ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಗುಡಿಸುವ ಪೌರ ಕಾರ್ಮಿಕರ ಬದುಕೇ ಧೂಳು!

By * ರೂಪ ಎಸ್., ಬೆಂಗಳೂರು
|
Google Oneindia Kannada News

Roopa S, the author
ಬೆಳಗಿನ ವಾಕಿಂಗ್ ಅಥವಾ ಜಾಗಿಂಗ್ ಮಾಡುವಾಗ, ಇನ್ನಾವುದೋ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುವಾಗ ಫಳಫಳಿಸುವ ರಸ್ತೆ ನೋಡಿದರೆ ನಮ್ಮ ಕಣ್ಣುಗಳು ಕೂಡ ಅರಳುತ್ತವೆ. ಅದೇ ಗಲೀಜು ಗಲೀಜಾಗಿದ್ದರೆ? ರಸ್ತೆ ಗುಡಿಸುವವರ ಮೇಲೆ ಬೈಗುಳಗಳ ಸುರಿಮಳೆ ಪ್ರಾರಂಭವಾಗಿಬಿಡುತ್ತದೆ. ಬರೀ ದುಡ್ಡಿಗಾಗಿ ಆಸೆ ಪಡ್ತಾರೆ, ಮೈಬಗ್ಗಿಸಿ ಕೆಲಸ ಮಾಡಲ್ಲ ಎಂಬಿತ್ಯಾದಿ ಮಾತುಗಳು ನಮ್ಮ ಬಾಯಿಂದಲೇ ಬರುತ್ತವೆ. ಆದರೆ, ಪೊರಕೆ ಹಿಡಿದು ತಳ್ಳುಗಾಡಿಗಳಲ್ಲಿ ಕಸವನ್ನು ತುಂಬಿ ರಸ್ತೆಗೆ ಅಂದ ತರುವ ಪೌರಕಾರ್ಮಿಕರ ಜೀವನಕ್ರಮದ ಬಗ್ಗೆ ಯಾರಾದರೂ ಯೋಚಿಸಿದ್ದೀರಾ? ರಸ್ತೆಗಳನ್ನು ಸ್ವಚ್ಛವಾಗಿಡುವ, ಕೊಳಕು ಗಲೀಜು ಅಸಹ್ಯ ಎಂಬ ಪದಗಳೇ ಗೊತ್ತಿಲ್ಲದಂತೆ ಎಲ್ಲವನ್ನೂ ಸಮಾಧಾನದಿಂದಲೇ ಕ್ಲೀನ್ ಮಾಡುವ ಅವರ ಬದುಕು ಮಾತ್ರ... ಶೊಚನೀಯ!

ಉದ್ಯಾನ ನಗರದಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರದ್ದು, ಇವರೆಲ್ಲರೂ ನಿತ್ಯವೂ ಉಸಿರುಗಟ್ಟುವಂಥ, ಅಪಾಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಹಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸುರಕ್ಷಾ ಕವಚ, ಉಸಿರಾಟಕ್ಕೆ ಮಾಸ್ಕ್, ಕೈಗವಸು, ಪ್ಲಾಸ್ಟಿಕ್ ಕಾಲು ಚೀಲ, ಬೂಟ್ ಗಳು ಇಲ್ಲದೆ ಸುರಕ್ಷಿತವಲ್ಲದ ಅದೆಷ್ಟೋ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ 1,500ರಿಂದ 2,000 ರು.ವರೆಗೆ ವೇತನ ಪಡೆಯುವ ಇವರೆಲ್ಲ ಈ ಸಂಬಳ ಸಾಲದೆ ಹೊತ್ತಿನ ಕೂಳಿಗೂ ಪರದಾಡುತ್ತಿರುವುದು ಮಾತ್ರ ನಿಜಕ್ಕೂ ವಿಪರ್ಯಾಸದ ಸಂಗತಿ.

