ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ಡಬ್ಬಿಂಗ್‌ ಕಲೆಯ ಭ್ರಷ್ಟಾಚಾರವಷ್ಟೇ: ಭೈರಪ್ಪ

By Srinath
|
Google Oneindia Kannada News

Dr S.L. Bhyrappa
ಬೆಂಗಳೂರು, ಮೇ 29: ಡಬ್ಬಿಂಗ್‌ ಎನ್ನುವುದು ಸತ್ಯ ಮತ್ತು ಕಲೆಯ ಭ್ರಷ್ಟಾಚಾರ ಎಂದು ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರತಂಡದವರನ್ನು ಶನಿವಾರ ಅಭಿನಂದಿಸಿ ಮಾತನಾಡಿದ ಅವರು, ಪದೇ ಪದೆ ಭಾರೀ ವಿವಾದಕ್ಕೆ ಕಾರಣವಾಗುತ್ತಿರುವ ಡಬ್ಬಿಂಗ್‌ ಸಂಸ್ಕೃತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. 'ಡಬ್ಬಿಂಗ್‌ ಕೇವಲ ನಮ್ಮ ತಂತ್ರಜ್ಞರ ಕೆಲಸವನ್ನಷ್ಟೇ ಕಿತ್ತುಕೊಳ್ಳುವುದಿಲ್ಲ. ಬದಲಾಗಿ, ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ಅವಕಾಶವನ್ನೇ ಕೊಲ್ಲುತ್ತದೆ' ಎಂದರು.

'ಒಂದು ಸಾಹಿತ್ಯದ ಕೃತಿಯನ್ನು ಬೇರೆ ಭಾಷೆಗೆ ಅನುವಾದ ಮಾಡಿದಾಗ ಅಲ್ಲಿ ಸಂಸ್ಕೃತಿಗಿಂತ ಹೆಚ್ಚಾಗಿ ಕಥೆಯ ಅನುವಾದವಾಗುತ್ತದೆ. ಆದರೆ, ಸಿನಿಮಾ ಹಾಗಲ್ಲ. ಅದು ನಟನೆ, ಸಂಗೀತ, ಸಾಹಿತ್ಯ, ಪರಿಸರ ಇತ್ಯಾದಿಗಳಿಂದ ಒಂದು ಭಾಷೆಗೆ ಹೊಂದಿಕೊಂಡಿರುತ್ತದೆ. ಇದನ್ನು ಬೇರೊಂದು ಭಾಷೆಗೆ ತರ್ಜುಮೆ ಮಾಡುವಾಗ ಅಲ್ಲಿರುವ ಮೂಲ ಸಂಸ್ಕೃತಿಯನ್ನು ನಾಶಪಡಿಸಿದಂತಾಗುತ್ತದೆ' ಎಂದರು.

ರೀಮೇಕ್‌ಗಿಂತ ದೊಡ್ಡ ಭೌತಿಕ ದಾರಿದ್ರ ಇನ್ನೊಂದಿಲ್ಲ. ರೀಮೇಕ್‌ ಅಥವಾ ಡಬ್ಬಿಂಗ್‌ ಮಾಡುವುದೆಂದರೆ, ಒಂದು ಸಂಸ್ಕೃತಿಯನ್ನು ಕೊಂದಂತೆ ಎಂದು ಪ್ರತಿಪಾದಿಸಿದ ಅವರು, 'ಕನ್ನಡ ಸಿನಿಮಾವೆಂದರೆ ಕನ್ನಡ ಸಂಸ್ಕೃತಿ ಜತೆಗಿರುವ ಮಾಧ್ಯಮ. ಡಬ್ಬಿಂಗ್‌ನಿಂದ ಇದು ಹಾಳಾಗುವ ಅಪಾಯವಿದೆ. ಇದರ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು' ಎಂದು ಕರೆ ಕೊಟ್ಟರು.

'ಹಾಕಿದ ಬಂಡವಾಳ ವಾಪಸ್‌ ಬರಬೇಕು ಎಂದು ಮಾತನಾಡುವವನು ಜವಳಿ ಉದ್ಯಮಕ್ಕೆ ಹೋಗಲಿ, ಸಿಮೆಂಟ್‌, ಇಟ್ಟಿಗೆ ಇತರೆ ಉದ್ಯಮ, ವ್ಯವಹಾರಕ್ಕೆ ಹೋಗಲಿ. ನಿರ್ಮಾಪಕರು ಎಂಬ ಬಂಡವಾಳಶಾಹಿಗಳು ಸಿನಿಮಾದಿಂದ ದೂರವಿರಲಿ. ಸಿನಿಮಾ ಜವಳಿ ತರಹದ ಉದ್ಯಮವಲ್ಲ. ಅದೊಂದು ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರ. ಇದನ್ನು ಉಳಿಸಬೇಕಿದೆ. ಇದಕ್ಕೆ ವ್ಯವಹಾರ ಬೆರೆಸಿದರೆ ಸಂಸ್ಕೃತಿ ಮತ್ತು ಕಲೆ ಹಾಳಾಗುತ್ತದೆ' ಎಂದರು.

'ಕನ್ನಡ ಚಿತ್ರರಂಗ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲ, ರಾಕ್ಷಸಮುಷ್ಟಿಯಲ್ಲಿ ನಲುಗುತ್ತಿದೆ. ಇದನ್ನು ವಿರೋಧಿಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕು. ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾಗಳು ಕನ್ನಡದಲ್ಲಿ ತಯಾರಾಗಬೇಕು. ಮುಖ್ಯವಾಹಿನಿಯ ಚಿತ್ರಗಳ ಜತೆಗೆ ಗಂಭೀರ ಚಿತ್ರಗಳ ನಿರ್ಮಾಣವೂ ಆಗಬೇಕು. ಒಳ್ಳೆಯ ಕಲಾತ್ಮಕ ಚಿತ್ರಗಳು ಹೆಚ್ಚು ನಿರ್ಮಾಣವಾಗಬೇಕು' ಎಂದು ಭೈರಪ್ಪ ಹೇಳಿದರು.

ಚಿತ್ರ ಸಮೂಹ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ನಿರ್ಮಾಪಕ ಮತ್ತು ನಿರ್ದೇಶಕರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಪಿ. ಶೇಷಾದ್ರಿ, ಬಿ. ಸುರೇಶ್‌ ಮೊದಲಾದವರು ಉಪಸ್ಥಿತರಿದ್ದರು.

English summary
Noted novelist Dr S.L. Bhyrappa has said on May 28in Bangalore that dubbing of the film is nothing but corrupting the culture of orioginal movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X