• search

ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸೋಣ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Help these children fight against death
  ಹತ್ತಿರದಲ್ಲಿರುವ ಎಚ್ಐವಿ/ಏಡ್ಸ್ ಬಗ್ಗೆ ಕೆಲಸ ಮಾಡುತ್ತಿರುವ ಸಂಸ್ಥೆಗೆ ಹೋಗಿ ಕಷ್ಟದಲ್ಲಿರುವ ಸೋಂಕಿತ ಮಕ್ಕಳ ಬಗ್ಗೆ ತಿಳಿದುಕೊಳ್ಳಿ. ಯಾವುದಾರು ಒಂದು ಮಗುವಿನ ಪ್ರತಿ ತಿಂಗಳ ಆಹಾರದ ಆಥವಾ ಔಷಧಿಯ ಖರ್ಚನ್ನು ನೇರವಾಗಿ ಮಗುವಿಗೆ ತಲಪುವಂತೆ ನೋಡಿಕೊಳ್ಳಿ. ಮುಗ್ದ ಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಿದ ತೃಪ್ತಿ ನಿಮ್ಮದಾಗುತ್ತೆ.

  * ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾ

  ಪ್ರತಿ ವರ್ಷದಂತೆ ಮಕ್ಕಳ ದಿನಾಚರಣೆ ಬಂದಿದೆ. ಕಳೆದೆರಡು ವರ್ಷಗಳಿಂದ ನಾನು ಎಚ್ಐವಿ ಸೋಂಕಿತ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸುತ್ತ ಬಂದಿದ್ದೆನೆ. ಪ್ರತಿ ವರ್ಷ ದುಗುಡದಿಂದಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಮೊದಲ ವರ್ಷ ಭಾಗವಹಿಸಿದ ಮಕ್ಕಳೆಲ್ಲ ಈ ಸಲಾನು ಭಾಗವಹಿಸಲಿ ಎಂದು ಆ ಕಾಣದ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಆದರೆ ಒಂದೆರಡಾದರೂ ಮುಗ್ದ ಮಕ್ಕಳು ಕಾಣ ಸಿಗುವದಿಲ್ಲ. ಎಚ್ಐವಿ ಸೋಂಕು ಅವರನ್ನು ಬಲಿ ತೆಗೆದುಕೊಂಡಿರುತ್ತೆ. ಎಚ್ಐವಿ/ಏಡ್ಸ್ ಕ್ಷೇತ್ರದಲ್ಲಿ ನನ್ನನ್ನು ಬಹಳವಾಗಿ ಕಾಡುತ್ತಿರುವ ನೋವು ಈ ಮುಗ್ದ ಮಕ್ಕಳ ಸಾವು. ತಮ್ಮದಲ್ಲದ ತಪ್ಪಿಗೆ ಹುಟ್ಟಿನಿಂದಲೇ ಎಚ್ಐವಿ ಸೋಂಕನ್ನು ದೇಹದಲ್ಲಿಟ್ಟುಕೊಂಡು ಬೆಳೆಯುವ ಮಕ್ಕಳಿಗೆ ತಾವು ಸಾವನ್ನು ಜೊತೆಯಲ್ಲಿಟ್ಟುಕೊಂಡು ಬೆಳೆಯುತ್ತಿದ್ದೇವೆ ಎನ್ನುವ ಅರಿವು ಕೂಡ ಇರುವುದಿಲ್ಲ.

  ಎಚ್ಐವಿ/ಏಡ್ ಸೋಂಕು ಇಂದು ಸಮಾಜದಲ್ಲಿ ಕೇವಲ ಆರೋಗ್ಯ ಸಮಸ್ಯೆಯಾಗಿ ಉಳಿದಿಲ್ಲ. ಹೊಸ ಹೊಸ ಸಾಮಾಜಿಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸೋಂಕಿತ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಪಾಯದ ಅಂಚಿನಲ್ಲಿರುವ ಮಕ್ಕಳು ಎಂಬ ಹೊಸ ಗುಂಪು ಸೃಷ್ಟಿಯಾಗುತ್ತಿದೆ. ತಾಯಂದಿರು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ತಿಳಿವಳಿಕೆ ಪಡೆದುಕೊಂಡಿದ್ದರೆ ಸೊಂಕು ರಹಿತ ಮಕ್ಕಳನ್ನು ಪಡೆಯುವ ಅವಕಾಶವಿತ್ತು. ಆದರೆ ಎಚ್ಐವಿ/ಏಡ್ಸ್ ಬಗ್ಗೆ ಇರುವ ಕಳಂಕ, ತಾರತಮ್ಯ ನೀತಿಯ ಕಾರಣ ಯಾವುದೇ ಚಿಕಿತ್ಸೆ, ತಿಳಿವಳಿಕೆ ಪಡೆಯಲು ಮುಂದೆ ಬರದ ಕಾರಣ ಅದರ ಫಲ ಸೋಂಕಿತ ಮಕ್ಕಳು ಅನುಭವಿಸುವಂತಾಗಿದೆ.