1970ರ ಗುತ್ತಿಗೆ ಕಾರ್ಮಿಕ ರದ್ದತಿ ಮತ್ತು ನಿಯಂತ್ರಣ ಕಾಯಿದೆ ಪ್ರಕಾರ ವರ್ಷಪೂರ್ತಿ ಎಲ್ಲಿ ಕೆಲಸವಿರುತ್ತದೋ ಅಂಥ ಸ್ಥಳಗಳಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರು ಇರುವಂತಿಲ್ಲ. ತಾತ್ಕಾಲಿಕ ಮತ್ತು ಮಧ್ಯಂತರ ಕಾರ್ಯಗಳಿಗೆ ಎಲ್ಲಿ ಜನರ ಅಗತ್ಯವಿರುತ್ತದೊ ಅಂಥ ಸಂದರ್ಭದಲ್ಲಿ ಮಾತ್ರ, ಮಧ್ಯಂತರ ಗುತ್ತಿಗೆ ಕಾರ್ಮಿಕರ ಪದ್ದತಿ ಪ್ರಕಾರ ಅರೆಕಾಲಿಕ ಕಾರ್ಮಿಕರ ನೇಮಕವಾಗಬೇಕು. ಈ ಕಾಯಿದೆ ಪ್ರಕಾರ, ಸಮಾನ ಕೆಲಸಕ್ಕೆ ಸಮಾನ ವೇತನ, ಕ್ಯಾಂಟೀನ್ ವ್ಯವಸ್ಥೆ, ಅವರು ತಮ್ಮ ಊರುಗಳಿಗೆ ಮರಳಲು ಹಣ ಪಾವತಿ ಸೇರಿದಂತೆ ಎಲ್ಲ ಸವಲತ್ತು ಕಲ್ಪಿಸಬೇಕು. ಆದರೆ ಇದು ಪಾಲನೆಯಾಗುತ್ತಿದೆಯೆ? ಖಂಡಿತ ಇಲ್ಲ. ಪೌರ ಕಾರ್ಮಿಕರಿಗಾಗಿ 10 ವರ್ಷಗಳ ಕಾಲ ಗುತ್ತಿಗೆ ಕಾರ್ಯ ನಿರ್ವಹಿಸಿದವರಿಗೆ ಪಿಂಚಣಿ ವೇತನ ನೀಡಬೇಕೆಂದು ಕೇಂದ್ರ ಸರಕಾರದ ಆದೇಶವಿದೆ. ಇದನ್ನು ಯಾವ ರಾಜ್ಯವೂ ಕಡಾಯವಾಗಿ ಜಾರಿಗೊಳಿಸಿಲ್ಲ.

ಜೀವನ ನರಕ : ನಗರ ಪ್ರದೇಶಗಳು ಸ್ವಚ್ಛವಾಗಿರುವುದರಿಂದ ಎಲ್ಲರೂ ನೆಮ್ಮದಿಯಿಂದ ಬದುಕುತ್ತಾರೆ. ಆದರೆ ನಗರ ಸ್ವಚ್ಛ ಮಾಡಿ, ಸುಂದರವಾಗಿಡುವ ಪೌರ ಕಾರ್ಮಿಕರ ಬದುಕು ಮಾತ್ರ ಬಯಲು ಬಂದೀಖಾನೆ. ನೆಮ್ಮದಿಯೆಂಬುದು ಬರೀ ಮರೀಚಿಕೆ, ಜೀವನವೇ ನರಕಯಾತನೆ. ಬೆಂಗಳೂರಿನಂಥ ಮಾಯಾನಗರದಲ್ಲಿ ತಮಗಿರುವ ಸಂಬಳದಲ್ಲಿ ಬದುಕಲೂ ಆಗದೆ ಕೆಲಸ ಬಿಡಲೂ ಆಗದೆ ಸ್ಲಂಗಳಲ್ಲಿ, ರಸ್ತೆ ಬದಿಯಲ್ಲಿ, ಶೆಡ್ ಅಥವಾ ಗುಡಿಸಲು ಕಟ್ಟಿಕೊಂಡು ಜೋಪಡಿಗಳಲ್ಲಿ ಬದುಕುತ್ತಿದ್ದಾರೆ. ಮಳೆಯೇ ಬರಲಿ, ಬಿಸಿಲೇ ಇರಲಿ ತಲೆಮೇಲೆ ತವಲ್ಲು ಹೊದ್ದು ಕೆಲಸ ಮಾಡಲೇಬೇಕು.

