ಶಕ್ತಿ. ಎಲ್ಲಾ ಶಕ್ತಿಗಳಿಗೂ ಇರುವಂತೆ ಈ ಶಕ್ತಿಗೂ ಸಹ ತನ್ನದೇ ಆದ ಪರಿಧಿ [field limit] ಇದೆ. ಈ ಪರಮಾಣು ಶಕ್ತಿಯ ಸಂವಹನ ರೀತಿಯಲ್ಲಿ ಎರಡು ವಿಧಗಳಿವೆ-ಶಕ್ತಿಯುತ(strong)ಮತ್ತು ಬಲಹೀನ(weak). ಕ್ವಾರ್ಕ್ ಮತ್ತು ಇತರ ಕಣಗಳ ಸಂವಹನ ಬಲಹೀನ ರೀತಿಯದ್ದು. ಈ ಎಲ್ಲಾ ಬಲಗಳು ಮತ್ತು ಇವನ್ನು ಒಳಗೊಂಡ ಸಿದ್ಧಾಂತಗಳನ್ನು ಒಟ್ಟುಗೂಡಿಸಿ "ಥಿಯರಿ ಆಫ್ ಎವೆರಿಥಿಂಗ್" ಎಂಬ ಮೂಲಭೂತ ಸಿದ್ಧಾಂತವನ್ನು ಪ್ರತಿಪಾದಿಸಲು ವಿಜ್ಞಾನಿಗಳು ಮುಂದಾದರು. ಗುರುತ್ವಾಕರ್ಷಣ ಬಲವು ಈ ಸಿದ್ಧಾಂತಕ್ಕೆ ವಿಲೀನವಾಗದೇ ಹೊರಗೇ ಉಳಿಯಿತು. ಎಲೆಕ್ಟ್ರೋ ಮ್ಯಾಗ್ನೆಟಿಕ್ ಮತ್ತು ಪರಮಾಣು ಶಕ್ತಿಗಳನ್ನು ಒಂದುಗೂಡಿಸುವ ಸಿದ್ಧಾಂತದ ರಚನೆಗೆ ಪ್ರಪಂಚದ ಎಲ್ಲಾ ವಿಜ್ಞಾನಿಗಳು ಟೊಂಕಕಟ್ಟಿ ನಿಂತರು. ಈ ಸಿದ್ಧಾಂತದ ರೂಪುರೇಷೆಯ ರಚನೆಯಾಗುವಾಗಲೇ "ದೇವಕಣದ ಸಿದ್ಧಾಂತ" ರೂಪಿತಗೊಂಡಿದ್ದು. ಈ ಸಿದ್ಧಾಂತದ ಬಗ್ಗೆ ತಿಳಿದುಕೊಳ್ಳುವ ಮುನ್ನ ಕೆಲವು ವಿಚಾರಗಳನ್ನು ಮತ್ತು ಉದಾಹರಣೆಗಳನ್ನು ಪರಿಶೀಲಿಸೋಣ:

ದೇವಕಣದ ಸಿದ್ಧಾಂತ : ಬೆಳಕು ಶಕ್ತಿಯ ಒಂದು ರೂಪ. ಬೆಳಕಿನ ಕಿರಣಗಳು ತರಂಗಗಳ ರೂಪದಲ್ಲಿ ಮತ್ತು ಕಣಗಳ ರೂಪದಲ್ಲಿ ಪರಸ್ಪರ ಸಂವಹಿಸುತ್ತವೆ. ಬೆಳಕಿನ ಕಣಗಳನ್ನು ವಿಜ್ಞಾನದ ಪರಿಭಾಷೆಯಲ್ಲಿ ಫೋಟಾನ್ ಎನ್ನುತ್ತೇವೆ. ಒಂದು ಬೆಳಕಿನ ಕಿರಣವು ಕೋಟಿಗಟ್ಟಲೆ ಫೋಟಾನ್ ಗಳನ್ನು ಹೊಂದಿರುತ್ತವೆ. ಈ ಫೋಟಾನ್‌ನ ಸ್ಥಿರ ದ್ರವ್ಯ ರಾಶಿ(rest mass) ಸೊನ್ನೆ. ಹಾಗಾಗಿ ಬೆಳಕಿನ ಕಿರಣಗಳ ಸಂವಹನ ಕ್ರಿಯೆಗಳಲ್ಲಿ ಫೋಟಾನ್ ಗಳ ದ್ರವ್ಯರಾಶಿಯಲ್ಲಿ ಬದಲಾವಣೆ ಇರುವುದಿಲ್ಲ. ಜನರಿದ್ದ ಕಡೆ ಅಂಕಿ ಅಂಶಗಳು ಇರುವ ಹಾಗೆ, ಕಣಗಳಿದ್ದ ಕಡೆಗಳಲ್ಲೂ ಅಂಕಿ ಅಂಶಗಳಿವೆ. ಈ ಕಣಗಳು ಮೂಲತಃ ಎರಡು ರೀತಿಯ ಅಂಕಿ ಅಂಶಗಳನ್ನು ಅನುಸರಿಸುತ್ತವೆ. ಒಂದು ತರಹದ ಅಂಕಿ ಅಂಶವನ್ನು ಎನ್ ರಿಕೋ ಫರ್ಮಿ ಮತ್ತು ಪಾಲ್ ಡಿರಾಕ್ ಎಂಬ ಇಬ್ಬರು ವಿಜ್ಞಾನಿಗಳು ಪ್ರತಿಪಾದಿಸಿದರೆ, ಮತ್ತೊಂದು ತರಹದ ಅಂಕಿ ಅಂಶವನ್ನು ಭಾರತದ ಸತ್ಯೇಂದ್ರನಾಥ್ ಬೋಸ್ ಮತ್ತು ಐನ್ ಸ್ಟೈನ್ ಇಬ್ಬರು ಜಂಟಿಯಾಗಿ ಪ್ರತಿಪಾದಿಸಿದರು.

