ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ 'ಕೈ'ಬಿಡಿ

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|
Google Oneindia Kannada News

H Anandarama Shastry, Bengaluru
ಹೆಬ್ಬಗೋಡಿ ಚರ್ಚ್ ಮೇಲಿನ ದಾಳಿ ಯಾರೇ ಮಾಡಿರಲಿ ಅದು ಖಂಡನೀಯ. ದಾಳಿಕೋರರು ಶಿಕ್ಷಾರ್ಹರು. ಆದರೆ, ಇಂಥ ದಾಳಿಗಳು ನಡೆದಕೂಡಲೇ ಅವೆಲ್ಲ ಬಿಜೆಪಿಯದೇ ಕೈವಾಡ ಎಂದು ಕೂಗೆಬ್ಬಿಸುವುದು ಮಾತ್ರ ಸರಿಯಲ್ಲ. ವಿಧಾನಮಂಡಲದ ವಿಶೇಷ ಅಧಿವೇಶನ ನಡೆದಿರುವ ಸಂದರ್ಭದಲ್ಲೇ ಹೆಬ್ಬಗೋಡಿ ದಾಳಿ ನಡೆದಿರುವುದು ಬಿಜೆಪಿಗೆ ಕೆಟ್ಟ ಹೆಸರು ತರಲು ಬೇರೆ ರಾಜಕೀಯ ಪಕ್ಷ(ಗಳು) ಹೂಡಿರುವ ಸಂಚಿರಬಹುದು ಎಂಬ ಅನುಮಾನವೂ ಬರದಿರದು. ಹೆಬ್ಬಗೋಡಿಯ ಚರ್ಚ್ ಮತ್ತು ಸ್ಮಶಾನದ ಜಮೀನಿಗೆ ಸಂಬಂಧಪಟ್ಟಂತೆ ಕ್ರಿಶ್ಚಿಯನ್ನರದೇ ಎರಡು ಗುಂಪುಗಳ ಮಧ್ಯೆ ವೈಮನಸ್ಯವಿದ್ದು ಆ ಪೈಕಿ ಒಂದು ಗುಂಪು ಈ ದಾಳಿ ನಡೆಸಿರಬಹುದೆಂಬ ಸಂಶಯವೂ ಇದೆ.

ದಾಳಿಗಳು

ದಾಳಿಗಳು ಈ ದೇಶದಲ್ಲಿಂದು ಚರ್ಚ್ ಮತ್ತು ಮಸೀದಿಗಳ ಮೇಲೆ ಮಾತ್ರ ಸೀಮಿತವಾಗಿಲ್ಲ. ಹಿಂದೂ ದೇವಾಲಯಗಳ ಮೇಲೂ ದಾಳಿಗಳು ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ವಿವಿಧ ಸರ್ಕಾರಗಳು ಪಾಲಿಸಿಕೊಂಡುಬಂದಿರುವ 'ಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ' ನೀತಿ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೂಕ್ತ ವಿದ್ಯೆ ಮತ್ತು ಉತ್ತಮ ಆರೋಗ್ಯದ ವ್ಯವಸ್ಥೆ ಮಾಡುವ ಬದಲು ವೋಟುಗಳ ಗಳಿಕೆಯ ಉದ್ದೇಶದಿಂದ ಅವರಿಗೆ ಮೀಸಲಾತಿ, ಸಹಾಯಧನ, ಸಣ್ಣಪುಟ್ಟ ಯೋಜನೆಗಳು ಇಂಥವುಗಳಿಗೇ ರಾಜಕೀಯ ಪಕ್ಷಗಳು ಒತ್ತು ಕೊಡುತ್ತ ಸಾಗಿದ್ದರಿಂದಾಗಿ ಸ್ವಾತಂತ್ರ್ಯೋತ್ತರ ಭಾರತದ ಬಹುಸಂಖ್ಯಾತರಲ್ಲಿ ಅಸಹನೆ ಬೆಳೆಯಲಾರಂಭಿಸಿತು. ಇದರ ಜೊತೆಗೆ, ಧರ್ಮ ಮತ್ತು ಸಂಪ್ರದಾಯದ ಆಚರಣೆಯ ವಿಷಯದಲ್ಲೂ ಸರ್ಕಾರಗಳು ತೋರುತ್ತ ಬಂದಿರುವ ಪಕ್ಷಪಾತವು ಬಹುಸಂಖ್ಯಾತರ ಅಸಹನೆಯನ್ನು ಹೆಚ್ಚಿಸಿತು.

