• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆಂದೂ ಮರುಕಳಿಸದಿರಲಿ ಕಡವಾಡ ದುರ್ಘಟನೆ

|
ಪ್ರಕೃತಿಯ ಮುನಿಸಿನ ಮುಂದೆ ನಾವೆಷ್ಟು ಕುಬ್ಜರು ಎಂಬುದಕ್ಕೆ ಕಾರವಾರದ ಕಡವಾಡದಲ್ಲಿ ಗುಡ್ಡ ಕುಸಿತ ಉಂಟಾಗಿ 19 ಜನರನ್ನು ಬಲಿ ತೆಗೆದುಕೊಂಡಿರುವುದೇ ಸಾಕ್ಷಿ. ಯಾರದೋ ತಪ್ಪಿನಿಂದಾಗಿ ಇನ್ನಾರೋ ಬಲಿಯಾಗಿರುವುದು ನಿಜಕ್ಕೂ ಮಾನವನ ದುರಾಸೆಗೆ ಹಿಡಿದ ಕನ್ನಡಿ. ಗುಡ್ಡ ಕುಸಿತ, ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಲೇಖಕರು ಇಲ್ಲಿ ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಇನ್ನಾದರೂ ದುರಾಸೆಯ ಮಾನವ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮತ್ತಷ್ಟು ಅವಘಡಗಳಿಗೆ ಕಾರಣವಾಗಬೇಕಾದೀತು ಎಂಬ ಸಂದೇಶವೂ ಇಲ್ಲಿದೆ.

* ವಿನಾಯಕ ಎಲ್. ಪಟಗಾರ, ಬೆಟ್ಕುಳಿ, ಕುಮಟಾ

ಅಕ್ಟೋಬರ್ 2, ಶುಕ್ರವಾರ 2009 ಕಾರವಾರದವರಿಗೆ ಮರೆಯಲಾಗದ ಕಹಿ ದಿನವಾಗಿ ಪರಿಣಮಿಸಿದೆ. ಆ ಒಂದೇ ದಿನ ಸುರಿದ ಮಳೆ ಸೃಷ್ಟಿಸಿದ ಅನಾಹುತದಿಂದ ಕಾರವಾರಗಿರು ಇನ್ನು ಹೊರಬಂದಿಲ್ಲ. ಆದ ಅನಾಹುತಕ್ಕೆ ಸ್ಪಷ್ಟ ಕಾರಣ ಗೊತ್ತಾಗದೇ ಅಯೋಮಯ ಸ್ಥಿತಿಯಲ್ಲಿದ್ದಾರೆ. ಪ್ರಕೃತಿಯ ಮುನಿಸಿಗೆ ಅಮಾಯಕ ಇಪ್ಪತ್ತೊಂದು ಜನ ಪ್ರಾಣ ತೆತ್ತಿದ್ದಾರೆ. ಈ ದುರಂತದಲ್ಲಿ 2461 ಮಂದಿ ಸಂತ್ರಸ್ತರಾಗಿದ್ದು 21 ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರೆ, 1636 ಮನೆಗಳು ಹಾನಿಗೊಳಗಾಗಿವೆ.

ಪಶ್ಚಿಮದ ಸಮುದ್ರ ತಟ ಮತ್ತು ಪೂರ್ವದ ಗುಡ್ಡದ ಅಂಚಿನಲ್ಲಿರುವ ಕಾರವಾರಕ್ಕೆ ಮಳೆಯ ಆರ್ಭಟವೇನು ಹೊಸದಲ್ಲ. ವಾರಗಟ್ಟಲೆ ಎಡೆಬಿಡದೆ ಮಳೆ ಸೂರಿದರೂ ಚಿಕ್ಕ ಪುಟ್ಟ ಅನಾಹುತಗಳನ್ನು ಹೊರತುಪಡಿಸಿದರೆ ಯಾವುದೇ ದೊಡ್ಡಪ್ರಮಾಣದ ಅನಾಹುತಗಳು ಇಲ್ಲಿಯವರೆಗೆ ಆಗಿರಲ್ಲಿಲ್ಲಾ. ಆದರೆ ಕೇವಲ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ಗಾಂಧಿ ಜಯಂತಿಯಂದು ಬಿಣಗಾ, ಅರ್ಗಾ, ಚೆಂಡಿಯಾ ಮೊದಲಾದ ಗ್ರಾಮಗಳಲ್ಲಿ ಹಾದು ಹೊಗಿರುವ ರಾಷ್ರೀಯ ಹೆದ್ದಾರಿ 17ರ ಮೇಲೆ ನೀರು ತುಂಬಿ, ಮಾರನೆ ದಿವಸ ಬಿಣಗಾದ ಹತ್ತಿರ ಹೆದ್ದಾರಿ ಮೇಲೆ ಗುಡ್ಡ ಕುಸಿದ ಪರಿಣಾಮ ಕಾರವಾರ ಅಕ್ಷರಶಃ ಎರಡು ದಿನದ ಮಟ್ಟಿಗೆ ಮೊದಲ ಬಾರಿಗೆ ಹೊರಜಗತ್ತಿನ ಸಂಪರ್ಕ ತಪ್ಪಿಸಿಕೊಂಡು ಅನಾಥವಾಗಿತ್ತು ಎಂದರೆ ತಪ್ಪಾಗಲ್ಲಿಕ್ಕಿಲ್ಲ. ಕಾರವಾರ ನಗರ ಮೊದಲ ಬಾರಿಗೆ ನೆರೆ ನೀರಿನಿಂದ ತುಂಬಿಕೊಂಡಿತ್ತು.

