ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಆರ್ ಕೃಷ್ಣಶಾಸ್ತ್ರಿಗಳ 'ವಚನ ಭಾರತ'ಕ್ಕೆ ಅರವತ್ತು ವರ್ಷ

By * ಮಂಜುನಾಥ ಅಜ್ಜಂಪುರ
|
Google Oneindia Kannada News

AR Krishna Shastry
ಹೊಸಗನ್ನಡ ಭಾಷೆಯನ್ನು ನಿರ್ಮಿಸಿದ, ಕಟ್ಟಿ ಬೆಳೆಸಿದ ಪ್ರಾತಃಸ್ಮರಣೀಯರಲ್ಲಿ ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿಗಳು ಅಗ್ರಗಣ್ಯರು. ಕೃಷ್ಣಶಾಸ್ತ್ರಿಗಳು ಗದ್ಯರಚನಕಾರರು, ಸಂಶೋಧಕರು, ಸಂಪಾದಕರು, ನೂರಾರುಜನ ಅತ್ಯುತ್ತಮ ಶಿಷ್ಯರನ್ನು ರೂಪಿಸಿದವರು. ಮಹಾಭಾರತದಂತಹ ಅತಿದೊಡ್ಡ ಕಾವ್ಯವನ್ನು ಸಂಗ್ರಹಿಸುವುದು, ಅನುವಾದ ಮಾಡುವುದು ತುಂಬ ಕ್ಲಿಷ್ಟವಾದ ಕೆಲಸ. ಇಂದು ಅವರ "ವಚನ ಭಾರತ" ಕನ್ನಡದ ಗದ್ಯರೂಪದ ಮಹಾಭಾರತ ಗ್ರಂಥಗಳಲ್ಲಿ ಶ್ರೇಷ್ಠಕೃತಿಯಾಗಿ ಜನಪ್ರಿಯವಾಗಿದೆ. ಲಕ್ಷಶ್ಲೋಕಗಳ ಸಂಸ್ಕೃತದ ಮಹಾಗ್ರಂಥವನ್ನು ಪುಟ್ಟ ಹೊತ್ತಿಗೆಯಾಗಿ ರೂಪಿಸುವುದು ನಿಜಕ್ಕೂ ಕಷ್ಟ ಎನ್ನುವುದು, ಬೇರೆಯ ಮಹಾಭಾರತ ಸಾರಸಂಗ್ರಹ ಗ್ರಂಥಗಳನ್ನು ನೋಡಿದಾಗ ತಿಳಿಯುತ್ತದೆ.

ಅಂತೆಯೇ, ಸಂಸ್ಕೃತದ ಸೋಮಕವಿ ರಚಿಸಿದ ಇಪ್ಪತ್ತೆರಡು ಸಾವಿರ ಶ್ಲೋಕಗಳ ಬೃಹದ್‌ಗ್ರಂಥ "ಕಥಾ ಸರಿತ್ಸಾಗರ"ವನ್ನೂ ಶಾಸ್ತ್ರಿಗಳು "ಕಥಾಮೃತ"ವನ್ನಾಗಿ ಕನ್ನಡಕ್ಕೆ ನೀಡಿದರು. ಇದು ಬೇರೆಬೇರೆ ಕಥೆಗಳ ಸಂಗ್ರಹ. ಎಲ್ಲ ಕಥೆಗಳನ್ನೂ ಸೇರಿಸಿಬಿಟ್ಟರೆ, ಜನ ಕೊಳ್ಳಲಾಗದಷ್ಟು ಬೃಹತ್ ಗಾತ್ರದ್ದಾಗಿಬಿಡುತ್ತದೆ. ಕಲೆ, ವಿನ್ಯಾಸ, ಸ್ವಾರಸ್ಯಗಳನ್ನು ಕೆಡದಂತೆ ಸಂಗ್ರಹಿಸುವುದು ಹೇಗೆ ಎಂಬುದನ್ನು ಈ "ವಚನ ಭಾರತ", "ಕಥಾಮೃತ"ಗಳ ಗದ್ಯಸಂಗ್ರಹಗಳಿಂದ ಅರಿಯಬಹುದು, ಕಲಿಯಬಹುದು.