ಮೊದಲ ರೀತಿಯ ಅಂಕಿ ಅಂಶಗಳನ್ನು ಅನುಸರಿಸುವ ಕಣಗಳನ್ನು "ಫರ್ಮಿಯಾನ್"(fermions) ಎಂದು ಕರೆದರೆ, ಎರಡನೆಯ ರೀತಿಯ ಅಂಕಿ ಅಂಶಗಳನ್ನು ಅನುಸರಿಸುವ ಕಣವನ್ನು "ಬೋಸಾನ್" ಎನ್ನುತ್ತಾರೆ. ಇದೊಂದು ಸಾರ್ವತ್ರಿಕ ಹೆಸರೇ ಹೊರತು ಒಂದು ಕಣದ ಹೆಸರಲ್ಲ. ಉದಾಹರಣೆಗೆ ಎಲೆಕ್ಟ್ರಾನು ಮೊದಲ ತರಹದ ಅಂಕಿ ಅಂಶ ಅನುಸರಿಸುತ್ತದೆ. ಹಾಗಾಗಿ ಅದನ್ನು ಫರ್ಮಿಯಾನ್ ಅನ್ನುತ್ತೇವೆ. ಬೆಳಕಿನ ಕಣ ಫೋಟಾನ್ ಎರಡನೆಯ ರೀತಿಯ ಅಂಕಿ ಅಂಶ ಅನುಸರಿಸುತ್ತದೆ. ಹಾಗಾಗಿ ಅದು ಬೋಸಾನ್ ಎಂದೂ ಕೂಡ ಕರೆಯಲ್ಪಡುತ್ತವೆ. ದೇವಕಣವೂ ಬೋಸಾನ್ ಗುಂಪಿಗೆ ಸೇರಿದ ಒಂದು ಕಣ. ಈ ಕಣದ ಅಸ್ತಿತ್ವದ ಬಗ್ಗೆ ಪೀಟರ್ ಹಿಗ್ಗ್ಸ್ ಎಂಬ ವಿಜ್ಞಾನಿ ಮೊದಲು ಪ್ರತಿಪಾದಿಸಿದ್ದರಿಂದ, ಈ ಕಣಕ್ಕೆ "ಹಿಗ್ಗ್ಸ್ ಬೋಸಾನ್" ಎಂದೇ ನಾಮಕರಣ ಮಾಡಲಾಯಿತು. ಸದಾ ಕಾಲ ಮಾಯಾಜಿಂಕೆಯಂತೆ ಮಿಂಚಿ ಮಾಯವಾಗುತ್ತಿದ್ದ ಈ ಕಣದ ಬಗ್ಗೆ "Goddamn Particle" ಎಂಬ ಪುಸ್ತಕವನ್ನು ಲಿಯಾನ್ ಲೀಡರ್ಮನ್ ಬರೆದರು. ಅದರೆ ಮುದ್ರಣಕಾರರ ಒತ್ತಾಯದ ಮೇರೆಗೆ ಅದನ್ನು "God particle"ಎಂದು ಬದಲಿಸಲಾಯ್ತು. ದೇವಕಣ ಎಂದು ಹೆಸರಾಯ್ತು!