ಇಂದು ದೇಶದ ಅದೆಷ್ಟೋ ಶಾಲೆಗಳಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಕುಂಕುಮ ಮತ್ತು ಬಳೆಗಳು ನಿಷೇಧಿಸಲ್ಪಟ್ಟಿವೆ. ಇದನ್ನು ಒಪ್ಪಿಕೊಂಡಿರುವ ಸರ್ಕಾರದ ನೇತಾರರೇ ಮುಸ್ಲಿಂ ವಿದ್ಯಾರ್ಥಿನಿಯು ಶಾಲೆಯಲ್ಲಿ ಬುರ್ಖಾ ಧರಿಸುವ ಬಗ್ಗೆ ವಿವಾದ ಎದುರಾದಾಗ ಅದು ಆಕೆಯ ಧಾರ್ಮಿಕ ಸ್ವಾತಂತ್ರ್ಯ ಎಂದು ವಾದಿಸುತ್ತಾರೆ! ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಬೀದಿಗಳಲ್ಲಿ ಹಿಂದೂ ದೇವಾಲಯಗಳು ಕಾಣಸಿಗುವುದು ಅಪರೂಪ. ಆದರೆ ಹಿಂದೂಗಳು ಬಹುಸಂಖ್ಯೆಯಲ್ಲಿರುವ ಬೀದಿಗಳಲ್ಲಿ ಮಸೀದಿಗಳು ಢಾಳವಾಗಿ ವಿಜೃಂಭಿಸುತ್ತಿರುತ್ತವೆ, ಮಾತ್ರವಲ್ಲ, ದಿನಕ್ಕೆ ಮೂರು ಸಲ ಧ್ವನಿವರ್ಧಕ ಬಳಸುತ್ತ ಸುತ್ತಮುತ್ತಲಿನ ಮುಸ್ಲಿಮೇತರ ಬಹುಸಂಖ್ಯಾತರಿಗೆ ತೊಂದರೆ ನೀಡುತ್ತವೆ. ಜನಸಂಖ್ಯೆ ಸ್ಫೋಟಿಸುತ್ತಿರುವ ಈ ದೇಶದಲ್ಲಿ ಹಿಂದೂ ಒಬ್ಬನಿಗೆ ಒಬ್ಬಳೇ ಹೆಂಡತಿ ಇರತಕ್ಕದ್ದು, ಆದರೆ ಮುಸ್ಲಿಂ ಪುರುಷ ಬಹುಪತ್ನಿಯರನ್ನು ಹೊಂದಿರಬಹುದು! ಪರಿಣಾಮ, ಬಹುತೇಕ ಹಿಂದೂಗಳು ಹೆಣ್ಣು ಶಿಶು ಜನನವನ್ನು ಕಡಿಮೆ ಇಷ್ಟಪಟ್ಟರೆ ಬಹುತೇಕ ಮುಸ್ಲಿಮರು ಯಾವ ಆತಂಕವೂ ಇಲ್ಲದೆ....!

ಇಂಥ ಅನೇಕ ಧಾರ್ಮಿಕ-ಸಾಮಾಜಿಕ ಅಸಮಾನತೆಗಳು ಇಂದು ಬಹುಸಂಖ್ಯಾತ ಹಿಂದೂಗಳ ಚಿತ್ತಕ್ಷೋಭೆಗೆ ಕಾರಣವಾಗಿವೆ. ಇನ್ನು, ನಮ್ಮ ಮುಸ್ಲಿಮರಲ್ಲೇ ಕೆಲವರ ಉಗ್ರಗಾಮಿ ಚಟುವಟಿಕೆಗಳು, ಹಲವರ ಅನ್ಯರಾಷ್ಟ್ರನಿಷ್ಠೆ, ಕ್ರಿಶ್ಚಿಯನ್ನರು ನಡೆಸುತ್ತಿರುವ ಆಮಿಷದ ಇಲ್ಲವೇ ಬಲವಂತದ ಮತಾಂತರ ಇವುಗಳು ಹಿಂದೂಗಳ ಅಸಹನೆಯನ್ನು ಸಹಜವಾಗಿಯೇ ಮತ್ತಷ್ಟು ಹೆಚ್ಚಿಸಿವೆ.