ಕೃಷ್ಣಶಾಸ್ತ್ರಿಗಳು ಅಪರೂಪದ ಗುರುಗಳು, ಅವರ ಶಿಷ್ಯವಾತ್ಸಲ್ಯ, ಮಾರ್ಗದರ್ಶನಗಳು ವಿಶೇಷವಾದಂತಹವು. ಕನ್ನಡ ಭಾಷೆಯ ಸ್ವಾಭಿಮಾನ, ಅಸ್ಮಿತೆಗಳ ಸಂಕೇತವಾಗಿ ಹೋಗಿರುವ ಕುವೆಂಪು ಅವರು ಎಂ.ಎ. ಓದಲು ತತ್ತ್ವಶಾಸ್ತ್ರವನ್ನು ಆರಿಸಿಕೊಂಡುಬಿಟ್ಟಿದ್ದರು. ಆಗಷ್ಟೇ ಮೈಸೂರು ವಿಶ್ವವಿದ್ಯಾಲಯವು ಕನ್ನಡ ಎಂ.ಎ. ಪ್ರಾರಂಭಿಸಲು ನಿರ್ಧರಿಸಿತ್ತು. ಹೊಸ ಕೋರ್ಸುಗಳೆಂದರೆ ನೂರೆಂಟು ತೊಂದರೆಗಳು. ಅಂದು ನಡೆದದ್ದನ್ನು ಕುವೆಂಪು ಅವರ ಮಾತುಗಳಲ್ಲೇ ಓದಿ:

***
"ಅಧ್ಯಾಪಕರಾಗಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳು ಕೊಠಡಿಗೆ ಹೋಗುತ್ತಿದ್ದುದನ್ನು ಕಂಡು ನಾನಿದ್ದ ವಿದ್ಯಾರ್ಥಿಗಳ ಒಂದು ಗುಂಪು ಸಶಬ್ದವಾಗಿ ನಮಸ್ಕಾರ ಮಾಡಿತು. ಅವರ ಬೆಳ್ಳನೆಯ ಕಚ್ಚೆಪಂಚೆ, ಉತ್ತರೀಯ, ಕರಿಯ ಕ್ಲೋಸ್‌ಕಾಲರ್ ಕೋಟು, ನೀಟಾಗಿ ಕಟ್ಟಿದ ಜರಿಯ ಪೇಟ, ಅವರನ್ನು ಯಾವ ಗುಂಪಿನಲ್ಲಿಯೂ ಎದ್ದು ಕಾಣುವಂತೆ ಮಾಡುತ್ತಿದ್ದವು.

