• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮರ್ಥ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ

By * ಎನ್.ಜಿ. ಪ್ರಭುಪ್ರಸಾದ್, ಶೃಂಗೇರಿ
|
ಅನೇಕ ದೇಶಗಳಲ್ಲಿ ಶಿಕ್ಷಕರು, ಪೋಷಕರನ್ನೇ ಗುಂಡಿಕ್ಕಿ ಕೊಂದ ಮಕ್ಕಳು, ದೆಹಲಿಯ ಪ್ರತಿಷ್ಠಿತ ಪ್ರೌಢಶಾಲೆಯೊಂದರ ಮಕ್ಕಳ ಲೈಂಗಿಕ ಪ್ರಕರಣ, ದೇಶವನ್ನು ಕಾಯುವ ಯೋಧರೇ ಹೆಣಗಳಿಗೆ ಟೊಮೆಟೋ ಸಾಸ್ ಹಚ್ಚಿ ಅದನ್ನು ಎನ್‍ಕೌಂಟರ್‍ನಂತೆ ಚಿತ್ರಿಸಿ ಪದಕ ಪಡೆದುಕೊಳ್ಳುವ ಹಪಾಹಪಿ, ನಮ್ಮನ್ನು ಕಾಯುವ ಸರ್ಕಾರವನ್ನೇ ಅವ್ಯವಸ್ಥೆಗೊಳಿಸುವಂತಹ ನಕಲೀ ನೋಟು, ಛಾಪಾಕಾಗದಗಳ ಪ್ರಕರಣಗಳು, ಪೂಜನೀಯ ಸ್ಥಾನದಲ್ಲಿರುವ ಅನೇಕ ಸ್ವಾಮಿಗಳ ಕಾಮಲೀಲೆಗಳು, ವೇಶ್ಯಾವಾಟಿಕೆಯ ದಂಧೆಗಳು...

ಇವುಗಳೆಲ್ಲಾ ಇಂದಿನ ದಿನಪತ್ರಿಕೆಗಳಲ್ಲಿ ಆಗಾಗ (ಹೆಚ್ಚುಕಡಿಮೆ ಪ್ರತಿದಿನವೂ!) ಕಾಣಿಸಿಕೊಳ್ಳುವ ತಲೆಬರಹಗಳು. ಇದರ ಬಗ್ಗೆ ಚಿಂತನೆ ನೆಡೆಸಿದಾಗ ನಮ್ಮ ಸಮಾಜವು ಅಧಃಪತನಕ್ಕೀಡಾಗಿರುವ ಅಂಶವು ಗೋಚರಿಸಿ, ಗಾಂಧೀಜಿಯವರು ಕಂಡ "ರಾಮರಾಜ್ಯ"ದ ನಿರೀಕ್ಷೆಯಿಟ್ಟುಕೊಂಡಿರುವವರಿಗೆ ಭ್ರಮನಿರಸನವನ್ನುಂಟುಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಇವುಗಳಿಗೆಲ್ಲಾ ಮೌಲ್ಯಗಳ ಬದಲಾಗಿ ಸ್ವಾರ್ಥಲಾಲಸೆಗೆ, ಭೋಗಜೀವನಕ್ಕೆ ಹಾಗೂ ಇದನ್ನು ಪೂರೈಸಲು ಬೇಕಾದ ಹಣಕ್ಕೆ ಬೆಲೆಕೊಡುತ್ತಿರುವ ಸಮಾಜ, ಅಂದರೆ ಈ ಸಿದ್ಧಾಂತದತ್ತ ವಾಲಿರುವ ನಾವುಗಳೇ ಕಾರಣವೆಂದರೆ ಕೆಲವರು ಸಿಟ್ಟಾಗಬಹುದು!

ಈ ಪರಿಸ್ಥಿತಿಯು ಸುಧಾರಿಸಬೇಕಾದರೆ ನೈತಿಕ ಮೌಲ್ಯಗಳಿಗೆ ಗೌರವವನ್ನಿತ್ತು, ಪರಸ್ಪರರಿಗೆ ಸಹಕಾರ ನೀಡುವಂತಹ ಸಾರಯುತ ಸಮಾಜದ ನಿರ್ಮಾಣವಾಗಬೇಕು. "ಬೆಳೆಯುವ ಸಿರಿ ಮೊಳಕೆಯಲ್ಲಿಯೇ"; ಆದ್ದರಿಂದ ನೀತಿವಂತರಾದ ಯುವಜನತೆಯ ನಿರ್ಮಾಣವಾದರೆ, ಅದು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಸುಭದ್ರ ಅಡಿಪಾಯವಾಗುತ್ತದೆ. ಇದೆಲ್ಲಾ ರಾತ್ರೋರಾತ್ರಿಯಾಗುವ ಕೆಲಸವಲ್ಲ. ಬಹುಕಾಲದಿಂದ ಭೋಗದೆಡೆಗೆ ಜಾರಿರುವ ಸಮಾಜವನ್ನು ನೀತಿಯ ಚೌಕಟ್ಟಿಗೆ ಒಳಪಡಿಸಲು ಅಪಾರ ಪರಿಶ್ರಮದ ಅಗತ್ಯವಿದೆ.