ಫೋಟಾನಿನಂತೆ ದೇವಕಣವೂ ಬೋಸಾನ್ ಗುಂಪಿಗೆ ಸೇರುತ್ತದೆಯಾದರೂ ದೇವಕಣದ ಸ್ಥಿರ ದ್ರವ್ಯ ರಾಶಿಯು ಸೊನ್ನೆಯಲ್ಲ. ಪರಮಾಣು ವಿಜ್ಞಾನದಲ್ಲಿ ದ್ರವ್ಯರಾಶಿಯನ್ನು ಎಲೆಕ್ಟ್ರಾನು ವೋಲ್ಟ್ ಗಳಲ್ಲಿಯೂ ಸಹ ಅಳೆಯುತ್ತಾರಾದ್ದರಿಂದ ಈ ದೇವಕಣದ ಸ್ಥಿರ ದ್ರವ್ಯ ರಾಶಿ 125 ಗಿಗಾ ಎಲೆಕ್ಟ್ರಾನ್ ವೋಲ್ಟ್ ಗಳು! ಹಾಗಾಗಿ ಇದು ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಲ್ಪ ಅವಧಿಗೆ ಮಾತ್ರ ಗೋಚರಿಸಬಲ್ಲ ಕಣ. ಇದನ್ನು ನೋಡಲೇಬೇಕೆಂಬ ಹಠದಿಂದಲೇ ಕೋಟಿಗಟ್ಟಲೆ ಡಾಲರ್‌ಗಳನ್ನು ವ್ಯಯಿಸಿ ಎಲ್.ಎಚ್.ಸಿ ನಿರ್ಮಿಸಿ ಪ್ರಯೋಗಗಳನ್ನು ನಡೆಸಿದ್ದು. ಬೆಳಕಿನ ಕಣಗಳು ಸಂವಹಿಸಿವೆ ಎಂದರೆ ಫೋಟಾನುಗಳು ಸಂವಹನದಲ್ಲಿ ಭಾಗವಹಿಸಿವೆ ಎಂದು ಅರ್ಥಮಾಡಿಕೊಳ್ಳುವ ಹಾಗೆ, ಎರಡು ಕ್ವಾರ್ಕ್ ಗಳು ಸಂವಹಿಸಿವೆ ಎಂದರೆ ದೇವಕಣಗಳು ಅವುಗಳ ಸಂವಹನೆಯಲ್ಲಿ ಭಾಗವಹಿಸಿವೆ ಎಂದು ಅರ್ಥ ಎಂದು ಪೀಟರ್ ಹಿಗ್ಗ್ಸ್ ವಾದಿಸಿದರು.

ದೇವಕಣದ ಸ್ಥಿರ ದ್ರವ್ಯ ರಾಶಿ ಸೊನ್ನೆಯಾಗಿಲ್ಲ ಆದ್ದರಿಂದ ಅವುಗಳ ಸಂವಹನದಿಂದ, ಅರ್ಥಾತ್, ಈ ದೇವಕಣಗಳ ಪರಿಧಿಯಲ್ಲಿ ನಡೆಯುವ ಕ್ವಾರ್ಕ್ ಗಳ ಸಂವಹನದಿಂದ ಉತ್ಪಾದನೆಯಾಗುವ ಮೂಲಕಣಗಳಿಗೆ ದ್ರವ್ಯ ರಾಶಿಯನ್ನು ಈ ದೇವಕಣವೇ ನೀಡುತ್ತದೆ. ಈ ಪ್ರಪಂಚದ ಪ್ರತಿಯೊಂದು ವಸ್ತುವಿನ ಅಸ್ತಿತ್ವದ ಮೂಲಭೂತ ಗುರುತು ಅದರ ದ್ರವ್ಯ ರಾಶಿ (Mass). ಅಂದರೆ ಈ ದೇವಕಣ ಎಲ್ಲಾ ಕಣಗಳ ಅಸ್ತಿತ್ವಕ್ಕೆ ಕಾರಣವಾಗಿವೆ. ಇದು ಗೋಚರಿಸಿತು ಎಂದರೆ ಪ್ರಪಂಚದ ಅಸ್ತಿತ್ವದ ಮೂಲ ಸಿಕ್ಕಿ, ಥಿಯರಿ ಆಫ್ ಎವೆರಿಥಂಗ್ ಸಂಪೂರ್ಣಗೊಂಡಿತು ಎಂದೇ ಅರ್ಥ! ತಾನು ಕೆಲ ಕ್ಷಣಗಳ ವರೆಗೆ ಮಾತ್ರ ಗೋಚರಿಸಿ ಮಾಯವಾಗಿ ಕಣಗಳನ್ನು, ಕಣಗಳಿಂದ ಈ ಪ್ರಪಂಚವನ್ನೇ ಸೃಷ್ಟಿಸುವ ಈ ಕಣ ಆಧ್ಯಾತ್ಮದ ಪರಿಕಲ್ಪನೆಯಲ್ಲಿ ದೇವರಿಗೇ ಸಮಾನವಾಗಬಹುದೇನೋ! ದೇವಮೂಲದ ಹುಡುಕಾಟದತ್ತ ವಿಜ್ಞಾನ ಸಮುದಾಯ ಮುಂದಿಟ್ಟದೆ. ಹುಡುಕಾಟಕ್ಕೆ ಜಯವಾಗಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What is Higgs Boson or God Particle? How does it help us to know the birth of universe? How the name God Particle was derived? A simple and useful article about the God Particle by Lakshmi Chaitanya.
Please Wait while comments are loading...