ತುಸು ಹೊತ್ತಾಗುವುದರೊಳಗೆ ಮಿತ್ರರೊಬ್ಬರು ಬಂದು, "ಕೃಷ್ಣಶಾಸ್ತ್ರಿಗಳು ನಿಮ್ಮನ್ನು ಕರೆಯುತ್ತಿದ್ದಾರೆ", ಎಂದರು.
"ಏಕೆ?"
"ಏಕೋ ಗೊತ್ತಿಲ್ಲ. ಲೇಖನಗೀಖನ ಪದ್ಯಗಿದ್ಯದ ವಿಚಾರಕ್ಕಿರಬಹುದು."
ಟೀಚರ್‍ಸ್ ರೂಮಿಗೆ ಹೋದೆ, ಸಕಾತರ ಕುತೂಹಲದಿಂದಲೆ. ತಮ್ಮ ಮೇಜಿನ ಹಿಂದೆ ಕುರ್ಚಿಯ ಮೇಲೆ ಕುಳಿತಿದ್ದವರು ನಗುಮೊಗರಾಗಿ ವಿಶ್ವಾಸದಿಂದ ಸ್ವಾಗತಿಸಿದರು.
"ಈಗ ಹೇಗಿದ್ದೀರಿ, ಪುಟ್ಟಪ್ಪಾ? ಮೈ ಸರಿಯಾಗಿರಲಿಲ್ಲವೆಂದು ಕೇಳಿದೆ."
"ಹೌದು, ಸಾರ್. ಊರಿಗೆ ಹೋದಾಗ ಡಬ್ಬಲ್ ನ್ಯೂಮೋನಿಯಾ ಆಗಿ ಸ್ವಲ್ಪ ಕಷ್ಟವಾಗಿತ್ತು".
"ಎಂ.ಎ. ಗೆ ಅಪ್ಲಿಕೇಶನ್ ಹಾಕಿದಿರಾ?"
"ಹೌದು, ಹಾಕಿದ್ದೇನೆ"
"ಯಾವುದಕ್ಕೆ?"
"ಫಿಲಾಸಫಿಗೆ"
"ಈ ವರ್ಷದಿಂದ ಕನ್ನಡ ಎಂ.ಎ. ತೆರೆಯುತ್ತದೆ ಯೂನಿವರ್ಸಿಟಿ. ಸಾಕಷ್ಟು ವಿದ್ಯಾರ್ಥಿಗಳು ಬೇಕು ಅದಕ್ಕೆ. ನೀವು ಏಕೆ ಕನ್ನಡ ಎಂ.ಎ. ಗೆ ಬರಬಾರದು?"
"ಫಿಲಾಸಫಿಗೆ ಹಾಕಿದ್ದೇನೆ. ನಮ್ಮ ಪ್ರೊಫೆಸರ್, ಸೀಟು ಕೊಟ್ಟೂ ಆಗಿದೆಯಂತೆ........"
"ಫಿಲಾಸಫಿ ಏನಪ್ಪಾ? ನೀವೇ ಓದಿಕೊಳ್ಳುವ ಸಾಮರ್ಥ್ಯ ಪಡೆದಿದ್ದೀರಿ. ಹೇಗಿದ್ದರೂ ಆಶ್ರಮದಲ್ಲಿದ್ದೀರಿ. ಅಲ್ಲೇನು ಮೂರು ಹೊತ್ತೂ ಅದರ ಅಧ್ಯಯನ ತಾನೆ? ನೀವು ಎಂತಿದ್ದರೂ ಕವಿಗಳು. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಬಹುದು, ಫಿಲಾಸಫಿಗಿಂತಲೂ ಕನ್ನಡಕ್ಕೆ ನಿಮ್ಮ ಅವಶ್ಯಕತೆ ಹೆಚ್ಚು."
ಸ್ವಲ್ಪ ಹಿಂದು ಮುಂದು ನೋಡಿ ಹೇಳಿದೆ, "ಆಲೋಚಿಸಿ ಆಮೇಲೆ ಹೇಳ್ತೀನಿ, ಸಾರ್"