  ಎಷ್ಟೋ ಮಂದಿ ಸೋಂಕಿತ ಮಕ್ಕಳು ಪಾಲಕರನ್ನು ಕಳೆದುಕೊಂಡು ಅಜ್ಜ ಅಜ್ಜಿಯರ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಮಕ್ಕಳ ಆರೈಕೆಯಲ್ಲಿ ವಿಶ್ರಾಂತ ಜೀವನ ನಡೆಸಬೇಕಾದ ಹಿರಿಯ ಜೀವಗಳಿಗೆ ಮೊಮ್ಮಕ್ಕಳನ್ನು ಸಲಹಲು ದುಡಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ಸೋಂಕಿತ ಮಕ್ಕಳ ಆರೋಗ್ಯ ಸಂಬಂಧಿ ಖರ್ಚು ವೆಚ್ಚಗಳನ್ನು ನೋಡಿಕೋಳುವುದು ಇನ್ನು ಕಷ್ಟ. ಸಮಾಜದಲ್ಲಿ ಮಗು ಎಚ್ಐವಿ ಸೋಂಕಿತ ಎಂದು ಗೊತ್ತಾದರೆ ಸಾಕು ಯಾರು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ. ಇನ್ನು ಇತರೆ ಮಕ್ಕಳೊಂದಿಗೆ ಆಡುವುದು ದೂರವೇ ಉಳಿಯಿತು. ಕೀಳರಿಮೆಯಿಂದ, ಮಾನಸಿಕವಾಗಿ ಕುಗ್ಗಿಹೋದ ಮಗು ಆರೋಗ್ಯಕರವಾಗಿ ಬೆಳೆಯಲು ಸಾಧ್ಯವೇ? ಹುಟ್ಟಿದಾಗಿನಿಂದಲೇ ಸೋಂಕಿತ ಮಕ್ಕಳು ಅಭದ್ರತೆಯಿಂದಲೇ ಜೀವನ ಸಾಗಿಸಬೇಕಾಗಿದೆ. ನಾನು ನೋಡಿದಂತೆ ಬಹತೇಕ ಸೋಂಕಿತ ಮಕ್ಕಳು ಉತ್ತಮ ಪೌಷ್ಠಿಕ ಆಹಾರದ ಕೊರತೆಯಿಂದ, ಸರಿಯಾದ ಆರೋಗ್ಯ ತಪಾಸಣೆಯ ಕೊರತೆಯ ಕಾರಣದಿಂದ ಸಾವಿಗೀಡಾಗುತ್ತಿದ್ದಾರೆ. ಏಆರ್‌ಟಿ ತೆಗೆದುಕೊಳ್ಳುವ ಮಕ್ಕಳಿಗಂತೂ ನಿಯಮಿತ ಉತ್ತಮ ಆಹಾರ ತೀರ ಅವಶ್ಯಕ. ಅಲ್ಲದೇ ದಿನಾಲೂ ಔಷಧಿ ತೆಗೆದುಕೊಳ್ಳುವಂತೆ ಮಾಡುವುದು ಒಂದು ಸವಾಲೇ ಸರಿ.