ಮತಾಂತರಕ್ಕೆ ಸಾಧನ

ಮತಾಂತರದ ಕ್ರಿಯೆಗೆ ಕ್ರಿಶ್ಚಿಯನ್ನರು ನಮ್ಮ ದೇಶದಲ್ಲಿ ವಿಶೇಷವಾಗಿ ಬಳಸಿಕೊಳ್ಳುತ್ತಿರುವ ಸಾಧನವೊಂದಿದೆ. ಅದೆಂದರೆ, ಹಿಂದೂಗಳಲ್ಲಿರುವ 'ಮೇಲ್ಜಾತಿ-ಕೆಳಜಾತಿ' ಎಂಬ ತಾರತಮ್ಯ ಭಾವ. ಮೇಲು-ಕೀಳು ಎಂಬ ತಾರತಮ್ಯ ಭಾವವು ಎಲ್ಲ ಮತಗಳಲ್ಲೂ ಇದೆ. ಆದರೆ ಹಿಂದೂಗಳಲ್ಲಿನ ಮೇಲ್ಜಾತಿ-ಕೆಳಜಾತಿ ಎಂಬ ಭೇದ ಭಾವವನ್ನು ಕ್ರಿಶ್ಚಿಯನ್ ಮತಪ್ರಚಾರಕರು ಮತಾಂತರ ಕಾರ್ಯಕ್ಕೆ ಭರ್ಜರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಿಂದೂ ದಲಿತರಲ್ಲಿ ಧಾರ್ಮಿಕ ಸಮಾನತೆಯ ಕನಸು ಬಿತ್ತಿ ಮತಾಂತರದ ಬೆಳೆ ತೆಗೆಯುತ್ತಿದ್ದಾರೆ. ಮತಾಂತರವಾದಮೇಲೆ ಆ ದಲಿತರನ್ನು ಉಪಾಯವಾಗಿ ಮೂಲೆಗುಂಪು ಮಾಡುತ್ತಾರೆ!

ಕ್ರಿಶ್ಚಿಯನ್ ಮತಪ್ರಚಾರಕರಿಗೆ ಮತಾಂತರ ಕಾರ್ಯಕ್ಕೆ ಅನುಕೂಲಕರವಾಗಿ ಪರಿಣಮಿಸಿರುವ ಹಿಂದೂಗಳ ಧಾರ್ಮಿಕ ಅಸಮಾನತೆಗೆ ಇತಿಹಾಸದ ಕೊಡುಗೆಯಂತೆಯೇ ವರ್ತಮಾನದ ಕೊಡುಗೆಯೂ ಇದೆ. ಇತರ ಧರ್ಮೀಯರಂತೆ ಹಿಂದೂಗಳಲ್ಲಿಯೂ ಆಚರಣೆಯಲ್ಲಿರುವ ಕೆಲವು ಮೌಢ್ಯಗಳ ಜೊತೆಗೆ, ವೋಟು ಗಳಿಕೆಗಾಗಿ ರಾಜಕೀಯ ಪಕ್ಷಗಳು ಉರುಳಿಸುತ್ತಿರುವ ಜಾತಿಭೇದದ ದಾಳ ಮತ್ತು ಅವು ಮಾಡಿಕೊಂಡುಬಂದಿರುವ ಜಾತಿ ರಾಜಕಾರಣ ಇವುಗಳೂ ಹಿಂದೂಗಳಲ್ಲಿ ಧಾರ್ಮಿಕ ಅಸಮಾನತೆಯನ್ನು ಪೋಷಿಸುತ್ತಿವೆ. ಇದರ ಅನುಕೂಲ ಪಡೆದು, ಸಮಾನತೆಯ ಆಮಿಷ ತೋರುವ ಮತಾಂತರ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಆಮಿಷದ ಮತಾಂತರ ಕಾರ್ಯ ಮುಂದುವರಿದಂತೆ ಸಮಾಜದಲ್ಲಿ ಧರ್ಮಗಳ ಮಧ್ಯೆ ಅಸಹನೆಯು ಹೆಚ್ಚುತ್ತಹೋಗುವುದರಲ್ಲಿ ಆಶ್ಚರ್ಯವೇನಿಲ್ಲ.