***
"ನೋಡಿಯಪ್ಪಾ, ತುಂಬ ಪ್ರಯತ್ನದ ಪರಿಣಾಮವಾಗಿ ಕನ್ನಡ ಎಂ.ಎ. ಪ್ರಾರಂಭಿಸುತ್ತಿದ್ದೇವೆ. ನಮಗೀಗ ನಿಮ್ಮಂಥ ವಿದ್ಯಾರ್ಥಿಗಳೇ ಬೇಕಾಗಿದ್ದಾರೆ."
ಆಕರ್ಷಣೀಯ ಆಹ್ವಾನದಂತಿದ್ದ ಅವರ ಮುಗುಳುನಗೆಯ ದಾಕ್ಷಿಣ್ಯಕ್ಕೆ ವಶವಾಗುತ್ತಿದ್ದ ನಾನು ನಮಸ್ಕಾರ ಹೇಳಿ ಹೊರಗೆ ಬಂದೆ. ವಿಷಯ ಏನು ಎಂಬುದನ್ನು ಕೇಳಿ ತಿಳಿದ ಮಿತ್ರರು ನಕ್ಕುಬಿಟ್ಟರು: ಫಿಲಾಸಫಿಯಂತಹ ಅಖಿಲ ಭಾರತೀಯವೂ ಅಂತರರಾಷ್ಟ್ರೀಯವೂ ಆಗಿರುವ ಸಬ್ಜೆಕ್ಟನ್ನು ಬಿಟ್ಟು, ಪ್ರೊ. ವಾಡಿಯಾ ಅವರಂತಹ ಸುಪ್ರಸಿದ್ಧ ಪ್ರಾಧ್ಯಾಪಕರ ಕೈಕೆಳಗೆ ಅಧ್ಯಯನ ಮಾಡುವ ಗೌರವಕರವಾದ ಸುಯೋಗವನ್ನೂ ತ್ಯಜಿಸಿ, ಆಪ್ಷನಲ್ ಸಬ್ಜೆಕ್ಟಿನ ಮಟ್ಟಕ್ಕೂ ಏರದೆ ಬರಿಯ ಸೆಕೆಂಡ್ ಲಾಂಗ್ವೇಜ್ ಆಗಿರುವ ಕನ್ನಡದ ಅದರಲ್ಲಿಯೂ ಹೊಸದಾಗಿ ಪ್ರಾರಂಭಿಸಲಿರುವ ಎಂ.ಎ. ಗೆ ಸೇರುವುದೆ? ನಿನ್ನಂತಹ ಪ್ರತಿಭಾಶಾಲಿ? ಇಂಗ್ಲಿಷಿನಲ್ಲಿ ಆಗಲೇ ಕವನಗಳನ್ನು ಅಚ್ಚುಹಾಕಿಸಿರುವ, ಮುಂದೆ ಜಗತ್ ಪ್ರಸಿದ್ಧನಾಗಲಿರುವ ಕವಿ? (ಆಗಿನ್ನೂ ವಿದ್ಯಾರ್ಥಿಗಳಿಗೆ ಸೈನ್ಸ್, ಮೆಡಿಸಿನ್, ಎಂಜಿನಿಯರಿಂಗ್ ವಿಷಯಗಳು ಅಷ್ಟು ಗೌರವಭಾಜನವಾಗಿರಲಿಲ್ಲ!) ಮಿತ್ರರ ಮೂದಲಿಕೆ ನನ್ನ ಹೃದಯಕ್ಕೂ ಚುಚ್ಚಿತು. ಆದರೆ ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳು ಅದಾವ ಅಮೃತ ಕ್ಷಣದಲ್ಲಿ ನನಗೆ ಶ್ರೇಯಸ್ಕರ ಸೂಚನೆ ನೀಡುವಂತೆ ಮಾಡಿತ್ತೋ ಏನೋ ವಿಧಿ? ಕನ್ನಡದ ಎಂ.ಎ ಗೆ ಸೇರಲು ನಿರ್ಧರಿಸಿದೆ!