ಅದೇ ದಿವಸ ರಾತ್ರಿ ಕಡವಾಡ ಗುಡ್ಡದ ಅಂಚಿನಲ್ಲಿರುವ ಸುಮಾರು ಇಪ್ಪತ್ತರಷ್ಷು ಮನೆಗಳು ಗುಡ್ಡ ಕುಸಿತದ ಪರಿಣಾಮ ನೆಲಸಮವಾದವು. ಬೆರಳಣಿಕೆಯಷ್ಟು ಮಂದಿ ಮಾತ್ರ ಜೀವಾಪಾಯದಿಂದ ಪಾರಾದರು. ಮೀನು ಮಾಡುತ್ತಿರುವ ಹೆಣ್ಣುಮಗಳು, ಕೇರಂ ಆಡುತ್ತಿರುವ ಸಹೋದರರು, ನಾಳೆ ಕಾಲೇಜಿಗೆ ಹೊಗಲು ಬ್ಯಾಗಿನಲ್ಲಿ ಪುಸ್ತಕ ತುಂಬುತ್ತಿರುವ ಕಾಲೇಜು ವಿಧ್ಯಾರ್ಥಿನಿ, ಆಗ ತಾನೆ ಗೋವಾದಿಂದ ತಂದ ತಿಂಡಿಯನ್ನು ಕೊಡಲು ಹಿಂದಿನ ಕೊಣೆಗೆ ಹೋದ ಮೊಮ್ಮಗ, ತಿಂಡಿ ತಿನ್ನುತ್ತಿರುವ ಅಜ್ಜಿ, ಲೆಕ್ಕಾಚಾರದ ಪಟ್ಟಿ ಬರೆಯುತ್ತಿದ್ದ ಮಹಿಳಾ ಸಂಘದ ಸದಸ್ಯೆ, ನಾಳೆಯ ಪರೀಕ್ಷೆಗೆ ನೋಟ್ಸ್ ಮಾಡುತ್ತಿದ್ದ ಡಿಪ್ಲೋಮಾ ಹುಡುಗ, ಗೆಳತಿಗೆ ಗುಡ್ ನೈಟ್ ಮೆಸೇಜ್ ಕಳಿಸುತ್ತಿದ್ದ ಗೆಳೆಯ, ಗೋವಾ ಸರಾಯಿ ಹೀರಿಕೊಂಡು ಬೀಡಿ ಸೇದುತ್ತಿದ್ದ ಮನೆ ಯಜಮಾನ, ಕೈ ತುತ್ತು ತಿನ್ನುತ್ತಿದ್ದ ಮಗು, ತಿನ್ನಿಸುತ್ತಿದ್ದ ತಾಯಿ, ಮೂತ್ರಕ್ಕೆ ಹೋಗಿದ್ದ ಅಜ್ಜ ಸೇರಿದಂತೆ ಒಟ್ಟು 19 ಮಂದಿ ಕ್ಷಣಾರ್ಧದಲ್ಲಿ ಮಣ್ಣುಪಾಲಾದರು. ಭವಿಷ್ಯದ ಹೊಂಗನಸು ಕಾಣುತ್ತಿದ್ದವರ ಬದುಕೇ ಮಣ್ಣಿನಲ್ಲಿ ಮುಚ್ಚಿ ಹೋಯಿತು. ಈ 19 ಮಂದಿಯ ದೇಹ ಹೊರ ತೆಗೆಯಲು ಸತತವಾಗಿ 7 ದಿನಗಳವರೆಗೆ ರಕ್ಷಣೆಗೆ ಸಂಬಂಧಪಟ್ಟಂತೆ ಎಲ್ಲ ಇಲಾಖೆಯವ ಸುಮಾರು 200ಕ್ಕೂ ಹೆಚ್ಚು ಮಂದಿ ಮತ್ತು ಜೆಸಿಬಿ ಯಂತ್ರಗಳು ಕಾರ್ಯನಿರ್ವಹಿಸಿವೆ ಎಂದರೆ ಗುಡ್ಡ ಕುಸಿತದ ಪ್ರಮಾಣವನ್ನು ಅಂದಾಜಿಸಬಹುದು. ಇನ್ನು ಬದುಕುಳಿದವರಿಗೆ ಉಳಿದಿರುವುದು ಶಾಶ್ವತವಾದ ನೋವು, ಭಯ, ಅತಂತ್ರ ಭವಿಷ್ಯ.