“If wealth is lost, nothing is lost; If health is lost, something is lost; but, if the character is lost, everything is lost." [ಸಂಪತ್ತು ನಷ್ಟಹೊಂದಿದರೆ, ಏನೂ ನಷ್ಟವಿಲ್ಲ; ಆರೋಗ್ಯವು ಇಲ್ಲವಾದರೆ, ಏನೋ ಸ್ವಲ್ಪವನ್ನು ಕಳೆದುಕೊಂಡಂತೆ; ಆದರೆ ಮನುಷ್ಯನು ಸಚ್ಚಾರಿತ್ರ್ಯವನ್ನು ಹೊಂದದಿದ್ದರೆ, ಎಲ್ಲವನ್ನೂ ಕಳೆದುಕೊಂಡಂತೆ.] ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಹಣವಂತನಿಗಿಂತ ಗುಣವಂತನಿಗೆ ಅಂದು ಹೆಚ್ಚಿನ ಗೌರವವು ಲಭ್ಯವಾಗುತ್ತಿತ್ತು. ಆಗ ಮಹಾಜ್ಞಾನಿಗಳು, ವಿರಾಗಿಗಳು, ಪರೋಪಕಾರಿಗಳು ನಮ್ಮ ಆದರ್ಶಪುರುಷರಾಗಿದ್ದರು. ಅಂದಿನ ಶಿಕ್ಷಣಪದ್ಧತಿಯು ಕೇವಲ ವಿಚಾರಗಳನ್ನು ತಲೆಗೆ ತುಂಬದೇ, ಜ್ಞಾನದ ಜೊತೆಯಲ್ಲಿಯೇ ಶೀಲದ ನಿರ್ಮಾಣಕ್ಕೆ ಒತ್ತು ನೀಡುತ್ತಿತ್ತು.

"ಗೋವಿನ ಹಾಡಿ"ನಲ್ಲಿ ಪುಣ್ಯಕೋಟಿಗೆದುರಾದ ಕಷ್ಟಕೋಟಲೆಗಳನ್ನೋದಿ ಕಣ್ಣೀರು ಸುರಿಸದ, ಅದರ ಸತ್ಯಸಂಧತೆಯನ್ನು ಮನದಲ್ಲೇ ಮೆಲುಕು ಹಾಕದ ವಿದ್ಯಾರ್ಥಿಗಳಿರಲಿಲ್ಲ. ಅಂದಿನ ವಿದ್ಯಾರ್ಥಿಗಳ ಮನದಲ್ಲಿ ಶಿವಾಜಿ ಮಹಾರಾಜನ ದೇಶಭಕ್ತಿ, ಕಿತ್ತೂರು ಚೆನ್ನಮ್ಮಾಜಿಯ ಶೌರ್ಯ, ಮ್ಯಾಕ್ಸ್ ಮುಲ್ಲರನು ನಮ್ಮ ಸನಾತನ ಸಂಸ್ಕೃತಿಯನ್ನು ಅವಹೇಳನ ಮಾಡಹೋಗಿ ಕೊನೆಗೆ ಅದನ್ನೇ ತನ್ನ ಜೀವಾಳವನ್ನಾಗಿ ಪರಿವರ್ತಿಸಿಕೊಂಡು ಅವನು ಭಾರತೀಯತೆಗೆ ಸಲ್ಲಿಸಿದ ಕಾಣಿಕೆಯೇ ಮೊದಲಾದ ಸದ್ವಿಚಾರಗಳು ಅಚ್ಚಳಿಯದ ಛಾಪನ್ನೊತ್ತಿದ್ದವು. ಅದೇ ಸಮಯದಲ್ಲಿ ಮಹಾತ್ಮಾ ಗಾಂಧೀಜಿಯವರು ದೇಶದ ನಾಡಿಮಿಡಿತವನ್ನರಿತು ಸದಾಚಾರಿಗಳಾಗುವಂತೆ ಕರೆಕೊಟ್ಟಾಗ ದೇಶಕ್ಕೆ ದೇಶವೇ [ಹೆಚ್ಚಿನವರು] ಓಗೊಟ್ಟು ಸತ್ವಯುತವಾದ ಸಮಾಜದ ನಿರ್ಮಾಣವಾಗಿತ್ತೆಂದರೆ, ಅದು ಅತಿಶಯೋಕ್ತಿಯೆನಿಸದು.