  ಎರಡು ವರ್ಷಗಳ ಹಿಂದೆ ಅಂಕಲ್ ಎನ್ನತ್ತಾ ನನ್ನಿಂದ ಹಾರ್ಲಿಕ್ಸ್ ತೆಗೆದುಕೊಂಡು ಹೊಗುತ್ತಿದ್ದ 10 ವರ್ಷದ ಪುಟ್ಟಿ ಸಾವಿಗೀಡಾಗಿದ್ದು ಕಣ್ಣ ಮುಂದೆ ಕಟ್ಟಿದಂತಿದೆ. ನಾನು ಅವಳಿಗೆ ಸಹಾಯ ಮಾಡುವ ಹೊತ್ತಿಗೆ ಅವಳು ಕೊನೆಯ ಹಂತಕ್ಕೆ ಬಂದಿದ್ದಳು. ಎನೇ ಪ್ರಯತ್ನ ಪಟ್ಟರೂ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲಾ ಎನ್ನುವ ನೋವು ನನ್ನನ್ನು ಈಗಲೂ ಕಾಡುತ್ತಿದೆ. ಇತ್ತೀಚೆಗೆ ತರಕಾರಿ ಮಾರುವ ಹಾಲಕ್ಕಿ ಅಜ್ಜಿಯೊಬ್ಬಳು ಆಫೀಸಿಗೆ ಬಂದು ತಾನು ಕಣ್ಣು ಮುಚ್ಚುವ ಮೊದಲೇ ನನ್ನ ಮೊಮ್ಮಗಳನ್ನು ಎಲ್ಲಾದರೂ ಚೆನ್ನಾಗಿರೋ ಕಡೆ ಸೇರಿಸಿ ಪೂಣ್ಯ ಕಟ್ಟಿಕೊಳ್ಳಿ ಎಂದು ಬೇಡಿಕೊಂಡಿದ್ದು ಕರಳುಕಿತ್ತುಬರುವಂತಿತ್ತು. ಎಚ್ಐವಿ/ಏಡ್ಸನಿಂದ ತಂದೆ ತಾಯಿಯರನ್ನು ಕಳೆದುಕೊಂಡಿರುವ ಆ ಮೊಮ್ಮಗಳು ಸಹ ಎಚ್ಐವಿ ಸೋಂಕಿತೆ. ಅಜ್ಜಿ ತರಕಾರಿ ಮಾರಿ ಮೊಮ್ಮಗಳನ್ನು ಸಲಹುತ್ತಿದ್ದಾಳೆ. ತನ್ನ ನಂತರ ಮೊಮ್ಮಗಳನ್ನು ನೋಡಿಕೊಳ್ಳುವವರು ಯಾರು ಎನ್ನುವುದು ಅಜ್ಜಿಯ ಚಿಂತೆ. ಇನ್ನೊಂದು ಪ್ರಸಂಗದಲ್ಲಿ 12 ವರ್ಷದ ಸೋಂಕಿತ ಹುಡುಗನೊಬ್ಬನಿಗೆ ಹಾಸಿಗೆ ಹಿಡಿದಿರುವ ಸೋಂಕಿತ ತಾಯಿಯ ಆರೈಕೆ ಮಾಡಬೇಕಾಗಿದೆ. ವಾಹನಗಳು ಒಡಾಡದ ದುರ್ಗಮ ಕಾಡಿನ ಊರಿನಲ್ಲಿರುವ ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಆತನ ಆರ್ತನಾದ ಕೇಳುವ ಕಿವಿಗಳು ಇಲ್ಲೆಲ್ಲೂ ಇಲ್ಲ.

  ಇನ್ನು ಸೋಂಕಿತ ಮಕ್ಕಳಿಗೆ ನೇರವಾಗಿ ತಲಪುವಂತಹ ಯೋಜನೆಗಳು ಸರ್ಕಾರದಿಂದಾಗಲಿ, ಸರ್ಕಾರೇತರ ಸಂಸ್ಥೆಗಳಿಂದ ಆಗಲೀ ಬಂದಿಲ್ಲ ಎನ್ನುವದು ವಿಷಾದಕರ. ಎಚ್ಐವಿ/ಏಡ್ಸ್ ತಡೆಗಾಗಿ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ಅವೆಲ್ಲವೂ ಆಡಳಿತಾತ್ಮಕ ನಿರ್ವಹಣೆಗೆಂದು ಪೋಲಾಗುತ್ತಿದೆಯೇ ಹೊರತು ನೇರವಾಗಿ ಸೊಂಕಿತರನ್ನು ತಲುಪುತ್ತಿಲ್ಲ. ಸೋಂಕಿತರ ನಿಜವಾದ ಅವಶ್ಯಕತೆಗಳೇನು ಎಂಬುದನ್ನೇ ಸರಕಾರ ಅರಿತಿಲ್ಲ. ಬದಲಾಗಿ ಉದ್ಯೋಗ ಸೃಷ್ಟಿಗೆ, ಮೋಜು ಮಸ್ತಿಗೆ, ಅನೂಕೂಲವಾಗುವಂತಹ ಯೋಜನೆಗಳು ಜಾರಿಯಾಗುವುದೇ ಹೆಚ್ಚು. ನಾವು ಎಚ್ಐವಿ ಕ್ಷೇತ್ರದಲ್ಲದ್ದೂ ಎನು ಮಾಡಲಾಗದ ಸ್ಥಿತಿ. ಸೋಂಕಿತರು ಕೇಳಿದ್ದನು ಕೊಡಲಾಗದ, ಅವರಿಗೆ ಬೇಡವಾದುದ್ದನ್ನು ಒತ್ತಾಯ ಪೂರ್ವಕವಾಗಿ ಕೊಡುವ ಪರಿಸ್ಥಿತಿ ನಮ್ಮದಾಗಿದೆ. ನಗರವೊಂದರ ಪಂಚತಾರಾ ಹೊಟೇಲ್ ಒಂದರಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ವಿವಿಧ ಸಂಸ್ಥೆಗಳ, ಸರಕಾರದ ಪ್ರತಿನಿಧಿಗಳು ಸೋಂಕಿತ ಮಕ್ಕಳ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ಪುಂಖಾಪುಂಖವಾಗಿ ಮಾತನಾಡುತ್ತ ಲಕ್ಷಾಂತರ ವ್ಯಯ ಮಾಡುತ್ತಿದ್ದ ದೃಶ್ಯವನ್ನು ಹಾಗೂ ಅದೇ ದಿನ ನಗರದ ಮಾರ್ಕೆಟೊಂದರ ರಸ್ತೆ ಬದಿಯಲ್ಲಿ ಊರಿ ಬಿಸಲಿನಲ್ಲಿ ಅಜ್ಜಿಯೊಬ್ಬಳು ತರಕಾರಿ ಮಾರುತ್ತ ಸೋಂಕಿತ ಮೊಮ್ಮಗಳ ಔಷಧಿಗೆ ಆಗುವಷ್ಟು ಹಣ ಸೇರಿತಾ ಎಂದು ಆಗಾಗ ಹಣ ಎಣಿಸುತ್ತಾ ಇದ್ದಿದ್ದುನ್ನು ನೋಡಿದ್ದೆನೆ. ಇದು ಇಂದಿನ ಕಟು ವಾಸ್ತವ.