ಶಿಕ್ಷಣ ವಂಚಿತ ಮಕ್ಕಳು : ತಮಗೆ ಬರುವ ಆದಾಯದಲ್ಲಿ ಒಂದು ಹೊತ್ತಿನ ಕೂಳಿಗೂ ಪರದಾಡುವ ಸ್ಥಿತಿ ಇರುವಾಗ, ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವುದಾದರು ಹೇಗೆ? ಈ ಪ್ರಶ್ನೆಗೆ ಅವರಲ್ಲಿ ಉತ್ತರವೇ ಇಲ್ಲ. ಶಿಕ್ಷಣ ಕೊಡಿಸುವ ಆಸೆ ಇದ್ದರೂ ಅವರ ಕೈಯಲ್ಲಿ ಆಗುತ್ತಿಲ್ಲ. ಅಲ್ಲದೆ, ಪೌರ ಕಾರ್ಮಿಕರಾಗಿ ಕೆಲಸಮಾಡುವ ಬಹುತೇಕರು ಅನರಕ್ಷಸ್ಥರಾಗಿರುವುದು ಇದಕ್ಕೆ ಕಾರಣವೆಂದರೆ ತಪ್ಪಾಗಲಾರದು.

ಈ ಕಾರಣದಿಂದಾಗಿ ಪೌರ ಕಾರ್ಮಿಕರ ಮಕ್ಕಳೂ ಗತ್ಯಂತರವಿಲ್ಲದೆ ಪೌರಕಾರ್ಮಿಕರಾಗಿಯೇ ಮುಂದುವರೆಯುತ್ತಿದ್ದಾರೆ. ಶಿಕ್ಷಣ, ಸಾಮಾಜಿಕ ಸಮಾನತೆ ಇವರಿಗೆ ಗಗನ ಕುಸುಮ. ಒಮ್ಮೊಮ್ಮೆ ತೊಡಲು ಬಟ್ಟೆ ಕೂಡ ಇಲ್ಲದೆ ಒಂದೇ ಬಟ್ಟೆಯನ್ನು ತಿಂಗಳುಗಟ್ಟಲೆ ಕಾಲದೂಡಬೇಕಾದ ಅನಿವಾರ್ಯತೆಗಳಿರುತ್ತದೆ ಎನ್ನುತ್ತಾರೆ ಕಾರ್ಮಿಕ ಮಹಿಳೆ ಲಕ್ಷಮ್ಮ.

ಅನಾರೋಗ್ಯ : ಪೌರಕಾರ್ಮಿಕರು ನಿತ್ಯವೂ ದುರ್ವಾಸನೆಯ ಮಲಮೂತ್ರವಿರುವ, ಸುರಕ್ಷಿತವಲ್ಲದ ಹಾಗೂ ಕೊಳೆತು ನಾರುವ ಸ್ಥಳಗಳಲ್ಲಿಯೇ ಕೆಲಸಮಾಡುತ್ತಾರೆ. ಆದರೆ ಪಾಲಿಕೆಯಿಂದಾಗಲಿ ಸರಕಾರದಿಂದಾಗಲಿ ಅವರಿಗೆ ಸಮವಸ್ತ್ರವನ್ನು ಹೊರತುಪಡಿಸಿ ಆರೋಗ್ಯಕ್ಕೆ ರಕ್ಷಣೆ ನೀಡುವ ಯಾವದೇ ಸಲಕರಣೆಗಳನ್ನು ನೀಡುತ್ತಿಲ್ಲ. ಹಿರಿಯ ಅಧಿಕಾರಿಗಳನ್ನು ಇವರು ಬಾಯಿ ಬಿಟ್ಟು ಕೇಳುವಂತೆಯೂ ಇಲ್ಲ, ಅಧಿಕಾರಿಗಳೇ ತಿಳಿದು ಕೊಡುವದೂ ಇಲ್ಲ. ಇದರಿಂದಾಗಿ ಬಹುತೇಕ ಪೌರಕಾರ್ಮಿಕರು ಯಾವುದೇ ಸುರಕ್ಷಾಕವಚವನ್ನು ಧರಿಸದೇ ಕೆಲಸಮಾಡುವುದರಿಂದ ನಾನಾಬಗೆಯ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ.