ಕೇವಲ ಒಂದೇ ದಿನದ ಮಳೆಗೆ ಇಷ್ಟೊಂದು ಅನಾಹುತಗಳಾಗಲು ಕಾರಣವೇನು? ಗುಡ್ಡಗಳ ಕುಸಿತಕ್ಕೆ ಕಾರಣವೇನು? ಹುಡುಕಾಟ ಜಿಜ್ಞಾಸೆ ಶುರುವಾಗಿದೆ. ಈ ಅಂಶಗಳನ್ನು ಗಮನಿಸಿ.

* ಕಾರವಾರ ನಗರದಲ್ಲಿ ಕಾಂಕ್ರೀಟೀಕರಣದ ಪರಿಣಾಮ ಮಣ್ಣು ನೆಲ ಕಾಣುವುದೇ ಅಪರೂಪವಾಗಿದೆ. ನೀರು ಹರಿದು ಹೊಗಬೇಕಾದ ಜಾಗಗಳು ಅತಿಕ್ರಮಣವಾಗಿವೆ ಇಲ್ಲವೆ ಕಾಂಕ್ರೀಟೀಕರಣಗೊಂಡಿದೆ.

* ಸೀರ್ಬಡ್ ರಕ್ಷಣಾ ಇಲಾಖೆಯ ರಕ್ಷಣಾ ಗೋಡೆಗಳು ಹೆದ್ದಾರಿ ಮೇಲೆ ನೀರು ತುಂಬಲು ಕಾರಣವೆನ್ನಲಾಗಿದೆ. ಸರಾಗವಾಗಿ ನೀರು ಹರಿದು ಹೋಗುವ ಜಾಗಗಳಲ್ಲಿ ಕಟ್ಟಡಗಳ ನಿರ್ಮಾಣ, ಅಡೆ ತಡೆಗಳ ಗೋಡೆ, ನೀರು ಹೆದ್ದಾರಿ ಮೇಲೆ ನಿಲ್ಲಲು, ಗ್ರಾಮಗಳಿಗೆ ನುಗ್ಗಲು ಕಾರಣವಾಯಿತು.

* ಗುಡ್ಡ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಜಿಲೆಟಿನ್ ಸ್ಪೋಟದಿಂದ ಗುಡ್ಡಗಳು ಸಡಿಲವಾಗುತ್ತಿವೆ.

* ಗುಡ್ಡಗಳಿಂದ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆಗೆದಿರುವುದು.

* ಅತೀ ಭಾರದ ಮ್ಯಾಂಗನೀಸ್ ಲಾರಿಗಳ ಮತ್ತು ಮ್ಯಾಂಗನೀಸ್ ತುಂಬಿದ ಗೂಡ್ಸ್ ರೈಲಗಳ ಒಡಾಟದಿಂದ ಭೂಮಿ ಪದೇ ಪದೇ ಕಂಪನಕ್ಕೆ ಒಳಗಾಗುತ್ತಿರುವುದು.

* ಕದ್ರಾ ಡ್ಯಾಂನಿಂದ ಅನಧಿಕೃತವಾಗಿ ನೀರನ್ನು ಹೊರಬಿಟ್ಟರೆ? ಯಾಕೆಂದರೆ ಕಾರವಾರ ನಗರದಲ್ಲಿ ತುಂಬಿದ ನೀರು ತುಂಬಾ ತಂಪಾಗಿತ್ತು ಎನ್ನುವವರಿದ್ದಾರೆ. ಸಂಗ್ರಹವಾದ ನೀರು ಮಾತ್ರ ತಂಪಾಗಿರಲು ಸಾಧ್ಯ.