ಆದರೆ ಅದಾದ ಕೆಲವರ್ಷಗಳ ನಂತರದಲ್ಲಿಯೇ ನೈತಿಕವಾಗಿ ನಾವೆಷ್ಟು ಅಧೋಗತಿಗಿಳಿದುಬಿಟ್ಟೆವು? ಪಾಶ್ಚಾತ್ಯರ ಸದ್ವಿಚಾರಗಳನ್ನು ಅವಗಾಹಿಸದೇ, ಅವರ ಸ್ವೇಚ್ಛಾಜೀವನಶೈಲಿಯಷ್ಟನ್ನೇ ಅಂಧಾನುಕರಣೆ ಮಾಡುವ ಜನತೆ, ಕೋಮುದಳ್ಳುರಿಯೆಬ್ಬಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿ ಪರಸ್ಪರರಲ್ಲಿ ಗೌರವ, ಸಹಕಾರ ಪ್ರವೃತ್ತಿ ನಿರ್ಮಾಣವಾಗದಂತೆ ಮಾಡಿ ಸ್ವಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು, ಭ್ರಷ್ಟಾಚಾರ, ಲಂಚಗುಳಿತನಗಳೇ ಮೊದಲಾದ ಕರಾಳ ಅಂಶಗಳಿಂದ ಸಮಾಜ ನರಳುತ್ತಿದೆ. ಇದಕ್ಕೆಲ್ಲಾ ನವಯುಗದ ನಿರ್ಮಾತರಾದ ಮಕ್ಕಳಿಗೆ ನೈತಿಕ ಶಿಕ್ಷಣವನ್ನೊದಗಿಸುವುದೇ ಸಂಜೀವಿನಿಯಾಗಿದೆ. [ಈಗಾಗಲೇ ಎಲ್ಲೆ ಮೀರಿರುವ ಹಿರಿಯ(?)ರಲ್ಲಿ ಜಾಗೃತಿ ಮೂಡಿಸುವುದು ಸ್ವಲ್ಪ ಕಷ್ಟವಾದೀತು. ಆದರೆ ಯುವಜನತೆಯು ಹೆಚ್ಚು ಶಕ್ತಿಯುತವೂ, ನೈತಿಕ ಬಲವುಳ್ಳದ್ದೂ ಆದರೆ ಕ್ರಮೇಣವಾಗಿ ಸಾಮಾಜಿಕ ಪಿಡುಗುಗಳ ಸದ್ದಡಗುತ್ತಾ ಹೋಗುತ್ತದೆ.]