ಎರಡು ಮೂರು ದಶಕಗಳ ತರುವಾಯ, ಮೊನ್ನೆ ಮೊನ್ನೆ, ಎ.ಆರ್.ಕೃಷ್ಣಶಾಸ್ತ್ರಿಗಳು ದಿವಂಗತರಾಗುವ ಪೂರ್ವದಲ್ಲಿ ಈ ಸಂಗತಿಯನ್ನು ಅವರಿಗೆ ತಿಳಿಸಿ, "ಜೆ.ಹೆಚ್.ಕಸಿನ್ಸ್‌ರವರು, ನಾನು ಇಂಗ್ಲಿಷಿನಲ್ಲಿ ಬರೆಯುವುದನ್ನು ಬಿಟ್ಟು ಕನ್ನಡದಲ್ಲಿ ಬರೆಯುವುದಕ್ಕೆ ಹೇಗೆ ನಿಮಿತ್ತರಾದರೋ, ತಾವೂ ಹಾಗೆಯೇ ನಾನು ಕನ್ನಡ ಎಂ.ಎ. ತೆಗೆದುಕೊಳ್ಳುವುದಕ್ಕೆ ನಿಮಿತ್ತರಾದಿರಿ," ಎಂದು ತಿಳಿಸಿದಾಗ ಶಾಸ್ತ್ರಿಗಳು ಆಶ್ಚರ್ಯಪಟ್ಟು, "ಹೌದೇ? ನನಗೆ ನೆನಪೇ ಬರುತ್ತಿಲ್ಲವಲ್ಲಾ!" ಎಂದರು. ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳು ನನ್ನಂತಹ ಎಷ್ಟು ವಿದ್ಯಾರ್ಥಿಗಳಿಗೆ ಯಾವಯಾವ ರೀತಿಯಲ್ಲಿ ನೆರವಾಗಿ ಕನ್ನಡ ನವೋದಯದ ಹೊಂಬೆಳಗನ್ನು ಹೊತ್ತಿಸಿ ಉಜ್ವಲಗೊಳಿಸಿದರೋ ಅದನ್ನು ಅವರಾದರೂ ಲೆಕ್ಕವಿಟ್ಟುಕೊಳ್ಳಲಾಗಲೀ, ನೆನಪಿಟ್ಟುಕೊಳ್ಳಲಾಗಲೀ ಸಾಧ್ಯವೇ? ಅವರು ಅದನ್ನೆಲ್ಲ ಒಂದು ವಿಶೇಷಕಾರ್ಯ ಎಂಬಂತೆ ಮಾಡಿರಲಿಲ್ಲ; ಉಸಿರಾಡುವಂತೆ, ಒಂದು ಅಪ್ರಯತ್ನಪೂರ್ವಕವಾದ ಸಹಜತೆಯಿಂದ ಮಾಡಿದ್ದರು." (ಕುವೆಂಪು, "ಎ.ಆರ್.ಕೃ - ಜೀವನ ಸಾಧನೆ," ಪುಟ 2-3-4)

***
ಕುವೆಂಪು ಅವರು ಸೂಕ್ತವಾಗಿಯೇ ಹೇಳಿದ್ದಾರೆ. ಕೃಷ್ಣಶಾಸ್ತ್ರಿಗಳಿಗೆ ಕನ್ನಡವೇ ಒಂದು ನಿತ್ಯವ್ರತವಾಗಿತ್ತು. ತುಂಬ ಜನರ ಜೀವನದ ತಿರುವಿನ ಮಹಾಕ್ಷಣಗಳಲ್ಲಿ, ಇಂತಹ ಮಹಾಮಹಿಮರ ಮಾರ್ಗದರ್ಶನ, ಸಲಹೆಗಳು ತುಂಬ ಮುಖ್ಯವಾಗುತ್ತವೆ. ಕುವೆಂಪು ಅವರು ಕನ್ನಡವನ್ನು ಸ್ನಾತಕೋತ್ತರ ವಿಷಯವಾಗಿ ಆಳವಾಗಿ ಅಭ್ಯಾಸ ಮಾಡದಿದ್ದರೆ, ಪಂಪ ರನ್ನ ಜನ್ನ ನಾಗವರ್ಮ ರಾಘವಾಂಕ ಕುಮಾರವ್ಯಾಸ ಲಕ್ಷ್ಮೀಶಾದಿ ಮಹಾಕವಿ, ವರಕವಿಗಳ ಕೃತಿಗಳನ್ನು ಅಧ್ಯಯನ ಮಾಡದಿದ್ದರೆ, "ಶ್ರೀರಾಮಾಯಣ ದರ್ಶನಂ" ಮಹಾಕಾವ್ಯದಂತಹ ಮೇರುಕೃತಿಗೆ ಬೇಕಾಗುವ ಪದಸಂಪತ್ತಿಯನ್ನೂ ಮಹಾಶೈಲಿಯನ್ನೂ ಖಂಡಿತವಾಗಿಯೂ ಪಡೆಯಲಾಗುತ್ತಿರಲಿಲ್ಲ. ಕುವೆಂಪು ಅವರೇ ಮುಂದುವರಿದು, "ಬಹುಶಃ ನನ್ನ ಕಾವ್ಯಕನ್ನಿಕೆ ಬಡಕಲು ಕನ್ನಡದ ಪಂಗುಶೈಲಿಯಲ್ಲಿ ಇಂಗ್ಲಿಷಿನ ಎರವಲು ಸರಕನ್ನು ತಲೆಹೊರೆಯಲ್ಲಿ ಹೊತ್ತು ಮಾರುವ ಬೀದಿಯ ವ್ಯಾಪಾರಿಯಾಗಿರುತ್ತಿತ್ತೋ ಏನೋ?", ಎಂದಿದ್ದಾರೆ.