* ಇಂಡೋನ್ಯೇಷ್ಯಾದಲ್ಲಿ ಸುನಾಮಿ ಆದ ಪರಿಣಾಮ, ಕಾರವಾರದ ಸಮುದ್ರದಲ್ಲಿ ನೀರಿನ ಒತ್ತಡ ಇತ್ತೆ? ಯಾಕೆಂದರೆ ಯಾವಾಗಲೂ ಮಳೆ ಬಿದ್ದ ಒಂದು ತಾಸಿನಲ್ಲಿ ಸಮುದ್ರ ಸೇರಿ ಹೊಗುತ್ತಿದ್ದ ನೀರು ಆ ದಿನ ಯಾಕೆ ಸಮುದ್ರಕ್ಕೆ ಸರಾಗವಾಗಿ ಸೇರಿಲ್ಲ?

* ಸಣ್ಣ ಪ್ರಮಾಣದಲ್ಲಿ ಭೂಕಂಪ ಉಂಟಾಗಿ ಭೂಮಿ ಜರಿಯಿತೇ?

ಈ ಮೇಲಿನ ಅಂಶಗಳಲ್ಲದೇ ಬೇರೆಯದೇ ಕಾರಣಗಳು ಇರಬಹುದು. ಪರಿಣಿತರು ಪರೀಶೀಲಿಸಬೇಕಾಗಿದೆ.

ಈ ಮೇಲಿನ ಅಂಶಗಳನ್ನು ಗಮನಿಸಿದಾಗ ಮಾನವ ನಿರ್ಮಿತ ತಪ್ಪುಗಳು ಎದ್ದು ಕಾಣುತ್ತವೆ. ಈ ಸಂದರ್ಭದಲ್ಲಿ ಗಾಂಧೀಜಿ ಹೇಳಿದ ಮಾತೊಂದು ನೆನಪಿಗೆ ಬರುತ್ತದೆ. ಪ್ರಕೃತಿ ಮಾನವನ ಆಶೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ. ಆದರೆ ಇವತ್ತು ನಮಗೆ ಆಸೆ ಮತ್ತು ದುರಾಸೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದಾಗಿದೆ. ಪರಿಣಾಮ ಪ್ರಕೃತಿಯ ಮೇಲೇ ನಮ್ಮ ಶೋಷಣೆ ನಿರಂತರವಾಗಿ ಮುಂದುವರಿದಿದೆ. ಪ್ರಕೃತಿಯನ್ನು ಮೀರಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸುಖಕ್ಕೋಸ್ಕರ ಭೂಮಿಯ ಒಡಲಾಳವನ್ನು ಅಗೆಯುತ್ತಿದ್ದೇವೆ. ಯಂತ್ರ ಸುಖ ಅನುಭವಿಸುತ್ತ ಪ್ರಕೃತಿಯಿಂದ ದೂರವಾಗುತ್ತಿದ್ದೇವೆ. ಇಡೀ ಜಗತೇ ನನ್ನ ಕೈಯಲ್ಲಿದೆ ಎನ್ನುತ್ತ ಬೀಗುವ ನಮ್ಮನ್ನು ಅನಾಥರನ್ನಾಗಿ ಮಾಡಲು ಪ್ರಕೃತಿಗೆ ಎಷ್ಟೊತ್ತಿನ ಕೆಲಸ. ಪರಿಣಾಮ ನಮ್ಮ ಕಣ್ಣ ಮುಂದೆ ಇದೆ.

ದಿನಾಲೂ ಕುಮಟಾದಿಂದ ಕಾರವಾರಕ್ಕೆ ಓಡಾಡುವಾಗ ಸಮುದ್ರ ತೀರವನ್ನು, ಹಸಿರಿನಿಂದ ತುಂಬಿದ ಗುಡ್ಡಗಳ ಸೌಂಧರ್ಯವನ್ನು ಆಸ್ವಾದಿಸುತ್ತಾ ಹೋಗುತ್ತಿದ್ದೆವು. ಆದರೆ ಈಗ ಗುಡ್ಡಗಳು ಜರಿದಿರುವುದರಿಂದ ಮೃತ್ಯುಕೂಪಗಳಾಗಿ ಕಂಡುಬರುತ್ತಿವೆ. ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಓಡಾಡುವ ಹಾಗೆ ಹಾಗಿದೆ. ಇವತ್ತು ವಿಜ್ಞಾನ ಎಷ್ಟೇ ಮುಂದುವರಿದಿರಬಹುದು, ಪ್ರಕೃತಿ ಮುನಿದರೆ ನಾವೇಲ್ಲಾ ಅನಾಥರೇ. ಎನಂತೀರಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more