  ಸೋಂಕಿತ ಮಕ್ಕಳಿಗೆ ದಾನಿಗಳಿಂದ ಏನಾದರೂ ನೆರವು ಕೊಡಿಸೋಣವೆಂದರೆ ಅವರಿಗೆ ಪ್ರಚಾರದ ಗೀಳು. ತಾವು ಸಹಾಯ ಮಾಡುತ್ತಿರುವ ಬಗ್ಗೆ ಪೊಟೋ ಸಮೇತ ಪೇಪರಿನಲ್ಲಿ ಬರಬೇಕು ಎನ್ನುವ ಹಂಬಲ ತುಂಬಿರುತ್ತದೆ. ಒಟ್ಟಿನಲ್ಲಿ ಸೋಂಕಿತ ಮಕ್ಕಳ ಪರಿಸ್ಥಿತಿ ಹೇಳಲು ಆಗದೆ ಬಚ್ಚಿಟ್ಟುಕೊಳ್ಳಲೂ ಆಗದ ಹಾಗೇ ಆಗಿದೆ. ತೀರ ತಿನ್ನಲು ಆಹಾರವಿಲ್ಲದೆ ಸೋಂಕಿತ ಮಕ್ಕಳು ಸಾಯುವುದು ನನಗೆ ತೀರ ನೋವನ್ನುಂಟು ಮಾಡುತ್ತಿದೆ. ಹಾಗೇ ಆಗಬಾರದು ಅಲ್ಲವೇ? ಹಾಗಾದರೆ ಸಾಮನ್ಯ ಜನರಾಗಿ ನಾವೂ ಏನು ಸಹಾಯ ಮಾಡಬಹುದು? ಸಹಾಯ ಮಾಡಬೇಕು ಅನ್ನಿಸುತ್ತಿದೆಯಾದರೆ ಹೀಗೆ ಮಾಡಿ.

  ತಮ್ಮ ಹತ್ತಿರದಲ್ಲಿರುವ ಎಚ್ಐವಿ/ಏಡ್ಸ್ ಬಗ್ಗೆ ಕೆಲಸ ಮಾಡುತ್ತಿರುವ ಸಂಸ್ಥೆಗೆ ಹೋಗಿ ಕಷ್ಟದಲ್ಲಿರುವ ಸೋಂಕಿತ ಮಕ್ಕಳ ಬಗ್ಗೆ ತಿಳಿದುಕೊಳ್ಳಿ. ಯಾವುದಾರು ಒಂದು ಮಗುವಿನ ಪ್ರತಿ ತಿಂಗಳ ಆಹಾರದ ಆಥವಾ ಔಷಧಿಯ ಖರ್ಚನ್ನು ನೇರವಾಗಿ ಮಗುವಿಗೆ ತಲಪುವಂತೆ ನೋಡಿಕೊಳ್ಳಿ. ಮುಗ್ದ ಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಿದ ತೃಪ್ತಿ ನಿಮ್ಮದಾಗುತ್ತೆ. ಸಾವಿನ ವಿರುದ್ಧದ ಸೋಂಕಿತ ಮಕ್ಕಳ ಹೋರಾಟಕ್ಕೆ ನಾವೂ ಬೆಂಬಲಕ್ಕೆ ಇದ್ದೆವೆ ಎನ್ನುವದರ ಮೂಲಕ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸೋಣ ಏನಂತೀರಾ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more