ಎ.ಆರ್.ಕೃಷ್ಣಶಾಸ್ತ್ರಿಗಳ ಪರೋಕ್ಷ ಸಾಧನೆಯಿರಲಿ, ಪ್ರತ್ಯಕ್ಷ ಸಾಧನೆಯೇ ಅಪಾರವಾಗಿದೆ. ಡಿವಿಜಿ, ಎಸ್.ವಿ.ಪರಮೇಶ್ವರ ಭಟ್ಟ, ಕುವೆಂಪು, ಕೆ.ವೆಂಕಟರಾಮಪ್ಪ ಮುಂತಾದ ವಿದ್ವಾಂಸರ ಗ್ರಂಥಗಳಿಗೇ ಅವರು ಮುನ್ನುಡಿ ಬರೆದಿದ್ದಾರೆ. ಅವರ "ಬಂಕಿಮಚಂದ್ರ", "ನಿಬಂಧಮಾಲಾ", "ಭಾಸಕವಿ," "ಸಂಸ್ಕೃತ ನಾಟಕ", ಮುಂತಾದ ಅನೇಕ ಕೃತಿಗಳು, ಟಿ.ಎಸ್. ವೆಂಕಣ್ಣಯ್ಯನವರೊಂದಿಗೆ ಸಂಪಾದಿಸಿದ "ಹರಿಶ್ಚಂದ್ರ ಕಾವ್ಯಸಂಗ್ರಹ", ಶಾಸ್ತ್ರಿಗಳನ್ನು ಅಮರವಾಗಿಸಿವೆ. 1918ರಲ್ಲಿ ಅವರಿಂದ ಸ್ಥಾಪಿತವಾದ ಸೆಂಟ್ರಲ್ ಕಾಲೇಜು "ಕರ್ಣಾಟಕ ಸಂಘ", ಕನ್ನಡದ - ಕರ್ನಾಟಕದ ರೂಪುಗೊಳ್ಳುವಿಕೆಗೇ ಪ್ರೇರಣೆ ನೀಡಿತು. 1919 ರಲ್ಲಿ ಅವರು ಪ್ರಾರಂಭಿಸಿದ "ಪ್ರಬುದ್ಧ ಕರ್ಣಾಟಕ" ಪತ್ರಿಕೆ, ಹಲವಾರು ತಲೆಮಾರುಗಳ ಕವಿಗಳನ್ನು - ಲೇಖಕರನ್ನು ಬೆಳೆಯಿಸಿತು. ಕನ್ನಡ ದಿನಪತ್ರಿಕೆ- ವಾರಪತ್ರಿಕೆ- ಮಾಸಪತ್ರಿಕೆಗಳೇ ಬೆಳೆದಿಲ್ಲದ ಆ ಯುಗದಲ್ಲಿ, "ಪ್ರಬುದ್ಧ ಕರ್ಣಾಟಕ"ದಲ್ಲಿ ಒಂದು ಕಥೆ, ಕವನ ಪ್ರಕಟವಾಗುವುದೆಂದರೆ, ಇಂದಿನ ಒಂದು ಸಾಹಿತ್ಯಪ್ರಶಸ್ತಿಗಿಂತ ಹೆಚ್ಚಿನದು.