'10/40 ವಿಂಡೋ'

'10/40 ವಿಂಡೋ' ಎಂಬ ಸಂಘಟನೆಯೊಂದಿದೆ. ಅಮೆರಿಕದಲ್ಲಿ ಇದರ ಕೇಂದ್ರ ಕಚೇರಿ. ಭೂಮಧ್ಯರೇಖೆಯ ಉತ್ತರಭಾಗದಲ್ಲಿ, 10 ಡಿಗ್ರಿ ಮತ್ತು 40 ಡಿಗ್ರಿ ಅಕ್ಷಾಂಶಗಳ ನಡುವಿನ ಪ್ರದೇಶಗಳ ಪ್ರಜೆಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವುದು ಈ ಸಂಘಟನೆಯ ಉದ್ದೇಶ. ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ಮೂರನೇ ಎರಡರಷ್ಟು ಜನ 10 ಡಿಗ್ರಿ-40 ಡಿಗ್ರಿ ನಡುವಿನ ಈ ಪ್ರದೇಶದಲ್ಲೇ ವಾಸಿಸುತ್ತಿದ್ದಾರೆ! ಜಗತ್ತಿನಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ನೇತರರು ಇರುವುದೂ ಈ ಪ್ರದೇಶದಲ್ಲೇ! ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡಾ 37ರಷ್ಟು ಜನ ಇರುವುದು ಈ ಪ್ರದೇಶದಲ್ಲಿ ಬರುವ ಭಾರತ ಮತ್ತು ಚೀನಾದಲ್ಲಿ. '10/40 ವಿಂಡೋ' ಸಂಘಟನೆಯ ಮುಖ್ಯ ಗುರಿ ಭಾರತ!

ಭಾರತದ ಯಾವ ಯಾವ ಪ್ರದೇಶದಲ್ಲಿ ಯಾವ ಯಾವ ಜಾತಿಯ ಎಷ್ಟೆಷ್ಟು ಜನರು ಇದ್ದಾರೆ ಎಂಬ ಸಂಪೂರ್ಣ ವಿವರ ಈ ಸಂಘಟನೆಯ ಬಳಿ ಇದೆ! ಯಾವ ಯಾವ ಜಾತಿಯವರನ್ನು ಎಷ್ಟು ಅವಧಿಯ ಒಳಗೆ ಎಷ್ಟು ಸಂಖ್ಯೆಯಲ್ಲಿ ಮತಾಂತರ ಮಾಡಬೇಕು ಎಂಬ ಟಾರ್ಗೆಟ್ ಅನ್ನು ಈ ಸಂಘಟನೆ ನಿಗದಿಪಡಿಸಿದೆ! ಅದರಂತೆ ಇಲ್ಲಿ ಮತಾಂತರ ನಡೆಯುತ್ತಿದೆ!

ಜಾತ್ಯತೀತ ರಾಷ್ಟ್ರ

ಭಾರತ ಜಾತ್ಯತೀತ ರಾಷ್ಟ್ರ, ನಿಜ. ಆದರೆ, ಈ ರೀತಿಯ ಮತಾಂತರದಿಂದ, ವೋಟಿಗಾಗಿ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ನೀತಿಯಿಂದ ಮತ್ತು ಧಾರ್ಮಿಕ ಪಕ್ಷಪಾತದಿಂದ ಕಾಲಕ್ರಮದಲ್ಲಿ ಭಾರತದ ಜಾತ್ಯತೀತ ಭೂಮಿಕೆಗೇ ಧಕ್ಕೆ ಎಂಬುದನ್ನು ನಾವು ಅರಿಯಬೇಕು.