ಅದೇನೇ ಇರಲಿ; "ಹಿಂದಿನ ಕಾಲ ಚೆನ್ನಾಗಿತ್ತು; ಈಗೆಲ್ಲಾ ಕೆಟ್ಟು ಕುಲವೆದ್ದು ಹೋಗಿದೆ"ಯೆಂಬ ನಿರಾಶಾದಾಯಕ ಸಿನಿಕತನವನ್ನು ಬದಿಗಿಟ್ಟು ಮುಂದೆ ಮಾಡಬಹುದಾದರೆಡೆಗೆ ಗಮನ ಹರಿಸೋಣ. ಮಕ್ಕಳಿಗೆ ಗಿಳಿಪಾಠವನ್ನಷ್ಟೇ ಮಾಡದೇ, ನೀತಿ, ಪ್ರಾಮಾಣಿಕತೆಗಳ ಮಹತ್ವವನ್ನರಿತು ಅವುಗಳನ್ನು ಸ್ವತಃ ಪಾಲಿಸಿ, ಮಕ್ಕಳಿಗೆ ಆದರ್ಶಪ್ರಾಯರಾಗಿ ಪ್ರೀತಿಯಿಂದ ಇದನ್ನು ಬೋಧಿಸುವ ಗುರುಸಮುದಾಯ ನಿರ್ಮಾಣವಾಗಬೇಕು. ಅಂತಹವರು ಸ್ವಲ್ಪ ಜನರಾದರೂ "ಎಲೆಮರೆಯ ಕಾಯಿ"ಗಳಂತೆ ನಮ್ಮ ಸಮಾಜದಲ್ಲಿದ್ದಾರೆಂಬುದು ಸಮಾಧಾನದ ಸಂಗತಿ! ಪಠ್ಯಕ್ರಮಗಳಲ್ಲಿ ಜ್ಞಾನಕ್ಕಿರುವಷ್ಟೇ ಸ್ಥಾನಮಾನವನ್ನು ನೈತಿಕ ಶಿಕ್ಷಣಕ್ಕೆ ನೀಡಬೇಕು. ನಾವೆಷ್ಟೇ ಸಿರಿವಂತರಾಗಿದ್ದರೂ ನಮ್ಮನ್ನು ರೂಪಿಸುವಲ್ಲಿ, ನಮ್ಮ ಮೇಲೆ ಸಮಾಜದ ಋಣವೊಂದಿದೆಯೆಂಬುದನ್ನು ಹಾಗೂ ಅದನ್ನು ನಮ್ಮ ಶಕ್ತ್ಯಾನುಸಾರವಾಗಿ ತೀರಿಸುವುದರತ್ತ ಪ್ರತಿಯೊಬ್ಬರೂ ಕಾಯಕಗೈಯ್ಯಬೇಕೆನ್ನುವ ಜಾಗೃತಿಯನ್ನು ನಮ್ಮ ಶಿಕ್ಷಣ ವ್ಯವಸ್ಥೆಯು ಮಕ್ಕಳಲ್ಲಿ ಮೂಡಿಸುವಂತಿರಬೇಕು. ಕೇವಲ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು; ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂಬ ನೈತಿಕತೆಯು ಪೋಷಕರಲ್ಲಿ ಮೂಡಬೇಕು. ಹಿರಿಯರಿಗೆ ಗೌರವವೀಯುವ, ಕಿರಿಯರನ್ನು ಆದರಿಸುವ, ನೊಂದವರ ಕಂಬನಿಯೊರೆಸುವ ಹಾಗೂ ಕೌಟುಂಬಿಕ ಹೊಣೆಯನ್ನರಿತು ಅದನ್ನು ನಿಭಾಯಿಸುವುದರ ಮಹತ್ವಗಳನ್ನು ಅವರು ಮಕ್ಕಳಿಗೆ ತಿಳಿಸಿಕೊಡಬೇಕು.ಏಕೆಂದರೆ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಷ್ಟೇ?

ಇಂಥಾ ಸಂಸ್ಕಾರಯುತವಾದ ವಾತಾವರಣದಲ್ಲಿ ಬೆಳೆದು ದೊಡ್ಡವರಾದ ಮಕ್ಕಳೆಂದೂ ಮುಂದೆ ಲಂಚದ ಹೇಸಿಗೆ ಕಾಸಿಗೆ ಕೈಯ್ಯನ್ನೊಡ್ಡರು; ಸಮಾಜವನ್ನು ವಂಚಿಸಿ ಅರ್ಥಾರ್ಜನೆಗೈಯ್ಯುವ ವಾಮಮಾರ್ಗದಲ್ಲಿ ನೆಡೆಯರು; ಅಬಲೆಯೊಬ್ಬಳ ಮೇಲೆ ಅತ್ಯಾಚಾರವೆಸಗುವ ಹೀನ ಕೆಲಸಕ್ಕೆ ಕೈಹಾಕರು; ಅವರೆಂದೂ ತಮ್ಮ ತತ್ವವೊಂದೇ ಸತ್ಯವೆಂದು ಬಗೆದು ಇತರರ ಮಂದಿರ-ಮಸೀದಿ-ಚರ್ಚುಗಳನ್ನು ಧ್ವಂಸಗೊಳಿಸುವ ಸಂಕುಚಿತ ಮನೋಭಾವನೆ ತಾಳರು ಹಾಗೂ ಸಾಮಾಜಿಕ ಹಿತಾಸಕ್ತಿಗಳಿಗೆ ಧಕ್ಕೆಯೊದಗಿ ಬಂದಾಗ ಅದನ್ನು ಸರಿಯಾದ ರೀತಿಯಲ್ಲಿ ಪ್ರತಿಭಟಿಸಿ, ಅದಕ್ಕೆ ಸಮರ್ಪಕ ಪರಿಹಾರವನ್ನು ಕಂಡುಕೊಳ್ಳುವರು. ಅಲ್ಲವೇ? ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡಿ ಅವರನ್ನು ತೇಜಸ್ವಿಗಳನ್ನಾಗಿಸಿ, ತನ್ಮೂಲಕ ಅದ್ಭುತ ಸತ್ಕಾರ್ಯಗಳನ್ನೆಸಗಬಲ್ಲ ಸಮಾಜನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸೋಣವೇ?

“ವಿದ್ಯಾರ್ಥಿಗಳು ಭತ್ತವನ್ನು ತುಂಬುವ ಚೀಲಗಳಾಗಬಾರದು; ಅದನ್ನು ಬೆಳೆಯುವ ಗದ್ದೆಗಳಾಗಬೇಕು." - ಕುವೆಂಪು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more