***
ನಾವೆಲ್ಲ ಚಿಕ್ಕವರಿದ್ದಾಗ, ಮಹಾಭಾರತವನ್ನು ಕನ್ನಡದಲ್ಲಿ ಓದಬೇಕೆಂದರೆ ತುಂಬ ಆಯ್ಕೆಗಳೇನೂ ಇರಲಿಲ್ಲ. ಈ "ವಚನ ಭಾರತ" ನಮಗೆಲ್ಲ ಪ್ರಿಯವಾಗಿದ್ದು ಅದರ ಸರಳತೆಯಿಂದ, ಉತ್ಕೃಷ್ಟತೆಯಿಂದ. ಕೃಷ್ಣಶಾಸ್ತ್ರಿಗಳು ದೊಡ್ಡ ವಿದ್ವಾಂಸರು. ಅವರ ವಿದ್ವತ್‌ಪೂರ್ಣ ಕೃತಿಗಳಿಗೆ ವಿದ್ವಜ್ಜನರ ಮನ್ನಣೆಯಿದ್ದೇ ಇದೆ. ಆದರೂ ಮಕ್ಕಳಿಗೆ, ಸಾಮಾನ್ಯರಿಗೆ "ವಚನ ಭಾರತ" ಬಲು ಅಚ್ಚುಮೆಚ್ಚು.

"ವಚನಭಾರತ"ಕ್ಕೆ ಶಾಸ್ತ್ರಿಗಳು ವಿಸ್ತೃತ ಪೀಠಿಕೆಯೊಂದನ್ನು ಬರೆದಿದ್ದಾರೆ. ಅದೇ ಒಂದು ಪ್ರತ್ಯೇಕ ಗ್ರಂಥವೆನಿಸಿಕೊಳ್ಳುವ ಮಹತ್ತ್ವದಿಂದ ತುಂಬಿದೆ. ಅದರ ಒಂದು ಭಾಗ ಹೀಗಿದೆ, ನೋಡಿ:

"ನಾನು ಈ ಗ್ರಂಥವನ್ನು ಬರೆಯುತ್ತಿದ್ದಾಗ, ಅಂದಂದು ಬರೆದದ್ದನ್ನು ಅಂದಂದೇ, ನನ್ನ ಮಗಳು ಸೌ. ಶಾಂತಾ ಮತ್ತು ನನ್ನ ಮೊಮ್ಮಗಳು ಸೌ. ಲೀಲಾ ಇಬ್ಬರೂ ತುಂಬ ಕುತೂಹಲದಿಂದಲೂ ವಿಶ್ವಾಸದಿಂದಲೂ ಓದುತ್ತಿದ್ದರು. ಕಲ್ಯಾಣಘಟ್ಟಗಳು ಬಂದಾಗಲೂ, ಪರ್ವಗಳು ಮುಗಿದಾಗಲೂ ಮಂಗಳಪೂಜೆ ಮಾಡುತ್ತಿದ್ದರು; ಹಾಡುಹಸೆಗಳನ್ನು ಹೇಳಿ ಹಬ್ಬ ಮಾಡುತ್ತಿದ್ದರು. ಮುಗಿದಮೇಲೆ ಎಲ್ಲವನ್ನೂ ಒಟ್ಟಿಗೆ ಒಂದುಸಾರಿ ಓದಿದರು, ಸಂತೋಷಪಟ್ಟರು. ಎಲ್ಲರಿಗಿಂತ ಮುಂಚೆ ಹೀಗೆ ಹಸ್ತಪ್ರತಿಯಲ್ಲಿಯೇ ತಾವು ಓದುವಂತಾಯಿತಲ್ಲಾ ಎಂದು ಹೆಮ್ಮೆಪಟ್ಟುಕೊಂಡರು. ಅವರು ಓದುತ್ತಿದ್ದಾಗ ಅವರನ್ನು ನಾನು, "ಎಲ್ಲಿಯಾದರೂ ಬೇಸರವಾಯಿತೇ? ಎಲ್ಲಿಯಾದರೂ ಅರ್ಥವಾಗಲಿಲ್ಲವೇ?," ಎಂದು ಕೇಳುತ್ತಿದ್ದೆ. ಅದಕ್ಕೆ "ಇಲ್ಲ"ವೆಂದು ಉತ್ತರ ಬರುತ್ತಿತ್ತು.