ದಲ್ಲಾಳಿ ಹಾವಳಿ : ಪೌರಕಾರ್ಮಿಕರ ವಲಯದಲ್ಲಿ ದಲ್ಲಾಳಿಗಳ ಮಧ್ಯಪ್ರವೇಶ ಕಾನೂನು ಬಾಹಿರ ಮತ್ತು ಅಮಾನವೀಯ ಎಂದೂ ತಿಳಿದಿದ್ದರೂ ಪಾಲಿಕೆ ಇದನ್ನು ಸಮರ್ಥಿಸಿಕೊಳ್ಳುತ್ತಿದೆ. ಜತೆಗೆ ಪೌರಕಾರ್ಮಿಕರು ಮಾಡಬೇಕಾದ ಕೆಲಸವನ್ನು ಟೆಂಡರ್ ಕರೆದು ಗುತ್ತಿಗೆ ನೀಡುತ್ತಲೇ ಇದೆ. ಇದರಿಂದ ದಲ್ಲಾಳಿಗಳು ಹೊರಗಡೆಯಿಂದ ಅಮಾಯಕ, ಅನಕ್ಷರಸ್ಥರನ್ನು ಕರೆತಂದು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಮೀಸಲಿಟ್ಟಿರುವ ವೇತನದ ಹೆಚ್ಚಿನ ಪಾಲು ದಲ್ಲಾಳಿಗಳ ಪಾಲಾಗುತ್ತಿದೆ. ಅಲ್ಲದೆ ದಲ್ಲಾಳಿಗಳು ಹೊರ ಗುತ್ತಿಗೆದಾರನ್ನು ನೇಮಿಸಿಕೊಳ್ಳುತ್ತಿದ್ಧಾರೆ. ಇದರಿಂದ ಇರುವ ಕಾರ್ಮಿಕರ ಹೊಟ್ಟೆಗೆ ತಣ್ಣೀರೇ ಗತಿ ಎಂಬಂತಾಗಿದೆ. ಹಾಗು, ತಮಗೆ ಬೇಕಾದ ರೀತಿಯಲ್ಲಿ ಕಾರ್ಮಿಕರ ಹಾಜರಿಯಲ್ಲಿ ತಪ್ಪು ದಾಖಲೆ ತೋರಿಸಿ ಹಣವನ್ನು ದುರುಪಯೋಗಪಡಿಸಿಕೊಳುತ್ತಿದ್ದಾರೆ ಎಂಬ ಆರೋಪಗಳೂ ಇವೆ.

ಕರ್ನಾಟಕದಲ್ಲಿ 60 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರಿದ್ದಾರೆ. ಆದರೆ ಸರಕಾರವಾಗಲಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಾಗಲಿ ಅವರ ಆರೋಗ್ಯ ಹಾಗೂ ಬದುಕಿನ ಬಗ್ಗೆ ಕಾಳಜಿ ತೋರುತ್ತಿಲ್ಲ. ಅದರ ಪರಿಣಾಮವಾಗಿ ನಿತ್ಯವೂ ಒಬ್ಬರಲ್ಲಾ ಒಬ್ಬರು ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ. ಕಳೆದ 6 ತಿಂಗಳಲ್ಲಿ ಚರಂಡಿಯಲ್ಲಿನ ವಿಷಾನಿಲ ಕುಡಿದು ಬೆಂಗಳೂರಿನಲ್ಲಿ ನಾಲ್ವರು ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಆದರೆ ಅವರ ಸಾವಿಗೆ ಕಣ್ಣೀರು ಸುರಿಸುವವರ ಸಂಖ್ಯೆ ಮಾತ್ರ ಶೂನ್ಯ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X