ಮತಾಂತರದ ಪಿಡುಗಂತೂ ಎಷ್ಟರಮಟ್ಟಿಗೆ ಬಲಿಷ್ಠವಾಗಿದೆಯೆಂದರೆ, ನಮ್ಮ ಈಶಾನ್ಯದ ರಾಜ್ಯಗಳು ಬಹುತೇಕ ಕ್ರಿಸ್ತೀಕರಣ ಆಗಿಬಿಟ್ಟಿವೆ! ಕೇರಳದಿಂದ ಮೊದಲ್ಗೊಂಡು ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಕ್ರಿಸ್ತೀಕರಣ ಭರದಿಂದ ಸಾಗಿದೆ! 1970ರ ಮತ್ತು 1980ರ ದಶಕಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಕ್ರಿಸ್ತೀಕರಣ ಭರದಿಂದ ಸಾಗಿದ ಪರಿಣಾಮ ಇಂದು ಆ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮತಾಂತರಿತ ಕ್ರಿಶ್ಚಿಯನ್ನರು! ಆ ದೇಶದ ಮತಾಂತರಿತ ಕ್ರಿಶ್ಚಿಯನ್ ಮಿಷ'ನರಿ'ಗಳೇ ಈಗ '10/40 ವಿಂಡೋ'ದ ಅತಿನಿಷ್ಠ ಕಾರ್ಯಕರ್ತರಾಗಿ, ಉಳಿದವರಿಗಿಂತ ಹೆಚ್ಚಿನ ಜೋಷ್‌ನಿಂದ, ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಮತಾಂತರದ ಕಾರ್ಯ ನಡೆಸುತ್ತಿದ್ದಾರೆ! ಹೀಗೇ ಮುಂದುವರಿದರೆ ಮುಂದೊಂದು ದಿನ ಈ ನಮ್ಮ ಜಾತ್ಯತೀತ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳಿಗೇ ಭದ್ರ ನೆಲೆಯಿಲ್ಲದಂತಾಗುತ್ತದೆ! ಈ ಅಪಾಯವನ್ನು ಮನಗಂಡೇ ಇಂದಿನ ಹಿಂದೂ ಯುವಜನತೆ ಕೆರಳಿದೆ.

ಆದರೆ, ಯಾರೇ ಆಗಲಿ ಕೆರಳಿ ಘರ್ಷಣೆ ಮತ್ತು ಹಿಂಸಾಚಾರಕ್ಕಿಳಿಯುವುದು ದೇಶಕ್ಕೆ ಒಳ್ಳೆಯದಲ್ಲ. ಜನತೆ ಕೆರಳದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ಅದಕ್ಕಾಗಿ, ನಮ್ಮ ಸರ್ಕಾರಗಳು ಅಲ್ಪಸಂಖ್ಯಾತರ ತುಷ್ಟೀಕರಣವನ್ನು 'ಕೈ'ಬಿಡಬೇಕು. ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸಬಾರದು. ಧರ್ಮದೊಳಗಿನ ಅಸಮಾನತೆಗಳನ್ನು ತೊಡೆದುಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರಿಗೆ, ಮೀಸಲಾತಿ, ಚಿಲ್ಲರೆ ಯೋಜನೆಗಳು ಮತ್ತು ಹಣ ಇವುಗಳ ಆಮಿಷ ತೋರುವ ಬದಲು, ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡಬೇಕು. ಅವರು ಈ ದೇಶದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಧಾರ್ಮಿಕ ಮತ್ತು ಸಾಮಾಜಿಕ ಶಾಂತಿ ನೆಲಸಲು ಸಾಧ್ಯ. ಆದರೆ, ವೋಟೆಂಬ ಸ್ವಾರ್ಥ ಮತ್ತು ಆ ಕ್ಷಣದ ಲಾಭವನ್ನಷ್ಟೇ ಗುರಿಯಾಗಿಟ್ಟುಕೊಂಡು ಸಾಗುವ ನಮ್ಮ ರಾಜಕೀಯ ಪಕ್ಷಗಳಿಂದ ಇಂಥ ಆದರ್ಶದ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X