ನಿತ್ಯವೂ ಅದೇ ಪ್ರಶ್ನೆ, ನಿತ್ಯವೂ ಅದೇ ಉತ್ತರ. ಅದು, ನಾನು ತಂದೆ-ತಾತ ಎಂಬ ಪಕ್ಷಪಾತದಿಂದ ಹೇಳಿದ ಉತ್ತರವಲ್ಲವೆಂದು ಭಾವಿಸಿದ್ದೇನೆ. ಅವರಲ್ಲಿ ಒಬ್ಬಳು ಹೈಸ್ಕೂಲಿನ ವಿದ್ಯಾರ್ಥಿನಿ, ಇನ್ನೊಬ್ಬಳು ಕಾಲೇಜಿನ ವಿದ್ಯಾರ್ಥಿನಿ. ಆ ಮಟ್ಟದ ವಿದ್ಯಾಬುದ್ಧಿಗಳ ಜನರು ತಿಳಿಯುವಂತೆ ಸರಳವಾಗಿ, ಸಂಕೋಚಪಟ್ಟುಕೊಳ್ಳದಂತೆ ಗಂಭೀರವಾಗಿ, ಸಂಸ್ಕಾರ ಪಡೆಯುವಂತೆ ಶುದ್ಧವಾಗಿ, ಸಂತೋಷಪಡುವಂತೆ ರಸವತ್ತಾಗಿ ಬರೆಯಬೇಕೆಂಬುದೇ ನನ್ನ ಮುಖ್ಯ ಉದ್ದೇಶ." (ಪುಟ 62)

ಎ.ಆರ್.ಕೃಷ್ಣಶಾಸ್ತ್ರಿಗಳ ಈ ಸಾಲುಗಳನ್ನು ಓದುವಾಗ ಭಾರತೀಯ ಸಂಸ್ಕೃತಿಯ, ಕೌಟುಂಬಿಕ ಸಂಸ್ಕೃತಿಯ ಒಂದು ಸುಂದರ ದೃಶ್ಯ ಕಣ್ಮುಂದೆ ಸೃಷ್ಟಿಯಾಗುತ್ತದೆ. ಎ.ಆರ್.ಕೃಷ್ಣಶಾಸ್ತ್ರಿಗಳು ಹುಟ್ಟಿದ್ದು 1890 ರ ಫೆಬ್ರುವರಿ 12ರಂದು. ನಿಧನರಾದುದು 1968ರ ಫೆಬ್ರುವರಿ 1 ರಂದು. "ವಚನ ಭಾರತ" ಪ್ರಕಟವಾದಾಗ ಶಾಸ್ತ್ರಿಗಳಿಗೆ ಅರವತ್ತು ವರ್ಷ. ಇದೀಗ ಕನ್ನಡ "ವಚನ ಭಾರತ"ಕ್ಕೇ ಅರವತ್ತು ವರ್ಷ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X